ಥಿಯೇಟರಿನಲ್ಲಿ ಸಿನಿಮಾ ಶುರುವಾಗುವುದೇ ಅಬ್ಬರದೊಂದಿಗೆ.. ಚಿತ್ರದ ಕೊನೆಯ ತನಕವೂ ಅಬ್ಬರವೇ ಇರುತ್ತದೆ. ಪಿಸುಮಾತುಗಳಿಗೆ ಇಲ್ಲಿ ಜಾಗವಿಲ್ಲ. ತೆರೆಯ ಮೇಲೆ ರಕ್ತಸಿಕ್ತ ಸ್ನಾನವಾಗುತ್ತದೆ. ಆಗುತ್ತಲೇ ಇರುತ್ತದೆ. ಕಿವಿಗಳನ್ನು ʻಗಂಗಾಜಲʼ ಹಾಕಿಕೊಂಡು ಶುದ್ಧಿ ಮಾಡಿಕೊಳ್ಳಲೇಬೇಕಾದಂತ ಸಂಬಾಷಣೆಗಳಿವೆ. ಹೊಡಿ-ಬಡಿ-ಕಡಿ, ಎಣ್ಣೆ ಏಟು-ಗಾಂಜಾ ಘಾಟು ಢಾಳಾಗಿಯೇ ಇರುವ ಸಿನಿಮಾ ಭೀಮ. ‘ಮಾದಕ ವಸ್ತು ಸೇವನೆ, ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಹಾನಿಕರ’ ಚಿತ್ರದ ತುಂಬಾ ಇದೆ. ಮಾದಕ ವ್ಯಸನದ ವಿರುದ್ಧ ಹೋರಾಡುವ ಭೀಮ, ಸಿನಿಮಾ ತುಂಬ ‘ಡ್ರಿಂಕ್ಸ್-ಸಿಗರೇಟ್’ ಜೊತೆಯಲ್ಲೇ ಇರುತ್ತಾನೆ. ‘ಸಲಗ’ ಮೂಲಕ ನಿರ್ದೇಶಕನಾಗಿ ಸಕ್ಸಸ್ ಪಡೆದುಕೊಂಡಿದ್ದ ವಿಜಯ್, ಭೀಮದಲ್ಲಿ ಮತ್ತೊಮ್ಮೆ ಗೆಲ್ಲುವ ಸೂಚನೆ ಕೊಟ್ಟಿದ್ದಾರೆ. ಥಿಯೇಟರುಗಳಿಗೆ ಜನರನ್ನು ವಾಪಸ್ ಕರೆತಂದಿರುವುದು ವಿಜಯ್ ಸಾಧನೆ.
ಇತ್ತೀಚೆಗೆ ಸ್ಟಾರ್ ಚಿತ್ರಗಳಿಗೂ ಜನ ಬರುತ್ತಿರಲಿಲ್ಲ. ಪ್ರೇಕ್ಷಕರಿಲ್ಲದೆ ಡಲ್ಲು ಹೊಡೆಯುತ್ತಿದ್ದ ಕೆಲವು ಸಿನಿಮಾ ಮಂದಿರಗಳು ಡೋರ್ ಕ್ಲೋಸ್ ಮಾಡಿದ್ದವು ಅದೆಲ್ಲವನ್ನೂ ವಾಪಸ್ ಕರೆತಂದಿರುವುದು ಭೀಮ. ಅಷ್ಟರಮಟ್ಟಿಗೆ ಮೊದಲು ಥ್ಯಾಂಕ್ಸ್ ಹೇಳಬೇಕಿರುವುದು ದುನಿಯಾ ವಿಜಯ್ ಫ್ಯಾನ್ಸ್ ಸೃಷ್ಟಿಸಿದ ಕ್ರೇಜ್ʻಗೆ.
‘ಭೀಮ’ ಸಿನಿಮಾ ಆರಂಭ ಆದಾಗಿನಿಂದ ಕೊನೆಯವರೆಗೆ ಯುವ ಜನಾಂಗ ಹೇಗೆ ಹಾಳಾಗುತ್ತಿದೆ ಮತ್ತು ಅದನ್ನು ಯಾವ ರೀತಿ ತಡೆಯಬೇಕು ಎಂಬ ಸಂದೇಶ ಇದೆ. ಮಾದಕ ವಸ್ತುಗಳು ಯಾವ ರೀತಿ ಬಳಕೆ ಆಗುತ್ತಿದೆ? ಯಾರೆಲ್ಲಾ ಬಳಸುತ್ತಿದ್ದಾರೆ? ಈ ಮಾಫಿಯಾ ಯಾರ ಹಿಡಿತದಲ್ಲಿದೆ ಎಂಬುದನ್ನೆಲ್ಲ ವಿವರವಾಗಿಯೇ ಹೇಳಿದ್ದಾರೆ ವಿಜಯ್.
ಕಥಾನಾಯಕನ ಪಾತ್ರವೇನು? ಆತ ಏಕೆ ಮಾದಕ ವಸ್ತುಗಳ ಜಾಲದ ವಿರುದ್ಧ ತಿರುಗಿಬೀಳುತ್ತಾನೆ ಅನ್ನೋದೇ ‘ಭೀಮ’ ಸಿನಿಮಾದ ಕುತೂಹಲ. ರಿಯಲಿಸ್ಟಿಕ್ ಅಪ್ರೋಚ್‌ಗೆ ಹೆಚ್ಚು ಮನ್ನಣೆ ನೀಡುವ ವಿಜಯ್, ‘ಭೀಮ’ ಸಿನಿಮಾದಲ್ಲೂ ಅದನ್ನೇ ಮುಂದುವರಿಸಿದ್ದಾರೆ. ‘ಸಲಗ’ ಸಿನಿಮಾದಲ್ಲಿ ಇದ್ದಂತಹ ಕೆಲವೊಂದು ವಿಕ್ಷಿಪ್ತ ಪಾತ್ರಗಳನ್ನು ಇಲ್ಲಿಯೂ ತಂದಿದ್ದಾರೆ. ಕೈ ಎತ್ತಿದರೆ ರಕ್ತ ತೆರೆ ತುಂಬಾ ಹಬ್ಬುವಂತಿದೆ. ಭೀಮ ರಕ್ತದಲ್ಲೇ ಸ್ವಿಮ್ಮಿಂಗ್ ಮಾಡಿದಂತಿದೆ. ಸಂಭಾಷಣೆ ಇನ್ನಷ್ಟು ಸೆನ್ಸಾರ್ ಆಗಬೇಕಿತ್ತೇನೋ ಎಂಬ ಪ್ರಶ್ನೆ ಹುಟ್ಟುಹಾಕುತ್ತದೆ.
ಬೆಂಗಳೂರಿನ ಗಲ್ಲಿಗಳ ಯುವಕರ ನೈಜ ಚಿತ್ರಣ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ. ಗಾಂಜಾದ ಪ್ಯಾಕಿಂಗ್ ಹೇಗಾಗುತ್ತದೆ. ಅದರ ಪ್ರಸಾರ ಹೇಗಾಗುತ್ತದೆ. ಸ್ಲಂ ಕುಟುಂಬಗಳನ್ನು ಹೇಗೆ ಇದಕ್ಕೆ ಬಳಸಿಕೊಳ್ಳಲಾಗುತ್ತದೆ ಎಂಬುದನ್ನು ತೋರಿಸಲಾಗಿದೆ. ಇದರ ಜೊತೆಗೆ ಮೆಡಿಕಲ್ ಶಾಪ್ಗಳಲ್ಲಿ ಸಿಗುವ ಔಷಧವನ್ನೇ ಹೇಗೆ ಡ್ರಗ್ಸ್ ಆಗಿ ಬಳಸುತ್ತಿದ್ದಾರೆ ಎಂಬಿತ್ಯಾದಿಗಳನ್ನು ಸಿನಿಮಾದಲ್ಲಿ ತೋರಿಸಲಾಗಿದೆ.
ಇದೆಲ್ಲದರ ಮಧ್ಯೆ ‘ದುನಿಯಾ’ ವಿಜಯ್ ಕಮರ್ಷಿಯಲ್ ಎಲಿಮೆಂಟ್‌ಗಳನ್ನು ಮರೆತಿಲ್ಲ. ಮಸ್ತ್ ಫೈಟ್ಸ್, ಡೈಲಾಗ್ಸ್, ಲವ್ ಟ್ರ್ಯಾಕ್, ಮದರ್ & ಬದ್ರರ್ ಸೆಂಟಿಮೆಂಟ್ ಎಲ್ಲವೂ ಇದೆ. ಕ್ಲೈಮ್ಯಾಕ್ಸ್‌ನಲ್ಲಿ ಒಂದು ಭರ್ಜರಿ ಟ್ವಿಸ್ಟ್ ನೀಡ್ತಾರೆ. ಹೊಸ ಪಾತ್ರ ಸಲಗನ ಎಂಟ್ರಿ ಆಗುತ್ತದೆ. ಹಾಗಾದ್ರೆ ಭೀಮ 2 ಬರುತ್ತಾ..? ಕುತೂಹಲ ಚಾಲ್ತಿಡ್ತಾರೆ ವಿಜಯ್.
ಸಂಗೀತ ನಿರ್ದೇಶಕ ಚರಣ್ ರಾಜ್ ಅವರ ಮ್ಯಾಜಿಕ್ ವರ್ಕೌಟ್ ಆಗಿದೆ. ಡೋಂಟ್ ವರಿ ಬೇಬಿ ಚಿನ್ನಮ್ಮ..’, ‘ಆಡಿ ಬಾ ಮಗನೇ ಭೀಮ..’ ಹಾಡುಗಳು ಕಿಕ್ ನೀಡುತ್ತವೆ. ನಾಯಕಿ ಅಶ್ವಿನಿ ಸಿಕ್ಕ ಅವಕಾಶವನ್ನು ಸದುಪಯೋಗ ಮಾಡಿಕೊಂಡಿದ್ದಾರೆ. ಗೋಪಾಲ ಕೃಷ್ಣ ದೇಶಪಾಂಡೆ, ಕಲ್ಯಾಣಿ, ಅಚ್ಯುತ್ ಕುಮಾರ್, ರಂಗಾಯಣ ರಘು, ರಮೇಶ್ ಇಂದಿರ, ಕಾಕ್ರೋಚ್ ಸುಧೀ, ಮಲ್ಲ, ರಾಘು ಶಿವಮೊಗ್ಗ ಎಂದಿನಂತೆ ತಮ್ಮ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಿದ್ದಾರೆ.
ನಟನಾಗಿ ಅವರಿಗೆ ‘ಸಲಗ’ ಬ್ರೇಕ್ ನೀಡಿದ್ದರೆ, ನಿರ್ದೇಶಕನಾಗಿ ಮೊದಲ ಯತ್ನದಲ್ಲೇ ಭಾರಿ ಗೆಲುವು ಸಿಕ್ಕಿತ್ತು. ಇದೀಗ ‘ಭೀಮ’ ಸಿನಿಮಾವನ್ನು ನಿರ್ದೇಶಿಸಿ, ಮತ್ತೊಂದು ಗೆಲುವಿನ ಸೂಚನೆಯನ್ನಂತೂ ಕೊಟ್ಟಿದ್ದಾರೆ.



