ವಿಜಯಲಕ್ಷ್ಮಿ ದರ್ಶನ್. ಆಕೆಯನ್ನು ನೀವು ಟೀಕಿಸಬಹುದು. ಒಪ್ಪದೇ ಇರಬಹುದು. ಇಷ್ಟೆಲ್ಲ ಅನುಭವಿಸಿಯೂ ಯಾಕೆ ಇದೆಲ್ಲ ಅನ್ನಬಹುದು. ಏಕೆಂದರೆ.. ದರ್ಶನ್ ಅವರನ್ನು ವಿಜಯಲಕ್ಷ್ಮಿ ಮದುವೆಯಾಗಿದಾಗ ದರ್ಶನ್ ಸ್ಟಾರ್ ಅಲ್ಲ. ಆಫ್ಟರಾಲ್.. ಎಲ್ಲರಂತೆಯೇ ಆತನೂ ಒಬ್ಬ ಸ್ಮಾಲ್ ಟೈಂ ಆಕ್ಟರ್. ಹೀರೋ ಕೂಡಾ ಆಗಿರಲಿಲ್ಲ. ಸಣ್ಣ ಸಣ್ಣ ಪಾತ್ರಗಳಿಗೂ, ಕೆಲಸಕ್ಕೂ ಅಂಗಲಾಚುವ ಪರಿಸ್ಥಿತಿ ಇತ್ತು. ಅಂತಹ ಸಂದರ್ಭದಲ್ಲಿ ಮದುವೆಯಾದ ವಿಜಯಲಕ್ಷ್ಮಿ ʻದರ್ಶನ್ ಸ್ಟಾರ್ ಹೀರೋʼ ಎಂಬ ಕಾರಣಕ್ಕೆ ಪ್ರೀತಿಸಿದವರಲ್ಲ.
ಆದರೆ ಅದಕ್ಕೆ ದರ್ಶನ್ ಕೊಟ್ಟಿದ್ದು.. ಅದೂ ಸ್ಟಾರ್ ಆದ ಮೇಲೆ ಕೊಟ್ಟಿದ್ದೆಲ್ಲವೂ ಅವಮಾನ, ಚಿತ್ರಹಿಂಸೆ, ಬೈಗುಳಗಳನ್ನಷ್ಟೇ. ಆದರೆ.. ವಿಜಯಲಕ್ಷ್ಮಿ ಗಂಡ ಇವತ್ತಲ್ಲ.. ನಾಳೆ ಸರಿ ಹೋಗುತ್ತಾನೆ ಎಂದು ಕಾಯುತ್ತಿದ್ದಾಳೆ.
ಅದಕ್ಕೇ ವಿಜಯಲಕ್ಷ್ಮಿಯನ್ನು ಕ್ಷಮಯಾ ಧರಿತ್ರಿ ಎಂದಿದ್ದು. ಭೂಮಿ ತೂಕದ ತಾಳ್ಮೆಯಂತೂ ಇದೆ. ಅದು ಸರಿಯೋ.. ತಪ್ಪೋ.. ಅಂತಿಮ ನಿರ್ಧಾರ ವಿಜಯಲಕ್ಷ್ಮಿ ಅವರದ್ದೇ.
ಪತಿ ಕೊಲೆ ಕೇಸಿನಲ್ಲಿ ಜೈಲು ಸೇರಿದ ನಂತರ.. ಅದೂ ಕೂಡಾ ತನ್ನ ಸ್ಥಾನದಲ್ಲಿದ್ದ ಇನ್ನೊಬ್ಬ ಮಹಿಳೆಗಾಗಿ ಕೊಲೆ ಮಾಡಿದ್ದ ಆರೋಪ ಎದುರಾದಾಗಲೂ.. ಆಕೆ ಗಂಡನ ಪರವಾಗಿಯೇ ನಿಂತಿದ್ಧಾರೆ. ಪತಿಯಿಂದ ದೂರವಿದ್ದ ತಮ್ಮ, ಅಮ್ಮನನ್ನು ಪತಿಯ ಬಳಿ ವಾಪಸ್ ಕರೆತಂದಿದ್ದಾರೆ. ದರ್ಶನ್ ಪರ ವಕಾಲತ್ತು ಮಾಡಲೂ ಹಿಂದೇಟು ಹಾಕುತ್ತಿದ್ದ ವಕೀಲರನ್ನು ಹೇಗೋ ಮನವೊಲಿಸಿ, ಒಪ್ಪಿಸಿದ್ದಾರೆ. ಅದಕ್ಕಾಗಿ ಆಕೆ ಯಾರ್ ಯಾರ ಮನೆಗೆ ಎಡತಾಕಿದರೋ.. ಏನೋ..
ಈಗ ಸಂಕಷ್ಟದಲ್ಲಿ ಸಿಲುಕಿರುವ ಪತಿಯನ್ನ ಪಾರು ಮಾಡಲು ದೇವರ ಮೊರೆ ಹೋಗಿರುವ ವಿಜಯಲಕ್ಷ್ಮಿ ದರ್ಶನ್ ಕೊಲ್ಲೂರು ಮೂಕಾಂಬಿಕಾ ದೇವಿಯ ದರ್ಶನ ಪಡೆದಿದ್ದಾರೆ. ಚಿತ್ರದುರ್ಗದ ರೇಣುಕಾಸ್ವಾಮಿ ಹತ್ಯೆ ಕೇಸ್‌ನಲ್ಲಿ ಅರೆಸ್ಟ್ ಆಗಿ ಪರಪ್ಪನ ಅಗ್ರಹಾರ ಜೈಲು ಸೇರಿರುವ ದರ್ಶನ್ & ಗ್ಯಾಂಗ್ʻಗೆ ಪ್ರತಿ ಹಂತದಲ್ಲಿಯೂ ಹಿನ್ನಡೆ ಆಗಿದೆ. ಪತಿ ದರ್ಶನ್ ಅವರನ್ನ ಹೊರತರಲು ಪತ್ನಿ ವಿಜಯಲಕ್ಷ್ಮೀ ಹರಸಾಹಸ ಪಡುತ್ತಿದ್ದಾರೆ. ಸಿಎಂ, ಡಿಸಿಎಂಗಳನ್ನೂ ಭೇಟಿ ಮಾಡಿದ್ದಾರೆ. ಇದರ ಜೊತೆಯಲ್ಲೇ ದೇವರ ಮೊರೆ ಹೋಗಿದ್ದಾರೆ.
ಹೌದು, ದರ್ಶನ್ ಅವರಿಗೂ ಸಿಎಂ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರಿಗೂ ಸಂಬಂಧ ಅಷ್ಟಕ್ಕಷ್ಟೇ. ಸುಮಲತಾ ಅವರು ಎಲೆಕ್ಷನ್ನಿಗೆ ನಿಂತು ಗೆದ್ದಾಗ ಅವರಿಗೆ ಹೆಗಲು ಕೊಟ್ಟಿದ್ದವರು ಇದೇ ದರ್ಶನ್.
ಅದಾದ ಮೇಲೆ ಕಾಂಗ್ರೆಸ್ಸಿನ ಕೆಲವು ನಾಯಕರ ಪರ ಪ್ರಚಾರ ಮಾಡಿದ್ದಾರಾದರೂ.. ಸಂಬಂಧ ಗಳಸ್ಯ ಕಂಠಸ್ಯ ಎನ್ನುವಂತಿಲ್ಲ.
ಇನ್ನು ಸಿದ್ದರಾಮಯ್ಯ ಅವರ ಆಪ್ತ ಜಮೀರ್ ಅಹ್ಮದ್, ಶಾಮನೂರು ಮಲ್ಲಿಕಾರ್ಜುನ್, ಸ್ಟಾರ್ ಚಂದ್ರು, ಸುನಿಲ್ ಬೋಸ್.. ಮೊದಲಾದವರ ಜೊತೆ ಸಂಪರ್ಕ ಹಾಗೂ ಸಂಬಂಧ ಚೆನ್ನಾಗಿದ್ದರೂ.. ಕೊಲೆ ಕೇಸ್ ನಡೆಯುತ್ತಿರುವಾಗ ಸಿಎಂ ಹಾಗೂ ಡಿಸಿಎಂ ಅವರನ್ನು ಭೇಟಿ ಮಾಡುವುದು ಸುಲಭವಲ್ಲ. ಹೀಗೆಲ್ಲ ಹರಸಾಹಸ ಮಾಡುತ್ತಿರುವ ವಿಜಯಲಕ್ಷ್ಮಿ, ಇತ್ತೀಚೆಗಷ್ಟೇ ಬೆಂಗಳೂರಿನ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ವಿಜಯಲಕ್ಷ್ಮೀ ವಿಶೇಷ ಪೂಜೆ ಸಲ್ಲಿಸಿದ್ದರು. ಇದೀಗ ವಿಜಯಲಕ್ಷ್ಮಿ, ಕೊಲ್ಲೂರು ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ನವ ಚಂಡಿಕಾಯಾಗ ಕೂಡ ಕೈಗೊಂಡಿದ್ದಾರಂತೆ.
ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಬರ್ಬರ ಹತ್ಯೆ ಪ್ರಕರಣದ ಸಂಬಂಧ ಪೊಲೀಸರು ಚಾರ್ಜ್‌ಶೀಟ್ ಅನ್ನು ಆಗಸ್ಟ್ ತಿಂಗಳಲ್ಲಿ ಸಲ್ಲಿಸಲಿದ್ದಾರೆ. ಚಾರ್ಜ್‌ಶೀಟ್ ಸಲ್ಲಿಕೆಯಾದ ಬಳಿಕ, ಅದರ ಆಧಾರದ ಮೇಲೆ ದರ್ಶನ್ ಪರ ವಕೀಲರು ಜಾಮೀನು ಅರ್ಜಿ ಹಾಕಲಿದ್ದಾರೆ. ಆನಂತರವರಷ್ಟೇ ದರ್ಶನ್ ಜಾಮೀನು ಭವಿಷ್ಯ ನಿರ್ಧಾರವಾಗಲಿದೆ.
ದರ್ಶನ್ ಎಸಗಿದ್ದಾರೆ ಎನ್ನಲಾದ ಪ್ರಕರಣ ಅತ್ಯಂತ ಗಂಭೀರವಾಗಿದ್ದು, ಕಾನೂನು ಅವರ ಪರವಾಗಿಲ್ಲ. ಹೋಮ, ಪೂಜೆಗಳು ಫಲ ಕೊಡುತ್ತವೆಯೋ.. ಇಲ್ಲವೋ.. ಅವರವರ ನಂಬಿಕೆಯ ವಿಷಯ. ಏಕೆಂದರೆ ಹಲವು ಅಭಿಮಾನಿಳು ಸ್ವತಃ ತಾವು ತಾವು ನಂಬಿರುವ ದೇವರು, ದೇವಸ್ಥಾನಗಳಲ್ಲಿ ವಿಶೇಷ ಪೂಜೆ ಮಾಡಿಸ್ತಿದ್ದಾರೆ.



