ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು, ಭಾರತವು ಹಿಂದೆಂದೂ ಕಾಣದ ದೊಡ್ಡ “ಆರ್ಥಿಕ ಚಂಡಮಾರುತ” (Economic Storm) ಎದುರಿಸುವ ಹಂತದಲ್ಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ. ತಾವು ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಕೇಂದ್ರ ಸರ್ಕಾರ ಅದನ್ನು ಕಿವಿಗೇ ಹಾಕಿಕೊಳ್ತಿಲ್ಲ ಎನ್ನುವುದು ಅವರ ಆರೋಪ.
ʻʻದೇಶಕ್ಕೆ ಕಷ್ಟದ ಪರಿಸ್ಥಿತಿ ಬಂದೊದಗಲಿದ್ದು, ಆರ್ಥಿಕ ಆಘಾತ ಎದುರಿಸಬೇಕು. ಇಷ್ಟು ವರ್ಷದಲ್ಲಿ ನಾವ್ಯಾರೂ ಕಂಡಿರದ ಆರ್ಥಿಕ ಆಘಾತವೊಂದು ಬರಲಿದೆ. ಇದನ್ನು ಯಾರೂ ತಡೆಯಲಾಗದು. ಇದು ಯುವಕರು, ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಉದ್ಯಮಿಗಳ ಮೇಲೆ ಪರಿಣಾಮ ಬೀರಲಿದೆʼʼ ಎಂದೂ ಹೇಳಿದ್ಧಾರೆ. ಅಷ್ಟೇ ಅಲ್ಲ.. ಇದರಿಂದ ಅದಾನಿ, ಅಂಬಾನಿ ಅಂತಹವರಿಗೆ ಯಾವುದೇ ತೊಂದರೆ ಆಗಲ್ಲ. ಅವರಿಗೆ ನಾಲ್ಕೂ ದಿಕ್ಕುಗಳಿಂದ ರಕ್ಷಣಾ ಕೋಟೆಯಿದೆ ಎನ್ನುವುದು ಅವರ ವಾದ.
ಇಂಧನ ಬೆಲೆ ಮತ್ತು ಹಣದುಬ್ಬರ: ಜಾಗತಿಕ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಇಂಧನ ಬೆಲೆ ಏರಿಕೆ, ಹಣದುಬ್ಬರ ತೀವ್ರವಾಗಿದ್ದು, ಇದು ಆರ್ಥಿಕತೆಗೆ ದೊಡ್ಡ ಆಘಾತ ತರಲಿದೆ ಎಂದು ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ. ಐದು ದಿನಗಳ ಅವಧಿಯಲ್ಲಿ ಕೇಂದ್ರ ಸರ್ಕಾರವು ಎರಡನೇ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳನ್ನು ಹೆಚ್ಚಿಸಿರುವುದನ್ನು ತೀವ್ರವಾಗಿ ಖಂಡಿಸಿರುವ ರಾಹುಲ್ ಪ್ರಧಾನಿ ನರೇಂದ್ರ ಮೋದಿ ರೂಪಿಸಿರುವ ಆರ್ಥಿಕ ನೀತಿಗಳು ಸಂಪೂರ್ಣವಾಗಿ ಕುಸಿಯಲಿದ್ದು, ಅದರ ಭೀಕರ ಪರಿಣಾಮವನ್ನು ಸಾಮಾನ್ಯ ನಾಗರಿಕರು ಅನುಭವಿಸಬೇಕಾಗುತ್ತದೆ ಎಂದು ಭವಿಷ್ಯ ನುಡಿದಿದ್ದಾರೆ.
ಪೆಟ್ರೋಲ್ ದರ, ಹಣದುಬ್ಬರ ಇನ್ನೂ ಏರಲಿದೆ. ಇದನ್ನು ಕಂಡುಕೊಂಡೇ, ಸಾರ್ವಜನಿಕರು, ರೈತರನ್ನು ರಕ್ಷಿಸಲು ಕ್ರಮ ಕೈಗೊಳ್ಳಿ ಎಂದು ಸರ್ಕಾರಕ್ಕೆ ಹೇಳುತ್ತಲೇ ಇದ್ದೇನೆ. ಹಾಗೆ ಮಾಡದಿದ್ದರೆ ದೇಶ ಭಾರೀ ನಷ್ಟವನ್ನನುಭವಿಸಬೇಕಾಗುವುದು ಎಂದು ಎಚ್ಚರಿಕೆಯನ್ನೂ ಕೊಟ್ಟಿದ್ದೇನೆ. ಆದರೆ ರಾಹುಲ್ ಗಾಂಧಿಗೆ ಏನೂ ತಿಳಿಯಲ್ಲ ಎಂದು ಹೇಳುತ್ತಾ ಆರಾಮಾಗಿದ್ದಾರೆ ಎನ್ನುವುದು ರಾಹುಲ್ ಗಾಂಧಿ ಟೀಕೆ.
ಇನ್ನು ದೇಶದ ಪ್ರಧಾನಿ ಜನರಿಗೆ ವಿದೇಶ ಪ್ರವಾಸ ಮಾಡಬೇಡಿ ಎಂದು ಹೇಳಿ ತಾವು ವಿದೇಶ ಪ್ರವಾಸ ಮಾಡುತ್ತಿರುವುದನ್ನೂ ಟೀಕಿಸಿರುವ ರಾಹುಲ್ ಗಾಂಧಿ “ಮೋದಿ ಅವರು ದೇಶದ ಜನರಿಗೆ ವಿದೇಶಿ ಪ್ರವಾಸಗಳನ್ನು ಕಡಿಮೆ ಮಾಡಲು ಬುದ್ಧಿವಾದ ಹೇಳುತ್ತಾರೆ, ಆದರೆ ಸ್ವತಃ ತಾವೇ ಜಗತ್ತಿನಾದ್ಯಂತ ಸದಾ ಸುತ್ತುತ್ತಿರುತ್ತಾರೆ” ಎಂದು ಟೀಕಿಸಿದ್ದಾರೆ.
ರಾಹುಲ್ ಗಾಂಧಿ ಟೀಕೆಯ ಪ್ರಮುಖ ಅಂಶಗಳೆಂದರೆ..
ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ರೂಪಿಸಿರುವ ಆರ್ಥಿಕ ನೀತಿಗಳು ಅದಾನಿ, ಅಂಬಾನಿಯಂಥವರಿಗೆ ಉಪಯೋಗವಾಗುವಂತಿವೆ
ಸರ್ಕಾರ ರೂಪಿಸಿದ ಆರ್ಥಿಕ ರಚನೆಗಳು ಹೆಚ್ಚು ದಿನ ಉಳಿಯುವುದಿಲ್ಲ. ದುರದೃಷ್ಟಕ್ಕೆ ಈ ಕುಸಿತವು ಅದಾನಿಯಂತಹ ಉದ್ಯಮಿಗಳಿಗೆ ಪರಿಣಾಮ ಬೀರುವುದಿಲ್ಲ
ವಿದೇಶೀ ಪ್ರವಾಸ ಮಾಡಬೇಡಿ ಎಂದು ಜನಸಾಮಾನ್ಯರಿಗೆ ಹೇಳುವ ಮೋದಿಯವರು ತಾವೇ ದೇಶ ದೇಶ ಸುತ್ತುತ್ತಿರುತ್ತಾರೆ.
ಕೇಂದ್ರದ ಆರ್ಥಿಕ ನೀತಿಗಳು ಕೇವಲ ಅದಾನಿ ಮತ್ತು ಅಂಬಾನಿಯಂತಹ ಆಯ್ದ ಕೆಲವು ಕೋಟ್ಯಧಿಪತಿ ಉದ್ಯಮಿಗಳಿಗೆ ಮಾತ್ರ ಪ್ರಯೋಜನವನ್ನು ನೀಡುವಂತೆ ವ್ಯವಸ್ಥಿತವಾಗಿ ರೂಪಿಸಲ್ಪಟ್ಟಿವೆ.



