ಉತ್ತರ ಕನ್ನಡ ಜಿಲ್ಲೆಯಲ್ಲಿ ಮುಂಗಾರು ಮಳೆ ಅಬ್ಬರ ಜೋರಾಗಿದೆ. ನದಿಗಳು ಹಾಗೂ ಹೊಳೆಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ವಿಶೇಷ ಎಂದರೆ ಗೋಕರ್ಣದ ಪುಣ್ಯ ಕ್ಷೇತ್ರ ಮುಳುಗಿದೆ. ಅಂದರೆ ಹಿಂದೂಗಳ ಪವಿತ್ರ ಕ್ಷೇತ್ರ ಗೋಕರ್ಣದ ಆತ್ಮಲಿಂಗವೇ ನೀರಿನಲ್ಲಿ ಮುಳುಗಿದೆ. ಶೈವರ ಪುಣ್ಯ ಸನ್ನಿಧಿಗಳಲ್ಲಿ ಒಂದಾಗಿರುವ, ಆತ್ಮಲಿಂಗ ಇರುವ ಪುಣ್ಯಕ್ಷೇತ್ರ ಗೋಕರ್ಣ. ವಿಚಿತ್ರ ಎಂದರೆ.. ಗೋಕರ್ಣದ ಆತ್ಮಲಿಂಗ ಮುಳುಗುತ್ತಿರುವುದಕ್ಕೆ ಕಾರಣ ಕೇವಲ ಮಳೆ ಅಷ್ಟೇ ಅಲ್ಲ, ಜನ. ಸರ್ಕಾರ. ಅಜ್ಞಾನಿ ಅಧಿಕಾರಿಗಳೂ ಎನ್ನಬಹುದು.
ಭಾರೀ ಮಳೆಯ ಪರಿಣಾಮ ಜಿಲ್ಲೆಯ ಪ್ರಮುಖ ಧಾರ್ಮಿಕ ಕ್ಷೇತ್ರವಾದ ಗೋಕರ್ಣದಲ್ಲಿರುವ ಮಹಾಬಲೇಶ್ವರ ದೇವಾಲಯಕ್ಕೂ ಜಲಕಂಟಕ ಎದುರಾಗಿದೆ. ನಿರಂತರ ಮಳೆಯಿಂದ ದೇವಾಲಯದ ಗರ್ಭಗುಡಿಗೆ ನೀರು ನುಗ್ಗುವ ಸಾಧ್ಯತೆ ಕಂಡುಬಂದಿರುವುದರಿಂದ ದೇವಾಲಯ ಆಡಳಿತ ಉಸ್ತುವಾರಿ ಸಮಿತಿ ಮಹತ್ವದ ನಿರ್ಧಾರ ಕೈಗೊಂಡಿದೆ. ಭಕ್ತರು ನೇರವಾಗಿ ಆತ್ಮಲಿಂಗವನ್ನು ಸ್ಪರ್ಶಿಸಿ ದರ್ಶನ ಪಡೆಯುವ ವ್ಯವಸ್ಥೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ದೇವಾಲಯದ ಆಡಳಿತದ ಆದೇಶದಂತೆ, ಮುಂದಿನ ಸೂಚನೆ ಬರುವವರೆಗೆ ಆತ್ಮಲಿಂಗ ಸ್ಪರ್ಶ ದರ್ಶನಕ್ಕೆ ಅವಕಾಶ ಇರುವುದಿಲ್ಲ. ಬದಲಾಗಿ ಭಕ್ತರು ದೇವಾಲಯದ ನಂದಿ ಮಂಟಪದಿಂದಲೇ ಆತ್ಮಲಿಂಗದ ದರ್ಶನ ಪಡೆಯಬಹುದು.
ಇದು ಗೋಕರ್ಣಕ್ಕೆ ಹೊಸದಲ್ಲ. ಗೋಕರ್ಣದ ಮಹಾಬಲೇಶ್ವರ ದೇವಸ್ಥಾನದ ಗರ್ಭಗುಡಿ ಮತ್ತು ಆತ್ಮಲಿಂಗ ಜಲಾವೃತಗೊಳ್ಳುವ ಘಟನೆ ಈ ಹಿಂದೆಯೂ ನಡೆದಿದೆ. ಮುಂಗಾರು ಮಳೆ ತೀವ್ರಗೊಂಡಾಗ ಅಥವಾ ಅಬ್ಬರದ ಮಳೆಯಾದಾಗ ದೇವಸ್ಥಾನದ ಆವರಣ ಮತ್ತು ಗರ್ಭಗುಡಿಯೊಳಗೆ ನೀರು ನುಗ್ಗಿ ಆತ್ಮಲಿಂಗ ಮುಳುಗಡೆಯಾದ ಉದಾಹರಣೆಗಳಿವೆ. 2024ರ ಜೂನ್ ತಿಂಗಳ ಆರಂಭದಲ್ಲಿ ಸುರಿದ ಭಾರಿ ಮಳೆಗೆ ದೇವಸ್ಥಾನದ ಗರ್ಭಗುಡಿ ಸಂಪೂರ್ಣ ಜಲಾವೃತವಾಗಿ, ಆತ್ಮಲಿಂಗವು ಗಂಟೆಗಳ ಕಾಲ ನೀರಿನಲ್ಲಿ ಮುಳುಗಿತ್ತು. ಇದಕ್ಕೂ ಮುನ್ನ ಕೆಲವು ವರ್ಷಗಳ ಹಿಂದೆಯೂ ಮಳೆ ನೀರು ಮತ್ತು ಕಸದ ರಾಡಿ ನೀರು ಗರ್ಭಗುಡಿಗೆ ನುಗ್ಗಿದ ನಿದರ್ಶನಗಳಿವೆ.
ಅವೈಜ್ಞಾನಿಕ ಕಾಮಗಾರಿಗಳು ಕಾರಣ: ಮಹಾಬಲೇಶ್ವರ ದೇವಾಲಯದ ತೀರ್ಥ ಸೋಮಸೂತ್ರದ ಮೂಲಕ ಹರಿದುಹೋಗುವ ನೀರು, ಸ್ಮಶಾನಕಾಳಿ ಮಂದಿರದ ಬಳಿಯ ಸಂಗಮ ನಾಲಾವನ್ನು ಸೇರುತ್ತದೆ. ಅಲ್ಲಿ ನಿರ್ಮಿಸಲಾದ ಸೇತುವೆಯ ಅಡಿಪಾಯದ ಎತ್ತರ ಹೆಚ್ಚಿಸಿರುವುದು ಮತ್ತು ಕಾಮಗಾರಿಯ ಮಣ್ಣನ್ನು ಸರಿಯಾಗಿ ತೆರವುಗೊಳಿಸದೇ ಇರುವುದು ನೀರು ಸರಾಗವಾಗಿ ಹೋಗಲು ತಡೆಯೊಡ್ಡುತ್ತದೆ. ಇದರಿಂದಾಗಿ ಮಳೆನೀರು ಹಿಮ್ಮುಖವಾಗಿ ಹರಿದು (Backwater) ಗರ್ಭಗುಡಿಯನ್ನು ಮುಳುಗಿಸುತ್ತದೆ.
ಸ್ಥಳ ಪುರಾಣ ಮತ್ತು ದಂತಕಥೆಗಳ ಪ್ರಕಾರ, ರಾವಣನ ತಾಯಿ ಕೈಕಸೆಯು ಸಮುದ್ರ ತೀರದಲ್ಲಿ ಮರಳಿನ ಲಿಂಗವನ್ನು ಮಾಡಿ ಪೂಜಿಸುತ್ತಿದ್ದಾಗ, ಸಮುದ್ರದ ಅಲೆಗಳ ರಭಸಕ್ಕೆ ಆ ಲಿಂಗ ಕೊಚ್ಚಿ ಹೋಗುತ್ತಿತ್ತು. ಇದರಿಂದ ಬೇಸರಗೊಂಡ ತಾಯಿಗಾಗಿ ರಾವಣನು ಶಿವನಿಂದ ಮುಖ್ಯ ಆತ್ಮಲಿಂಗವನ್ನೇ ತರಲು ಕೈಲಾಸಕ್ಕೆ ಹೋಗಿ ತಪಸ್ಸು ಮಾಡಿದನು ಎನ್ನುವುದು ಸ್ಥಳ ಪುರಾಣ. ಆದರೆ, ಹಾಗೆ ತಂದಿಟ್ಟ ಆತ್ಮಲಿಂಗವನ್ನು ಅವೈಜ್ಞಾನಿಕ ಕಾಮಗಾರಿಗಳ ಮೂಲಕ ಮತ್ತೆ ಮುಳುಗುವಂತೆ ಮಾಡಿರುವುದು ಶತದಡ್ಡ ಅಧಿಕಾರಿಗಳು. ತಹ ಘಟನೆಗಳು ನಡೆದಾಗ ದೇವಸ್ಥಾನದ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ಮೋಟಾರ್‌ಗಳ ಮೂಲಕ ಗರ್ಭಗುಡಿಯ ನೀರನ್ನು ತಕ್ಷಣ ಹೊರಹಾಕಿ, ಶುದ್ಧೀಕರಣ ನಡೆಸಿ ಭಕ್ತರ ದರ್ಶನಕ್ಕೆ ವ್ಯವಸ್ಥೆ ಮಾಡುತ್ತಾರೆ. ಅಷ್ಟೇ. ಇದು ಬಗೆಹರಿಯುವ ಲಕ್ಷಣಗಳಿಲ್ಲ.



