ಧ್ರುವ ಸರ್ಜಾ ಮತ್ತು ಜೋಗಿ ಪ್ರೇಮ್ ಕಾಂಬಿನೇಷನ್ನಿನಲ್ಲಿ ತಯಾರಾಗಿರುವ ಸಿನಿಮಾ ಕೆಡಿ. ಕಾಳಿದಾಸ ದಿ ಡೆವಿಲ್ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಕೆಲವರು ಸಿನಿಮಾ ಸೂಪರ್ಬ್ ಎನ್ನುತ್ತಿದ್ದರೆ, ಇನ್ನೂ ಕೆಲವರು ಸುಮಾರು ಎನ್ನುತ್ತಿದ್ದಾರೆ. ಸಿನಿಮಾ ಭರ್ಜರಿ ಓಪನಿಂಗ್ ತೆಗೆದುಕೊಳ್ಳದೇ ಹೋದರೂ.. ಓಕೆ ಓಕೆ.. ಹಿಟ್ ಆಗಬಹುದು ಎಂಬ ನಿರೀಕ್ಷೆ ಮೂಡಿಸಿದೆ. ವಿಚಿತ್ರವಾಗಿ ಕಾಣಿಸುತ್ತಿರುವುದೇನು ಗೊತ್ತೇ.. ಸಿನಿಮಾಗೆ ಲಾಭ ಬರಲ್ಲ ಎನ್ನುವುದು.
ಹೌದು, ಚಿತ್ರಕ್ಕೆ ದೊಡ್ಡ ಬಜೆಟ್ ಹಾಕಲಾಗಿದೆ. ಚಿತ್ರಕ್ಕೆ ಸುರಿದಿರುವ ಹಣ 100 ಕೋಟಿಗೂ ಹೆಚ್ಚು. ಕೆಲವರು 140 ಕೋಟಿ ಬಜೆಟ್ ಎನ್ನುತ್ತಿದ್ದಾರೆ. ಆದರೆ ಸಿನಿಮಾ ಮೊದಲ ದಿನ ದುಡಿದಿರುವುದು 4 ಕೋಟಿ ಅಷ್ಟೇ. ಒಟ್ಟು 845 ಶೋಗಳಲ್ಲಿ ಪ್ರದರ್ಶನಗೊಂಡ ʻಕೆಡಿ , ದಿ ಡೆವಿಲ್ʼ ಸಿನಿಮಾ ಮೊದಲ ದಿನ 4.10 ಕೋಟಿ ರೂಪಾಯಿ ಗ್ರಾಸ್ ಕಲೆಕ್ಷನ್ ಮಾಡಿದೆ. ಮೊದಲ ದಿನದ ಆಕ್ಯುಪೆನ್ಸಿ ಗಮನಿಸಿದರೆ, ಒಟ್ಟಾರೆಯಾಗಿ ಶೇ.46 ರಷ್ಟು ದಾಖಲಾಗಿದೆ. 2ನೇ ದಿನದ ಕಲೆಕ್ಷನ್ ಮೊದಲ ದಿನಕ್ಕಿಂತ ಜಾಸ್ತಿ ಆಗಿದೆ. ಆದರೆ 5 ಕೋಟಿ ಕಲೆಕ್ಷನ್ ದಾಟಿಲ್ಲ. ಹೀಗೇ ಕಲೆಕ್ಷನ್ ಆದರೆ ಸಿನಿಮಾ ಲಾಭ ಮಾಡಬೇಕು ಎಂದರೆ ಇದೇ ರೀತಿಯ ಕಲೆಕ್ಷನ್ ಕನಿಷ್ಠ ಒಂದು ತಿಂಗಳು ಬೇಕು. ಧುರಂಧರ್ ನಂತಹ ಬ್ಲಾಕ್ ಬಸ್ಟರ್ ಸಿನಿಮಾನೇ 30 ದಿನಗಳ ನಿರಂತರ ಕಲೆಕ್ಷನ್ ಉಳಿಸಿಕೊಳ್ಳಲಿಲ್ಲ. ಇನ್ನು ಕೆಡಿಯಿಂದ ಸಾಧ್ಯವೇ ಎಂಬ ಪ್ರಶ್ನೆಗೆ ಇಲ್ಲ ಎಂದೇ ಉತ್ತರ ಹೇಳಬೇಕು.
ಕಾರಣ ಇಷ್ಟೆ. ಕೆಡಿ ಚಿತ್ರಕ್ಕೆ ಪ್ರೇಮ್ ಅಗತ್ಯಕ್ಕಿಂತ ಹೆಚ್ಚು ಹಣ ಖರ್ಚು ಮಾಡಿಸಿದ್ದಾರೆ. ಡಿಲೀಟ್ ಆದ ಸೆರಗಾ ಸರ್ಸೆ.. ಹಾಡು. ನೂರಾ ಫತೇಹಿಗೆ ಕೊಟ್ಟಿದ್ದ ಸಂಭಾವನೆಯೇ ಮೂರೂವರೆ ಕೋಟಿಯಂತೆ. ಇನ್ನು ಹಾಡಿನ ಮೇಕಿಂಗ್, ಶೂಟಿಂಗ್ ಎಂದು ಅದೊಂದು ಹಾಡಿಗೆ ಸುರಿದ ಹಣವೇ ಹತ್ತಿರತ್ತಿರ 15 ಕೋಟಿ ಎನ್ನುತ್ತಿವೆ ಮೂಲಗಳು. ಸಿನಿಮಾದಲ್ಲಿ ಹಾಡೇ ಇಲ್ಲ.
ಅಷ್ಟೇ ಅಲ್ಲ, 10 ರೂಪಾಯಿ ಖರ್ಚು ಮಾಡುವ ಕಡೆ ನೂರು ರೂಪಾಯಿ ಖರ್ಚು ಮಾಡಿಸಿದ್ದರ ಫಲವೇ ಸಿನಿಮಾ ಹಿಟ್ ಆದರೂ ನಿರ್ಮಾಪಕರು ಲಾಭದ ಮುಖ ನೋಡುವುದಿಲ್ಲ. ಚಿತ್ರಕ್ಕೆ ಸಂಜಯ್ ದತ್, ಶಿಲ್ಪಾ ಶೆಟ್ಟಿ, ರವಿಚಂದ್ರನ್, ರಮೇಶ್ ಅರವಿಂದ್, ರವಿಶಂಕರ್ ಅಂತಹ ಘಟಾನುಘಟಿ ಕಲಾವಿದರಿದ್ಧಾರೆ. ಹೀಗಾಗಿ ಮೇಕಿಂಗ್ ಖರ್ಚು ಶರವೇಗದಲ್ಲಿಯೇ ಓಡಿದೆ. ಕಲಾವಿದರ ಸಂಭಾವನೇ ಸುಮಾರು 40 ಕೋಟಿ ದಾಟಿದೆಯಂತೆ. ಇಷ್ಟೆಲ್ಲ ಆಗಿ ಚಿತ್ರಕ್ಕೆ ತೆಗೆದುಕೊಡಿದ್ದು ಹೆಚ್ಚೂ ಕಡಿಮೆ 4 ವರ್ಷ.
ಹೀಗಾಗಿ ಸಿನಿಮಾ ಸೂಪರ್ ಡ್ಯೂಪರ್ ಅಲ್ಲ, ಬ್ಲಾಕ್ ಬಸ್ಟರ್ ಹಿಟ್ ಆಗಿ 100 ಕೋಟಿ ಗಳಿಸಿದರೂ ನಿರ್ಮಾಪಕರಿಗೆ ಲಾಭವಂತೂ ಬರಲ್ಲ ಎನ್ನುವುದು ಬಾಕ್ಸಾಫೀಸ್ ಪಂಡಿತರ ಲೆಕ್ಕಾಚಾರ. ಕೆವಿಎನ್ ಪ್ರೊಡಕ್ಷನ್ ಸಂಸ್ಥೆಯನ್ನು ಯಾರು ಕಾಪಾಡಬೇಕೋ.. ಗೊತ್ತಿಲ್ಲ.



