ಕರ್ನಾಟಕ ರಾಜ್ಯ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಹೈಕಮಾಂಡ್ ಪ್ರಕ್ರಿಯೆ ಆರಂಭಿಸಿದ್ದು, ರಾಜ್ಯ ನಾಯಕರಿಂದ ರಹಸ್ಯವಾಗಿ ಅಭಿಪ್ರಾಯ ಸಂಗ್ರಹಿಸುತ್ತಿದೆ. ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಅವರು ಇದಕ್ಕಾಗಿ ಬೆಂಗಳೂರಿಗೆ ಆಗಮಿಸಿದ್ದಾರೆ. ಈ ವೇಳೆ ವಿಜಯೇಂದ್ರ ಕುರಿತಂತೆ 30 ನಾಯಕರಿಂದ ಅಭಿಪ್ರಾಯ ಸಂಗ್ರಹಿಸುತ್ತಿರುವುದು ಕುತೂಹಲ ಮೂಡಿಸಿದೆ. ಈ ಕುರಿತಂತೆಯೂ ವಿಜಯೇಂದ್ರ ವಿರೋಧಿ ಬಣದ ಕೆಲವು ಗುರ್ ಅಂತಿದ್ದಾರೆ. ವಿಶೇಷ ಎಂದರೆ ಕೆಲವು ನಾಯಕರನ್ನು ʻನಾಯಕರುʼ ಎಂಬ ಲಿಸ್ಟ್‌ಗೇ ಹೈಕಮಾಂಡ್ ಸೇರಿಸಿಕೊಂಡಿಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ 23ಕ್ಕೆ ಬೆಂಗಳೂರಿಗೆ ಬರಲಿದ್ಧಾರೆ. ಅವರು ಬರುವ ಮೊದಲೇ ವಿಜಯೇಂದ್ರ ಅವರ ಕುರಿತು ಅಭಿಪ್ರಾಯ ಸಂಗ್ರಹಿಸಿ ಅವರಿಗೆ ವರದಿ ಒಪ್ಪಿಸುವುದು ಶಿವಪ್ರಕಾಶ್ ಅವರಿಗೆ ವಹಿಸಿರುವ ಜವಾಬ್ದಾರಿ. ಹೀಗಾಗಿ ಶಿವಪ್ರಕಾಶ್ ಅವರು 30ಕ್ಕೂ ಹೆಚ್ಚು ರಾಜ್ಯ ನಾಯಕರನ್ನು ವೈಯಕ್ತಿಕವಾಗಿ ಭೇಟಿ ಮಾಡಿ ಮಾಹಿತಿ ಪಡೆಯುತ್ತಿದ್ದಾರೆ. ಮುಂದಿನ ಅಧ್ಯಕ್ಷರ ಆಯ್ಕೆಗಾಗಿ ವರಿಷ್ಠರು ಅತ್ಯಂತ ಗೌಪ್ಯವಾಗಿ ಈ ರಹಸ್ಯ ಕಾರ್ಯಾಚರಣೆ ನಡೆಸುತ್ತಿದ್ದಾರೆ.
ರಾಜ್ಯಾಧ್ಯಕ್ಷರು ಮುಂದುವರಿಬೇಕಾ? ಏಕೆ? ರಾಜ್ಯಾಧ್ಯಕ್ಷರು ಬದಲಾಗಬೇಕಾ? ಏಕೆ? ಬದಲಾಗಬೇಕಾದರೆ ಹೊಸ ರಾಜ್ಯಾಧ್ಯಕ್ಷರು ಯಾರಾಗಬೇಕು? ಯಾವ ಮಾನದಂಡಲ್ಲಿ ಹೆಸರು ಹೇಳ್ತಿದ್ದೀರಾ? ಎಂದು ಪ್ರಶ್ನೆಗಳನ್ನ ಕೇಳಿ ಬಿಜೆಪಿ ಹೈಕಮಾಂಡ್ ನಾಯಕರು ಅಭಿಪ್ರಾಯ ಸಂಗ್ರಹಿಸಿದ್ದಾರೆ. ಬಹಳ ದಿನಗಳ ಬಳಿಕ ಬಿಜೆಪಿ ಕಚೇರಿಯಲ್ಲಿ ಪ್ರತ್ಯಕ್ಷವಾದ ರಮೇಶ್ ಜಾರಕಿಹೊಳಿ ಅವರೂ ಅಧ್ಯಕ್ಷರ ಆಯ್ಕೆ ಬಗ್ಗೆ ಅಭಿಪ್ರಾಯ ಹೇಳಿದ್ದಾರೆ.
ಆರ್. ಅಶೋಕ್, ಛಲವಾದಿ ನಾರಾಯಣ ಸ್ವಾಮಿ, ಅರವಿಂದ ಬೆಲ್ಲದ್, ಡಾ.ಸಿಎಸ್ ಅಶ್ವತ್ಥ ನಾರಾಯಣ್, ರಮೇಶ್ ಜಾರಕಿಹೊಳಿ, ವಿ ಸುನಿಲ್ ಕುಮಾರ್, ಡಿವಿ ಸದಾನಂದ ಗೌಡ, ಸಿಟಿ ರವಿ ಲೆಹರ್ ಸಿಂಗ್.. ಹೀಗೆ ಒಟ್ಟು 30 ನಾಯಕರ ಅಭಿಪ್ರಾಯ ಸಂಗ್ರಹ ಮಾಡಿದ್ಧಾರೆ. ವಿಶೇಷ ಎಂದರೆ ಕೆಲವು ಸ್ವಯಂ ಘೋಷಿತ ನಾಯಕರ ಅಭಿಪ್ರಾಯವನ್ನು ಕೇಳುವ ಪ್ರಯತ್ನವನ್ನೂ ಮಾಡಿಲ್ಲ. ಹೈಕಮಾಂಡ್ ಕೂಡಾ ಸೋಷಿಯಲ್ ಮೀಡಿಯಾ ಮಾಂಗರ್ ನಾಯಕರನ್ನು ಲೀಡರ್ ಎಂದೇ ಪರಿಗಣಿಸಿಲ್ಲ.
ನಾಯಕರೆಲ್ಲರನ್ನೂ ಒಟ್ಟಿಗೆ ಕೂರಿಸಿ ಚರ್ಚಿಸುವ ಬದಲಿಗೆ, ಶಿವಪ್ರಕಾಶ್ ಅವರು ಪ್ರತಿಯೊಬ್ಬ ನಾಯಕರನ್ನು ವೈಯಕ್ತಿಕವಾಗಿ ಪ್ರತ್ಯೇಕ ಕೊಠಡಿಗೆ ಕರೆದು ರಹಸ್ಯವಾಗಿ ಅಭಿಪ್ರಾಯ ಪಡೆದಿದ್ದಾರೆ. ಮಾಜಿ ಮುಖ್ಯಮಂತ್ರಿಗಳು, ಕೋರ್ ಕಮಿಟಿ ಸದಸ್ಯರು, ಪ್ರಮುಖ ಸಂಸದರು, ಶಾಸಕರು ಮತ್ತು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಈ ರಹಸ್ಯ ಪ್ರಕ್ರಿಯೆಯಲ್ಲಿ ಭಾಗವಹಿಸಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ.
ಪ್ರಸ್ತುತ ರಾಜ್ಯಾಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಅವರ ಅವಧಿಯು ಮುಂಬರುವ ನವೆಂಬರ್‌ನಲ್ಲಿ ಮುಕ್ತಾಯಗೊಳ್ಳಲಿದೆ. ಕೆಲವು ಹಿರಿಯ ನಾಯಕರು ವಿಜಯೇಂದ್ರ ಅವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುತ್ತಿಲ್ಲ ಎಂದು ವರಿಷ್ಠರ ಮುಂದೆ ಅಸಮಾಧಾನ ಹೊರಹಾಕಿದ್ದಾರೆ. ವಿಜಯೇಂದ್ರ ಅವರನ್ನು ಬದಲಾಯಿಸಬೇಕೆಂದು ಒತ್ತಾಯಿಸಿರುವ ನಾಯಕರು, ಬೇರೆ ಬೇರೆ ಸಮುದಾಯದ ಪರ್ಯಾಯ ನಾಯಕರ ಹೆಸರುಗಳನ್ನು ಹೈಕಮಾಂಡ್‌ಗೆ ಸೂಚಿಸಿದ್ದಾರೆ. ವಿಜಯೇಂದ್ರ ಪರ ಇರುವ ನಾಯಕರು, ಮುಂಬರುವ 2028ರ ವಿಧಾನಸಭಾ ಚುನಾವಣೆಯವರೆಗೆ ಅವರನ್ನೇ ಅಧ್ಯಕ್ಷ ಹುದ್ದೆಯಲ್ಲಿ ಮುಂದುವರಿಸಬೇಕು ಎಂದು ಪ್ರಬಲವಾಗಿ ವಾದಿಸಿದ್ದಾರೆ.
ಈ ನಡುವೆ ಹೈಕಮಾಂಡ್ ನಾಯಕರು ವಿಜಯೇಂದ್ರ ವಿರೋಧಗಳಿಗೆ ಪ್ರಶ್ನೆ ಕೇಳುತ್ತಿರುವುದೇ ಸಹಿಸಿಕೊಳ್ಳೋಕೆ ಆಗುತ್ತಿಲ್ಲ. ಆರೋಪಕ್ಕೆ ತಕ್ಕಂತೆ ಆಧಾರ ಕೊಡಿ ಎನ್ನುತ್ತಿರುವ ಹೈಕಮಾಂಡ್ ಎದುರು ಉತ್ತರ ಕೊಡಲಾರದೆ ಸುಮ್ಮನಾಗುತ್ತಿದ್ಧಾರೆ. ಹೀಗಾಗಿ ಹೈಕಮಾಂಡ್ ವಿರುದ್ಧವೂ ಅಸಮಾಧಾನ ಹೊರಹಾಕುತ್ತಿದ್ದಾರೆ.
ಈ ವರದಿ ಹೈಕಮಾಂಡ್‌ಗೆ ರವಾನೆಯಾಗುತ್ತದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪಕ್ಷದ ಕಚೇರಿ ‘ಜಗನ್ನಾಥ ಭವನ’ದಲ್ಲಿ ಸಭೆಗಳು ನಡೆದಿದ್ದು, ಬಿಜೆಪಿ ರಾಷ್ಟ್ರೀಯ ಸಹ-ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್, ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಜಯ ಪಾಂಡಾ ಮತ್ತು ರಾಜ್ಯ ಉಸ್ತುವಾರಿ ಡಾ. ರಾಧಾ ಮೋಹನ್ ದಾಸ್ ಅಗರ್ವಾಲ್ ನೇತೃತ್ವ ವಹಿಸಿಕೊಂಡಿದ್ದಾರೆ.



