ರಾಜ್ಯದಲ್ಲಿರುವುದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. 2013ರಂತೆ ಆಗದೆ, ಈ ಬಾರಿ ಡಿಸಿಎಂ ಪಟ್ಟ ಕೊಡುವುದಕ್ಕೆ ಒಪ್ಪಿಕೊಂಡ ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಅವರಿಗೆ ಪಟ್ಟ ನೀಡಿದರು. ಆದರೆ.. ಬೆನ್ನಲ್ಲೇ ಇನ್ನಷ್ಟು ಡಿಸಿಎಂ ಹುದ್ದೆಗೆ ಕೂಗು ಎದ್ದಿದೆ. ಸಿದ್ದರಾಮಯ್ಯ, ಇದು ನನ್ನ ಕೊನೆಯ ಎಲೆಕ್ಷನ್ ಎಂದಿದ್ದಾರೆ. ಅಧಿಕಾರ ಬದಲಾಗಬಹುದು ಎಂಬ ಮಾತುಗಳಿಗೆ ಬ್ರೇಕ್ ಬಿದ್ದಿಲ್ಲ. ಹೀಗಾಗಿ, ಒಬ್ಬರೇ ಡಿಸಿಎಂ ಏಕೆ ಎನ್ನುವುದು ಹಲವರ ಪ್ರಶ್ನೆ. ಹಾಗೆ ಹೆಚ್ಚುವರಿ ಡಿಸಿಎಂ ಸ್ಥಾನ ಕೇಳುತ್ತಿರುವ ನಾಯಕರೆಲ್ಲ, ಸಿದ್ದರಾಮಯ್ಯ ಬೆಂಬಲಿಗರೇ ಎನ್ನುವುದು ವಿಶೇಷ.
ಜಮೀರ್ ಅಹ್ಮದ್, ಮುಸ್ಲಿಂ ನಾಯಕ : ಡಿಸಿಎಂ ಸ್ಥಾನ ಕೇಳುವುದರಲ್ಲಿ ತಪ್ಪೇನಿಲ್ಲ. ಎಲ್ಲ ಸಮಾಜಕ್ಕೂ ತಮ್ಮ ಸಮಾ ಜದವರಿಗೆ ಡಿಸಿಎಂ ಸ್ಥಾನ ಸಿಗಬೇಕು ಎನ್ನುವ ಹಂಬಲ ಇರುತ್ತದೆ. ಮುಸ್ಲಿಂ ಸೇರಿದಂತೆ ಲಿಂಗಾಯತ, ದಲಿತ ಸಮಾಜಗಳಿಂದಲೂ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇದೆ. ನಾವು ಕೂಡ ಡಿಸಿಎಂ ಸ್ಥಾನಕ್ಕೆ ಬೇಡಿಕೆ ಇಟ್ಟಿದ್ದೇವೆ ಎನ್ನುವ ಜಮೀರ್ ಅವರು, ʻʻನಾವೂ ಬೇಡಿಕೆ ಇಟ್ಟಿದ್ದೇವೆ. ಆದರೆ, ಈ ಬಗ್ಗೆ ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಳ್ಳುತ್ತೆ. ಹಾಗಂತ, ಡಿಸಿಎಂ ಸ್ಥಾನ ನೀಡದೆ ಇದ್ದರೂ ನಮಗಾರಿಗೂ ಅಸಮಾಧಾನ ಏನೂ ಇಲ್ಲʼʼ ಎಂದು ಸ್ಪಷ್ಟನೆ ಕೊಡುತ್ತಾರೆ.
ಸತೀಶ್ ಜಾರಕಿಹೊಳಿ, ವಾಲ್ಮೀಕಿ ಸಮುದಾಯದ ನಾಯಕ : ಹೆಚ್ಚುವರಿಯಾಗಿ ಡಿಸಿಎಂ ನೇಮಕ ಕುರಿತಂತೆ ಸಾಮೂಹಿಕ ಚರ್ಚೆ ಆಗಬೇಕು. ಎಐಸಿಸಿ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗಬೇಕು. ಸಿಎಂ ಮಟ್ಟದಲ್ಲೂ ಚಿಂತನೆ ಆಗಬೇಕು. ಚರ್ಚೆ ನಡೆಯುವುದರಿಂದ ಡಿಸಿಎಂ ಹುದ್ದೆ ಅಗತ್ಯದ ಬಗ್ಗೆ ದಾರಿ ಸ್ಪಷ್ಟವಾಗಲಿದೆ ಎನ್ನುವುದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ವಾದ.
ಕೆ.ಎನ್. ರಾಜಣ್ಣ, ವಾಲ್ಮೀಕಿ ಸಮುದಾಯದ ನಾಯಕ : ಮೂರು ಡಿಸಿಎಂ ಮಾಡಿದರೆ ತೊಂದರೆ ಏನು? ಈ ಕುರಿತಾದ ಸಚಿವ ಸತೀಶ ಜಾರಕಿಹೊಳಿ ಹೇಳಿಕೆಗೆ ನನ್ನ ಸಂಪೂರ್ಣ ಸಹಮತವಿದೆ ಎನ್ನುವುದು ಸಹಕಾರ ಸಚಿವ ಕೆ.ಎನ್.ರಾಜಣ್ಣ ವಾದ. ಆದರೆ ರಾಜಣ್ಣ ಡಿಸಿಎಂ ಹುದ್ದೆ ರೇಸ್ʻನಲ್ಲಿ ಇಲ್ಲ.
ಆದರೆ ಲಿಂಗಾಯತ ಸಮುದಾಯದಿಂದ ಡಿಸಿಎಂ ಹುದ್ದೆಗೆ ಬಹಿರಂಗ ಬೇಡಿಕೆ ಬಂದಿಲ್ಲ. ಆದರೆ ಡಿಸಿಎಂ ಹುದ್ದೆ ರೇಸಿನಲ್ಲಿ ಎಂ.ಬಿ.ಪಾಟೀಲ್ ಇದ್ದಾರೆಂಬುದು ಸ್ಪಷ್ಟ. ಕೊಡುವುದಾದರೆ ನಿಭಾಯಿಸಲು ಸಿದ್ಧ ಎನ್ನುತ್ತೀದ್ದಾರೆ ಪಾಟೀಲರು.
ಲೋಕಸಭೆ ಚುನಾವಣೆಯಲ್ಲಿ ಹಿನ್ನಡೆಯಾಗಿದ್ದು, ಕಾಂಗ್ರೆಸ್‌ಗೆ ನಿರೀಕ್ಷಿತ ಸ್ಥಾನಗಳು ಬಂದಿಲ್ಲ. ‘ಮಿನಿ ಸಮರ’ ಎಂಬಂತೆ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಬಿಬಿಎಂಪಿ ಚುನಾವಣೆ ಎದುರಾಗುತ್ತಿರುವ ಹಿನ್ನೆಲೆಯಲ್ಲಿ ಸಮುದಾಯವಾರು ಡಿಸಿಎಂ ನೇಮಕ ಬೇಡಿಕೆ ಬಗ್ಗೆ ಆಕಾಂಕ್ಷಿ ಸಚಿವರುಗಳು ಯಾವ ದಾಳ ಉರುಳಿಸಲಿದ್ದಾರೆ ಎನ್ನುವುದೇ ಈಗಿನ ಕುತೂಹಲ.
ಸಿಎಂ ಸ್ಥಾನದ ರೇಸ್‌ನಲ್ಲಿದ್ದ ಡಿಕೆ ಶಿವಕುಮಾರ್ ಅವರಿಗೆ ಸಂಪುಟದಲ್ಲಿ ಮಹತ್ವಕ್ಕಾಗಿ ಏಕ ಡಿಸಿಎಂ ಹುದ್ದೆ ಸೃಷ್ಟಿಸಲಾಗಿದೆ ಎಂಬ ಅಭಿಪ್ರಾಯದ ಹಿನ್ನೆಲೆಯಲ್ಲಿ ಬಸವರಾಜ ರಾಯರೆಡ್ಡಿ ಹೊಸ ಸೂತ್ರವೊಂದನ್ನು ಪ್ರಸ್ತಾಪಿಸಿದ್ದಾರೆ. ಅದರ ಪ್ರಕಾರ ಕೆ ಶಿವಕುಮಾರ್ ಅವರನ್ನು ಪ್ರಧಾನ ಡಿಸಿಎಂ ಎಂದೂ, ಉಳಿದವರನ್ನು ಡಿಸಿಎಂ ಎಂದಷ್ಟೇ ಹೇಳುವ ಮಾದರಿಯನ್ನು ಮುಂದಿಟ್ಟಿದ್ದಾರೆ.
ಪಕ್ಷದ ಮತಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಸಮುದಾಯವಾರು ಡಿಸಿಎಂ ಹುದ್ದೆ ಬೇಡಿಕೆ ಪ್ರಸ್ತಾವನೆಗೆ ಪೂರಕವಾಗಿ ದಲಿತರಲ್ಲಿ ಎಸ್‌ಸಿ, ಎಸ್‌ಟಿ, ಅಲ್ಯಸಂಖ್ಯಾತ (ಮುಸ್ಲಿಂ), ಲಿಂಗಾಯತರಿಗೆ ತಲಾ ಒಂದೊಂದು ಡಿಸಿಎಂ ಹುದ್ದೆ ಸೃಷ್ಟಿಸಬೇಕು ಎನ್ನುವ ವಾದವಂತೂ ಗಟ್ಟಿಯಾಗಿಯೇ ಇದೆ.



