KPSC ಎಂಬುದು ಭ್ರಷ್ಟರ ಕೂಪವಾಗಿದೆ ಎನ್ನುವುದು ರಹಸ್ಯವೇನೂ ಅಲ್ಲ. ವಿಶೇಷ ಎಂದರೆ ಇದು ಸರ್ಕಾರಕ್ಕೂ ಗೊತ್ತು. ವಿರೋಧ ಪಕ್ಷಕ್ಕೂ ಗೊತ್ತು. ಪ್ರತಿ ರಾಜಕಾರಣಿಗೂ ಗೊತ್ತು. ಆಗಾಗ್ಗೆ ವಿಧಾನಸಭೆ, ವಿಧಾನ ಪರಿಷತ್‌ನಲ್ಲಿ ಭಾರೀ ಚರ್ಚೆ ಮಾಡುವ ನಾಯಕರು, ತಾವು ಪ್ರಾಮಾಣಿಕರು ಎಂಬಂತೆ ಪೋಸು ಕೊಡುತ್ತಾರೆ. ಆದರೆ KPSCಯಲ್ಲಿರುವವರು ತಮ್ಮ ಪಾಡಿಗೆ ತಾವು ರೂಲ್ಸ್ ಬ್ರೇಕ್ ಮಾಡ್ಕೊಂಡು ಹೋಗ್ತಾನೇ ಇರ್ತಾರೆ. ಇದೀಗ KPSC ಅಧ್ಯಕ್ಷರ ಮಗಳೇ ಸುಳ್ಳು ಇನ್ ಕಂ ಸರ್ಟಿಫಿಕೇಟ್ ಕೊಟ್ಟು ಕೆಲಸ ಗಿಟ್ಟಿಸಿರುವುದು ವರದಿಯಾಗಿದೆ. ಅಂದಹಾಗೆ ಈ ವ್ಯಕ್ತಿ ನೇಮಕ ಆಗಿರುವುದು 2021ರಲ್ಲಿ. ಬಸವರಾಜ ಬೊಮ್ಮಾಯಿ ಸಿಎಂ ಆಗಿದ್ದ ಅವಧಿಯಲ್ಲಿ. ಇಷ್ಟಕ್ಕೂ ಶಿವಶಂಕರಪ್ಪ ಎಸ್.ಸಾಹುಕಾರ್ ಯಾರು..?
ಕನ್ನಡ ಪ್ರಭದ ಎಚ್ ಎಸ್ ಅವಿನಾಶ್ ಈ ಅಕ್ರಮವನ್ನು ಬಯಲಿಗೆಳೆದಿದ್ದಾರೆ. ಈ ವರದಿಯ ಪ್ರಕಾರ ಆಯೋಗದ ಅಧ್ಯಕ್ಷ ಶಿವಶಂಕರಪ್ಪ ಎಸ್.ಸಾಹುಕಾರ್(Shivashankarappa S. Sahukar) ಅವರ ಮಗಳು ಅನುರಾಧಾ ಕೆಲಸ ಗಿಟ್ಟಿಸಿಕೊಂಡಿದ್ದಾರೆ. ಇನ್ನೊಬ್ಬ ಮಗಳು ಸುಮಾ ಅವರ ಕೆಲಸ ಆಗಿಲ್ಲ. ಕೆಲಸ ಗಿಟ್ಟಿಸಿಕೊಂಡಿರುವ ಅನುರಾಧಾ ತಮ್ಮ ಪೋಷಕರ ಆದಾಯ ವಾರ್ಷಿಕ ಕೇವಲ 40 ಸಾವಿರ ಎಂದು ಸರ್ಟಿಫಿಕೇಟ್ ಕೊಟ್ಟಿದ್ದಾರೆ. ವಿಚಿತ್ರ ಎಂದರೆ 2019ರ ಆಗಸ್ಟ್ 31ರಂದು ಕೆಪಿಎಸ್ಸಿ ಸದಸ್ಯರಾಗಿ ನೇಮಕವಾಗಿದ್ದ ಶಿವಶಂಕರಪ್ಪ ಎಸ್.ಸಾಹುಕಾರ್, 2021ರಲ್ಲಿ ಅಧ್ಯಕ್ಷರೂ ಆಗಿದ್ದರು. ಮಗಳ ನೇಮಕಾತಿ ವೇಳೆ ಆದಾಯ 40 ಲಕ್ಷಕ್ಕೂ ಹೆಚ್ಚಿತ್ತು. ಆದರೆ ಇನ್ ಕಂ ಸರ್ಟಿಫಿಕೇಟಿನಲ್ಲಿ ಒಂದು ಸೊನ್ನೆಯೇ ತಪ್ಪಿ ಹೋಗಿದೆ.
ಹೀಗಾಗಿ ಸಾಹುಕಾರ್ ಅವರ ಪುತ್ರಿ ಅನುರಾಧಾ ಹೈದ್ರಾಬಾದ್ ಕರ್ನಾಟಕ ಸಾಮಾನ್ಯ ಮಹಿಳೆ (HK GM W) ಕೋಟಾದಲ್ಲಿ ನೇಮಕವಾಗಿದ್ದಾರೆ. ಅವರ ಸಹೋದರಿ ಸುಮಾ ಅವರು RPC (Residual Parent Category) ಕೆಟಗರಿಯ 3ಬಿ ಕೋಟಾದಲ್ಲಿ ನೇಮಕ ಆಗಿದ್ಧಾರೆ. ಮತ್ತೊಬ್ಬ ಪುತ್ರಿ ಹೈದ್ರಾಬಾದ್ ಕರ್ನಾಟಕ ಹೊರತುಪಡಿಸಿದ ಜಿಲ್ಲೆಗಳಿಗಾಗಿ ಇರುವ RPC ಕೆಟಗರಿಯ 3ಬಿ ಕೋಟಾದಲ್ಲಿ ನೇಮಕ ಬಯಸಿದ್ದರು. ಆಗಿಲ್ಲ.
ತಾತ್ಕಾಲಿಕ ಪಟ್ಟಿ ಪ್ರಕಟಿಸಲು ದಾಖಲೆ ಪರಿಶೀಲನೆ ವೇಳೆ ಸುಮಾ ಅವರು ತಪ್ಪು ದಾಖಲೆ ನೀಡಿರುವುದು ಪತ್ತೆಯಾಗಿದೆ. ಜೊತೆಗೆ ಅಧ್ಯಕ್ಷರ ಮಗಳು ಎಂಬುದೂ ಖಚಿತಪಟ್ಟಿದೆ. ಸುಳ್ಳು ಮಾಹಿತಿ, ಅಕ್ರಮ ಆದಾಯ ಪ್ರಮಾಣ ಪತ್ರ ಸಲ್ಲಿಸಿರುವುದು ದೃಢಪಟ್ಟಿದೆ. ಹೀಗಾಗಿ ನಿಯಮಗಳ ಪ್ರಕಾರ ಸುಮಾ ಅವರ ಆಯ್ಕೆಯನ್ನು ತಿರಸ್ಕರಿಸಲು ಆಯೋಗ ತೀರ್ಮಾನಿಸಿದೆ. ಇದೇ ಜೂನ್ 19ರ ಸಭೆಯಲ್ಲಿ ಆಯೋಗದ ಸದಸ್ಯರು ಹಾಗೂ ಕಾರ್ಯದರ್ಶಿಗಳು ಅಧ್ಯಕ್ಷರ ಗಮನಕ್ಕೆ ಈ ವಿಷಯ ತಂದು ಆಕ್ಷೇಪ ಎತ್ತಿದ್ದಾರೆ. ಮೊದಲಿಗೆ ಹಾರಿಕೆ ಉತ್ತರ ನೀಡಿ ನಂತರದಲ್ಲಿ ಸಾಮಾನ್ಯ ಕೋಟಾದಡಿ ನೇಮಕ ಮಾಡಿಸಲು ಅಧ್ಯಕ್ಷರು ಯತ್ನಿಸಿದ್ದಾರೆ. ಇದು ನಿಯಮಗಳ ಉಲ್ಲಂಘನೆ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಜ್ಯೋತಿ ಹಾಗೂ ಇತರ ಸದಸ್ಯರು ನಿರಾಕರಿಸಿದ್ದಾರೆ. ಸಂದರ್ಶನ ಇಲ್ಲದೆ ಬಹುಆಯ್ಕೆಯ ಪ್ರಶ್ನೆಗಳ ಪರೀಕ್ಷೆ ಮೂಲಕ ನಡೆದ ನೇಮಕಾತಿ ಇದು. ಪರೀಕ್ಷೆಯಲ್ಲಿ ಏನಾದರೂ ಅಕ್ರಮ ನಡೆದಿತ್ತೇ ಎಂಬ ಸಂಶಯಕ್ಕೂ ಉತ್ತರ ಕಂಡುಕೊಳ್ಳುವ ಕಾರ್ಯ ನಡೆದಿದೆ. ಅಂದಹಾಗೆ ನೇಮಕಾತಿಗೆ ಇನ್ನೂ ಅಂತಿಮ ಸ್ವರೂಪ ಸಿಕ್ಕಿಲ್ಲ.
ಯಾರಿದು ಶಿವಶಂಕರಪ್ಪ ಎಸ್. ಸಾಹುಕಾರ್..?
ಮೂಲತಃ ರಾಯಚೂರಿನವರು. ಈಗ ನೆಲೆಸಿರುವುದು ಕಲಬುರಗಿಯಲ್ಲಿ. ರಾಯಚೂರಿನ ಕೃಷಿ ಕಾಲೇಜಿನಲ್ಲಿ ಬಿಎಸ್ಸಿ ಅಗ್ರಿಕಲ್ಚರ್ ಇಂಜಿನಿಯರಿಂಗ್ (B.Sc. Agricultural Engineering) ಪದವಿ ಪಡೆದಿರುವ ಶಿವಶಂಕರಪ್ಪ ಆಗಸ್ಟ್ 31, 2019 ರಂದು ಕೆಪಿಎಸ್ಸಿ ಸದಸ್ಯರಾಗಿ ನೇಮಕಗೊಂಡಿದ್ದರು. ಅವರನ್ನು ಬೊಮ್ಮಾಯಿ ಅವರ ಅವಧಿಯಲ್ಲಿ ಷಡಕ್ಷರಿ ಸ್ವಾಮಿ ಅವರ ನಿವೃತ್ತಿಯ ನಂತರ ಕೆಪಿಎಸ್‌ಸಿ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು.
ಕೆಪಿಎಸ್‌ಸಿಯಲ್ಲಿ ನಡೆದಿರುವುದು ಇದೊಂದೇ ಅಕ್ರಮ ಅಲ್ಲ. ತೀರಾ ಇತ್ತೀಚೆಗೆ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳ ಬಗ್ಗೆ ವಿಧಾನ ಸಭೆಯಲ್ಲಿ ಚರ್ಚೆಯಾಗಿತ್ತು. ಬಿಜೆಪಿ ಶಾಸಕ ಸುನಿಲ್ ಕುಮಾರ್ ಕೆಪಿಎಸ್‌ಸಿ ವ್ಯವಸ್ಥೆಯು ಸರ್ಕಾರಿ ನಿಯಂತ್ರಣದಲ್ಲಿ ವಿದ್ಯಾರ್ಥಿಗಳ ಕನಸು ಹತ್ಯೆ ಮಾಡುವ ಕೇಂದ್ರ ಎಂದಿದ್ದರು. ಇದೊಂದು ನಿಗೂಢ ಸಂಸ್ಥೆಯಾಗಿದ್ದು ಪರೀಕ್ಷೆ ರಹಸ್ಯ, ಫಲಿತಾಂಶ ಶಂಕಿತ ಎಂಬಂತಾಗಿದೆ. 5,000 ಜನರಿಗೆ ಪಾರದರ್ಶಕವಾಗಿ ಪರೀಕ್ಷೆ ನಡೆಸಲು ಆಗಲ್ಲ ಅಂತಾದರೆ ಆ ಸಂಸ್ಥೆ ಯಾಕೆ ಬೇಕು? ಕೆಪಿಎಸ್‌ಸಿಯಿಂದ ನೇಮಕವಾದವರನ್ನೆಲ್ಲಾ ಅನುಮಾನದಿಂದ ನೋಡುವಂತಾಗಿದೆ ಎಂದು ಕಿಡಿಕಾರಿದ್ದರು. ಇದಕ್ಕೆ ಬಿಜೆಪಿ ಸದಸ್ಯರಾದ ಎಸ್. ಸುರೇಶ್ ಕುಮಾರ್, ಪ್ರತಿಪಕ್ಷ ನಾಯಕ ಆರ್. ಅಶೋಕ್ ದನಿಗೂಡಿಸಿದ್ದರು.
ಆಗ ಆಕ್ರೋಶಭರಿತರಾಗಿ ಮಾತನಾಡಿದ್ದ ಈಗಿನ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಕೆಪಿಎಸ್‌ಸಿ ಸಂಸ್ಥೆಯನ್ನೇ ರದ್ದುಪಡಿಸಬೇಕು ಎಂದು ಹೇಳಿದ್ದರು.



