ತುಂಬಾ ದಿನಗಳೇನಲ್ಲ. ಕೆಲವೇ ಕೆಲವು ತಿಂಗಳುಗಳಾಗಿವೆ, ಅಷ್ಟೆ. ಹಿಮಾಚಲ ಪ್ರದೇಶ ಚುನಾವಣೆ ಮುಗಿದು ಅಧಿಕಾರ ವಹಿಸಿಕೊಂಡಿರುವ ಕಾಂಗ್ರೆಸ್`ಗೆ ಗ್ಯಾರಂಟಿ ಭಾಗ್ಯಗಳೇ ಮುಳ್ಳಾಗಿ ಕಾಡುತ್ತಿವೆ. 15 ಸಾವಿರಕ್ಕೂ ಹೆಚ್ಚು ಸರ್ಕಾರಿ ನೌಕರರಿಗೆ ಸಂಬಳವನ್ನೇ ಕೊಟ್ಟಿಲ್ಲ. ಈಗಾಗಲೇ ಜೂನ್ ತಿಂಗಳಲ್ಲಿ ಅರ್ಧ ತಿಂಗಳು ಕಳೆದೇ ಹೋಗಿದೆ. ಆದರೆ, ಸಂಬಳ ಕೊಡುವುದಕ್ಕೆ ದುಡ್ಡಿಲ್ಲ.
ದೈನಿಕ್ ಭಾಸ್ಕರ್ ಈ ಕುರಿತಂತೆ ವಿಸ್ತ್ರತ ವರದಿ ಮಾಡಿದೆ. ರಾಜ್ಯ ಸಾರಿಗೆ ಇಲಾಖೆ, ವೈದ್ಯಕೀಯ ಕಾಲೇಜುಗಳು, ಜಲ ಸಂಪನ್ಮೂಲ, ಅರಣ್ಯ ಇಲಾಖೆಯ ಸಾವಿರಾರು ಸರ್ಕಾರಿ ನೌಕರರಿಗೆ ಜೂನ್ 14ರವರೆಗೂ ವೇತನ ಪಾವತಿಯಾಗಿಲ್ಲ. ಪ್ರತಿ ತಿಂಗಳ ಮೇ 1 ರಂದು ಬ್ಯಾಂಕ್ ಖಾತೆಗೆ ಮಾಸಿಕ ವೇತನ ಜಮೆ ಆಗುತ್ತಿತ್ತು. ಆದರೆ, ಈ ಬಾರಿ ತಿಂಗಳು ಆರಂಭವಾಗಿ 13 ದಿನಗಳಾದರೂ ಸ್ಯಾಲರಿ ಆಗಿಲ್ಲ.
ಈ ವರ್ಷ ಹಿಮಾಚಲ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರ ಹಿಡಿದಿದೆ. ಚುನಾವಣೆಯ ವೇಳೆ ಉಚಿತ ಭಾಗ್ಯಗಳು ಹಾಗೂ ಗ್ಯಾರಂಟಿಗಳನ್ನು ಸುಖ್ವಿಂದರ್ ಸಿಂಗ್ ಸಕ್ಕು ನೇತೃತ್ವದಲ್ಲಿ ಕಾಂಗ್ರೆಸ್ ಘೋಷಣೆ ಮಾಡಿತ್ತು. ಇಲ್ಲಿ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಗ್ಯಾರಂಟಿ ಜಂಟಿ ಕಾರ್ಯಾಚರಣೆ ಕೆಲಸ ಮಾಡಿದಂತೆಯೇ ಅಲ್ಲಿಯೂ ಕೆಲಸ ಮಾಡಿತ್ತು. ಉಚಿತ ಘೋಷಣೆಗಳನ್ನು ಜಾರಿ ಮಾಡಿದ್ದರಿಂದ ರಾಜ್ಯ ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದು, ಇದರಿಂದ ಸರ್ಕಾರಿ ನೌಕರರ ವೇತನ ಕೂಡ ವಿಳಂಬವಾಗಿದೆ.
ಈಗಾಗಲೇ ರಾಜ್ಯ ಸರ್ಕಾರ 1000 ಕೋಟಿ ಓವರ್ ಡ್ರಾಫ್ಟ್ ಸಂಕಷ್ಟದಲ್ಲಿದೆ. ಜೊತೆಗೆ 800 ಕೋಟಿ ರೂ. ಸಾಲಕ್ಕೆ ಹೊಸದಾಗಿ ಅರ್ಜಿ ಸಲ್ಲಿಸಿದೆ. ಈ 800 ಸಾಲ ಸಿಕ್ಕ ನಂತರವೂ 200 ಕೋಟಿ ಓವರ್ ಡ್ರಾಫ್ಟ್ ಇರಲಿದೆ. ಓವರ್ ಡ್ರಾಫ್ಟ್ ಎಂದರೆ ಸರ್ಕಾರದ ಮೇಲಿನ ಭರವಸೆಯ ಮೇಲೆ ಖಾತೆಯಲ್ಲಿ ಹಣವಿಲ್ಲದಿದ್ದರೂ, ಬ್ಯಾಂಕುಗಳು ಕೊಡುವ ಸಾಲ. ಬ್ಯಾಂಕುಗಳಲ್ಲಿ ಈ ರೀತಿಯ ಓವರ್`ಡ್ರಾಫ್ಟ್ ಸೌಲಭ್ಯ, ಬ್ಯಾಂಕುಗಳಲ್ಲಿ ವಹಿವಾಟು ಹೊಂದಿರುವ ಉದ್ಯಮಿಗಳಿಗೆ ಹಾಗೂ ವ್ಯಾಪಾರಿಗಳಿಗೂ ಇರುತ್ತದೆ. ಅದೇ ರೀತಿ ಹಿಮಾಚಲ ಪ್ರದೇಶ ಸರ್ಕಾರಕ್ಕೂ ಇದೆ. ಆದರೆ, ಓವರ್`ಡ್ರಾಫ್ಟ್ ಅವಧಿ ಮೀರುವಂತಿಲ್ಲ.
ಒಂದು ರೀತಿ ಕ್ರೆಡಿಟ್ ಕಾರ್ಡ್ ಸಾಲವಿದ್ದಂತೆ. ಆದರೆ ಆ ಹಣವನ್ನೂ ಕಟ್ಟುವುದಕ್ಕೂ ಹಣ ಇಲ್ಲ. ಅಂದಹಾಗೆ ಈ 15 ಸಾವಿರ ನೌಕರರಲ್ಲಿ ಸುಮಾರು 12 ಸಾವಿರಕ್ಕೂ ಹೆಚ್ಚು ಜನ ಸಾರಿಗೆ ನೌಕರರು.
ಅಲ್ಲದೆ ರಾಜ್ಯ ಸರ್ಕಾರದ ಸಾಲದ ಮಿತಿ ಮೀರಿದೆ. ಹೀಗಾಗಿ ರಾಜ್ಯ ಸರ್ಕಾರದ ಸಾಲದ ಮಿತಿ ಶೇ.5ಕ್ಕಿಂತ ಶೇ.3.5ಕ್ಕೆ ಇಳಿದಿದೆ. ಈಗಾಗಲೇ 11 ಸಾವಿರ ಕೋಟಿ ಸಾಲ ಹಾಗೂ ಬಡ್ಡಿ ಕಟ್ಟಲಾಗದೆ ಪರದಾಡುತ್ತಿರುವ ಹಿಮಾಚಲ ಪ್ರದೇಶ ಸರ್ಕಾರ, ಈಗ ಸಂಬಳ ಕೊಡುವುದಕ್ಕೂ ಕಷ್ಟ ಎದುರಿಸುತ್ತಿದೆ.



