ಡಾ. ಹನಿಯೂರು ಚಂದ್ರೇಗೌಡ. ಈತ ಜಾನಪದ ಮತ್ತು ಬುಡಕಟ್ಟು ಸಂಶೋಧಕರಾಗಿ ಗುರುತಿಸಿಕೊಂಡಿದ್ದ. ಪತ್ರಿಕೆ, ಟಿವಿಗಳಲ್ಲಿ ಮಕ್ಕಳ ಹಕ್ಕು, ಶಿಕ್ಷಣದ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡುತ್ತಿದ್ದ. ಎಲೆಕ್ಷನ್ನಿಗೂ ನಿಂತಿದ್ದ. ಈಗ ಲೈಂಗಿಕ ದೌರ್ಜನ್ಯ, ಬ್ಲಾಕ್ ಮೇಲ್ ಕೇಸಿನಲ್ಲಿ ಜೈಲು ಸೇರಿದ್ದಾನೆ. ಈತ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ. ಕರ್ನಾಟಕ ಬುಡಕಟ್ಟು ಪರಿಷತ್ತಿನ ಸ್ಥಾಪಕರಾಗಿ ಮತ್ತು ವಿವಿಧ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕೆಲಸ ಮಾಡ್ತಿದ್ದವನು. ಆದರೆ ಈತ ಮಾಡಿರೋ ಮೋಸ, ವಂಚನೆ ಕಥೆಗಳು ರೋಚಕವಾಗಿವೆ. ಒಬ್ಬೊಬ್ಬರಿಗೆ ಒಂದೊಂದು ವೇಷದಲ್ಲಿ ನಾಮ ಇಟ್ಟಿದ್ಧಾನೆ.
ಚನ್ನಪಟ್ಟಣದವರು. ಬಿ.ಎಡ್., ಎಂ.ಎ., ಎಂ.ಫಿಲ್., ಪಿ.ಎಚ್.ಡಿ., ಡಿ.ಲಿಟ್. ಪದವೀಧರ. ಆದರೆ ತಾನು ಗಳಿಸಿದ್ದ ಜ್ಞಾನವನ್ನೆಲ್ಲ ಹೆಣ್ಣು ಮಕ್ಕಳಿಗೆ ಗಾಳ ಹಾಕೋಕೆ, ಚೀಟಿಂಗ್ ಮಾಡೋಕೆ ಬಳಸಿದ್ಧಾನೆ. ಹಲವಾರು ಮಹಿಳೆಯರ ಮೇಲಿನ ಲೈಂಗಿಕ ದೌರ್ಜನ್ಯ ಹಾಗೂ ಬ್ಲ್ಯಾಕ್‌ಮೇಲ್ ಪ್ರಕರಣದಲ್ಲಿ ಬಂಧಿತನಾಗಿದ್ಧಾನೆ.
ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಹನಿಯೂರು ಚಂದ್ರೇಗೌಡ, ತಾನು ಕನ್ನಡ ಅಸೋಸಿಯೇಟ್ ಪ್ರೊಫೆಸರ್, ಬುಡಕಟ್ಟು ಜನಪದ ಸಂಶೋಧಕ, ಕಿರುತೆರೆ ನಟ ಹಾಗೂ ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಲೇಖಕ ಎಂದು ಹೇಳಿಕೊಂಡು ಮತದಾರರ ಮುಂದೆ ತನ್ನನ್ನು ಪರಿಚಯಿಸಿಕೊಂಡಿದ್ದ. ಹಣಬಲ ಮತ್ತು ತೋಳ್ಬಲದ ವಿರುದ್ಧ ವಿದ್ಯಾಬಲಕ್ಕೆ ಮತ ನೀಡಿ ಎಂಬ ಘೋಷಣೆಯೊಂದಿಗೆ ಪ್ರಚಾರ ನಡೆಸಿದ್ದ ಆತ, ತನ್ನನ್ನು ನಿಮ್ಮ ನಾಯಿ ಎಂದು ಬಿಂಬಿಸುವ ರೀತಿಯ ಪೋಸ್ಟ್‌ಗಳ ಮೂಲಕವೂ ಜನರ ಗಮನ ಸೆಳೆಯಲು ಪ್ರಯತ್ನಿಸಿದ್ದನು. ಹಲವು ವಿವಾಹಿತ ಮಹಿಳೆಯರನ್ನು ತನ್ನ ಬಲೆಗೆ ಬೀಳಿಸಿ ದೈಹಿಕವಾಗಿ ದುರುಪಯೋಗಪಡಿಸಿಕೊಂಡು, ನಂತರ ಖಾಸಗಿ ಫೋಟೋ ಮತ್ತು ವಿಡಿಯೋಗಳ ಮೂಲಕ ಬೆದರಿಕೆ ಹಾಕುತ್ತಿದ್ದ ಎನ್ನುವುದು ಪೊಲೀಸ್ ತನಿಖೆಯಲ್ಲಿ ತಿಳಿದು ಬಂದಿರುವ ಮಾಹಿತಿ. ಆರೋಪಿ ಮಹಿಳೆಯರನ್ನು ಸೆಳೆಯಲು ವಿಭಿನ್ನ ರೀತಿಯ ನಕಲಿ ಗುರುತುಗಳನ್ನು ಬಳಸುತ್ತಿದ್ದ. ಸೀರಿಯಲ್ ಆರ್ಟಿಸ್ಟ್ , ಮೇಕಪ್ ಆರ್ಟಿಸ್ಟ್, ಪೊಲೀಸ್ ಅಧಿಕಾರಿ, ಆರ್‌ಟಿಐ ಕಾರ್ಯಕರ್ತ ಅಥವಾ ಲೆಕ್ಚರರ್.. ಹೀಗೆ ತರಹೇವಾರಿ ವೇಷ ಹಾಕ್ತಿದ್ದ.
ಒಂದು ಪ್ರಕರಣದಲ್ಲಿ, ಮೇಕಪ್ ಆರ್ಟಿಸ್ಟ್ ಆಗಿದ್ದ ವಿವಾಹಿತ ಮಹಿಳೆಯೊಬ್ಬಳಿಗೆ ತನ್ನನ್ನು ತಾನು ಲೆಕ್ಚರರ್ ಎಂದು ಹೇಳಿಕೊಂಡಿದ್ದ. ನಂಬಿಸಿದ್ದ. ದೈಹಿಕ ಸಂಪರ್ಕವನ್ನೂ ಮಾಡಿದ್ದ. ಆಗ ಪ್ರೈವೇಟ್ ಕ್ಷಣಗಳ ವಿಡಿಯೋ, ಫೋಟೋ ಇಟ್ಟುಕೊಂಡಿದ್ದ. ಬ್ಲಾಕ್ ಮೇಲ್ ಮಾಡಿದ್ದ. . “ನಾನು ಹೇಳಿದಂತೆ ಕೇಳದಿದ್ದರೆ ಈ ವಿಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುತ್ತೇನೆ” ಎಂದು ಬೆದರಿಕೆ ಹಾಕಿ, 5 ಲಕ್ಷ ರೂಪಾಯಿ ಹಣ ವಸೂಲಿ ಮಾಡಿದ್ದನಂತೆ. ಒಮ್ಮೆ ಆತನ ಮೊಬೈಲ್ ಫೋನ್ ಪರಿಶೀಲಿಸಿದ ವೇಳೆ, ದೂರುದಾರ ಮಹಿಳೆ ಶಾಕ್ ಆಗಿದ್ದಾಳೆ. ಆಕೆಗೆ ಮತ್ತಷ್ಟು ಆಘಾತಕಾರಿ ಸಂಗತಿಗಳು ಬೆಳಕಿಗೆ ಬಂದಿವೆ. ಆತನ ಮೊಬೈಲ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚು ಮಹಿಳೆಯರ ಖಾಸಗಿ ವಿಡಿಯೋಗಳು, ಫೋಟೋಗಳು ಹಾಗೂ ಚಾಟಿಂಗ್ ದಾಖಲೆಗಳು ಪತ್ತೆಯಾಗಿವೆ. ಇದರಿಂದ ಆತ ಹಲವು ಮಹಿಳೆಯರನ್ನು ಇದೇ ರೀತಿಯಲ್ಲಿ ಬಲೆಗೆ ಬೀಳಿಸಿ ವಂಚನೆ ನಡೆಸಿರುವುದು ಸಂತೃಸ್ತೆಗೆ ದೃಢಪಟ್ಟಿದೆ.
ಇದಕ್ಕೂ ಮೊದಲು ಚಂದ್ರೇಗೌಡ ವಿರುದ್ಧ ಬೆದರಿಕೆ ಪ್ರಕರಣವೂ ದಾಖಲಾಗಿತ್ತು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಆ ಪ್ರಕರಣದಲ್ಲಿ, ಯುವಜನ ಮತ್ತು ಕ್ರೀಡಾ ಇಲಾಖೆಯ ಎನ್‌ಎಸ್‌ಎಸ್ ಅಧಿಕಾರಿ ಪ್ರತಾಪ್ ಅವರಿಗೆ ಆತ ಬೆದರಿಕೆ ಹಾಕಿದ್ದ“ಆರ್‌ಟಿಐ ಅರ್ಜಿಗಳನ್ನು ಹಾಕಿ ನಂತರ ಬೆದರಿಕೆ ಹಾಕುವುದು ಅವನ ಚಟುವಟಿಕೆಯಾಗಿತ್ತು. ನಿನ್ನನ್ನು ಜೈಲಿಗೆ ಕಳುಹಿಸುತ್ತೇನೆ, ನಿನ್ನ ನೇಮಕಾತಿ ಸರಿಯಿಲ್ಲ, ಲೋಕಾಯುಕ್ತಕ್ಕೆ ದೂರು ಕೊಡುತ್ತೇನೆʼʼ ಎಂದು ಹೆದರಿಸುತ್ತಿದ್ದ.
ಒಟ್ಟಿನಲ್ಲಿ, ಹನಿಯೂರು ಚಂದ್ರೇಗೌಡ ಪ್ರಕರಣವು ಸಾಮಾನ್ಯ ಅಪರಾಧ ಪ್ರಕರಣಕ್ಕಿಂತ ಹೆಚ್ಚಾಗಿ ಸಂಘಟಿತ ವಂಚನೆ ಮತ್ತು ಬ್ಲ್ಯಾಕ್‌ಮೇಲ್ ಜಾಲದ ಸುಳಿವು ನೀಡುತ್ತಿರುವುದರಿಂದ, ಪೊಲೀಸರು ಈ ದಿಕ್ಕಿನಲ್ಲಿ ತೀವ್ರ ತನಿಖೆ ಮುಂದುವರಿಸಿದ್ದಾರೆ. ಇನ್ನು ಆರೋಪಿಯು ರಾಮನಗರ ಮಕ್ಕಳ ಆಯೋಗ ಸಮಿತಿಯ ಸದಸ್ಯನಾಗಿದ್ದಾನೆ ಎಂಬ ಮಾಹಿತಿ ಕೂಡ ಹೊರಬಂದಿದ್ದು, ನಕಲಿ ಐಡಿ ಕಾರ್ಡ್‌ಗಳನ್ನು ಬಳಸಿ ಹಲವರಿಗೆ ಬೆದರಿಕೆ ಹಾಕುತ್ತಿದ್ದನೆಂಬ ಆರೋಪವೂ ಇದೆ. ಈ ಎಲ್ಲಾ ಅಂಶಗಳನ್ನು ಪೊಲೀಸರು ಗಂಭೀರವಾಗಿ ಪರಿಗಣಿಸಿ ಹೆಚ್ಚಿನ ತನಿಖೆ ಮುಂದುವರಿಸಿದ್ದಾರೆ.



