ರಾಜ್ಯದಲ್ಲಿ 2022ರಲ್ಲಿ ಸಂಚಲನ ಸೃಷ್ಟಿಸಿದ್ದ, ಶೈಕ್ಷಣಿಕ ವಲಯದಲ್ಲಿ ತೀವ್ರ ವಿವಾದಕ್ಕೆ ಕಾರಣವಾಗಿದ್ದ ‘ಹಿಜಾಬ್’ ಕಾಂಟ್ರವರ್ಸಿಗೆ ಕರ್ನಾಟಕ ಸರ್ಕಾರವು ಈಗ ಅಧಿಕೃತವಾಗಿ ತೆರೆ ಎಳೆದಿದೆ. 2022ರಲ್ಲಿ ಅಂದಿನ ಸರ್ಕಾರ ಜಾರಿಗೆ ತಂದಿದ್ದ ಹಿಜಾಬ್ ನಿಷೇಧಕ್ಕೆ ಪೂರಕವಾಗಿದ್ದ ಆದೇಶವನ್ನು ಸಿದ್ದರಾಮಯ್ಯ ನೇತೃತ್ವದ ಸರ್ಕಾರ ವಾಪಸ್ ತೆಗೆದುಕೊಂಡಿದೆ. ಈ ಕುರಿತು ದಿನಾಂಕ 13.05.2026 ರಂದು ಹೊಸ ಮಾರ್ಗಸೂಚಿಯನ್ನು ಹೊರಡಿಸಲಾಗಿದ್ದು, ವಿದ್ಯಾರ್ಥಿನಿಯರು ಸಮವಸ್ತ್ರದ ಜೊತೆಗೆ ‘ಹಿಜಾಬ್’ (ತಲೆವಸ್ತ್ರ) ಧರಿಸಲು ಈಗ ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ ಇದು ಕಾನೂನು ಬದ್ಧವೇ.. ಈ ಕುರಿತು ಹಲವು ಪ್ರಶ್ನೆಗಳಿಗೆ. ಏಕೆಂದರೆ ಇದೇ ಪ್ರಕರಣದ ವಿಚಾರಣೆ ಈಗ ಸುಪ್ರೀಂಕೋರ್ಟ್ ಸಾಂವಿಧಾನಿಕ ಪೀಠದಲ್ಲಿ ನಡೆಯುತ್ತಿದೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪ ಪ್ರಕಟಿಸಿರುವ ಹೊಸ ಮಾರ್ಗಸೂಚಿಯ ಪ್ರಕಾರ, ವಿದ್ಯಾರ್ಥಿಗಳು ನಿಗದಿತ ಸಮವಸ್ತ್ರದ ಜೊತೆಗೆ ಹಿಜಾಬ್ (ತಲೆವಸ್ತ್ರ), ಪೇಟ, ಜನಿವಾರ, ಶಿವದಾರ ಹಾಗೂ ರುದ್ರಾಕ್ಷಿಯಂತಹ ಸೀಮಿತ ಸಾಂಪ್ರದಾಯಿಕ ಸಂಕೇತಗಳನ್ನು ಧರಿಸಲು ಮುಕ್ತ ಅವಕಾಶ ಕಲ್ಪಿಸಲಾಗಿದೆ. ಆದರೆ, ಕೇಸರಿ ಶಾಲಿಗೆ ಯಾವುದೇ ಅವಕಾಶ ಇರುವುದಿಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ. 2022ರಲ್ಲಿ ಅಂದಿನ ಬಿಜೆಪಿ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಹಿಜಾಬ್ ನಿಷೇಧಿಸಿ ಆದೇಶ ಹೊರಡಿಸಿತ್ತು. ಇದನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿತ್ತಾದರೂ, ಸುಪ್ರೀಂ ಕೋರ್ಟ್‌ನಲ್ಲಿ ಭಿನ್ನ ತೀರ್ಪು (Split Verdict) ಬಂದಿದ್ದರಿಂದ ಪ್ರಕರಣ ಇನ್ನೂ ಬಾಕಿ ಉಳಿದಿದೆ.
ಈಗ ಇರುವ ಸರಕಾರ ಈ ನಿರ್ಧಾರವನ್ನು “ಮಕ್ಕಳ ಹಿತದೃಷ್ಟಿ ಮತ್ತು ಒಳಗೊಳ್ಳುವಿಕೆ (Inclusivity)” ಆಧಾರದ ಮೇಲೆ ಕೈಗೊಂಡಿದೆ ಎಂದು ತಿಳಿಸಿದೆ. ಶಿಕ್ಷಣವು ಯಾರದೇ ಧಾರ್ಮಿಕ ಪದ್ಧತಿಯಿಂದಾಗಿ ವಂಚಿತವಾಗಬಾರದು ಈಗಿನ ಕಾಂಗ್ರೆಸ್ ಸರ್ಕಾರದ ವಾದ. ಆದೇಶದಲ್ಲಿ ಜಗಜ್ಯೋತಿ ಬಸವಣ್ಣನವರ ‘ಇವ ನಮ್ಮವ’ ಎಂಬ ತತ್ವವನ್ನು ಉಲ್ಲೇಖಿಸಲಾಗಿದ್ದು, ಶಾಲಾ ಆವರಣಗಳು ಸಾಮಾಜಿಕ ಸಾಮರಸ್ಯದ ಕೇಂದ್ರಗಳಾಗಬೇಕು ಹೇಳಲಾಗಿದೆ.
ಹಿಜಾಬ್ ವಿವಾದದಿಂದ ಆಗುವ ಲಾಭಗಳು
ಹಿಜಾಬ್ ನಿಷೇಧದ ಕಾರಣದಿಂದಾಗಿ ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ಶಿಕ್ಷಣದಿಂದ ವಂಚಿತರಾಗಿದ್ದರು ಅಥವಾ ಪರೀಕ್ಷೆಗಳಿಗೆ ಗೈರಾಗಿದ್ದರು. ಹೊಸ ಆದೇಶದಿಂದಾಗಿ ಅವರು ಯಾವುದೇ ಆತಂಕವಿಲ್ಲದೆ ತರಗತಿ ಹಾಗೂ ಪರೀಕ್ಷೆಗಳಿಗೆ ಹಾಜರಾಗಬಹುದು. ಹಿಜಾಬ್ ಮಾತ್ರವಲ್ಲದೆ ಜನಿವಾರ, ರುದ್ರಾಕ್ಷಿ, ಪೇಟಗಳಿಗೂ ಅವಕಾಶ ನೀಡಿರುವುದರಿಂದ, ಬಹುಸಂಖ್ಯಾತ ಹಾಗೂ ಅಲ್ಪಸಂಖ್ಯಾತ ಸಮುದಾಯಗಳ ಸಾಂಪ್ರದಾಯಿಕ ಆಚರಣೆಗಳಿಗೆ ಸಮಾನ ಆದ್ಯತೆ ಸಿಕ್ಕಂತಾಗಿದೆ. ಕೇಂದ್ರೀಯ ವಿದ್ಯಾಲಯಗಳಲ್ಲಿ (Kendriya Vidyalayas) ಈಗಾಗಲೇ ಇರುವ ವಸ್ತ್ರಸಂಹಿತೆಯ ನಿಯಮಗಳನ್ನು ಆಧರಿಸಿ ಈ ನಿರ್ಧಾರಕ್ಕೆ ಬರಲಾಗಿದೆ
ನಕಾರಾತ್ಮಕ ಅಂಶಗಳೂ ಇವೆ
ಹಿಜಾಬ್ ಮತ್ತು ಜನಿವಾರಕ್ಕೆ ಅವಕಾಶ ನೀಡಿ, ಕೇಸರಿ ಶಾಲನ್ನು ಧಾರ್ಮಿಕ ಪದ್ಧತಿಯಲ್ಲ ಎಂದು ನಿರ್ಬಂಧಿಸಿರುವುದು ರಾಜಕೀಯ ಮತ್ತು ಸಾಮಾಜಿಕ ವಲಯದಲ್ಲಿ ತಾರತಮ್ಯದ ಆರೋಪಕ್ಕೆ ಕಾರಣವಾಗಿದೆ. ಇದು ಮತ್ತೊಂದು ಸುತ್ತಿನ ಪ್ರತಿಭಟನೆಗೆ ಕಾರಣವಾಗುವ ಸಾಧ್ಯತೆಯಿದೆ. ಅಲ್ಲದೆ ಶಾಲಾ-ಕಾಲೇಜುಗಳಲ್ಲಿ ಜಾತಿ, ಧರ್ಮದ ಭೇದ ಮರೆತು ಎಲ್ಲರೂ ಒಂದೇ ಎಂಬ ಭಾವನೆ ಮೂಡಿಸಲು ಸಮವಸ್ತ್ರ ಕಡ್ಡಾಯಗೊಳಿಸಲಾಗಿತ್ತು. ಧಾರ್ಮಿಕ ಸಂಕೇತಗಳ ಮುಕ್ತ ಪ್ರದರ್ಶನದಿಂದ ಸಮವಸ್ತ್ರದ ಮೂಲ ಉದ್ದೇಶ ದುರ್ಬಲಗೊಳ್ಳಬಹುದು ಎಂಬ ಆತಂಕ ತಜ್ಞರಲ್ಲಿದೆ.
ಸುಪ್ರೀಂಕೋರ್ಟ್ ಏನು ಮಾಡಬಹುದು..?
ಕರ್ನಾಟಕ ಹೈಕೋರ್ಟ್ ಈಗಾಗಲೇ “ಹಿಜಾಬ್ ಇಸ್ಲಾಂನ ಅತ್ಯಗತ್ಯ ಆಚರಣೆಯಲ್ಲ” ಎಂದು ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್‌ನಲ್ಲಿ ಪ್ರಕರಣ ಬಾಕಿ ಇರುವಾಗಲೇ ಸರ್ಕಾರ ಇಂತಹ ಆದೇಶ ಹೊರಡಿಸಿರುವುದು ನ್ಯಾಯಾಂಗದ ವ್ಯಾಪ್ತಿಯನ್ನು ಪ್ರಶ್ನಿಸಿದಂತಾಗುತ್ತದೆ ಎಂಬ ವಾದವೂ ಇದೆ. ಆದರೆ ಕೆಲವರ ಪ್ರಕಾರ , ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ಬಾಕಿ ಇದ್ದರೂ ಸಹ ಸರ್ಕಾರದ ಪ್ರಸ್ತುತ ಆದೇಶಕ್ಕೆ ಸಂಪೂರ್ಣ ಕಾನೂನು ಮಾನ್ಯತೆ ಇರುತ್ತದೆ.
ಪ್ರಕರಣ ವಿಚಾರಣೆಯಲ್ಲಿದೆ ಎಂದ ತಕ್ಷಣ ಸರ್ಕಾರದ ನೀತಿ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರಕ್ಕೆ ಯಾವುದೇ ಅಡ್ಡಿಯಿರುವುದಿಲ್ಲ.
ಸುಪ್ರೀಂಕೋರ್ಟ್ ಈ ಹಿಂದಿನ ಆದೇಶಕ್ಕಾಗಲಿ ಅಥವಾ ಸರ್ಕಾರದ ಹೊಸ ನಿರ್ಧಾರಕ್ಕಾಗಲಿ ಯಾವುದೇ ಅಧಿಕೃತ ತಡೆಾಜ್ಞೆ (Stay) ನೀಡಿಲ್ಲ. ನ್ಯಾಯಾಲಯವು ತಡೆಾಜ್ಞೆ ನೀಡದ ಹೊರತು, ಸರ್ಕಾರ ಹೊರಡಿಸುವ ಯಾವುದೇ ಹೊಸ ಕಾರ್ಯಕಾರಿ ಆದೇಶ (Executive Order) ತಕ್ಷಣದಿಂದಲೇ ಜಾರಿಗೆ ಬರುತ್ತದೆ ಮತ್ತು ಅದಕ್ಕೆ ಪೂರ್ಣ ಮಾನ್ಯತೆ ಇರುತ್ತದೆ.
ಕಾನೂನಿನ ಪ್ರಕಾರ, ಉನ್ನತ ನ್ಯಾಯಾಲಯದಲ್ಲಿ ಭಿನ್ನ ತೀರ್ಪು ಬಂದಾಗ, ಯಾವುದೇ ಅಂತಿಮ ನಿರ್ಣಯ ಪ್ರಕಟವಾಗುವವರೆಗೆ ಮುಂದಿನ ವಿಸ್ತೃತ ಪೀಠದ (Larger Bench) ತೀರ್ಪಿಗಾಗಿ ಪ್ರಕರಣ ಬಾಕಿ ಉಳಿಯುತ್ತದೆ. ಇಂತಹ ಪರಿಸ್ಥಿತಿಯಲ್ಲಿ ರಾಜ್ಯ ಸರ್ಕಾರಕ್ಕೆ ತನ್ನ ಶೈಕ್ಷಣಿಕ ವಸ್ತ್ರಸಂಹಿತೆಯ ನಿಯಮಗಳನ್ನು ತಿದ್ದುಪಡಿ ಮಾಡುವ ಅಥವಾ ಹಳೆಯ ಆದೇಶವನ್ನು ಹಿಂಪಡೆಯುವ ಹಕ್ಕು ಮತ್ತು ಕಾರ್ಯಕಾರಿ ಅಧಿಕಾರ ಇರುತ್ತದೆ.
ಸುಪ್ರೀಂಕೋರ್ಟ್ ವಿಸ್ತೃತ ಪೀಠವು ಭವಿಷ್ಯದಲ್ಲಿ ಈ ಕುರಿತು ಹೊಸ ಅಥವಾ ಅಂತಿಮ ತೀರ್ಪು ನೀಡುವವರೆಗೂ, ಕರ್ನಾಟಕ ಸರ್ಕಾರ ಪ್ರಸ್ತುತ ಹೊರಡಿಸಿರುವ ಹೊಸ ಮಾರ್ಗಸೂಚಿಯೇ ಚಾಲ್ತಿಯಲ್ಲಿರುತ್ತದೆ ಮತ್ತು ಅದಕ್ಕೆ ಪೂರ್ಣ ಕಾನೂನು ಮಾನ್ಯತೆ ಇರುತ್ತದೆ.



