ಕಾಂತಾರ ಚಾಪ್ಟರ್ 01, OTTಗೆ ಬಂದಿದೆ. ಮೊಬೈಲಿನಲ್ಲೂ ನೋಡಬಹುದು. ಮನೆಯಲ್ಲಿರುವ ಸ್ಮಾರ್ಟ್ ಟಿವಿಯಲ್ಲೂ ನೋಡಬಹುದು. ಹಣ ಕೊಟ್ಟವರು ಬಿಸಿನೆಸ್ ನೋಡುತ್ತಾರೆ. ಅಮೇಜಾನ್, ನೆಟ್ ಫ್ಲಿಕ್ಸ್, ಸನ್ ನೆಕ್ಸ್ಟ್, ಜಿಯೋ ಹಾಟ್ ಸ್ಟಾರ್.. ಯಾವುದೇ ಇರಲಿ.. ಅದು ಸಹಜ. ಆದರೆ.. ಕಾಂತಾರ ಇದೇ ತಿಂಗಳ ಆರಂಭದಲ್ಲಿ ರಿಲೀಸ್ ಆಗಿ.. ಇದೇ ತಿಂಗಳು ಬ್ಲಾಕ್ ಬಸ್ಟರ್ ಆಗಿ.. ಇದೇ ತಿಂಗಳು.. OTTಗೂ ಬಂದಿದೆ. ಚಿತ್ರಮಂದಿರ ರಿಲೀಸ್ ಮತ್ತು OTT ರಿಲೀಸ್ ನಡುವೆ ಕೇವಲ 28 ದಿನಗಳ ಗ್ಯಾಪ್. ಇದು ಆತುರವೇ.. ಇರಬಹುದು. ಆದರೆ.. ಅವಸರ ಅಪಾಯಕ್ಕೆ ಕಾರಣ ಎನ್ನುವುದನ್ನಂತೂ ಮರೆಯುವಂತಿಲ್ಲ. ಏಕೆಂದರೆ ಇದು ಇತಿಹಾಸ ಹೇಳಿದ ಪಾಠ.
ನಿಮಗೆ ನೆನಪಿರಬಹುದು. ಉದಯ ಟಿವಿ ಬಂದ ಹೊಸದರಲ್ಲಿ ಡಬ್ಬಾದಲ್ಲಿ ಕೊಳೆಯುತ್ತಿದ್ದ ಹಲವು ಚಿತ್ರಗಳಿಗೆ ಆಗಿನ ಕಾಲಕ್ಕೆ ದೊಡ್ಡ ಹಣವೇ ಸಿಕ್ಕಿತು. ಥಿಯೇಟರ್ ರನ್ ಮುಗಿದ ಮೇಲೆ ಮುಗಿದೇ ಹೋಯ್ತು ಎನ್ನುವಂತಿದ್ದ ನಿರ್ಮಾಪಕರು ಮತ್ತೆ ಕಾಸು ನೋಡಿದರು. ಆದರೆ.. ಈಟಿವಿ ಕನ್ನಡವೂ ಬಂದಾಗ.. ಸಣ್ಣ ಪೈಪೋಟಿಯೊಂದು ಶುರುವಾಯಿತು. ಸಿಕ್ಕ ಸಿಕ್ಕ ಚಿತ್ರಗಳನ್ನು ಖರೀದಿ ಮಾಡಲಾಯಿತು. ಸಿನಿಮಾ ಏನು.. ಕಂಟೆಂಟ್ ಏನು ಎನ್ನುವುದನ್ನೂ ನೋಡದೆ ಹಣ ಕೊಟ್ಟಿತ್ತು ಈಟಿವಿ. ಈಗಲೂ ಕೂಡಾ ಈಟಿವಿ (ಈಗ ಕಲರ್ಸ್ ಕನ್ನಡ) ಖಜಾನೆಯಲ್ಲಿ ಪ್ರಸಾರ ಮಾಡಲು ಸಾಧ್ಯವಾಗದ ಅಡಲ್ಟ್ (ವಯಸ್ಕರ) ಚಿತ್ರಗಳೂ ಇವೆ. ಅವಸರಕ್ಕೆ ಬಿದ್ದು ಆದ ಅನಾಹುತ ಅದು.
ಅದಾದ ಮೇಲೆ ಮತ್ತೊಂದಿಷ್ಟು ಟಿವಿ ಚಾನೆಲ್ಲುಗಳು ಬಂದಾಗ.. ಸಿನಿಮಾ ಮುಹೂರ್ತ ಆಗುತ್ತಿದ್ದಂತೆಯೇ ಹಣ ಕೊಡುವ ಕಲ್ಚರ್ ಶುರುವಾಯ್ತು. ಆಗ ಕೆಲವರು ದುಡ್ಡಿನ ಆಸೆಗೆ ಕಥೆಯೇ ಇಲ್ಲದೆ ರೀಲು ಸುತ್ತಿ, ಕನ್ನಡ ಚಿತ್ರಗಳ ಮಾರ್ಕೆಟ್ ಹಾಳು ಮಾಡಿದರು. ಅತ್ತ ಹೀರೋ, ಡೈರೆಕ್ಟರುಗಳ ಮಾರ್ಕೆಟ್ಟು ಕೆಟ್ಟು ಕೆರ ಹಿಡೀತು. ಇನ್ನೂ ಕೆಲವರು ಕೇಲವ ಮುಹೂರ್ತವನ್ನಷ್ಟೇ ಮಾಡಿ.. ಟಿವಿ ಚಾನೆಲ್ಲುಗಳಿಗೇ ನಾಮ ತಿಕ್ಕಿದರು. ಈಗ ಟಿವಿ ಚಾನೆಲ್ಲುಗಳವರಿಗೆ ತಮ್ಮ ಸಿನಿಮಾ ಖರೀದಿಸಿ ಎಂದು ಕೈಕಾಲಿಗೆ ಬೀಳುವವರಿದ್ದಾರೆ. ಅವಸರಕ್ಕೆ ಬಿದ್ದು ಕಳೆದುಕೊಂಡ ಮಾರ್ಕೆಟ್ ಅದು.
ಈಗ OTT. ಇಲ್ಲಿ ಆಗಲೇ ಕೆಲವು OTT ಪ್ಲಾಟ್ ಫಾರ್ಮುಗಳು ಕನ್ನಡ ಚಿತ್ರಗಳನ್ನು ಕಣ್ಣೆತ್ತಿಯೂ ನೋಡುತ್ತಿಲ್ಲ. ಕಾರಣ.. OTTಯವರಿಗೆ ಈಗಾಗಲೇ ಟಿವಿ ಚಾನೆಲ್ಲುಗಳವರಿಗೆ ಆದಂತಹ ಅನುಭವ ಆಗಿದೆ. ಕೆಟ್ಟ ಚಿತ್ರಗಳನ್ನು ಫೇಕ್ ವಿಮರ್ಶೆಯೊಂದಿಗೆ ನಂಬಿಸಿ OTTಯವರು ಕನ್ನಡ ಚಿತ್ರಗಳಿಂದ ದೂರ ಇರುವಂತೆ ಮಾಡಿದ್ದಾಗಿದೆ. ಓನ್ಸ್ ಎಗೇನ್ ಅವಸರ.
ಈಗ ಅದೇ OTTಗೆ ಬ್ಲಾಕ್ ಬಸ್ಟರ್ ಚಿತ್ರವೊಂದು ರಿಲೀಸ್ ಅದ ಒಂದು ತಿಂಗಳ ಒಳಗೆ ಬರುವುದಕ್ಕೆ ಶುರು ಮಾಡಿದರೆ.. ಏನಾಗಬಹುದು. ತೆಲುಗಿನಲ್ಲಿ ಪವನ್ ಕಲ್ಯಾಣ್ ಅವರ OG, ರಿಷಬ್ ಶೆಟ್ಟಿಯವರ ಕಾಂತಾರ, ರಜನಿಯ ಕೂಲಿ, ಸಲ್ಮಾನ್ ಖಾನ್ ಸಿಕಂದರ್.. ಹೀಗೆ ಬಹುತೇಕ ಸ್ಟಾರ್ ನಟರ ಚಿತ್ರಗಳು ತಿಂಗಳು ಕಳೆಯುತ್ತಿದ್ದಂತೆ ಸಿಗುತ್ತಿದ್ದರೆ.. ಪ್ರೇಕ್ಷಕರು ಕಾದು ನೋಡುವ ಸೇಫ್ ತಂತ್ರಕ್ಕೆ ಮೊರೆ ಹೋಗುವ ಅಪಾಯ ಇದೆ.
ಎಷ್ಟು ಬೇಗ ಸಾಧ್ಯವೋ.. ಅಷ್ಟು ಬೇಗ ಹಣ ಮಾಡೋಣ ಎನ್ನುವ ತಂತ್ರಕ್ಕೆ ನಿರ್ಮಾಪಕರು, OTTಯವರು ಬಂದರೆ.. ಪ್ರೇಕ್ಷಕರೂ ಕೂಡಾ ತಮ್ಮ ತಮ್ಮ ಲಾಭದ ಲೆಕ್ಕಾಚಾರ ಹಾಕುತ್ತಾರೆ.. ಅಲ್ಲವೇ.. ಹಾಲು ಕೊಡುವ ಹಸುವನ್ನು ಚೆನ್ನಾಗಿ ಸಾಕಬೇಕು. ಕೆಚ್ಚಲನ್ನೇ ಕೊಯ್ಯಬಾರದು. ಅವಸರವೇ.. ಅಪಾಯಕ್ಕೆ ಕಾರಣ.



