ಸತೀಶ್ ಜಾರಕಿಹೊಳಿ. ಪ್ರಭಾವಿ ಸಚಿವರಷ್ಟೇ ಅಲ್ಲ, ಕೆಪಿಸಿಸಿ ಕಾರ್ಯಾಧ್ಯಕ್ಷರೂ ಹೌದು. ವಾಲ್ಮೀಕಿ ಸಮುದಾಯಕ್ಕೆ ಸೇರಿರುವ ಸತೀಶ್ ಜಾರಕಿಹೊಳಿ,(Satish Jarakiholi) ಜಾತಿ ವಿಚಾರದಲ್ಲೂ ಪ್ರಮುಖರು. ಸಿದ್ದರಾಮಯ್ಯ ಜೊತೆ ಆಪ್ತತೆ ಕಾಯ್ದುಕೊಂಡಿರುವ ಸತೀಶ್ ಜಾರಕಿಹೊಳಿ, ಡಿಕೆ ಶಿವಕುಮಾರ್(DK.Shivakumar) ಜೊತೆಯಲ್ಲೂ ಸ್ನೇಹ ಇಟ್ಟುಕೊಂಡವರು. ಅಣ್ಣ ರಮೇಶ್ ಜಾರಕಿಹೊಳಿ ಮತ್ತು ಡಿಕೆಶಿ ಮಧ್ಯೆ ಏನೇ ಇದ್ದರೂ, ಡಿಕೆ ಜೊತೆ ಸಂಬಂಧ ಚೆನ್ನಾಗಿಯೇ ಇದೆ. ರಾಜಕೀಯವಾಗಿ ಅಣ್ಣನನ್ನು ವಿರೋಧಿಸಿದರೂ, ಕುಟುಂಬದ ವಿಷಯಕ್ಕೆ ಬಂದರೆ ಅಣ್ಣ ತಮ್ಮಂದಿರು ಎಲ್ಲ ಒಂದೇ. ಹೀಗಿರುವಾಗ ಸತೀಶ್ ಜಾರಕಿಹೊಳಿ ಬಂಡಾಯವಂತೆ ಅನ್ನೋ ಸುದ್ದಿ ಬಂದಾಗ ಎರಡೆರಡು ಸಾರಿ ಚೆಕ್ ಮಾಡಿಕೊಳ್ಳಬೇಕು ಎನಿಸಿದ್ದು ಸುಳ್ಳಲ್ಲ.
ಆಗಿದ್ದಾದರೂ ಏನು?
ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿ ತಮ್ಮ ಉಸ್ತುವಾರಿ ಜಿಲ್ಲಾ ಶಾಸಕರೊಂದಿಗೆ ತೆರಳಲು ಚಿಂತನೆ ನಡೆಸಿದ್ದ ಸತೀಶ್ ಜಾರಕಿಹೊಳಿ ಮೈಸೂರು ದಸರಾ ನೆಪದಲ್ಲಿ 20ಕ್ಕೂ ಅಧಿಕ ಶಾಸಕರೊಂದಿಗೆ ಮೈಸೂರಿಗೆ ತೆರಳಲು ಸಿದ್ದತೆ ನಡೆಸಿದ್ದರು. ಎಲ್ಲ ಶಾಸಕರನ್ನು ಒಗ್ಗೂಡಿಸಿಕೊಂಡು ಮೈಸೂರು ದಸರಾಗೆ ತೆರಳಲು ತಯಾರಿ ನಡೆಸಿದ್ದರು. ಕರೆದೊಯ್ಯಲು ಬಸ್ ಕೂಡ ಸಿದ್ಧವಾಗಿತ್ತು.ಆದರೆ ಕೊನೆ ಕ್ಷಣದಲ್ಲಿ ರದ್ದಾಯಿತು. ಏಕೆಂದರೆ ತಕ್ಷಣ ಹೈಕಮಾಂಡ್ ಅಲರ್ಟ್ ಆಯಿತು. ಈ ಸಮಯದಲ್ಲಿ 20ಕ್ಕೂ ಹೆಚ್ಚು ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವುದು ಬೇಡ, ಕೂಡಲೇ ಕ್ಯಾನ್ಸಲ್ ಮಾಡುವಂತೆ ಹೈಕಮಾಂಡ್ ಸೂಚನೆ ಕೊಟ್ಟ ಕಾರಣ ಎಲ್ಲವೂ ಸ್ಥಗಿತವಾಯಿತು. ಈ ಸಮಯದಲ್ಲಿ ಬಸ್ ನಲ್ಲಿ ಶಾಸಕರನ್ನು ಒಗ್ಗೂಡಿಸಿಕೊಂಡು ಹೊರಟರೇ ವಿಪಕ್ಷಗಳಿಗೆ ನಾವೇ ಆಹಾರ ಕೊಟ್ಟಂತಾಗಲಿದೆ ಎಂದು ಹೈಕಮಾಂಡ್ ನಾಯಕರಿಂದ ಸತೀಶ್ ಜಾರಕಿಹೊಳಿಗೆ ಸೂಚನೆ. ಹೈಕಮಾಂಡ್ ಸೂಚನೆ ಕೊಟ್ಟ ಹಿನ್ನೆಲೆ ಶಾಸಕರನ್ನು ಒಗ್ಗೂಡಿಸಿಕೊಂಡು ಹೋಗುವ ವಿಚಾರ ಕೈಬಿಟ್ಟಿದ್ದಾರೆ ಸಚಿವ ಸತೀಶ್ ಜಾರಕಿಹೊಳಿ.
ಬಂಡಾಯ ಅಲ್ಲ ಎಂದ ಸತೀಶ್ ಜಾರಕಿಹೊಳಿ : ನಾಡಹಬ್ಬ ದಸರಾ (dasara) ಹಬ್ಬ ಹಿನ್ನೆಲೆ ಮೈಸೂರಿಗೆ ಕೆಲವರು ಹೋಗಬೇಕು ಅಂತ ಮಾತನಾಡಿದ್ದೆವು. ದಸರಾ ನೋಡೋಕೆ ಬನ್ನಿ ಅಂತ ಅಲ್ಲಿನ ಶಾಸಕರೂ ಹೇಳ್ತಿದ್ದರು. ಹೀಗಾಗಿ ಕೆಲವು ನಮ್ಮ ಲೈಕ್ ಮೈಂಡೆಡ್ ಶಾಸಕರು ಒಟ್ಟಿಗೆ ಸೇರಿ ಅಲ್ಲಿಗೆ ಹೋಗಬೇಕು ಅಂದುಕೊಂಡಿದ್ವಿ. ಅಲ್ಲದೆ ಕೆಲವು ಶಾಸಕರು ನಮ್ಮನ್ನು ಎಲ್ಲಾದ್ರೂ ಟ್ರಿಪ್ ಕರೆದುಕೊಂಡು ಹೋಗಿ ಅಂತಾ ಕೇಳಿದ್ರು. ಸಮಾನ ಮನಸ್ಕರ ಸೇರಿ ಟ್ರಿಪ್ ಹೋಗಬೇಕು ಅಂತಾ ನಮಗೂ ಇತ್ತು. ಈಗ ದಸರಾ ಹಬ್ಬ ಬೇಡ ಅಂದಿದ್ದೇವೆ. ಮುಂದೆ ಹೋಗಬೇಕು ಅಂತಾದ್ರೆ ಸಿಎಂ ಹಾಗೂ ಅಧ್ಯಕ್ಷರ ಗಮನಕ್ಕೆ ತಂದು ಹೋಗುತ್ತೇವೆ. ಒಂದೇ ಪಕ್ಷ, ಬಣ ಗಿಣ ಅಂತೆಲ್ಲ ಏನಿಲ್ಲ ಎಂದಿದ್ದಾರೆ.



