ನವೆಂಬರ್ 10ಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾಗಿ 2 ವರ್ಷ ಕಂಪ್ಲೀಟ್ ಆಯ್ತು. ಈ 2 ವರ್ಷದಲ್ಲಿ ವಿಜಯೇಂದ್ರ ಪರ ವಿರುದ್ಧ ಅಭಿಪ್ರಾಯಗಳೇ ಮಾಧ್ಯಮಗಳಲ್ಲಿ ಸುದ್ದಿಯಾದವು. ಮೀಡಿಯಾ ಮತ್ತು ಸೋಷಿಯಲ್ ಮೀಡಿಯಾಗಳಲ್ಲಿ ವಿಜಯೇಂದ್ರ ವಿರುದ್ಧ ಒಂದು ದೊಡ್ಡ ಅಭಿಯಾನವೇ ನಡೆದು ಹೋಯ್ತು. ಆದರೆ.. ಇತ್ತೀಚೆಗೆ 2 ವರ್ಷ ಕಂಪ್ಲೀಟ್ ಆದ ಮೇಲೆ ವಿಜಯೇಂದ್ರ ಅವರ ವರಸೆ ಚೇಂಜ್ ಆಗಿದೆ. ವಿಜಯೇಂದ್ರ ಅವರ ಮೇಲಿದ್ದ ದೊಡ್ಡ ಆರೋಪಗಳಲ್ಲಿ ಒಂದು ಸಮಸ್ಯೆಯನ್ನು ಬಗೆಹಿರಿಸಿಕೊಳ್ಳುವಂತೆ ಹಿರಿಯರು ಹೇಳುತ್ತಲೇ ಇದ್ದರು. ವಿಜಯೇಂದ್ರ ತಿದ್ದಿಕೊಂಡಿರಲಿಲ್ಲ. ಈಗ ಅದನ್ನು ತಿದ್ದಿಕೊಂಡಂತೆ ಕಾಣುತ್ತಿದೆ.
ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ವಿಜಯೇಂದ್ರ ಕೆಲಸಲ ಮಾಡುವುದಿಲ್ಲ ಎನ್ನುವುದು ಅವರ ಮೇಲೆ ಕೆಲವು ಹಿರಿಯರಿಗೆ ಇರುವ ಸಿಟ್ಟಿಗೆ ಕಾರಣ. ತಮ್ಮದೇ ಆದ ಗುಂಪನ್ನು ಕಟ್ಟಿಕೊಂಡು ಕೆಲಸವನ್ನು ಮಾಡುತ್ತಿದ್ದಾರೆ. ಪ್ರಮುಖ ವಿಚಾರಗಳನ್ನು ಚರ್ಚಿಸದೇ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ. ಈ ಮುಂತಾದ ವಿಚಾರಗಳು ಅವರ ವಿರುದ್ದ ಕೇಳಿ ಬರುತ್ತಿದ್ದವು. ಈಗ, ಪಾರ್ಟಿಯಲ್ಲಿ ತಮ್ಮ ಮೇಲಿರುವ ಸಿಟ್ಟಿಗೆ ವಿಜಯೇಂದ್ರ ಪರಿಹಾರ ಕಂಡುಕೊಳ್ಳಲು ಆರಂಭಿಸಿದ್ದಾರೆ. ಜೊತೆಗೆ, ದೆಹಲಿಯಿಂದ ಅವರಿಗೆ ಶುಭ ಸುದ್ದಿ ಬರುವ ಸೂಚನೆ ಸಿಕ್ಕಿದೆ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.
ಭಿನ್ನರ ಅಂದರೆ ರೆಬಲ್ ಗುಂಪಿನಲ್ಲಿ ಗುರುತಿಸಿಕೊಂಡಿರುವ ಬಸವರಾಜ ಬೊಮ್ಮಾಯಿ, ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ವಿ.ಸುನಿಲ್ ಕುಮಾರ್ , ಪ್ರತಾಪ್ ಸಿಂಹ, ಸಂಸದ ಸುಧಾಕರ್.. ಮೊದಲಾದವರನ್ನು ಭೇಟಿ ಮಾಡಿದ್ದಾರೆ. ತಟಸ್ಥವಾಗಿರುವ ಗೋವಿಂದ ಕಾರಜೋಳ ಅವರಂತಹವರನ್ನೂ ಭೇಟಿ ಮಾಡಿದ್ದಾರೆ. ವಾಸ್ತವವಾಗಿ ಮಾರ್ಗದರ್ಶನ ಮಾಡುತ್ತಿರುವ ಡಿವಿ ಸದಾನಂದ ಗೌಡರನ್ನು ಮತ್ತೊಮ್ಮೆ ಭೇಟಿ ಮಾಡಿ ಸಹಾಯ ಕೇಳಿದ್ದಾರೆ. ವೈಯಕ್ತಿಕವಾಗಿ ಹೇಳಿ ಬೇಸತ್ತು, ಮಾಧ್ಯಮಗಳ ಎದುರೇ ವಿಜಯೇಂದ್ರ ಅವರನ್ನು ತರಾಟೆಗೆ ತೆಗೆದುಕೊಂಡಿದ್ದವರು ಸದಾನಂದ ಗೌಡ. ಮತ್ತೆ ಸಮಸ್ಯೆ ನಿವಾರಣೆಗೆ ಅವರೇ ಮುಂದಾಗಿದ್ದಾರಂತೆ.
ಅರವಿಂದ ಲಿಂಬಾವಳಿ, ಕುಮಾರ್ ಬಂಗಾರಪ್ಪ, ಬಿಪಿ ಹರೀಶ್.. ಮೊದಲಾದವರನ್ನು ಭೇಟಿ ಮಾಡಿ.. ಮಾತುಕತೆ ನಡೆಸಲು ಡಿವಿಎಸ್ ಮುಂದಾಗಿದ್ದಾರೆ ಎಂಬ ಮಾಹಿತಿ ಇದೆ. ಹಿರಿಯ ನಾಯಕರನ್ನು ಭೇಟಿಯಾಗುವುದರ ಜೊತೆಗೆ, ನಾಡಿನ ಮಠಾಧೀಶರನ್ನು ಮತ್ತು ಕಾರ್ಯಕರ್ತರನ್ನೂ ವಿಜಯೇಂದ್ರ ಭೇಟಿಯಾಗುತ್ತಿದ್ದಾರೆ. ಅಶೋಕ್, ಬೊಮ್ಮಾಯಿ, ಶ್ರೀರಾಮುಲು ಮುಂತಾದ ನಾಯಕರ ಜೊತೆ, ಜಂಟಿ ಪತ್ರಿಕಾಗೋಷ್ಠಿಯನ್ನೂ ವಿಜಯೇಂದ್ರ ನಡೆಸಿದ್ದಾರೆ. ಸಿಟಿ ರವಿ ಮತ್ತು ಬಸವರಾಜ ಬೊಮ್ಮಾಯಿಯವರನ್ನು ಪ್ರತ್ಯೇಕವಾಗಿ ಭೇಟಿ ಮಾತುಕತೆಯನ್ನು ನಡೆಸಿ, ಪಕ್ಷ ಸಂಘಟನೆಯ ವಿಚಾರದಲ್ಲಿ ಸಲಹೆಯನ್ನು ಪಡೆದುಕೊಂಡಿದ್ದಾರೆ.
ಸಾಮಾನ್ಯವಾಗಿ, ತಮ್ಮದೇ ಆದ ಮಾಹಿತಿ / ವರದಿಯನ್ನು ಆಧರಿಸಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಕೆಲಸವನ್ನು ಮಾಡುವುದು, ಕಮಲದ ಪಾರ್ಟಿಯವರಿಗೆ ಗೊತ್ತಿಲ್ಲದ ವಿಚಾರವೇನೂ ಅಲ್ಲ. ರಾಜ್ಯ ಬಿಜೆಪಿ ಘಟಕದ ಯಾವುದೇ ಶಿಫಾರಸನ್ನು ಬಿಜೆಪಿಯ ವರಿಷ್ಠರು ಒಪ್ಪಿಕೊಂಡ ಉದಾಹರಣೆಗಳು ಕಮ್ಮಿ. ಇದೀಗ ವಿಜಯೇಂದ್ರ ಅವರನ್ನು ದೆಹಲಿಗೆ ಕರೆಸಿಕೊಂಡಿರುವ ಹೈಕಮಾಂಡ್.. ಅವರನ್ನೇ ಹುದ್ದೆಯಲ್ಲಿ ಮುಂದುವರೆಸುವ ಸೂಚನೆ ನೀಡುವ ಸಾಧ್ಯತೆ ಇದೆ. ಅಮಿತ್ ಶಾ ಸುದ್ದಿ ಚಾನೆಲ್ಲುಗಳಲ್ಲಿ ಬರುವ ಸುದ್ದಿಗಳನ್ನಿಟ್ಟುಕೊಂಡು ಆಕ್ಷನ್ ತೆಗೆದುಕೊಳ್ಳುವವರಲ್ಲ. ಅವ ಗ್ರೌಂಡ್ ರಿಪೋರ್ಟ್ ಬೇರೆಯೇ ಇರುತ್ತದೆ.



