ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆ(Mekedatu project) ವಿರೋಧಿಸಿ ತಮಿಳುನಾಡು(Tamilunadu) ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್(Supreme court) ವಜಾಗೊಳಿಸಿದೆ. ಇದು ಕರ್ನಾಟಕಕ್ಕೆ ಸಂದ ಗೆಲುವು. ಆದರೆ ಬದಲಾಗದೇ ಇರುವುದು ತಮಿಳುನಾಡು ಪಾಲಿಟಿಕ್ಸ್. ತಮಿಳುನಾಡು ಸಿಎಂ ಜೋಸೆಫ್ ವಿಜಯ್ ಕೂಡಾ ಈ ಪ್ರಾಜೆಕ್ಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಈ ಮೂಲಕ ದೇಶವೊಂದೇ ಎನ್ನುವ ಡೈಲಾಗುಗಳೆಲ್ಲ ಸಿನಿಮಾಗೆ ಮಾತ್ರ ಎಂದು ಕ್ಲಿಯರ್ ಆಗಿ ಹೇಳಿದ್ಧಾರೆ. ಮತ್ತದೇ ಚೀಪ್ ರಾಜಕೀಯ. ಅಂದಹಾಗೆ ಕರ್ನಾಟಕದಲ್ಲಿರುವುದು ಕಾಂಗ್ರೆಸ್ ಸರ್ಕಾರ. ತಮಿಳುನಾಡಿನಲ್ಲಿರುವ ಸರ್ಕಾರದಲ್ಲಿ ಕಾಂಗ್ರೆಸ್ ಕೂಡಾ ಪಾಲುದಾರ. ಇದೊಂದು ರೀತಿ ಕಾಂಗ್ರೆಸ್ ವರ್ಸಸ್ ಕಾಂಗ್ರೆಸ್ ಕೂಡಾ ಹೌದು.
ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್ 2025ರ ನವೆಂಬರ್‌ನಲ್ಲಿ ವಜಾಗೊಳಿಸಿತ್ತು. ತಮಿಳುನಾಡಿನ ಆಕ್ಷೇಪಣೆ, ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಭಿಪ್ರಾಯ ಪರಿಗಣಿಸಿದ ನಂತರವೇ ಆಯೋಗ ಯೋಜನೆಗೆ ಅನುಮೋದನೆ ನೀಡಲಿದೆ ಎಂದು ತಿಳಿಸಿತ್ತು. ಈ ಮಧ್ಯೆ, 2025ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿತ್ತು.
ಮಂಗಳವಾರ ಈ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾ.ವಿಫುಲ್ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ. ಚೀಪ್ ರಾಜಕೀಯ ಏನೆಂದರೆ ತಕ್ಷಣ ಇದನ್ನು ಪ್ರಶ್ನೆ ಮಾಡಿ ತಮಿಳುನಾಡು ಸಿಎಂ ವಿಜಯ್ ಪ್ರಧಾನ ಮಂತ್ರಿಗಳಿಗೇ ಪತ್ರ ಬರೆದಿದ್ದಾರೆ. ವಿವಾದವನ್ನು ಅವರು ಬಗೆಹರಿಸಬೇಕಂತೆ.
ತಮ್ಮದೇ ಸರ್ಕಾರದಲ್ಲಿರುವ ಕಾಂಗ್ರೆಸ್‌ನ ಐವರು ಶಾಸಕರು.. ಅವರಲ್ಲಿನ ಇಬ್ಬರು ಸಚಿವರನ್ನು ಕನಿಷ್ಠ ಪ್ರಶ್ನೆ ಮಾಡದ, ಕರ್ನಾಟಕದಲ್ಲಿಯೂ ಇರುವ ಮಿತ್ರ ಪಕ್ಷ ಕಾಂಗ್ರೆಸ್‌ನ್ನು ಸೌಜನ್ಯಕ್ಕಾಗಲೀ, ರಾಜಕೀಯಕ್ಕೇ ಆಗಲಿ ಪ್ರಶ್ನೆ ಮಾಡದೆ ನೇರವಾಗಿ ಪ್ರಧಾನಿಗೇ ಪತ್ರ ಬರೆದಿದ್ದಾರೆ. ಚೀಪ್ ರಾಜಕೀಯ ಎನ್ನುವುದು ಇದನ್ನೇ. ಏಕೆಂದರೆ ಈ ಮೇಕೆದಾಟು ಪ್ರಾಜೆಕ್ಟ್‌ನಿಂದ ತಮಿಳುನಾಡಿಗೆ ನಷ್ಟ ಇಲ್ಲ. ಯಾವುದೇ ರೀತಿಯಲ್ಲೂ ಹಾನಿ ಇಲ್ಲ.
ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದಾಗ, ಜಲಾಶಯಗಳು ಭರ್ತಿಯಾಗಿ, ಹೆಚ್ಚುವರಿ ನೀರು ಅಪಾರ ಪ್ರಮಾಣದಲ್ಲಿ ತಮಿಳುನಾಡಿನ ಮೂಲಕ ಸಮುದ್ರ ಪಾಲಾಗುತ್ತದೆ. ಈ ಹೆಚ್ಚುವರಿ ನೀರನ್ನು ಮಾತ್ರ ಮೇಕೆದಾಟುವಿನಲ್ಲಿ ಸಂಗ್ರಹಿಸಲಾಗುತ್ತದೆ. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪಾಲನ್ನು ನೀಡಿದ ನಂತರವೇ ಉಳಿಯುವ ನೀರನ್ನು ಸಂಗ್ರಹಿಸಲಾಗುತ್ತದೆ. ಇದರಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಇದು ಕುಡಿಯುವ ನೀರಿನ ಯೋಜನೆ.
ಇದು ವಿಜಯ್ ಅವರಿಗೆ ಗೊತ್ತಿಲ್ಲ ಎಂದರೆ ತಪ್ಪಾಗುತ್ತದೆ. ಅಷ್ಟೂ ಗೊತ್ತಿಲ್ಲದವರು ಸಿಎಂ ಆಗಬಾರದು. ಸುಪ್ರೀಂಕೋರ್ಟ್ ಕೂಡಾ ಎಲ್ಲ ಪರಾಮರ್ಶನೆ ಮಾಡಿಯೇ ಒಪ್ಪಿಕೊಂಡಿದೆ. ಏನೋ ಹೊಸ ಸಿಎಂ, ಹೊಸ ಜನರೇಷನ್. ಜಯಲಲಿತಾ ಕೊಟ್ಟಂತೆ ಕಾಟ ಕೊಡುವುದಿಲ್ಲ ಎಂದುಕೊಂಡರೆ ಈತ ಕೂಡಾ ಅದೇ ರೀತಿ ಕೆಟ್ಟ ಪಾಲಿಟಿಕ್ಸ್ ಶುರು ಮಾಡಿದ್ಧಾನೆ. ತಮಿಳುನಾಡು ಬದಲಾಗಲ್ಲ.



