ರಾಜ್ಯದ ಸಿಎಂ ಆಗಿ ಅಧಿಕಾರದಿಂದ ಕೆಳಗಿಳಿದಿರುವ ಸಿದ್ದರಾಮಯ್ಯ ತಮ್ಮ ಆಪ್ತರಿಂದಲೇ ಮೋಸ ಹೋದರಾ ಎಂಬ ಚರ್ಚೆ ಶುರುವಾಗಿದೆ. ಅದರಲ್ಲಿಯೂ ಸತೀಶ್ ಜಾರಕಿಹೊಳಿ, ಸಿದ್ದರಾಮಯ್ಯ ಅವರ ವಿರುದ್ಧ 37 ಶಾಸಕರು ಸಹಿ ಸಂಗ್ರಹ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ಸ್ವತಃ ಸತೀಶ್ ಜಾರಕಿಹೊಳಿ ನಿರಾಕರಿಸಿದ್ದರೂ, ಇದು ವಿವಾದವಾಗುತ್ತಿರುವುದಕ್ಕೆ ಬೇರೆ ಬೇರೆ ಕಾರಣಗಳಿವೆ.
ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಸಿದ್ದರಾಮಯ್ಯ ಅವರ ವಿರುದ್ದ 37 ಶಾಸಕರಿಂದ ಸಹಿ ಸಂಗ್ರಹ ಮಾಡಲಾಗಿದೆ ಎಂಬ ಗಂಭೀರ ಆರೋಪ ಕೇಳಿ ಬಂದಿದ್ದು ಸಿದ್ದು ಬಣದ ಕೆಲವು ಶಾಸಕರಿಂದಲೇ ಎನ್ನುವುದು ವಿಶೇಷ. ಅದಕ್ಕೆ ತಕ್ಕಂತೆ ಸತೀಶ್ ʻಅಹಿಂದ ಧ್ವಜʼ ಹಿಡಿಯುವ ಸೂಚನೆ ಕೊಟ್ಟ ನಂತರ ಇದ್ದರೂ ಇರಬಹುದು ಎಂದುಕೊಂಡವರೇ ಹೆಚ್ಚು. ಆದರೆ ಇದನ್ನೆಲ್ಲ ಸಿದ್ದರಾಮಯ್ಯ ಆಪ್ತರಲ್ಲಿ ಒಬ್ಬರಾಗಿರುವ ಸತೀಶ್ ಜಾರಕಿಹೊಳಿ ನಿರಾಕರಿಸಿದ್ಧಾರೆ.
“ಸಿದ್ದರಾಮಯ್ಯ ವಿರುದ್ದ ಸಹಿ ಸಂಗ್ರಹ ಮಾಡಲಾಗಿದೆ ಎಂಬುದೆಲ್ಲಾ ಸುಳ್ಳು. ಆ ಚರ್ಚೆ ಬೇಡ. ಯಾರೋ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದಕ್ಕೆ ಮಹತ್ವ ಕೊಡಬೇಕಾಗಿಲ್ಲ. ಯಾವ ಸಹಿಯೂ ಹೈಕಮಾಂಡ್‌ಗೆ ಹೋಗಿಲ್ಲ’ ಎಂದಿದ್ದಾರೆ ಸತೀಶ್ ಜಾರಕಿಹೊಳಿ.
37 ಶಾಸಕರು ಸಿದ್ದರಾಮಯ್ಯ ವಿರುದ್ದ ಸಹಿ ಹಾಕಿದ್ರೆ 100 ಮಂದಿ ಉಳಿದವರು ಎಲ್ಲಿಗೆ ಹೋದರು.. ಎನ್ನುವುದು ಸತೀಶ್ ಜಾರಕಿಹೊಳಿ ಪ್ರಶ್ನೆ.
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರು ಕೆಳಗಿಳಿಯಲೇಬೇಕಿತ್ತು. ನಾಯಕತ್ವ ವಿಚಾರ ದೆಹಲಿಯಲ್ಲಿ ಎಲ್ಲ ಮಾತುಕತೆ ಆಗಿರುವುದು. ಅವರು ಮಾತನಾಡುವಾಗ ಬೆಂಗಳೂರಲ್ಲಿ ಏನೂ ಆಗಿಲ್ಲ. ನಮ್ಮನ್ನು ಯಾರೂ ಆಗಲೂ ಕೇಳಿರಲಿಲ್ಲ. ಎಲ್ಲ ಅವರೇ ನಿರ್ಧಾರ ಮಾಡಿಕೊಂಡ ಪ್ರಕಾರ ಸಿದ್ದರಾಮಯ್ಯ ಸ್ಟೆಪ್ ಡೌನ್ ಆಗಿದ್ದಾರೆ. ಇನ್ನೆರಡು ವರ್ಷದ ನಂತರವಾದರೂ ಸಿದ್ದರಾಮಯ್ಯ ಕೆಳಗೆ ಇಳಿಯಲೇಬೇಕಿತ್ತಲ್ವಾ ಎಂದಿದ್ದಾರೆ ಸತೀಶ್.
ದೆಹಲಿ ಒಪ್ಪಂದದಂತೆ ಸಿದ್ದರಾಮಯ್ಯ ಅವರ ವಿರುದ್ಧ ಶಾಸಕರು ಸಹಿ ಸಂಗ್ರಹಿಸಿದ್ದಾರೆಂಬ ವದಂತಿಗಳು ಹರಡಿದ್ದವು. ಇದನ್ನು ಸ್ಪಷ್ಟವಾಗಿ ನಿರಾಕರಿಸಿರುವ ಸತೀಶ್ ಜಾರಕಿಹೊಳಿ ಮುಂದಿನ ಅಹಿಂದ ನಾಯಕತ್ವ ವಹಿಸಿಕೊಳ್ಳುವುದಾಗಿ ಹೇಳಿದ್ಧಾರೆ. ಅಹಿಂದದಲ್ಲಿ 500ಕ್ಕೂ ಹೆಚ್ಚು ಜಾತಿಗಳಿವೆ. ಯಾರಾದರೊಬ್ಬರೂ ನಾಯಕತ್ವ ವಹಿಸಿಕೊಳ್ಳಲೇಬೇಕಲ್ವಾ.. ಹೊಸ ಅಹಿಂದ ನಾಯಕ ಉದಯಿಸಲೇಬೇಕು ಎಂದು ಅಭಿಪ್ರಾಯ ಪಟ್ಟಿದ್ದಾರೆ ಸತೀಶ್.
ಆರೋಪ ಉದ್ಭವವಾಗಿದ್ದು ಎಲ್ಲಿ..?
ಸಾಮಾಜಿಕ ಜಾಲತಾಣಗಳಲ್ಲಿನ ಕೆಲವು ನಿರ್ದಿಷ್ಟ ರಾಜಕೀಯ ಖಾತೆಗಳು ಹಾಗೂ ಪೋಸ್ಟ್‌ಗಳ ಮೂಲಕ ಇದು ಸಾರ್ವಜನಿಕವಾಗಿ ಚರ್ಚೆಗೆ ಬಂದ ವಿವಾದ, ಮಾಧ್ಯಮಗಳಿಗೂ ಎಂಟ್ರಿ ಕೊಟ್ಟಿತು. ಟಿವಿ ಮಾಧ್ಯಮಗಳಲ್ಲಿ ಈ ಬಗ್ಗೆ ಚರ್ಚೆಗಳಾದವು. ಸಿದ್ದರಾಮಯ್ಯ ಅವರ ಅತ್ಯಂತ ಆಪ್ತರಾಗಿದ್ದ ಸಚಿವ ಸತೀಶ್ ಜಾರಕಿಹೊಳಿ ಅವರೇ ಹೈಕಮಾಂಡ್ ಮಟ್ಟದಲ್ಲಿ ನಾಯಕತ್ವ ಬದಲಾವಣೆ ಮಾಡಲು ಹಾಗೂ ಸಿದ್ದರಾಮಯ್ಯ ಅವರನ್ನು ಕೆಳಗಿಳಿಸಲು 37 ಶಾಸಕರ ಸಹಿ ಸಂಗ್ರಹ ಮಾಡಿ, ಆ ಪಟ್ಟಿಯನ್ನು ನೇರವಾಗಿ ಡಿ.ಕೆ. ಶಿವಕುಮಾರ್ ಅವರಿಗೆ ಹಸ್ತಾಂತರಿಸುವ ಮೂಲಕ ಬೆನ್ನಿಗೆ ಚೂರಿ ಹಾಕಿದ್ದಾರೆ (Backstab/Coup) ಎಂದು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್‌ಗಳನ್ನು ಹಾಕಲಾಗಿತ್ತು. ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಿದ ತಕ್ಷಣವೇ ಸತೀಶ್ ಜಾರಕಿಹೊಳಿ ಅವರು ತಮ್ಮ ಸರ್ಕಾರಿ ನಿವಾಸದ ನಾಮಫಲಕವನ್ನು ಮುಚ್ಚಿ, ಸರ್ಕಾರಿ ಕಾರನ್ನು ಬಿಟ್ಟು ಖಾಸಗಿ ಕಾರು ಬಳಸಲು ಆರಂಭಿಸಿದ್ದರು. ಇದೆಲ್ಲದರ ಜೊತೆಗೆ ಸತೀಶ್ ಜಾರಕಿಹೊಳಿ ಅವರಿಗೆ ದೆಹಲಿಗೆ ಹೋಗುವ ವೇಳೆ ಫೋನ್ ಬಂದಿದ್ದು ಕಟ್ಟ ಕಡೆಯ ಕ್ಷಣದಲ್ಲಿ. ಇಂತಹ ಬೆಳವಣಿಗಳಿಂದ ಈ ವಿವಾದ ಹಬ್ಬಿತು. ಆದರೆ ಬೆಂಕಿ ಇಲ್ಲದೆ ಹೊಗೆ ಆಡುವುದಿಲ್ಲ.



