ಪೆಟ್ರೋಲ್, ಡೀಸೆಲ್ ಬಳಕೆ ಕಡಿಮೆಗೊಳಿಸಿ, ಸಾರ್ವಜನಿಕ ಸಾರಿಗೆ ಮತ್ತು ಎಲೆಕ್ಟ್ರಿಕ್ ವಾಹನ ಬಳಸಲು ಸೂಚಿಸಿದ್ದಾರೆ. ವಿದೇಶಿ ವಿನಿಮಯ ಉಳಿಸಲು ಒಂದು ವರ್ಷ ಚಿನ್ನ ಖರೀದಿಸಬೇಡಿ.. ಇದು ಪ್ರಧಾನಿ ಮೋದಿ ಕೊಟ್ಟಿರುವ ಸಲಹೆಗಳು. ಆದರೆ, ಇದರ ನಡುವೆ ಇದು ಪೆಟ್ರೋಲ್, ಡೀಸೆಲ್ ದರ ಏರಿಕೆ ಸುಳಿವು ಎನ್ನುವುದೂ ಅಷ್ಟೇ ನಿಜ. ಅದಕ್ಕೆ ಕಾರಣಗಳೂ ಇವೆ.
ಪಶ್ಚಿಮ ಏಷ್ಯಾದ ಯುದ್ಧದಿಂದ ಉಂಟಾದ ಜಾಗತಿಕ ತೈಲ ಸಂಕಷ್ಟದ ನಡುವೆ ಪೆಟ್ರೋಲ್ ಹಾಗೂ ಡೀಸೆಲ್ ದರ ಏರಿಕೆ ಭೀತಿ ಹೆಚ್ಚುತ್ತಿರುವ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ದೇಶದ ಜನತೆಗೆ ಇಂಧನ ಉಳಿತಾಯದ ಕರೆ ನೀಡಿದ್ದಾರೆ. ವರ್ಕ್ ಫ್ರಾಂ ಹೋಂ ಪದ್ಧತಿಯನ್ನು ಮತ್ತೆ ಆರಂಭಿಸುವುದು, ಪೆಟ್ರೋಲ್-ಡೀಸೆಲ್ ಬಳಕೆಯನ್ನು ಕಡಿಮೆ ಮಾಡುವುದು ಹಾಗೂ ಒಂದು ವರ್ಷ ಮದುವೆಗಳಿಗೆ ಚಿನ್ನ ಖರೀದಿಸದಿರುವಂತೆ ಅವರು ಮನವಿ ಮಾಡಿದ್ದಾರೆ. ವಾಸ್ತವದ ವಿಷಯ ಏನೆಂದರೆ ವಿದೇಶಿ ವಿನಿಮಯ ಉಳಿತಾಯ.
ಅಲ್ಲದೆ ಜಾಗತಿಕ ಕಚ್ಚಾ ತೈಲ ಬೆಲೆಗಳು ಬ್ಯಾರೆಲ್‌ಗೆ ಸುಮಾರು 70 ಡಾಲರ್‌ಗಳಿಂದ ಸುಮಾರು 126 ಡಾಲರ್‌ಗೆ ಏರಿದ್ದು, ಮೇ 15ರೊಳಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಸನ್ನಿಹಿತವಾಗಿದೆ. ಏಕೆಂದರೆ ಈ ರೀತಿಯ ದರ ಏರಿಕೆಯಿಂದ ಮೂರು ತೈಲ ಕಂಪೆನಿಗಳಿಗೆ ಒಂದು ಲಕ್ಷ ಕೋಟಿ ನಷ್ಟವಾಗಿದೆಯಂತೆ. ಇದು ಕೇವಲ 10 ವಾರಗಳ ಲೆಕ್ಕ. ಆ ನಷ್ಟವನ್ನು ಸರಿದೂಗಿಸಲು ದರ ಏರಿಕೆ ಅನಿವಾರ್ಯ ಎಂದು ಹೇಳಲಾಗಿದೆ. ಮೋದಿಯವರು ಸಲಹೆಗಳ ಮೂಲಕ ದರ ಏರಿಕೆ ಸುಳಿವು ಕೊಟ್ಟಿದ್ಧಾರೆ.
ಅಂದಹಾಗೆ ಮೋದಿ ಹೇಳಿರುವ ಪ್ರಕಾರ ನಾವು ಮಾಡಬೇಕಾದ್ದು ಏನೆಂದರೆ..ʻʻ ಪೆಟ್ರೋಲ್ ಮತ್ತು ಡೀಸಲ್ ಬಳಕೆಯನ್ನು ಕಡಿಮೆ ಮಾಡಬೇಕು. ಇದಕ್ಕಾಗಿ:ಎಲ್ಲಿ ಲಭ್ಯವಿದೆಯೋ ಅಲ್ಲಿ ಮೆಟ್ರೋ ಮತ್ತು ಸಾರ್ವಜನಿಕ ಸಾರಿಗೆ ಬಳಸಬೇಕು. ಖಾಸಗಿ ವಾಹನ ಬಳಸುವಾಗ ಕಾರ್ ಪೂಲಿಂಗ್ ಮಾಡಬೇಕು. ಸರಕು ಸಾಗಾಟಕ್ಕೆ ರೈಲು ಸಾರಿಗೆಯನ್ನು ಆದ್ಯತೆಯಾಗಿ ಬಳಸಬೇಕು. ಸಾಧ್ಯವಾದಲ್ಲಿ ಎಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚಿಸಬೇಕು. ಈ ರೀತಿಯ ಕೋವಿಡ್ ಕಾಲದ ಉಳಿತಾಯ ಮತ್ತು ದಕ್ಷತಾ ಕ್ರಮಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಮತ್ತೆ ಅಳವಡಿಸಿಕೊಳ್ಳಬೇಕುʼʼ.
ವಿದೇಶಿ ವಿನಿಮಯ ಮೀಸಲು ಉಳಿಸಲು ನಾಗರಿಕರು ಅನಗತ್ಯ ವಿದೇಶ ಪ್ರಯಾಣ ಮಾಡಬಾರದು. ವಿದೇಶಿ ರಜೆ ಮತ್ತು ವಿದೇಶಿ ಮದುವೆಗಳನ್ನು ತಪ್ಪಿಸಬೇಕು. ದೇಶೀಯ ಪ್ರವಾಸ ಮತ್ತು ದೇಶದೊಳಗೆಯೇ ಉತ್ಸವ-ಆಚರಣೆಗಳನ್ನು ನಡೆಸುವುದಕ್ಕೆ ಆದ್ಯತೆ ನೀಡಬೇಕು. 1 ವರ್ಷದವರೆಗೆ ಅನಗತ್ಯ ಚಿನ್ನದ ಖರೀದಿಯನ್ನು ತಪ್ಪಿಸಬೇಕು. ಇದು ವಿದೇಶಿ ವಿನಿಮಯ ಹರಿವಿನ ಮೇಲಿನ ಒತ್ತಡವನ್ನು ಕಡಿಮೆ ಮಾಡುತ್ತದೆ.
ಯುದ್ಧದಿಂದ ರಸಗೊಬ್ಬರ ಪೂರೈಕೆಗೂ ಏಟು ಬಿದ್ದಿದ್ದು, ರಾಸಾಯನಿಕ ಗೊಬ್ಬರ ಬಳಕೆಯನ್ನು ಶೇ,50ರಷ್ಟು ಕಡಿಮೆ ಮಾಡಬೇಕು. ಸಹಜ ಕೃಷಿ (ನ್ಯಾಚುರಲ್ ಫಾರ್ಮಿಂಗ್) ಕಡೆಗೆ ಗಮನ ನೀಡಬೇಕು. ಈ ಮೂಲಕ ಮಣ್ಣಿನ ಆರೋಗ್ಯ ರಕ್ಷಿಸಬೇಕು ಮತ್ತು ಆಮದು ಅವಲಂಬನೆ ಕಡಿಮೆ ಮಾಡಬೇಕು. ಡೀಸಲ್ ಪಂಪುಗಳ ಬದಲು ಸೌರಶಕ್ತಿ ಚಾಲಿತ ನೀರಾವರಿ ಪಂಪುಗಳನ್ನು ಹೆಚ್ಚಾಗಿ ಬಳಸಬೇಕು. ಕುಟುಂಬಗಳು ಎಣ್ಣೆ ಬಳಕೆ ಕಡಿಮೆ ಮಾಡುಬೇಕು.
ಮೋದಿಯವರ ಅಷ್ಟ ಸಂದೇಶಗಳೇನು ಎಂದರೆ..
- ಕೊರೋನಾ ಟೈಂ ರೀತಿ ವರ್ಕ್ ಫ್ರಂ ಹೋಮ್ ಮರುಜಾರಿ
- ಆನ್‌ಲೈನ್, ವರ್ಚ್ಯುವಲ್ ಸಭೆ ನಡೆಸಲು ಕ್ರಮ ಕೈಗೊಳ್ಳಿ
- ಸ್ವಂತ ವಾಹನ ಬಿಟ್ಟು ಬಸ್, ಮೆಟ್ರೋ, ರೈಲುಗಳನ್ನು ಬಳಸಿ
- ಅನಗತ್ಯ ವಿದೇಶಿ ಪ್ರವಾಸ, ರಜೆ, ವಿದೇಶಿ ಮದುವೆ ತಪ್ಪಿಸಿ
- ಒಂದು ವರ್ಷ ಅನಗತ್ಯ ಚಿನ್ನ ಖರೀದಿ ಮಾಡಲು ಹೋಗಬೇಡಿ
- ಗೊಬ್ಬರ ಬಳಕೆ ಶೇ.50 ಕಡಿತ. ಸಾವಯವ ಕೃಷಿಗೆ ಆದ್ಯತೆ
- ಕೃಷಿಗೆ ಡೀಸೆಲ್ ಬಿಟ್ಟು ಸೌರಶಕ್ತಿ ಪಂಪಸೆಟ್ ಬಳಕೆಗೆ ಆದ್ಯತೆ
- ಕೋವಿಡ್ ಕಾಲದ ರೀತಿಯ ಮಿತವ್ಯಯ, ದಕ್ಷತೆ ಜಾರಿಯಾಗಬೇಕು



