ಯಾರೇ ಹಿರಿಯರು ಎದುರಿಗೆ ಬರಲಿ, ಪುನೀತ್ ಕಾಲು ಮುಟ್ಟಿ ನಮಸ್ಕರಿಸುತ್ತಿದ್ದರು. ವಯಸ್ಸಿನಲ್ಲಿ ಸರಿಸಮಾನರನ್ನು ಅಪ್ಪಿಕೊಂಡು ಗೌರವಿಸುತ್ತಿದ್ದರು. ಕಿರಿಯರನ್ನು ಆತ್ಮೀಯತೆಯಿಂದ ನೋಡುತ್ತಿದ್ದರು. ಪುನೀತ್ ರಾಜಕುಮಾರ್ (Puneeth Rajkumar) ಅವರನ್ನ ಕನ್ನಡಿಗರು ಕೇವಲ ಡಾ.ರಾಜ್-ಪಾರ್ವತಮ್ಮ(Dr. Raj and Parvatamma) ನವರ ಮಗ ಎಂದು ಭಾವಿಸಿರಲೇ ಇಲ್ಲ. ತಮ್ಮದೇ ಮನೆಯ ಮಗನೆಂದೇ ಭಾವಿಸಿದ್ದರು. ಬಹುಶಃ ಈಗಿನ 30 ದಾಟಿದವರೆಲ್ಲ ಪುನೀತ್ ಅವರನ್ನು ಬಾಲ್ಯದಲ್ಲಿದ್ದಾಗಲೇ ನೋಡಿ ಮೆಚ್ಚಿಕೊಂಡಿದ್ದವರು. ಅವರಿಗೆ ಪುನೀತ್ ತಮ್ಮೊಂದಿಗೇ ಬೆಳೆದನೆಂಬ ಭಾವನೆಯೂ ಮೂಡಿತ್ತು. ಇಂತಹ ಪುನೀತ್ ಇದ್ದಕ್ಕಿದ್ದಂತೆ ಅಗಲಿದಾಗ ಇಡೀ ಕರ್ನಾಟಕ ಕಣ್ಣೀರು ಹಾಕಿತ್ತು.
ಇದನ್ನೇ ಸಿಎಂ ಸಿದ್ದರಾಮಯ್ಯ (Siddaramaiah) ಸಹಾ ಹೇಳಿದ್ದಾರೆ. ಪುನೀತ್ ರಾಜ್ ಕುಮಾರ್ ಮನೆ ಮನೆಯ ಮಗ. ಅವರನ್ನು ಗೌರವಿಸದವರೇ ಇಲ್ಲ ಎಂದಿದ್ದಾರೆ ಸಿದ್ದರಾಮಯ್ಯ. ಅಷ್ಟೇ ಅಲ್ಲ, ಪುನೀತ್ ನನಗೆ ಕೊಡುತ್ತಿದ್ದ ಗೌರವವನ್ನು ನನ್ನ ಮನೆಯವರೂ ನನಗೆ ಕೊಡ್ತಾ ಇರಲಿಲ್ಲ ಎನ್ನುವ ಮೂಲಕ ಅಚ್ಚರಿ ಮೂಡಿಸಿದ್ದಾರೆ. ಪಿಆರ್‌ಕೆ ಸ್ಟುಡಿಯೋಸ್ ಹಾಗೂ N3K ಡಿಸೈನ್ ಸ್ಟುಡಿಯೋ (PRK Studio and N3K design studio) ವತಿಯಿಂದ ಪ್ಯಾಲೇಸ್ ರಸ್ತೆಯ ರಾಡಿಸನ್ ಬ್ಲ್ಯೂ – ಏಟ್ರಿಯಾನಲ್ಲಿ (Radisson Blu – Atria) ಆಯೋಜಿಸಲಾದ ಕರ್ನಾಟಕ ರತ್ನ ಡಾ.ಪುನೀತ್ ರಾಜ್ ಕುಮಾರ್ ಅವರ ಸಂಗ್ರಹಣೀಯ ಶಿಲ್ಪಗಳನ್ನು ಅನಾವರಣಗೊಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಮಾತು ಹೇಳಿದ್ದಾರೆ.
ಪುನೀತ್ ಮರಣ ಹೊಂದಿದಾಗ ನಮ್ಮ ಮನೆಯಲ್ಲಿಯೇ ಯಾರೋ ಒಬ್ಬರು ತೀರಿಕೊಂಡಿದ್ದಾರೆ ಎಂಬಂತಿತ್ತು. ಎಲ್ಲಾ ಊರುಗಳಲ್ಲಿ ಪ್ರತಿಮೆ ಸ್ಥಾಪಿಸಿ, ಕಟೌಟ್ ಹಾಕಿ ಗೋಳಾಡಿದ್ದು ಕಂಡಾಗ ಪುನೀತ್ ಅವರ ಜನಪ್ರಿಯತೆ, ಅಪಾರ ಅಭಿಮಾನಿಗಳನ್ನು ಪಡೆದಿದ್ದರು ಎಂದು ತಿಳಿಯುತ್ತದೆ. ಬಹಳ ಬೇಗ ನಮ್ಮನ್ನು ಅಗಲಿದರು. ಅವರು ಬದುಕಿದ್ದರೆ, ನಾವು ನಿರೀಕ್ಷೆ ಮಾಡದಷ್ಟು ಎತ್ತರಕ್ಕೆ ಬೆಳೆಯುತ್ತಿದ್ದರು ಎಂದ ಸಿದ್ದರಾಮಯ್ಯ, ರಾಜ್ ಕುಮಾರ್ ಕುಟುಂಬದವರು ಎಂದಿಗೂ ಕೆಟ್ಟದ್ದನ್ನು ಬಯಸಿಲ್ಲ. ಕೆಟ್ಟ ಪದ ಬಳಸಿಲ್ಲ. ಪುನೀತ್ ರಾಜಕುಮಾರ್… ಅವರ ತಂದೆ ರಾಜ್ ಕುಮಾರ್ ಅವರಿಗಿಂತ ಒಂದು ಹೆಜ್ಜೆ ಮುಂದೆ ಹೋಗಿದ್ದರು. ರಾಜ್ ಕುಮಾರ್ ಜನಪ್ರಿಯ ಮೇರು ನಟ. ಪುನೀತ್ ತೀರಿಕೊಂಡಾಗ ಜನರ ಭಾವನೆಗಳನ್ನು ಕಂಡಾಗ, ರಾಜ್ ಕುಮಾರ್ ಅವರಿಗಿಂತಲೂ ಜನಪ್ರಿಯರಾಗಿದ್ದರು ಎಂಬ ಭಾವನೆ ಬಂತು ಎಂದಿದ್ದಾರೆ ಸಿದ್ದರಾಮಯ್ಯ.
ರಾಜಕುಮಾರ್ ಕುಟುಂಬದವರು ಸದಾ ವಿನಯವಂತರು. ರಾಜಕುಮಾರ್ ಮತ್ತವರ ಮಕ್ಕಳು ಮಾನವೀಯತೆಯ ಪ್ರತಿರೂಪವಾಗಿದ್ದಾರೆ. ಮಾನವೀಯತೆಯುಳ್ಳವರು ಮತ್ತೊಬ್ಬರನ್ನು ಪ್ರೀತಿ ಗೌರವಗಳಿಂದ ಕಾಣುತ್ತಾರೆ. ರಾಜ್ ಕುಮಾರ್ ಸೇರಿದಂತೆ ಅವರ ಕುಟುಂಬದವರೊಂದಿಗೆ ನಮಗೆ ಉತ್ತಮ ಒಡನಾಟವಿದೆ ಎಂದ ಸಿಎಂ ಸಿದ್ದರಾಮಯ್ಯ ಪುನೀತ್ ರಾಜ್ ಕುಮಾರ್ ಅವರ ಸ್ಮಾರಕ ಪುನರಾಭಿವೃದ್ಧಿ ಸಂಬಂಧ ಅಶ್ವಿನಿ ಪುನೀತ್ ರಾಜ್ ಕುಮಾರ್ ಅವರು ಮಾಡಿರುವ ಮನವಿಗೆ ನಮ್ಮ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಭರವಸೆ ನೀಡಿದ್ದಾರೆ. ಮಾರ್ಚ್ ೧೭ನೇ ತಾರೀಕನ್ನು ಸ್ಫೂರ್ತಿ ದಿನವನ್ನಾಗಿ ಆಚರಿಸುವ ನಿರ್ಧಾರವನ್ನು ಜಾರಿಗೆ ತರುವುದಾಗಿ ಘೋಷಿಸಿದ್ದಾರೆ.



