ರಾಜ್ಯ ಬಿಜೆಪಿ ಅಧ್ಯಕ್ಷ ವಿಜಯೇಂದ್ರರ ವಿರುದ್ಧ ಆರೋಪಗಳ ಸುರಿಮಳೆಯನ್ನೇ ಹಿಡಿದು ನಿಂತಿದ್ದವರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್ ನಿರಾಸೆ ಮೂಡಿಸಿದ್ಧಾರೆ. ಈ ಬಾರಿ ದೆಹಲಿಯಿಂದ ಒಂದು ಟೀಂ ಬಂತೇನೋ ಹೌದು. ಆದರೆ ದೂರು ನೀಡುವವರಿಗೇ ಅಚ್ಚರಿಯಾಗುವಂತೆ ರೋಡ್ ಮ್ಯಾಪ್ ಸಿದ್ಧಮಾಡಿಕೊಂಡಿತ್ತು. ದೂರು ನೀಡುವವರಲ್ಲಿ ವಿಶೇಷ ಅಥವಾ ಹೊಸ ಮಾಹಿತಿ ಏನೂ ಇರಲಿಲ್ಲ. ಅದು ಗೊತ್ತಿದ್ದ ದೆಹಲಿ ಟೀಂ, ಗ್ರೌಂಡ್ ವರ್ಕ್ ಮಾಡಿಕೊಂಡೇ ಬೆಂಗಳೂರಿಗೆ ಬಂದಿತ್ತು. ಇದೆಲ್ಲದರ ಪರಿಣಾಮ ವಿಜಯೇಂದ್ರ ಅವರ ನೇತೃತ್ವದಲ್ಲೇ ಪಕ್ಷ ಮುಂದುವರಿಯಲಿ ಎಂದು ನಿತಿನ್ ನಬಿನ್ ಸಂದೇಶ ರವಾನಿಸಿದ್ದಾರೆ. ವಿಜಯೇಂದ್ರ ವಿರುದ್ಧದ ತಂತ್ರಗಾರಿಕೆ ಯಶಸ್ವಿಯಾಗಲಿಲ್ಲವಲ್ಲಾ ಎಂದು ರೆಬಲ್ ಟೀಂ ಬೇಸರಗೊಂಡಿರುವುದು ನಿಜ. ಆದರೆ ಹೈಕಮಾಂಡ್ ರಹಸ್ಯ ಕಾರ್ಯಾಚರಣೆಯೂ ಯಶಸ್ವಿಯಾಗಿದೆ.
ಬಿಜೆಪಿ ರಾಷ್ಟ್ರಾಧ್ಯಕ್ಷರಾದ ನಂತರ ಮೊದಲ ಬಾರಿಗೆ ಬೆಂಗಳೂರಿಗೆ ಬಂದಿದ್ದ ನಿತಿನ್ ನಬಿನ್, ಡಾಲರ್ಸ್ ಕಾಲೋನಿಯಲ್ಲಿರುವ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಬ್ರೇಕ್ ಫಾಸ್ಟ್ ಸ್ವೀಕರಿಸಿದರು. ಅದಕ್ಕೆ ಮುನ್ನ ಬಿಜೆಪಿ ರಾಷ್ಟ್ರೀಯ ಸಹ ಸಂಘಟನಾ ಕಾರ್ಯದರ್ಶಿ ಶಿವಪ್ರಕಾಶ್ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಬೈಜಯಂತ್ ಪಾಂಡಾ ಅವರ ರಿಪೋರ್ಟ್ ಕೈಸೇರಿತ್ತು. ವಿಶೇಷ ಎಂದರೆ ದೂರು ಸ್ವೀಕಾರ ಮಾಡಿದ್ದ ಶಿವಪ್ರಕಾಶ್ ಅವರು ದೂರು ನೀಡಿದವರಿಗೆ ಪ್ರಶ್ನೆ ಕೇಳುತ್ತಿದ್ದರು. ನೀವು ಹೇಳುತ್ತಿರುವುದು ಹಾಗೆ.. ಆದರೆ ರಿಪೋರ್ಟ್ ಹೀಗೆ ಇದೆಯಲ್ಲ.. ಎಂದು ಇನ್ನೊಂದು ರಿಪೋರ್ಟ್ ಮುಂದಿಟ್ಟರು. ಅದನ್ನು ರೆಬಲ್ ಲೀಡರ್ಸ್ ನಿರೀಕ್ಷೆ ಮಾಡಿರಲಿಲ್ಲ. ಹೀಗಾಗಿ ಹೈಕಮಾಂಡ್ ಜೊತೆ ಮೀಟಿಂಗ್ ಮುಗಿಸಿ ಹೊರಬಂದವರು ʻʻಹೈಕಮಾಂಡ್‌ನ್ನು ಕೂಡಾ ಯಡಿಯೂರಪ್ಪ ಫಿಕ್ಸ್ ಮಾಡಿಟ್ಟಿದ್ದಾರೆ ಕಣ್ರೀʼʼ ಎಂದು ಅಲವತ್ತುಕೊಂಡರು.
ಹಾಗೆಂದು ವಿಜಯೇಂದ್ರ ಅವರನ್ನೂ ಲೈಟ್ ಆಗಿ ಶಹಬ್ಬಾಸ್ ಎಂದು ಬೆನ್ನು ತಟ್ಟಿ ಹೋಗಿಲ್ಲ. ಪಕ್ಷದ ಪದಾಧಿಕಾರಿಗಳು, ಕೆಲವು ಮುಖಂಡರನ್ನು ಬ್ಯಾಲೆನ್ಸ್ ಮಾಡಿ, ಹಿರಿಯ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಿ. ನೀವು ನಿಮ್ಮ ಬಣದವರಿಗೆ ಮಾತ್ರ ಅಲ್ಲ, ಇಡೀ ರಾಜ್ಯ ಬಿಜೆಪಿಗೇ ಅಧ್ಯಕ್ಷ ಎನ್ನುವುದನ್ನು ಮರೆಯಬೇಡಿ ಎಂದು ಕೂಡಾ ಹೇಳಿದ್ಧಾರೆ.
ಇದರ ಜೊತೆಗೆ ಬಹಿರಂಗವಾಗಿ ನಡೆದ ಸಭೆಯಲ್ಲಿ ʻʻಇನ್ನು 2 ವರ್ಷಗಳ ನಂತರ ಎಲೆಕ್ಷನ್ ಇದೆ. ಈಗಿನಿಂದಿಲೇ ತಯಾರಿ ಮಾಡಿಕೊಳ್ಳಬೇಕು. ಪ.ಬಂಗಾಳ, ಅಸ್ಸಾಂ ರೀತಿ ಪ್ರಿಪರೇಷನ್ ಇರಬೇಕು. ಕಾಂಗ್ರೆಸ್ ವೈಫಲ್ಯಗಳನ್ನು ನೋಡಿ ನಾವೇ ಅಧಿಕಾರಕ್ಕೆ ಬರುತ್ತೇವೆ. ಇನ್ಯಾವ ಆಯ್ಕೆ ಇದೆ ಎಂಬ ಭ್ರಮೆ ಬಿಡಿ. ಇಂತಹ ಭ್ರಮೆಯಲ್ಲೇ ತಮಿಳುನಾಡಿನಲ್ಲಿ ಅಣ್ಣಾಡಿಎಂಕೆ ಅಧಿಕಾರಕ್ಕೆ ಬರದೆ ಹಿಂದೆ ಬಿತ್ತು. ಭ್ರಮೆ ಬಿಟ್ಟು ಹೋರಾಟ ಮಾಡಿ, ಸಂಘಟನೆ ಮಾಡಿʼʼ ಎಂದು ಹೇಳಿದ್ಧಾರೆ. ಅಷ್ಟೇ ಅಲ್ಲ ಹೋರಾಟಗಳು ಕ್ಷೇತ್ರವಾರು ನಡೆಯಬೇಕು. ನಾಯಕರು ಕ್ಷೇತ್ರದ ಜನರ ಬಳಿ ಹೋಗಬೇಕು. ಜನರಿಗೆ ಕಾಂಗ್ರೆಸ್ ಬಗ್ಗೆ ಬೇಸರವಾಗಿದೆ ಎನ್ನುವುದು ಸತ್ಯ. ಆದರೆ, ಹಾಗೆ ಬೇಸರಗೊಂಡವರು ನಮ್ಮನ್ನೇ ಆಯ್ಕೆ ಮಾಡಬೇಕು ಎಂದರೆ ಹಾಗೆ ಕೆಲಸವನ್ನೂ ಮಾಡಬೇಕು ಎಂದೂ ಹೇಳಿದ್ಧಾರೆ.



