ಒಂದು ಸಿನಿಮಾವನ್ನು ಪ್ರೇಕ್ಷಕರು ನೋಡಿ ಮೆಚ್ಚಿಕೊಳ್ಳೋದೇ ಬೇರೆ. ನಿರ್ದೇಶಕರು ನೋಡಿ ಮೆಚ್ಚಿಕೋಳ್ಳೋದೇ ಬೇರೆ. ಕಾಟೇರ ಚಿತ್ರವನ್ನು ನಿರ್ದೇಶಕರು ನೋಡಿ ಮೆಚ್ಚಿಕೊಂಡಿದ್ದಾರೆ. ಖ್ಯಾತ ನಿರ್ದೇಶಕರಾದ ಉಪೇಂದ್ರ, ಯೋಗರಾಜ್ ಭಟ್, ಶಶಾಂಕ್, ಎಸ್.ನಾರಾಯಣ್.. ಇಂತಹವರು ನಿರ್ದೇಶಕ ತರುಣ್ ಸುಧೀರ್ ಬೆನ್ನು ತಟ್ಟಿದ್ದಾರೆ. ಇಂತಾದ್ದೊಂದು ಸಬ್ಜೆಕ್ಟ್ ಹೇಳುತ್ತೇನೆಂದು ಮುಂದಾಗುವುದು, ಹಾಗೂ ಅದಕ್ಕೆ ದರ್ಶನ್ ಅವರಂತಹ ಸ್ಟಾರ್ ನಟ ಒಪ್ಪಿಕೊಳ್ಳೋದು ಎಲ್ಲವೂ ಅಚ್ಚರಿಯೇ ಎಂದಿರುವ ನಿರ್ದೇಶಕರೆಲ್ಲ, ತರುಣ್ ಸುಧೀರ್ ಅವರಿಗೆ ಶುಭ ಕೋರಿದ್ಧಾರೆ.
ಕಾಟೇರ ಚಿತ್ರದಲ್ಲಿ ನಟ ದರ್ಶನ್ ಅವರಿಗೆ ಬಿಲ್ಡಪ್ ಡೈಲಾಗುಗಳಿಲ್ಲ. ಆದರೆ ಕಾಟೇರ ಪಾತ್ರಕ್ಕೆ ಬಿಲ್ಡಪ್ ಇದೆ. ಜೊತೆಯಲ್ಲಿರುವ ಸಹನಟರು ದರ್ಶನ್ ಅವರನ್ನು ಹೊಗಳೋದಿಲ್ಲ. ಆದರೆ ಕಾಟೇರನನ್ನು ಹೊಗಳುತ್ತಾರೆ. ಮೆಚ್ಚಿಕೊಳ್ಳುತ್ತಾರೆ. ಇನ್ನು ಐಟಂ ಸಾಂಗು, ಲೆಕ್ಕಾಚಾರದಂತೆ ಐದೈದು ಫೈಟು.. ಇವೆಲ್ಲ ಇಲ್ಲ. ಆದರೆ ಕಥೆ, ಎಂತಹವನನ್ನೂ ಸಿನಿಮಾದೊಳಗೆ ಕೂತುಕೊಳ್ಳುವಂತೆ ಮಾಡುತ್ತದೆ. ನಿರ್ದೇಶಕರಿಗೆ ಇಷ್ಟವಾಗಿರುವುದೇ ಅದು.
ಹೀಗಾಗಿಯೇ ಕಾಟೇರ ಸೆಲೆಬ್ರಿಟಿ ಶೋ ಕೂಡಾ ಚಿತ್ರರಂಗದ ಗಮನ ಸೆಳೆದಿದೆ. ಬಹುತೇಕ ಚಿತ್ರರಂಗವೇ ಕಾಟೇರ ಸೆಲಬ್ರಿಟಿ ಶೋಗೆ ಹಾಜರಾಗಿತ್ತು. ಚಿತ್ರದ ನಿರ್ಮಾಪಕ ರಾಕ್ʻಲೈನ್ ವೆಂಕಟೇಶ್, ಹೀರೋ ದರ್ಶನ್ ಅವರೇ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡುವಷ್ಟರ ಮಟ್ಟಿಗೆ ಇಡೀ ಇಂಡಸ್ಟ್ರಿ ಆಗಮಿಸಿತ್ತು.
ಚಿತ್ರವನ್ನು ನೋಡಿ ಮೆಚ್ಚಿದವರ ಸಂಖ್ಯೆ ಕಡಿಮೆಯೇನಲ್ಲ. ರಮೇಶ್ ಅರವಿಂದ್, ಮೇಘನಾ ಗಾಂವ್ಕರ್, ವಸಿಷ್ಠ ಸಿಂಹ, ಹರಿಪ್ರಿಯಾ, ರಕ್ಷಿತಾ ಪ್ರೇಮ್, ಅಮೂಲ್ಯ, ನಿಶ್ವಿಕಾ ನಾಯ್ಡು, ದಿವ್ಯಾ ಉರುಡಗ..ಮೊದಲಾದವರೆಲ್ಲ ಚಿತ್ರವನ್ನು ನೋಡಿ ಮೆಚ್ಚಿದರು. ಹಿರಿಯ ಕಲಾವಿದರಾದ ಬಿ.ಸರೋಜಾ ದೇವಿ ಸಿನಿಮಾ ನೋಡಿ ಮೆಚ್ಚಿ ದರ್ಶನ್ ಅವರಿಗೆ ಆಶೀರ್ವದಿಸಿದ್ದು ಗಮನ ಸೆಳೆಯಿತು.
ಸಂಸದೆಯೂ ಆಗಿರುವ ಸುಮಲತಾ ಅಂಬರೀಷ್, ಚಿತ್ರದಲ್ಲಿ ನಟಿಸಿರುವ ಶೃತಿ ಮೊದಲಾದವರು ಸೆಲೆಬ್ರಿಟಿ ಶೋಗೆ ಬಂದಿದ್ದರು. ಕಲಾವಿದರಷ್ಟೇ ಅಲ್ಲ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಕೂಡಾ ಹುಬ್ಬಳ್ಳಿಯಲ್ಲಿ ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಶಾಸಕರಾದ ಮಹೇಶ್ ಟೆಂಗಿನಕಾಯಿ, ನಾಗರಾಜ್ ಛಬ್ಬಿ, ಸಂಸದ ಚಂದ್ರಶೇಖರ್.. ಹೀಗೆ ಹಲವರು ಸಿನಿಮಾ ನೋಡಿ ಶಹಬ್ಬಾಸ್ ಎಂದಿದ್ಧಾರೆ.



