ರಾಜ್ಯ ಸರ್ಕಾರ ಇತ್ತೀಚೆಗೆ ವೈಭವದಿಂದ ಸಾಧನಾ ಸಮಾವೇಶ ಮಾಡಿದೆ. ಈ ಸಮಾವೇಶದಲ್ಲಿ ರಾಜ್ಯ ಸರ್ಕಾರ ಎದೆತಟ್ಟಿ ಹೇಳಿಕೊಂಡಿದ್ದೇ ತಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳ ಬಗ್ಗೆ. ವಾಸ್ತವದಲ್ಲಿ ಶಕ್ತಿ ಯೋಜನೆ ಬಿಟ್ಟರೆ (ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ) ಬಿಟ್ಟರೆ ಉಳಿದ ಯೋಜನೆಗಳ ಬಗ್ಗೆ ಕಾಂಟ್ರವರ್ಸಿಗಳೇ ಇವೆ. ಗೃಹಲಕ್ಷ್ಮಿ, ಅನ್ನಭಾಗ್ಯ, ಯುವ ನಿಧಿ, ಉಚಿತ ವಿದ್ಯುತ್ ಯೋಜನೆಗಳ ಬಗ್ಗೆ ಅಪಸ್ವರಗಳಿವೆ. ಹೀಗಿರುವಾಗಲೇ ಗೃಹಲಕ್ಷ್ಮಿ ಹಣ ಕೊಡಿಸಿ ಎಂದು ಮಹಿಳೆಯರು ಹೈಕೋರ್ಟ್ ಮೆಟ್ಟಿಲೇರಿದ್ಧಾರೆ. ಅಂದಹಾಗೆ ಇದು 2025ರ ಲೆಕ್ಕ. ಸರ್ಕಾರ ಸುಳ್ಳು ಹೇಳಿ, ತಿದ್ದಿಕೊಂಡಿದ್ದ ಲೆಕ್ಕ. ಇನ್ನೂ ಕೊಟ್ಟಿಲ್ಲ.
ರಾಜ್ಯ ಸರ್ಕಾರದ ಪಂಚ ಗ್ಯಾರಂಟಿಗಳಲ್ಲಿ ಒಂದಾದ ಗೃಹ ಲಕ್ಷ್ಮಿ ಯೋಜನೆಯಡಿ 2023ರ ಆಗಸ್ಟ್‌ನಿಂದ ಮನೆಯೊಡತಿಗೆ ಮಾಸಿಕ 2 ಸಾವಿರ ರು. ಬಿಡುಗಡೆ ಮಾಡಲು ಆರಂಭಿಸಿದ್ದು, ಆಡಳಿತಾತ್ಮಕ ಕಾರಣದಿಂದ 2025ರ ಫೆಬ್ರವರಿ ತಿಂಗಳ ಹಣ ಬಿಡುಗಡೆ ಮಾಡಿರಲಿಲ್ಲ. ಹಾಗೆಯೇ ಮಾರ್ಚ್ ತಿಂಗಳ ಹಣವನ್ನೂ ಪಾವತಿಸಿರಲಿಲ್ಲ. ಹಾಗಾಗಿ, ಈ ಹಿಂಬಾಕಿ ಹಣ ಬಿಡುಗಡೆ ಮಾಡಲು ಸರ್ಕಾರಕ್ಕೆ ನಿರ್ದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್.ಗಂಗಾ ಮತ್ತು ನಂದಿನಿ ಲೇಔಟ್ ನಿವಾಸಿ ಜಿ.ಡಿ.ಪವಿತ್ರಾ ಎಂಬುವವರು ಅರ್ಜಿ ಸಲ್ಲಿಸಿದ್ದಾರೆ.
ವಿಷಯ ಏನೆಂದರೆ.. ಈ ಹಣವನ್ನು ಪಾವತಿ ಮಾಡಿದ್ದೇವೆ ಎಂದು ಸರ್ಕಾರ ಮೊದಲು ಸುಳ್ಳು ಹೇಳಿತ್ತು. ವಿಧಾನಸಭೆಯಲ್ಲೇ ಸುಳ್ಳು ಲೆಕ್ಕ ಕೊಟ್ಟಿತ್ತು. ಬಿಜೆಪಿ ನಾಯಕರು ಸರ್ಕಾರವನ್ನು ಯಾವ ಪರಿ ತರಾಟೆಗೆ ತೆಗೆದುಕೊಂಡಿದ್ದರು ಎಂದರೆ.. ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಬೆಳಗಾವಿಯಲ್ಲಿ ನಡೆದ ವಿಶೇಷ ಅಧಿವೇಶನದಲ್ಲಿ ಹಣವನ್ನು ಈಗಾಗಲೇ ನೀಡಲಾಗಿದೆ ಎಂದು ಹೇಳಿತ್ತು. ಅದಾದ ಮೇಲೆ ಲೆಕ್ಕಪತ್ರದಲ್ಲಿ ಮಾತ್ರವೇ ಹಣ ಜಮೆಯಾಗಿದೆ, ಫಲಾನುಭವಿಗಳ ಖಾತೆಗೆ ಹಣವೇ ಹೋಗಿಲ್ಲ ಎಂದು ಬಹಿರಂಗವಾಯ್ತು. ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಉತ್ತರಿಸಲು ಪರದಾಡುತ್ತಿದ್ದಾಗ ಸ್ವತಃ ಸಿದ್ಧರಾಮಯ್ಯನವರೇ ಎಂಟ್ರಿ ಕೊಟ್ಟು, ಭಾಷಣದಲ್ಲಿ ಸಮರ್ಥನೆ ಮಾಡಿಕೊಂಡಿದ್ದರು. ಅದಾದ ನಂತರ ಟೆಕ್ನಿಕಲಿ ಪ್ರಾಬ್ಲಂ ಆಗಿದೆ. ಆಮೇಲೆ ಕೊಡುತ್ತೇವೆ ಬಿಡ್ರೀ ಎಂದೂ ಹೇಳಿದ್ದರು. ಆದರೆ.. ಆ ಹಣವನ್ನು ಇದೂವರೆಗೆ ಕೊಟ್ಟಿಲ್ಲ.
ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಈ ಹಿಂದೆ ಸದನದಲ್ಲಿ ತಪ್ಪು ಮಾಹಿತಿ ನೀಡಿದ್ದನ್ನು ಒಪ್ಪಿಕೊಂಡು ವಿಷಾದ ವ್ಯಕ್ತಪಡಿಸಬೇಕಾಯಿತು. ಹಣಕಾಸು ಇಲಾಖೆಯಿಂದಲೇ ಈ ಹಣ ಬಿಡುಗಡೆಯಾಗಿಲ್ಲ ಎಂದೂ ಹೇಳಲಾಗಿತ್ತು. ಈಗ ಹೈಕೋರ್ಟ್ ಮೆಟ್ಟಿಲೇರಿರುವುದು ಇದೇ ಪ್ರಕರಣ.
ಬೆಂಗಳೂರಿನ ಬಸವೇಶ್ವರ ನಗರದ ನಿವಾಸಿ ಆರ್.ಗಂಗಾ ಮತ್ತು ನಂದಿನಿ ಲೇಔಟ್ ನಿವಾಸಿ ಜಿ.ಡಿ.ಪವಿತ್ರಾ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ವಿಚಾರಣೆಗೆ ಎತ್ತಿಕೊಂಡಿದೆ. ಅರ್ಜಿದಾರರ ಪರ ವಕೀಲರ ವಾದ ಆಲಿಸಿದ ನ್ಯಾಯಪೀಠ, ಪ್ರತಿವಾದಿಗಳಾದ ರಾಜ್ಯ ಹಣಕಾಸು ಇಲಾಖೆ ಪ್ರಧಾನ ಕಾರ್ಯದರ್ಶಿ, ರಾಜ್ಯ ಪಂಚಾಯತ್ ರಾಜ್ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ನೋಟಿಸ್ ಜಾರಿ ಮಾಡಿದೆ.



