ಕೆಎಂಎಫ್ (KMF) ನಂದಿನಿ (Nandini Milk) ಹಾಲಿನ ದರವನ್ನು ಲೀಟರಿಗೆ 3 ರೂ. ಹೆಚ್ಚಳ ಮಾಡಿದೆ. ಹಾಗಾದರೆ ಹೆಡ್`ಲೈನ್ ಯಾಕೆ 4 ರೂ. ಅಂತಿದೆ ಅನ್ನೋ ಬಗ್ಗೆ ಡೌಟ್ ಬೇಡ. ಅರ್ಧ ಲೀಟರ್ ಪ್ಯಾಕೆಟ್ಟಿಗೆ 2 ರೂ. (1 ಲೀ.ಗೆ ಎರಡು ಪ್ಯಾಕೆಟ್ ಬೇಕು. ಆಗ 4 ರೂ.), 200 ಎಂಎಲ್ ಹಾಲಿನ ಪ್ಯಾಕೆಟ್ಟಿಗೆ 1 ರೂ. (1 ಲೀ.ಗೆ 5 ಪ್ಯಾಕೆಟ್ ಬೇಕು. ಆಗ 5 ರೂ.) ಏರಿಕೆ ಮಾಡಿದೆ. ಹೆಚ್ಚಿನವರು ಮನೆಗಳಲ್ಲಿ ಒಂದು ಲೀಟರ್ ಹಾಲಿನ ಪ್ಯಾಕೆಟ್ ಬಳಸುವುದಿಲ್ಲ. ಹೋಟೆಲ್, ಬೇಕರಿಯವರು ಮಾತ್ರವೇ ಲೀಟರ್ ಹಾಲು ಬಳಸುತ್ತಾರೆ. ಆದರೆ ಈ ಏರಿಕೆಯ ಲಾಭ ರೈತರಿಗೆ ಆಗುತ್ತಿಲ್ಲ.
ಹಾಲಿನ ದರ ಹೆಚ್ಚಿಸಿದಾಗ ಕೆಎಂಎಫ್ ಅಧ್ಯಕ್ಷ (KMF) ಭೀಮಾ ನಾಯ್ಕ್ (KMF Chairman Bheema Naik) ಹೆಚ್ಚಳ ಮಾಡಿದ ದರವನ್ನು ಯಥಾವತ್ ರೈತರಿಗೆ ತಲುಪಿಸುತ್ತೇವೆ ಎಂದಿದ್ದರು. ಇದು ಸಿದ್ದರಾಮಯ್ಯನವರ (CM Siddaramaiah) ಕಟ್ಟಾಜ್ಞೆ. ನಾವು ಸಿದ್ದರಾಮಯ್ಯನವರ ಆದೇಶ ಮೀರುವುದಿಲ್ಲ ಎಂದಿದ್ದರು. ಭೀಮಾನಾಯ್ಕ್ ಅವರ ಆದೇಶದಂತೆಯೇ ಯಥಾವತ್ ಹೆಚ್ಚಳ ಮಾಡಿದ ಹಣವನ್ನು ರೈತರಿಗೆ ಕೊಡುತ್ತಿದ್ದಾರೆ. ಆದರೆ ಅಲ್ಲೊಂದು ಟ್ವಿಸ್ಟ್ ಇದೆ. ಅದೇ ಇಂಟ್ರೆಸ್ಟಿಂಗ್.
ಉದಾಹರಣೆಗೆ (KMF) ಕೋಲಾರ ಹಾಲು ಒಕ್ಕೂಟದವರು ಹಾಲಿನ ದರವನ್ನು ಏರಿಸಿದ್ದಾರೆ. ಹೆಚ್ಚಿಸಿದ ಹಣವನ್ನೂ ಯಥಾವತ್ ರೈತರಿಗೆ ತಲುಪಿಸಿದ್ದಾರೆ. ಆದರೆ ಅದರ ನಡುವೆ ಒಂದು ಗೇಮ್ ಆಗಿದೆ. ಹಾಲು ಒಕ್ಕೂಟದವರು ಜುಲೈ 5ನೇ ತಾರೀಕು ಸಭೆ ನಡೆಸಿ, ರೈತರಿಗೆ ಖರೀದಿ ಮಾಡುವ ಹಾಲಿನ ದರವನ್ನು 2.5 ರೂ. ಕಡಿಮೆ ಮಾಡಿದ್ದರು. ಇದರಿಂದಾಗಿ ಹಾಲು ಉತ್ಪಾದಕರಿಗೆ 33.90 ರೂ. ಬದಲಿಗೆ ಕೇವಲ 31.40 ರೂ. ಸಿಗುತಿತ್ತು. ಈಗ 3ರೂ ಹೆಚ್ಚಳ ಮಾಡಿರುವುದರಿಂದ 34.40 ರೂ ಸಿಗುತ್ತಿದೆ. ಅಂದರೆ ಲಾಭ ಕೇವಲ 50 ಪೈಸೆ.
ರಾಜ್ಯದ ಬಹುತೇಕ ಹಾಲು ಒಕ್ಕೂಟಗಳು ಇದೇ ಮಾದರಿ ಅನುಸರಿಸಿವೆ ಎನ್ನಲಾಗಿದೆ. ಅಂದರೆ ಬೆಲೆ ಏರಿಕೆ ಮಾಡುವುದು ಖಚಿತವಾಗುತ್ತಿದ್ದಂತೆ, ಅದನ್ನು ರೈತರಿಗೇ ನೇರವಾಗಿ ವರ್ಗಾವಣೆ ಮಾಡುತ್ತೇವೆ ಎನ್ನುವುದು. ಆ ಮೂಲಕ ನಾವು ಕೊಡುವ ಹಣ ರೈತರಿಗೆ ತಲುಪುತ್ತೆ ಅಲ್ವಾ ಎಂದು ಜನರೂ ಬೇಸರದ ಮಧ್ಯೆಯೂ ಶಾಂತರಾಗುತ್ತಾರೆ. ಅತ್ತ ಅದೇ ವೇಳೆ ರೈತರಿಂದ ಖರೀದಿ ಮಾಡುವ ಹಾಲಿನ ದರವನ್ನೂ ಇಳಿಸುವುದು. ಅದಾದ ಮೇಲೆ ಸರ್ಕಾರದ ಮೂಲಕ ಹಾಲಿನ ದರ ಏರಿಕೆ ಮಾಡುವುದು. ಅದಾದ ಮೇಲೆ ರೈತರಿಂದ ಖರೀದಿ ಮಾಡುತ್ತಿರುವ ಹಾಲಿಗೆ ಹೊಸ ದರ ಸೇರಿಸಿಕೊಡುವುದು. ಅಂದರೆ ರೈತರಿಗೆ ಹಾಲಿಗೆ ಕೊಡುವ ರೇಟ್ ಹೆಚ್ಚಳ ಮಾಡುವುದಕ್ಕೂ ಮೊದಲೇ ದರ ಇಳಿಕೆ ಮಾಡುವುದು. ಅದಾದ ಮೇಲೆ ಇಳಿಸಿದ ದರಕ್ಕೆ ಹೋಲಿಸಿ ದರ ಏರಿಕೆ ಮಾಡುವುದು. ದಾಖಲೆ ಪ್ರಕಾರ ರೈತರಿಗೆ ಹೆಚ್ಚು ಕೊಟ್ಟಂತಾಯಿತು. ಲೆಕ್ಕದ ಪ್ರಕಾರ ಏರಿಸಿದ ಹಣವನ್ನು ತಮ್ಮಲ್ಲೇ ಉಳಿಸಿಕೊಂಡಂತೆಯೂ ಆಯಿತು. ಇಷ್ಟೇ ಕಥೆ.



