ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ. ದಿನಾಂಕವೇ ನಿಗದಿಯಾಗದೆ ಇರುವಾಗ ಮುಖ್ಯಮಂತ್ರಿ ಬದಲಾಗುತ್ತಾರೆ, ಬದಲಾಗಲ್ಲ ಎಂದು ನಾನು ಹೇಗೆ ಹೇಳಲಿ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಪ್ರಶ್ನಿಸಿದ್ದಾರೆ. ಗುರುವಾರವಷ್ಟೇ ‘ರಾಜ್ಯದಲ್ಲಿ ಸದ್ಯಕ್ಕೆ ಸಿಎಂ ಬದಲಾವಣೆ ಇಲ್ಲ’ ಎಂದಿದ್ದ ಖರ್ಗೆಯವರು ಶುಕ್ರವಾರ ತಮ್ಮ ಹೇಳಿಕೆಗೆ ಸ್ಪಷ್ಟಿಕರಣ ನೀಡ್ತಾ, ‘ಸಿಎಂ ಬದಲಾವಣೆಗೆ ಇನ್ನೂ ಸಮಯ ನಿಗದಿಯಾಗಿಲ್ಲ’ ಎಂದು ಹೇಳಿಕೆ ನೀಡಿ ಕುತೂಹಲ ಮೂಡಿಸಿದ್ದಾರೆ. ಇದು ಸಂಚಲನವನ್ನೇ ಮೂಡಿಸಿದೆ. ಸಿದ್ದರಾಮಯ್ಯ ಬದಲಾವಣೆ ಹತ್ತಿರವಾಗಿದೆ ಎಂಬ ಊಹಾಪೋಹಕ್ಕೆ ಪುಷ್ಟಿಯನ್ನಂತೂ ನೀಡಿದೆ.
ಖರ್ಗೆ ಅವರ ಹೇಳಿಕೆಯು ಪಕ್ಷದ ಒಳಭಾಗದ ಊಹಾಪೋಹಗಳಿಗೆ ತಡೆ ಹಾಕುವಂತಿದೆ. “ರಾಜ್ಯದಲ್ಲಿ ಸಿಎಂ ಬದಲಾವಣೆಗೆ ಇನ್ನೂ ಡೇಟ್ ಫಿಕ್ಸ್ ಆಗಿಲ್ಲ” ಎಂದು ಅವರು ಹೇಳಿದ್ದು, ಹೈಕಮಾಂಡ್‌ನ ನಿರ್ಧಾರವೇ ಅಂತಿಮ ಎಂಬ ಸಂದೇಶವನ್ನು ನೀಡಿದೆ. ಸಿದ್ದರಾಮಯ್ಯ ಅವರು ಕೂಡ “ಪಕ್ಷದ ವರಿಷ್ಠರ ತೀರ್ಮಾನವೇ ಅಂತಿಮ” ಎಂದು ಪುನರುಚ್ಚರಿಸಿದ್ದಾರೆ. ಡಿ.ಕೆ. ಶಿವಕುಮಾರ್ ಅವರು ಸಹ ಹೈಕಮಾಂಡ್ ನಿರ್ಧಾರಕ್ಕೆ ಬದ್ಧರಾಗುವುದಾಗಿ ಹೇಳಿದ್ದಾರೆ.
ರಾಜ್ಯದಲ್ಲಿ ನಾಯಕತ್ವ ಬದಲಾವಣೆ ಬಗ್ಗೆ ಗೊಂದಲಗಳಿರುವುದು ನಿಜ. ರಾಜ್ಯದಲ್ಲಿ ಉದ್ಭವಿಸಿರುವ ಈ ನಾಯಕತ್ವ ಕುರಿತ ಗೊಂದಲವನ್ನು ಆದಷ್ಟು ಬೇಗ ಬಗೆಹರಿಸುತ್ತೇವೆ. ಸದ್ಯಕ್ಕೆ ರಾಜ್ಯದಲ್ಲಿ ಸಿಎಂ ಆಗಿ ಸಿದ್ದರಾಮಯ್ಯ ಇದ್ದಾರೆ. ಹೀಗಾಗಿ, ಸದ್ಯಕ್ಕೆ ಸಿಎಂ ಬದಲಾವಣೆ ವಿಚಾರ ಬರೋದಿಲ್ಲ. ಸಿಎಂ ಬದಲಾವಣೆ ವಿಚಾರ ಬಂದರೆ ಆಗ ನಾವೆಲ್ಲ ಸೇರಿ, ಒಟ್ಟಿಗೆ ಕುಳಿತು ಚರ್ಚೆ ಮಾಡುತ್ತೇವೆ. ಸಿಎಂ ಬದಲಾವಣೆಗೆ ಇನ್ನೂ ಸಮಯವಿದೆ. ಆ ಸಮಯ ಬಂದ ಮೇಲೆ ನೋಡೋಣ ಎಂದಿದ್ದಾರೆ ಖರ್ಗೆ.
ಮಲ್ಲಿಕಾರ್ಜುನ ಖರ್ಗೆ ಅವರು ಸಿಎಂ ಆದರೆ ಉತ್ತಮ ಎಂಬ ಗೃಹ ಸಚಿವ ಪರಮೇಶ್ವರ್ ಅವರ ಹೇಳಿಕೆ ಕುರಿತು ಪ್ರತಿಕ್ರಿಯಿಸಿ, ‘ಅವರು ಹೇಳುತ್ತಾರೆ, ನೀವೂ ಹೇಳುತ್ತೀರಿ, ಮೇಲಿನವರೂ (ಹೈಕಮಾಂಡ್) ಹೇಳುತ್ತಾರೆ. ಆದರೆ, ನಮ್ಮ ಹಣೆ ಬರಹ ಬೇಕಲ್ಲ. ಹಣೆ ಬರಹ ಎನ್ನುವುದಕ್ಕಿಂತ ಐಡಿಯಾಲಜಿ ಮುಖ್ಯ’ ಎಂಬ ಮಾತು ಬೇರೆಯದೇ ಸೂಚನೆ ಕೊಟ್ಟಿದೆ.
ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾಯಕತ್ವ ಬದಲಾವಣೆ ವಿಚಾರದಲ್ಲಿ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಯಾವುದೇ ವಿಚಾರದ ಬಗ್ಗೆಯಾದರೂ ಸರಿ ಮಲ್ಲಿಕಾರ್ಜುನ ಖರ್ಗೆ ಸಾಹೇಬರನ್ನು ಕೇಳಿ ಎನ್ನುವ ಮೂಲಕ ಸಮಸ್ತ ಹೊಣೆಯನ್ನೂ ಖರ್ಗೆಯವರ ಮೇಲೆ ಎತ್ತಿಹಾಕಿದ್ಧಾರೆ ಡಿಕೆ.
2023ರ ಚುನಾವಣೆಯ ಸಮಯದಲ್ಲಿ ಉದ್ಭವವಾದ “ಪವರ್ ಶೇರಿಂಗ್” ಫಾರ್ಮುಲಾದಿಂದ ಹೊರಟಿರುವ ಈ ಹೇಳಿಕೆ ಪ್ರಕಾರ ರಾಜಕೀಯ ವಿಶ್ಲೇಷಕರು ಇದನ್ನು ಕಾಂಗ್ರೆಸ್ ಒಳಭಾಗದ ಸಮತೋಲನ ನಿರ್ವಹಣೆ ಎಂದು ನೋಡುತ್ತಿದ್ದಾರೆ. ಸಿದ್ದರಾಮಯ್ಯ ಅವರ ಅನುಭವ ಮತ್ತು ಡಿ.ಕೆ. ಶಿವಕುಮಾರ್ ಅವರ ಸಂಘಟನಾ ಶಕ್ತಿ ಎರಡೂ ಪಕ್ಷಕ್ಕೆ ಅಗತ್ಯ. ಆದರೆ ಅಕಾಲಿಕ ಬದಲಾವಣೆಯು ಪಕ್ಷದ ಏಕತೆಗೆ ಹಾನಿ ಮಾಡಬಹುದು. ಮೇ ತಿಂಗಳಲ್ಲಿ ಕ್ಯಾಬಿನೆಟ್ ವಿಸ್ತರಣೆಯ ಜೊತೆಗೆ ಈ ವಿಚಾರ ಸ್ಪಷ್ಟವಾಗುವ ಸಾಧ್ಯತೆ ಇದೆ.



