ಒಂದು ಬೇಕು, ಎರಡು ಸಾಕು..
ಆರತಿಗೊಬ್ಬ ಮಗಳು.. ಕೀರ್ತಿಗೊಬ್ಬ ಮಗ..
ಹಮ್ ದೋ, ಹಮಾರೆ ದೋ
ನಾವಿಬ್ಬರು.. ನಮಗಿಬ್ಬರು..
ಸಣ್ಣ ಕುಟುಂಬ, ಸುಖೀ ಕುಟುಂಬ
ಕುಟುಂಬ ಯೋಜನೆ: ಕೇವಲ ಜನಸಂಖ್ಯೆ ನಿಯಂತ್ರಣವಲ್ಲ, ಪ್ರಗತಿಯ ಹಾದಿ..
ಇಂತಹ ಘೋಷವಾಕ್ಯಗಳನ್ನೇ ಕೇಳಿ ಬೆಳೆದವರಿಗೆ ಆಂಧ್ರಪ್ರದೇಶ ಸರ್ಕಾರ ಹೊಸ ಯೋಜನೆ ಘೋಷಿಸಿದೆ. ಆ ಯೋಜನೆ ಪ್ರಕಾರ ಮದುವೆಯಾಗಿ ಮಕ್ಕಳು ಮಾಡಿಕೊಳ್ಳಬೇಕು. 1 ಮತ್ತು 2ನೇ ಮಗುವಿಗೆ ಯಾವುದೇ ಸವಲತ್ತು, ಸೌಲಭ್ಯ ಇಲ್ಲ. ಆದರೆ 3 ಮತ್ತು 4ನೇ ಮಗು ಹೆತ್ತರೆ ಸರ್ಕಾರದಿಂದ ಹಣವೂ ಸಿಗುತ್ತದೆ. ಇದನ್ನು ನೋಡಿ ನಗಬೇಡಿ. ಚಂದ್ರಬಾಬು ನಾಯ್ಡು ಅವರ ಈ ವಾದಕ್ಕೆ ಒಂದು ಲಾಜಿಕ್ ಇದೆ. ಆ ಲಾಜಿಕ್ ಉದ್ಭವವಾಗಲು ಕಾರಣವಾಗಿರೋದು ಕೇಂದ್ರ ಸರ್ಕಾರದ ಎರಡು ನೀತಿ.
ಜನಸಂಖ್ಯೆಯನ್ನು ಹೆಚ್ಚಿಸಲು ನೆರೆಯ ರಾಜ್ಯವಾದ ಆಂಧ್ರಪ್ರದೇಶ ಸರ್ಕಾರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೊಸ ಘೋಷಣೆ ಮಾಡಿದ್ದಾರೆ. 3ನೇ ಮಗುವಿಗೆ 30,000 ರೂ. ನಗದು ಪ್ರೋತ್ಸಾಹ ಮತ್ತು ನಾಲ್ಕನೇ ಮಗುವಿಗೆ 40,000 ರೂ. ನಗದು ಪ್ರೋತ್ಸಾಹವನ್ನು ಘೋಷಿಸಿದ್ದಾರೆ. ಆಂಧ್ರಪ್ರದೇಶದಲ್ಲಿ ಕಡಿಮೆಯಾಗುತ್ತಿರುವ ಜನಸಂಖ್ಯೆಯನ್ನು ಪರಿಹರಿಸುವ ಪ್ರಯತ್ನಗಳ ಭಾಗವಾಗಿ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಇಂದು ಈ ಘೋಷಣೆ ಮಾಡಿದ್ದಾರೆ.
ಮಕ್ಕಳನ್ನು ಹೊರೆಯಾಗಿ ನೋಡುವ ಬದಲು ದೇಶದ ಸಂಪತ್ತಾಗಿ ನೋಡಬೇಕು ಎಂದಿರುವ ಚಂದ್ರಬಾಬು ನಾಯ್ಡು “ನಾನು ಇದರ ಬಗ್ಗೆ ಹಲವು ಬಾರಿ ಯೋಚಿಸಿದ್ದೇನೆ. ಹಿಂದೆ, ನಾನು ಕುಟುಂಬ ಯೋಜನೆಗಾಗಿ ಕೆಲಸ ಮಾಡಿದ್ದೇನೆ. ಆದರೆ ಇಂದು ಮತ್ತೊಮ್ಮೆ, ಮಕ್ಕಳು ನಮ್ಮ ಸಂಪತ್ತು, ನಾವೆಲ್ಲರೂ ನಮ್ಮ ಮಕ್ಕಳ ಹಿತದೃಷ್ಟಿಯಿಂದ ಕೆಲಸ ಮಾಡುವ ಅವಶ್ಯಕತೆಯಿದೆ. ಅದಕ್ಕಾಗಿಯೇ ನಾನು ಮತ್ತೊಂದು ನಿರ್ಧಾರವನ್ನು ತೆಗೆದುಕೊಂಡಿದ್ದೇನೆ. ಮೂರನೇ ಮಗು ಹುಟ್ಟಿದ ತಕ್ಷಣ 30,000 ರೂ. ನೀಡುತ್ತೇವೆ. ನಾಲ್ಕನೇ ಮಗುವಿಗೆ ನಾವು 40,000 ರೂ. ನೀಡುತ್ತೇವೆ” ಎಂದು ಹೇಳಿದ್ದಾರೆ.
ಆಂಧ್ರಪ್ರದೇಶವು ಸುಮಾರು 5.37 ಕೋಟಿಯಿಂದ 5.40 ಕೋಟಿ ಜನಸಂಖ್ಯೆಯನ್ನು ಹೊಂದಿದೆ. ಇದು ಭಾರತದಲ್ಲಿ ಹತ್ತನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ರಾಜ್ಯವಾಗಿದೆ. ಇದು ದೇಶದ ಒಟ್ಟು ಜನಸಂಖ್ಯೆಯ ಸುಮಾರು 3.76 ಪ್ರತಿಶತವನ್ನು ಹೊಂದಿದೆ.
ಶ್ರೀಕಾಕುಳಂ ಜಿಲ್ಲೆಯ ನರಸನ್ನಪೇಟೆಯಲ್ಲಿ ಶನಿವಾರ ಆಯೋಜಿಸಲಾಗಿದ್ದ ‘ಸ್ವರ್ಣಾಂಧ್ರ-ಸ್ವಚ್ಛಾಂಧ್ರ’ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ನಡೆದ ಬೃಹತ್ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಮುಂದಿನ ಒಂದು ತಿಂಗಳೊಳಗೆ ಇದರ ಸಂಪೂರ್ಣ ಮಾರ್ಗಸೂಚಿ ಮತ್ತು ವಿವರಗಳನ್ನು ಪ್ರಕಟಿಸಲಾಗುವುದು ಎಂದಿದ್ದಾರೆ.
ಒಂದು ಕಾಲದಲ್ಲಿ ತಾವೇ ಜನಸಂಖ್ಯಾ ನಿಯಂತ್ರಣದ ಕಠಿಣ ನಿಯಮಗಳನ್ನು ಪ್ರತಿಪಾದಿಸಿದ್ದನ್ನು ನೆನಪಿಸಿಕೊಂಡ ನಾಯ್ಡು “ಈಗ ಕಾಲ ಬದಲಾಗಿದೆ. ರಾಜ್ಯದಲ್ಲಿ ಜನನ ಪ್ರಮಾಣವನ್ನು ಹೆಚ್ಚಿಸಲು ಇಡೀ ಸಮಾಜವು ಒಟ್ಟಾಗಿ ಕೆಲಸ ಮಾಡಬೇಕಾದ ಅನಿವಾರ್ಯ ಸಮಯ ಎದುರಾಗಿದೆʼʼ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಇದು ಇತ್ತೀಚೆಗೆ ಘೋಷವಾಕ್ಯವಾಗಿರುವ ಗಂಡಾಗಲಿ, ಹೆಣ್ಣಾಗಲಿ, ಒಂದೇ ಮಗು ಸಾಕು, ಎರಡನೇ ಮಗು ಈಗ ಬೇಡ, ಮೂರನೇ ಮಗು ಖಂಡಿತ ಬೇಡ, ನಮಗಿಬ್ಬರು, ನಮಗೊಬ್ಬರು ಎಂಬ ಹೊಸ ಸ್ಲೋಗನ್ನುಗಳನ್ನೂ ಮೂಲೆಗೆ ಹಾಕುವಂತೆ ಮಾಡಿದೆ.
ಅಂದಹಾಗೆ ಇದಕ್ಕೆಲ್ಲ ಕಾರಣವಾಗಿರುವುದು ಕೇಂದ್ರ ಸರ್ಕಾರ ಹಾಗೂ ಉತ್ತರ ಭಾರತ. ಕೇಂದ್ರವು ರಾಜ್ಯಗಳಿಗೆ ಅನುದಾನ ಹಂಚಿಕೆ ಮಾಡುವಾಗ ನೋಡುವುದು ಜನಸಂಖ್ಯೆ ಎಷ್ಟಿದೆ ಎನ್ನುವುದನ್ನು. ಅಲ್ಲದೆ ರಾಜಕೀಯ ಪ್ರಾತಿನಿಧ್ಯವೂ ಉದಾಹರಣೆ : ಲೋಕಸಭೆ, ರಾಜ್ಯಸಭೆ, ವಿಧಾನಸಭೆ ಕ್ಷೇತ್ರಗಳನ್ನು ಹಂಚುವಾಗಲೂ ಇವುಗಳನ್ನೇ ಅಳತೆಗೋಲಾಗಿ ನೋಡುತ್ತದೆ. ಉತ್ತರ ಭಾರತದ ರಾಜ್ಯಗಳು ಜನಸಂಖ್ಯೆ ನಿಯಂತ್ರಣ ಮಾಡಿಲ್ಲ. ದಕ್ಷಿಣದ ರಾಜ್ಯಗಳೂ ಅದನ್ನು ಯಶಸ್ವಿಯಾಗಿ ಮಾಡಿದವು. ಇದರ ಪರಿಣಾಮ ಈಗ ಕೇಂದ್ರದ ಅನುದಾನ ಹಾಗೂ ರಾಜಕೀಯ ಪ್ರಾತಿನಿಧ್ಯ ಎರಡೂ ಕಡಿಮೆಯಾಗಿದೆ.



