ಬಿಜೆಪಿ ಶಾಶಕ (ವಿಧಾನ ಪರಿಷತ್ ಸದಸ್ಯ) ಶಶೀಲ್ ನಮೋಶಿ ಅವರ ವಿರುದ್ಧ ಸಹೋದರನಿಗೇ ಆಸ್ತಿ, ಮನೆ ವಂಚನೆ ಮಾಡಿದ್ಧಾರೆ ಎಂದು ಆರೋಪ ಕೇಳಿ ಬಂದಿದೆ. ಸಹೋದರ ಅನಿಲ್ ನಮೋಶಿ ಕುಟುಂಬ, ಮನೆಯ ಮುಂಭಾಗದಲ್ಲೇ ಪಾತ್ರೆ ಪಡಗ ಇಟ್ಟುಕೊಂಡು ಪತ್ನಿಯೊಂದಿಗೆ ಪ್ರತಿಭಟನೆ ನಡೆಸಿದ್ದಾರೆ. ಬೀದಿಯಲ್ಲೇ.
ಹೈದರಾಬಾದ್‌ನಲ್ಲಿ ಉದ್ಯೋಗದಲ್ಲಿದ್ದ ಅನಿಲ್ ನಮೋಶಿ ಡಾಕ್ಟರ್. ಇತ್ತೀಚೆಗೆ ರಿಟೈರ್ ಆಗಿದ್ದರು. ನಿವೃತ್ತಿ ಹೊಂದಿದ್ದ ಹಿನ್ನೆಲೆ ಕಲಬುರ್ಗಿಗೆ ವಾಪಸ್ ಬಂದಿದ್ದರು. ಆದರೆ, ಮನೆಗೆ ಪ್ರವೇಶ ನಿರಾಕರಿಸಿದ ಹಿನ್ನೆಲೆಯಲ್ಲಿ ಕಲಬುರಗಿಯ ಆನಂದ ನಗರದ ಶಶೀಲ್ ನಮೋಶಿ ವಾಸವಿರುವ ಮನೆ ಮುಂಭಾಗದಲ್ಲೇ ವಸ್ತುಗಳನ್ನು ಇಟ್ಟುಕೊಂಡು ಅನಿಲ್ ನಮೋಶಿ ಕುಟುಂಬ ಕಾಲ ಕಳೆದಿದೆ.
ತಮ್ಮ ಅನಿಲ್ ನಮೋಶಿ ವಾದ ಏನು..?
ಶಶೀಲ್ ನಮೋಶಿ ವಾಸವಾಗಿರುವ ಮನೆ ನಮಗೆ ಸೇರಿದ್ದು. ದಾಖಲೆ ಪತ್ರಗಳೆಲ್ಲಾ ನನ್ನ ಮತ್ತು ನನ್ನ ತಾಯಿಯ ಹೆಸರಿನಲ್ಲಿ ಇದೆ. ಶಶೀಲ್ ಪಾಲಿಗೆ ಬಂದಿದ್ದ ಸೈಟ್‌ನ್ನು ಮೊದಲೇ ಮಾರಾಟ ಮಾಡಿದ್ದ. ಬಳಿಕ ನನ್ನ ಪಾಲಿಗೆ ಬಂದಿದ್ದ ನಿವೇಶನದಲ್ಲೇ ಮನೆ ಕಟ್ಟಿದೆವು. ಅವನು ಈಗ ಇರುವುದು ನನ್ನದೇ ಮನೆ. ಮನೆಯನ್ನು ಶಶಿಲ್ ಒಬ್ಬನೇ ಕಟ್ಟಿಲ್ಲ. ಇಬ್ಬರೂ ಸೇರಿ ಹಣ ಹಾಕಿಯೇ ಮನೆ ಕಟ್ಟಿದ್ದೇವೆ. ಆದರೆ ಈಗ ನಮ್ಮ ಮನೆಗೇ ನಮ್ಮನ್ನು ಬಿಟ್ಟುಕೊಳ್ಳುತ್ತಿಲ್ಲ ಎನ್ನುವುದು ಶಶಿಲ್ ನಮೋಶಿ ಅವರ ತಮ್ಮ ಅನಿಲ್ ನಮೋಶಿ ವಾದ.
ಶಶಿಲ್ ನಮೋಶಿ ವಾದವೇನು..?
ಆಸ್ತಿಯಲ್ಲಿ ಅರ್ಧ ಭಾಗ ನನ್ನದು ಹಾಗೂ ಉಳಿದ ಅರ್ಧ ನನ್ನ ಸಹೋದರನದ್ದು. ಈ ಹಿಂದೆ ನಮ್ಮ ಸಹೋದರ ನನ್ನನ್ನು ಮನೆಯಿಂದ ಹೊರಹಾಕಿದ್ದರು. ನಂತರ ನನಗೆ ಮನೆ ಇರಲಿಲ್ಲ. ಹೀಗಾಗಿ ಅವರ ಅನುಮತಿ ಮೇರೆಗೆ ಸೈಟಿನಲ್ಲಿ ಮನೆ ಕಟ್ಟಿದ್ದೆ. ಕಟ್ಟಡ ನಿರ್ಮಾಣದ ಎಲ್ಲಾ ಖರ್ಚು ನಾನೇ ಭರಿಸಿದ್ದೆ. ನನ್ನ ಹೆಸರಿನಲ್ಲೇ ಇ-ಖಾತಾ ಇದೆ. 27 ವರ್ಷದಿಂದ ನಾನು ಇದೇ ಮನೆಯಲ್ಲಿ ಇದ್ದೇನೆ. ಈಗ ಬಂದು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರು ಕೋರ್ಟ್‌ಗೆ ಹೋಗಲಿ, ನ್ಯಾಯಾಲಯ ಏನು ತೀರ್ಪು ನೀಡುತ್ತದೋ ಅದಕ್ಕೆ ನಾನು ತಲೆಬಾಗುವೆ ಎಂದು ತಿಳಿಸಿದ್ದಾರೆ.
ಕುಟುಂಬದ ಸದಸ್ಯರು ನ್ಯಾಯಾಲಯದ ಮೆಟ್ಟಿಲೇರಿದ್ದು, ಆಸ್ತಿಯಲ್ಲಿ ಸಮಾನ ಪಾಲು ನೀಡುತ್ತಿಲ್ಲ ಎಂಬುದು ಒಂದು ಕಡೆಯ ವಾದವಾದರೆ, ಆಸ್ತಿ ಹಂಚಿಕೆಯು ಈಗಾಗಲೇ ನಿಯಮಾನುಸಾರ ನಡೆದಿದೆ ಎಂಬುದು ಶಶಿಲ್ ನಮೋಷಿ ಅವರ ಸಮರ್ಥನೆ.
ಕುಟುಂಬದ ಗೌರವ ಮತ್ತು ರಾಜಕೀಯ ವರ್ಚಸ್ಸಿಗೆ ಧಕ್ಕೆಯಾಗದಂತೆ ತಡೆಯಲು ಹಿರಿಯರು ಮತ್ತು ಆಪ್ತರು ಹಲವು ಬಾರಿ ಸಂಧಾನದ ಮಾತುಕತೆಗಳನ್ನು ನಡೆಸಿದ್ದಾರೆ. ಆದರೆ, ಆಸ್ತಿಯ ಮೌಲ್ಯ ಮತ್ತು ಹಕ್ಕುಗಳ ಕುರಿತಾದ ಪಟ್ಟುಗಳಿಂದಾಗಿ ಈವರೆಗೂ ಯಾವುದೇ ಶಾಶ್ವತ ಪರಿಹಾರ ಲಭ್ಯವಾಗಿಲ್ಲ.
ಒಟ್ಟಾರೆಯಾಗಿ, ಶಶಿಲ್ ನಮೋಷಿ ಅವರ ಕುಟುಂಬದ ಈ ಆಸ್ತಿ ಬಿಕ್ಕಟ್ಟು ಕೇವಲ ಒಂದು ಕುಟುಂಬದ ಸಮಸ್ಯೆಯಾಗಿ ಉಳಿಯದೆ, ಸಾರ್ವಜನಿಕ ಜೀವನದಲ್ಲಿರುವ ವ್ಯಕ್ತಿಗಳ ಖಾಸಗಿ ಜೀವನ ಮತ್ತು ಸಾಮಾಜಿಕ ಜವಾಬ್ದಾರಿಗಳ ನಡುವಿನ ಸಮತೋಲನದ ಕುರಿತು ಚರ್ಚೆ ಹುಟ್ಟುಹಾಕಿದೆ.



