ರಾಜ್ಯ ಸರ್ಕಾರದ ಗ್ಯಾರಂಟಿ ಮರುಪರಿಶೀಲನೆ ಆಗುತ್ತಿದೆ. ಎಲ್ಲ ಗ್ಯಾರಂಟಿಗಳು ಎಲ್ಲರಿಗೂ ಸಿಗುವುದಿಲ್ಲ. ಚುನಾವಣೆ ವೇಳೆ ಎಲ್ಲರಿಗೂ ಗ್ಯಾರಂಟಿ ಎಂದು ಹೇಳಿ ಗ್ಯಾರಂಟಿ ಘೋಷಣೆ ಮಾಡಲಾಗಿತ್ತಾದರೂ, ಅಧಿಕಾರಕ್ಕೆ ಬಂದ ಮೇಲೆ ಎಲ್ಲರಿಗೂ ಸಿಕ್ಕಿರಲಿಲ್ಲ. ಆದರೆ, ಸರ್ಕಾರ ಏನೇ ನಿಯಂತ್ರಣ ಮಾಡಿ ಗ್ಯಾರಂಟಿ ನೀಡಿದರೂ ಬಜೆಟ್ ಲೆಕ್ಕ ಮಿತಿ ಮೀರಿತ್ತು. ಹೀಗಾಗಿಯೇ ಮರು-ಪರಿಷ್ಕರಣೆಗೆ ಮುಂದಾಗಿದೆ. ಅದಕ್ಕೆ ನೀಡಿರುವ ಕಾರಣ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳೂ 100 ಕೋಟಿ ನಷ್ಟವಾಗುತ್ತಿದೆ ಎನ್ನುವುದು. ಆದರೆ 2025ರಲ್ಲಿ ಪೇಪರ್‌ನಲ್ಲಿ ಮಾತ್ರ ಲೆಕ್ಕ ತೋರಿಸಿ, ಫಲಾನುಭವಿಗಳಿಗೆ ನೀಡದೇ ಇರುವ 5000 ಸಾವಿರ ಕೋಟಿ ಗೃಹಲಕ್ಷ್ಮಿ ಹಣದ ಬಗ್ಗೆ ಪ್ರಸ್ತಾಪ ಇಲ್ಲ. ಅಂದಹಾಗೆ ಗೃಹಲಕ್ಷ್ಮಿ, ಗೃಹಜ್ಯೋತಿಗೆ ಮತ್ತೆ ಅರ್ಜಿ ಹಾಕಬೇಕು. ಏಕೆ ಎಂದರೆ..
ಗೃಹಲಕ್ಷ್ಮಿ, ಗೃಹಜ್ಯೋತಿಗೆ ಮತ್ತೆ ಏಕೆ ಅರ್ಜಿ ಹಾಕಬೇಕು..?
ಫಲಾನುಭವಿಗಳ ಹಾಲಿ ಪಟ್ಟಿಯಲ್ಲಿ ಕೆಲವರು ಮೃತಪಟ್ಟಿದ್ದಾರೆ. ಮೃತಪಟ್ಟವರಿಗೂ ಹಣ ನೀಡಲಾಗುತ್ತಿದೆ. ಬೇರೆಯವರು ಅವರ ಹೆಸರಿನಲ್ಲಿ ಸಹಾಯಧನ ಪಡೆಯುತ್ತಿದ್ದಾರೆ.
ಅರ್ಹರ ಹೆಸರಿನಲ್ಲಿ ಬೇರೆಯವರು ನೋಂದಣಿ ಮಾಡಿ ಯೋಜನೆ ಲಾಭ ಪಡೆಯುತ್ತಿದ್ದಾರೆ. ಅರ್ಹರು ಯೋಜನೆಯಿಂದ ಮುಕ್ತರಾಗಿದ್ದಾರೆ.
ಗೃಹ ಲಕ್ಷ್ಮಿಯನ್ನೇ ತೆಗೆದುಕೊಂಡರೆ ಒಂದು ಕುಟುಂಬದ ಒಬ್ಬ ಯಜಮಾನಿಗೆ ಎನ್ನುವುದು ನಿಯಮ. ಆದರೆ, ಒಂದೇ ಮನೆಯಲ್ಲಿ ಇಬ್ಬರು ಮೂವರಿಗೂ ಹಣ ಹೋಗುತ್ತಿದೆ.
ಗೃಹ ಜ್ಯೋತಿ ಹಣವೂ ಅಷ್ಟೇ, ಹಲವು ಮನೆ ಇರುವವರು ಪ್ರತಿ ಮನೆಗೂ ಗೃಹ ಜ್ಯೋತಿ ಲಾಭ ಪಡೆಯುತ್ತಿದ್ದಾರೆ
ಗೃಹ ಲಕ್ಷ್ಮಿ ಯೋಜನೆಯಲ್ಲಿ ಇನ್ ಕಂ ಟ್ಯಾಕ್ಸ್ ಕಟ್ಟುವವರೂ ಲಾಭ ಪಡೆಯುತ್ತಿದ್ದಾರೆ
ಈ ದುರ್ಬಳಕೆಯಿಂದಾಗಿ ಸರ್ಕಾರಕ್ಕೆ ಮಾಸಿಕ 100 ಕೋಟಿ ರು.ಗೂ ಹೆಚ್ಚಿನ ಸೋರಿಕೆಯಾಗುತ್ತಿದೆ. ಇದನ್ನು ತಪ್ಪಿಸಲು ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳ ಫಲಾನುಭವಿಗಳಿಂದ ಹೊಸದಾಗಿ ಅರ್ಜಿ ಪಡೆಯುವ ಬಗ್ಗೆ ಸರ್ಕಾರದ ಹಂತದಲ್ಲಿ ಚರ್ಚೆ ನಡೆಯುತ್ತಿದೆ. ಈ ಕುರಿತು ಶೀಘ್ರದಲ್ಲಿ ಅಧಿಕೃತ ಆದೇಶ ಹೊರಡಿಸುವ ಸಾಧ್ಯತೆಗಳಿವೆ. ಗೃಹಲಕ್ಷ್ಮಿ ಮತ್ತು ಗೃಹ ಜ್ಯೋತಿ ಯೋಜನೆಗಳನ್ನು ಅರ್ಹರಲ್ಲದವರೂ ಪಡೆಯುತ್ತಿದ್ದು, ಫಲಾನುಭವಿಗಳ ಪಟ್ಟಿ ಪರಿಷ್ಕರಿಸುವಂತೆ ಭಾನುವಾರದ ಶಾಸಕರ ಸಭೆಯಲ್ಲಿ ಸಲಹೆಗಳು ಬಂದ ಹಿನ್ನೆಲೆಯಲ್ಲಿ ಈ ತೀರ್ಮಾನ ಮಾಡಲಾಗಿದೆ.
ʻʻ ಗ್ಯಾರಂಟಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಣೆ ಮಾಡುವ ಅಗತ್ಯವಿದ್ದು, ಈ ಕುರಿತು ಪರಿಶೀಲನೆ ಮಾಡುತ್ತಿದ್ದೇವೆ. ಗ್ಯಾರಂಟಿ ಯೋಜನೆಗಳ ಕೆಲ ಫಲಾನುಭವಿಗಳು ಮೃತಪಟ್ಟಿದ್ದು, ಸುಮಾರು 100 ಕೋಟಿಯಷ್ಟು ಹಣ ಬೇರೆಯವರ ಖಾತೆಗೆ ಹೋಗಿ ದುರ್ಬಳಕೆಯಾಗುತ್ತಿದೆ. ಇನ್ನು ದೂರವಾಣಿ ಸಂಖ್ಯೆ ಬದಲಿಸಲಾಗಿದ್ದು, ಅದರಿಂದ ನೈಜ ಫಲಾನುಭವಿಗಳಿಗೆ ಯೋಜನೆ ತಲುಪುತ್ತಿಲ್ಲ ಎಂಬ ದೂರುಗಳಿವೆ. ಈ ದುರ್ಬಳಕೆ ತಡೆಯಲು ಗ್ಯಾರಂಟಿ ಫಲಾನುಭವಿಗಳ ದಾಖಲೆ ಸಂಗ್ರಹಿಸುವ ಬಗ್ಗೆ ಸಲಹೆಗಳು ಬಂದಿವೆ. ಪ್ರತಿ ತಾಲೂಕಿನಲ್ಲೂ ಅದನ್ನು ಪರಿಶೀಲಿಸಲಾಗುತ್ತಿದೆ ʼʼ ಎಂದು ಡಿಸಿಎಂ ಡಿಕೆ ಶಿವಕುಮಾರ್ ವಿವರಣೆ ಕೊಟ್ಟಿದ್ದಾರೆ.
ಗೃಹಲಕ್ಷ್ಮಿಯಲ್ಲಿ ಅನರ್ಹರ ಪಟ್ಟಿ ಪರಿಷ್ಕರಣೆ ಆರಂಭವಾಗಿದೆ. ಪ್ರಸ್ತುತ ಸುಮಾರು 1.24 ಕೋಟಿಗೂ ಹೆಚ್ಚು ಮಹಿಳೆಯರು ಈ ಯೋಜನೆಯ ಲಾಭ ಪಡೆಯುತ್ತಿದ್ದಾರೆ. ಆದರೆ, ಇದರಲ್ಲಿ ಹಲವು ತಾಂತ್ರಿಕ ದೋಷಗಳು ಮತ್ತು ನಿಯಮ ಉಲ್ಲಂಘನೆಗಳು ಪತ್ತೆಯಾಗಿವೆ.
ಗೃಹಲಕ್ಷ್ಮಿಯಂತೆಯೇ ಗೃಹಜ್ಯೋತಿ ಯೋಜನೆಯಲ್ಲೂ ಆರ್ಥಿಕವಾಗಿ ಸಬಲರಾಗಿರುವ ಮತ್ತು ತೆರಿಗೆ ಪಾವತಿಸುವ ಕುಟುಂಬಗಳನ್ನು ಉಚಿತ ವಿದ್ಯುತ್ ವ್ಯಾಪ್ತಿಯಿಂದ ಹೊರಗಿಡಲು ಸರ್ಕಾರ ಚಿಂತಿಸಿದೆ. : ಹಿಂದಿನ ವರ್ಷದ ಸರಾಸರಿ ಬಳಕೆಗೆ 10 ಯೂನಿಟ್‌ಗಳನ್ನು ಹೆಚ್ಚುವರಿಯಾಗಿ ನೀಡಿ ನಿಗದಿಪಡಿಸಲಾದ ಮಿತಿಯೊಳಗೆ ಬಳಸುವವರಿಗೆ ಮಾತ್ರ ‘ಶೂನ್ಯ ಬಿಲ್’ ಬರಲಿದ್ದು, ಮಿತಿ ಮೀರಿದರೆ ಪೂರ್ಣ ಬಿಲ್ ಪಾವತಿಸಬೇಕಾಗುತ್ತದೆ.
ನಿಮ್ಮ ಗೃಹಲಕ್ಷ್ಮಿ ಹಣ ಸ್ಥಗಿತಗೊಂಡಿದ್ದರೆ ಅಥವಾ ಗೃಹಜ್ಯೋತಿ ಸೌಲಭ್ಯದಲ್ಲಿ ವ್ಯತ್ಯಾಸವಾಗಿದ್ದರೆ, ತಕ್ಷಣ ನಿಮ್ಮ e-KYC ಅಪ್ಡೇಟ್ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಸೀಡಿಂಗ್ (Aadhaar Seeding) ಆಗಿದೆಯೇ ಎಂಬುದನ್ನು ಸೇವಾ ಸಿಂಧು ಪೋರ್ಟಲ್ ಅಥವಾ ನಿಮ್ಮ ಹತ್ತಿರದ ಬೆಂಗಳೂರು ಒನ್/ಕರ್ನಾಟಕ ಒನ್ ಕೇಂದ್ರಗಳಲ್ಲಿ ಪರಿಶೀಲಿಸಿಕೊಳ್ಳಿ. ಸರ್ಕಾರ ಮರು-ಪರಿಷ್ಕರಣೆ ಜಾರಿ ಮಾಡಿದಾಗ ತಪ್ಪದೇ ಅಪ್ ಡೇಟ್ ಮಾಡಿ. ಯಾವುದೇ ಸೂಚನೆ ನೀಡದೇ ರದ್ದಾಗಲೂಬಹುದು.



