ರಾಜಕೀಯ ಎಂಬುದು ತಂದೆ ಮಕ್ಕಳನ್ನೂ ದೂರ ಮಾಡುತ್ತದೆ ಎನ್ನುವುದು ನಂಬಿಕೆ. ಅದಕ್ಕೆ ತಕ್ಕಂತೆ ಚಾಮುಂಡೇಶ್ವರಿಯಲ್ಲೂ ಒಂದು ಘಟನೆ ಆಗಿದೆ. ಬೆಳವಣಿಗೆ ನೋಡುತ್ತಿದ್ದರೆ ಜಿಟಿ ದೇವೇಗೌಡ ವಿರುದ್ಧವೇ ಅವರ ಮಗ ಹರೀಶ್ ಗೌಡ ನಿಂತಿದ್ಧಾರಾ ಎಂಬ ಅನುಮಾನ ಕಾಡದೇ ಇರದು. ಅದಕ್ಕೆ ಕಾರಣವೂ ಇದೆ.
ಜೆಡಿಎಸ್‌ನಿಂದ ಅಂತರ ಕಾಯ್ದುಕೊಂಡಿದ್ದ ಕ್ಷೇತ್ರದ ಹಾಲಿ ಶಾಸಕ ಜಿ.ಟಿ.ದೇವೇಗೌಡ ಅವರ ವಿರುದ್ಧ ಸ್ವಪಕ್ಷೀಯರೇ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸದೆ, ಅವರ ಪುತ್ರ ಜಿ.ಡಿ.ಹರೀಶ್‌ಗೌಡ ನೇತೃತ್ವದಲ್ಲಿ ‘ಜನರೊಂದಿಗೆ ಜನತಾದಳ’ ಆಯೋಜಿಸುವ ಮೂಲಕ ತೊಡೆ ತಟ್ಟಿದ್ದಾರೆ. ಜಿ.ಟಿ.ದೇವೇಗೌಡರು ಜೆಡಿಎಸ್ ಜೊತೆ ಅಂತರ ಕಾಯ್ದುಕೊಂಡು ಸ್ವಲ್ಪಮಟ್ಟಿಗೆ ಸಿದ್ದರಾಮಯ್ಯ ಅವರಿಗೆ ಹತ್ತಿರವಾದಾಗಲೇ ತಂದೆ, ಮಗನ ನಡುವೆ ಮನಸ್ತಾಪ ಆರಂಭವಾಗಿತ್ತು. ಈಗ ತಂದೆಯ ಕ್ಷೇತ್ರದಲ್ಲಿ ಮಗ ತಂದೆಯನ್ನೇ ಹೊರಗಿಟ್ಟು ಸಮಾವೇಶ ಮಾಡಿದ್ಧಾರೆ.
ಮೊನ್ನೆಯಷ್ಟೇ ಜಿ.ಟಿ.ದೇವೇಗೌಡರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರನ್ನು ಭೇಟಿಯಾಗಿ ಬಂದಿದ್ದರು. ಇದರ ಬೆನ್ನಲ್ಲೇ ನಡೆದ ಈ ಕಾರ್ಯಕ್ರಮ ಉದ್ಘಾಟಿಸಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಹೇಳಿಕೆಗಳು ಯಾವುದೇ ಕಾರಣಕ್ಕೂ ಮತ್ತೆ ಜಿ.ಟಿ.ದೇವೇಗೌಡರಿಗೆ ಮಣೆ ಹಾಕುವುದಿಲ್ಲ ಎಂಬ ಸಂದೇಶ ನೀಡಿವೆ.
ಇನ್ನು ಹರೀಶ್ ಗೌಡ ಕೂಡಾ ವೇದಿಕೆಯಲ್ಲಿಯೇ ಗುಡುಗಿದ್ಧಾರೆ. ಕಳೆದ 3 ಬಾರಿಯ ಗೆಲುವು ಪಕ್ಷದ್ದೇ ಹೊರತು ವ್ಯಕ್ತಿಯ ಗೆಲುವು ಅಲ್ಲ ಎನ್ನುವ ಮೂಲಕ ತಂದೆಗೇ ಚಾಲೆಂಜ್ ಹಾಕುವಂತೆ ಮಾತನಾಡಿದ್ಧಾರೆ. 2028ರ ಚುನಾವಣೆಯಲ್ಲಿಯೂ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಿಮ್ಮ ಆಶೀರ್ವಾದದಿಂದ ಜೆಡಿಎಸ್ ಅಧಿಕಾರಕ್ಕೆ ಬರಲಿದೆ. ಜಿ.ಡಿ.ಹರೀಶ್ ಗೌಡ ಅವರು ಪಕ್ಷ ಸಂಘಟಿಸುತ್ತಿದ್ದಾರೆ. ಸಾ.ರಾ.ಮಹೇಶ್ ಮಾರ್ಗದರ್ಶನದಲ್ಲಿ ಗೊಂದಲದ ಅಗತ್ಯವಿಲ್ಲ ಎಂದು ಕುಮಾರಸ್ವಾಮಿಯವರೇ ಹೇಳಿದ್ಧಾರೆ.
ಇನ್ನು ಸಾರಾ ಮಹೇಶ್ ಚಾಮುಂಡೇಶ್ವರಿ ಕ್ಷೇತ್ರದ ಬಗ್ಗೆ ಕುಮಾರಸ್ವಾಮಿ ಅವರಿಗೆ ಅಪಾರ ಗೌರವ, ಪ್ರೀತಿ ಇದೆ. ಯಾರು ಇರಲಿ, ಇಲ್ಲದಿರಲಿ ಪಕ್ಷದ ಕಾರ್ಯಕರ್ತರು ಮತದಾರರು ಇದ್ದಾರೆ ಎನ್ನುವ ಮೂಲಕ ಜಿಟಿಡಿಗೆ ಟಾಂಗ್ ಕೊಟ್ಟಿದ್ಧಾರೆ. ಒಟ್ಟಾರೆ ಮನೆಗೆ ಸೀಮಿತವಾಗಿದ್ದ ತಂದೆ-ಮಗನ ನಡುವಿನ ವಿರಸಕ್ಕೆ ಚಾಮುಂಡೇಶ್ವರಿ ಕ್ಷೇತ್ರ ವೇದಿಕೆ ಆಗಿದೆ.
ಇತ್ತೀಚೆಗೆ ದೇವೇಗೌಡರನ್ನು ಭೇಟಿ ಮಾಡಿದ್ದ ಜಿಟಿ ದೇವೇಗೌಡ ದೇವೇಗೌಡರು ಆತ್ಮೀಯವಾಗಿ ಮಾತಾಡಿದ್ರು. ಯಾವುದೇ ರಾಜಕೀಯ ವಿಚಾರ ಚರ್ಚೆ ಮಾಡಿಲ್ಲ. ನಾನು ಜೆಡಿಎಸ್‌ನಲ್ಲೇ ಇದ್ದೀನಿ. ಎಲ್ಲೂ ಹೋಗಿಲ್ಲ. 2028 ಚುನಾವಣೆಯಲ್ಲಿ ನಾನು ಜೆಡಿಎಸ್‌ನಿಂದಲೇ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತೀನಿ ಎಂದು ಹೇಳಿದ್ದರು.
ಅಷ್ಟೇ ಅಲ್ಲ ಯಾವುದೇ ಕಾರ್ಯಕ್ರಮಕ್ಕೆ ನನಗೆ ಕುಮಾರಸ್ವಾಮಿ, ನಿಖಿಲ್ ಆಗಲಿ, ಪದಾಧಿಕಾರಿಗಳು ಆಗಲಿ ಯಾರು ಕರೆದಿಲ್ಲ. ಅದಕ್ಕೆ ನಾನು ಹೋಗಿಲ್ಲ. ಮುಂದೆ ಕರೆದರೆ ನೋಡ್ತೀನಿ ಎಂದೂ ಹೇಳಿದ್ದರು. ಇದೆಲ್ಲ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಸಭೆ ನಡೆಯುವ ಮೊದಲೇ ನಡೆದಿತ್ತು. ಅದಾದ ನಂತರವೂ ಕುಮಾರಸ್ವಾಮಿ ಅಥವಾ ಹರೀಶ್ ಗೌಡ ಅವರು ಜಿಟಿ ದೇವೇಗೌಡರನ್ನು ಮಾತನಾಡಿಸಿಲ್ಲ. ಅಲ್ಲಿಗೆ ಸಂದೇಶ ಕ್ಲಿಯರ್ ಆಗಿದೆ. ಜಿಟಿ ದೇವೇಗೌಡ ಪಕ್ಷ ಬಿಟ್ಟು ಹೋಗಬಹುದು.



