ಅಭಿಮಾನಿಗಳು ಹಠಕ್ಕೆ ಬಿದ್ದರೆ.. ಎಂಥವರೂ ಮಣಿಯುತ್ತಾರೆ. ಏಕೆಂದರೆ ಅದು ಪ್ರೀತಿ, ಅಭಿಮಾನದ ಹಠ. ಅಂತಹ ಹಠ ಅಭಿಮಾನಿಗಳಿಂದ ಒಂದಿಷ್ಟು ಅಂತರ ಕಾಯ್ದುಕೊಂಡೇ ಇರುವ ರವಿಚಂದ್ರನ್ ಅವರನ್ನೂ ಮಣಿಯುವಂತೆ ಮಾಡಿದೆ.
ಕನ್ನಡಕ್ಕೊಬ್ಬರೇ ಕ್ರೇಜಿ ಸ್ಟಾರ್. ಅದು ರವಿಚಂದ್ರನ್. ಅತ್ತ ಹೀರೋ ಆಗಿ.. ಇತ್ತ ಪೋಷಕ ನಟರಾಗಿ.. ಎರಡೂ ಕಡೆ ಆಕ್ಟಿವ್ ಆಗಿರುವ ರವಿಚಂದ್ರನ್ ಅವರಿಗೆ ಅಭಿಮಾನಿಗಳೇನೋ ಇದ್ಧಾರೆ. ಅಭಿಮಾನಿಗಳಿಗೆ ರವಿಚಂದ್ರನ್ ಅಂದ್ರೆ ಕ್ರೇಜ್ ಇದೆ. ಆದರೆ.. ರವಿಚಂದ್ರನ್ ಅವರಿಗೇ ಇಲ್ಲ. ರವಿಚಂದ್ರನ್ ಅವರಿಗೆ ಮೇ 30 ಹುಟ್ಟುಹಬ್ಬದ ಸಂಭ್ರಮ.
ಅಂಬರೀಷ್ ಅವರದ್ದು ಮೇ 29ಕ್ಕೆ ಆದರೆ.. ರವಿಚಂದ್ರನ್ ಅವರದ್ದು ಮೇ 30ಕ್ಕೆ. ಒಂದಾನೊಂದು ಕಾಲದಲ್ಲಿ ಇಬ್ಬರೂ ಒಟ್ಟೊಟ್ಟಿಗೇ ಬರ್ತ್ ಡೇ ಸೆಲಬ್ರೇಟ್ ಮಾಡಿಕೊಳ್ತಿದ್ರಂತೆ. ಆದರೆ.. ಒಂದ್ಸಲ ಅಂಬರೀಷ್ ತಮ್ಮ ಗೆಳೆಯರ ಜೊತೆ ಸಪರೇಟ್ ಆಗಿ ಹುಟ್ಟುಹಬ್ಬ ಆಚರಿಸಿಕೊಂಡು, ರವಿಚಂದ್ರನ್ ಜೊತೆ ಬರ್ತ್ ಡೇ ಮಿಸ್ ಮಾಡಿದ್ರಂತೆ. ಅಂದಿನಿಂದ ಹುಟ್ಟುಹಬ್ಬದ ಕ್ರೇಜ್ ಹೋಯ್ತು ಅನ್ನೋ ಮಾತನ್ನ ಹಲವು ಕಡೆ ಹೇಳಿರುವ ರವಿಚಂದ್ರನ್, ಹುಟ್ಟುಹಬ್ಬದ ದಿನ ಅಭಿಮಾನಿಗಳಿಗೆ ಸಿಕ್ಕೋದಿಲ್ಲ. ಅಭಿಮಾನಿಗಳು ಮುತ್ತಿಕೊಂಡರೆ ಕೆಲವೇ ನಿಮಿಷಗಳಲ್ಲಿ ಉತ್ಸಾಹ ಕಳೆದುಕೊಳ್ಳೋ ರವಿಚಂದ್ರನ್ ಅವರಿಗೆ ಅಭಿಮಾನಿಗಳೆಂದರೆ ಇಷ್ಟ. ಆದರೆ.. ಮೈಮೇಲೆ ಬೀಳುವುದು.. ಕಿರುಚಾಡುವುದು ಇಷ್ಟ ಆಗಲ್ಲ. ರವಿಚಂದ್ರನ್ ಅಭಿಮಾನಿಗಳು ತಮ್ಮದೇ ಹೆಸರಿನ ಹಚ್ಚೆ ಹಾಕಿಸ್ಕೊಂಡು ಬಂದರಂತೂ ಬೈದು ಕಳಿಸುವ ರವಿಚಂದ್ರನ್, ಈ ಬಾರಿ ಅಭಿಮಾನಿಗಳ ಒತ್ತಾಯಕ್ಕೆ ಮಣಿದಿದ್ಧಾರೆ.
ರಾಜಾಜಿನಗರದ ತಮ್ಮ ನಿವಾಸದಲ್ಲಿ 63ನೇ ಹುಟ್ಟು ಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳು ತಂದಿದ್ದ ಕೇಕ್ ಕಟ್ ಮಾಡಿ ಸಂಭ್ರಮಿಸಿದ್ದಾರೆ. ಇದೇ ವೇಳೆ ಶೀಘ್ರದಲ್ಲೇ ಪ್ರೇಮಲೋಕ 2 ಬಗ್ಗೆ ಖಚಿತ ಅಪ್ʻಡೇಟ್ ಕೊಡ್ತೇನೆ ಎಂದಿರುವ ರವಿಚಂದ್ರನ್, ಅಭಿಮಾನಿಗಳ ಸಂಭ್ರಮ ಹೆಚ್ಚಿಸಿದ್ದಾರೆ.
‘ಪ್ರೇಮಲೋಕ ಸೀಕ್ವೆಲ್ಗೆ ಟ್ರೇಲರ್ ರೆಡಿ ಇದೆ. ಗಜಿಬಿಜಿ ಆಗೋದು ಬೇಡ ಅಂತ ಇಂದು ಲಾಂಚ್ ಮಾಡಲಿಲ್ಲ. ಒಂದು ವಾರದಲ್ಲಿ ದೊಡ್ಡ ನ್ಯೂಸ್ ಕೊಡ್ತೀನಿ. ನಾನು ಹಾಗೂ ನನ್ನ ಇಬ್ಬರು ಮಕ್ಕಳು ಈ ಚಿತ್ರದಲ್ಲಿ ಇರುತ್ತಾರೆ. ಪ್ರೇಮಲೋಕ ಸಿನಿಮಾನ ಅಂದು ಒಂದು ರೂಪಾಯಿ ಕೊಟ್ಟು ನೋಡಿದ್ರು. ಈಗ 2 ಸಾವಿರ ಕೊಟ್ಟು ನೋಡುತ್ತಾರೆ’ ಎಂದಿದ್ದಾರೆ ರವಿಚಂದ್ರನ್.
ರವಿಚಂದ್ರನ್ ಅವರು ‘ರವಿ ಬೋಪಣ್ಣ’ ಸಿನಿಮಾ ನಂತರ ನಿರ್ದೇಶನದಿಂದ ದೂರ ಉಳಿದಿದ್ದರು. ‘ರವಿ ಬೋಪಣ್ಣ’ ಸಿನಿಮಾವು ಅಂದುಕೊಂಡಮಟ್ಟಕ್ಕೆ ಯಶಸ್ಸು ಪಡೆದಿರಲಿಲ್ಲ. ಆದರೆ ಈ ಬಾರಿ ಹೊಸ ಚೈತನ್ಯದೊಂದಿಗೆ ಪುಟಿದೆದ್ದಿರುವ ರವಿಚಂದ್ರನ್, ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿ ಇದ್ದಾರೆ.
1987ರಲ್ಲಿ ತೆರೆಕಂಡ ‘ಪ್ರೇಮಲೋಕ’ ಸಿನಿಮಾವು ರವಿಚಂದ್ರನ್ ಅವರ ಕರಿಯರ್‌ಗೆ ಎಷ್ಟು ಮಹತ್ವದ್ದು ಎಂಬುದು ಎಲ್ಲರಿಗೂ ಗೊತ್ತಿದೆ. ಇದೀಗ ಅದರ ಪಾರ್ಟ್ 2 ಮಾಡುವುದಕ್ಕೆ ರವಿಚಂದ್ರನ್ ಹೊರಟಿದ್ದು, ಪುತ್ರ ಮನೋರಂಜನ್ ಅವರಿಗೆ ಮೊದಲ ಬಾರಿಗೆ ಈ ಸಿನಿಮಾದ ಮೂಲಕ ನಿರ್ದೇಶನ ಮಾಡಲಿದ್ದಾರೆ. ‘ಪ್ರೇಮಲೋಕ 2’ ಸಿನಿಮಾದಲ್ಲಿ ರವಿಚಂದ್ರನ್ ಕೂಡ ಒಂದು ಮುಖ್ಯ ಪಾತ್ರ ಮಾಡಲಿದ್ದಾರಂತೆ. ಜೊತೆಗೆ ರವಿಚಂದ್ರನ್ ಅವರ 2ನೇ ಪುತ್ರ ವಿಕ್ರಮ್ ಕೂಡ ಒಂದು ಪಾತ್ರವನ್ನು ‘ಪ್ರೇಮಲೋಕ 2’ ಚಿತ್ರದಲ್ಲಿ ಮಾಡಲಿದ್ದಾರೆ ಎಂಬ ಮಾಹಿತಿ ಇದೆ. ಚಿತ್ರದಲ್ಲಿ 25 ಹಾಡುಗಳು ಇರಲಿವೆ ಎಂದು ಹಿಂದೊಮ್ಮೆ ರವಿಚಂದ್ರನ್ ಹೇಳಿದ್ದರು.



