ಕನ್ನಡ ಚಿತ್ರರಂಗದ ನಟರಲ್ಲಿ ಇತ್ತೀಚೆಗೆ ಇಬ್ಬರು ಹೀರೋಗಳು ಕನ್ನಡವನ್ನು ಮೀರಿ ಬೆಳೆದಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ನಂತರ ಹಾಗೂ ಕಾಂತಾರದ ನಂತರ ರಿಷಬ್ ಶೆಟ್ಟಿ ಕನ್ನಡ ಚಿತ್ರರಂಗದವರಿಗೆ ಸಿಗುತ್ತಿಲ್ಲ. ಅಫ್ʻಕೋರ್ಸ್.. ಅವರು ಕನ್ನಡದಲ್ಲಿಯೇ ಸಿನಿಮಾ ಮಾಡುತ್ತಿದ್ದಾರಾದರೂ.. ಇಡೀ ಭಾರತಕ್ಕೆ ಅಪ್ಲೈ ಆಗುವಂತಹ ಕಥೆ ಹುಡುಕಬೇಕಾದ ಅನಿವಾರ್ಯತೆ ಇದೆ. ಇದೀಗ ಕನ್ನಡದ ಇನ್ನೊಬ್ಬ ಸ್ಟಾರ್ ನಟ ಬಾಲಿವುಡ್ʻಗೆ ಹಾರುವ ಸಮಯ ಹತ್ತಿರವಾಗಿದೆಯಾ..? ಹೀಗೊಂದು ಸುದ್ದಿ ಸದ್ಯಕ್ಕೆ ಸ್ಯಾಂಡಲ್ʻವುಡ್ʻನಲ್ಲಿ ಸಖತ್ ಸೌಂಡು ಮಾಡ್ತಾ ಇದೆ.
ಧ್ರುವ ಸರ್ಜಾ ಅವರನ್ನು ಹಿಂದಿಯ ದೊಡ್ಡದೊಂದು ಚಿತ್ರಕ್ಕೆ ಖ್ಯಾತ ನಿರ್ದೇಶಕರು ಕಾಂಟ್ಯಾಕ್ಟ್ ಮಾಡಿದ್ಧಾರೆ ಅನ್ನೋ ಸುದ್ದಿ ಇದೆ. ಧ್ರುವ ಸರ್ಜಾ ಅವರ ಮಾರ್ಟಿನ್ ಅಕ್ಟೋಬರ್ 11ಕ್ಕೆ ಹಾಗೂ ಕೆಡಿ ಡಿಸೆಂಬರ್ ತಿಂಗಳಲ್ಲಿ ರಿಲೀಸ್ ಆಗುತ್ತಿವೆ. ಈ ಸಂದರ್ಭದಲ್ಲಿಯೇ ಬಾಲಿವುಡ್ ಚಿತ್ರ ನಿರ್ಮಾಣ ಸಂಸ್ಥೆಯೊಂದು ಧ್ರುವ ಸರ್ಜಾ ಅವರನ್ನು ಸಂಪರ್ಕಿಸಿದೆ.
ಬಾಲಿವುಡ್ʻನಲ್ಲಿ ವಾರ್ ಚಿತ್ರ ಸರಣಿಗೆ ಸಖತ್ ಡಿಮ್ಯಾಂಡ್ ಇದೆ. 2019ರಲ್ಲಿ ವಾರ್ ಚಿತ್ರ ರಿಲೀಸ್ ಆಗಿತ್ತು. ಸಿದ್ದಾರ್ಥ್ ಆನಂದ್ ನಿರ್ದೇಶನದ ವಾರ್ ಚಿತ್ರದಲ್ಲಿ ಹೃತಿಕ್ ರೋಷನ್ ಹಾಗೂ ಟೈಗರ್ ಶ್ರಾಫ್ ನಟಿಸಿದ್ದರು. ವಾಣಿ ಕಪೂರ್ ಹೀರೋಯಿನ್ ಆಗಿದ್ದರು. ಹೆಚ್ಚೂ ಕಡಿಮೆ 400 ಕೋಟಿ ಬಿಸಿನೆಸ್ ಮಾಡಿತ್ತು. ಈಗ ಅದೇ ವಾರ್ ಸರಣಿಯ ವಾರ್-2 ಸಿದ್ಧವಾಗುತ್ತಿದೆ.
ಹೃತಿಕ್ ರೋಷನ್ ಹಾಗೂ ತೆಲುಗು ಸೂಪರ್ ಸ್ಟಾರ್ ಎನ್ʻಟಿಆರ್ ನಟಿಸುತ್ತಿದ್ಧಾರೆ. ಆಯನ್ ಮುಖರ್ಜಿ ಡೈರೆಕ್ಷನ್ ಇದೆ. ಯಶ್ ರಾಜ್ ಬ್ಯಾನರ್ʻನಲ್ಲಿ ನಿರ್ಮಾಣವಾಗುತ್ತಿರುವ ಚಿತ್ರ ಇದು.
ಆಯನ್ ಮುಖರ್ಜಿ ಹಿಂದಿಯಲ್ಲಿ ಒಳ್ಳೊಳ್ಳೆಯ ಚಿತ್ರಗಳ ಮೂಲಕ ಹೆಸರು ಮಾಡಿದ್ದಾರೆ. ಶಾರೂಕ್ ಖಾನ್ ಅಭಿನಯಿಸಿದ್ದ ಸ್ವದೇಶ್ ಚಿತ್ರದ ಕಥೆಗಾರರಲ್ಲಿ ಒಬ್ಬರು ಈ ಆಯನ್ ಮುಖರ್ಜಿ. ಯೇ ಜವಾನಿ ಹೇ ದಿವಾನಿ, ವೇಕಪ್ ಸಿದ್ದ್ ಹಾಗೂ ಬ್ರಹ್ಮಾಸ್ತ್ರ ಚಿತ್ರಗಳನ್ನು ನಿರ್ದೇಶಿಸಿದ್ದವರು. ಈಗ ವಾರ್ 2 ಮಾಡುತ್ತಿದ್ಧಾರೆ. ಧ್ರುವ ಸರ್ಜಾ ಟ್ರ್ಯಾಕ್ ಬದಲಾಗುತ್ತಿದೆ.
ಧ್ರುವ ಸರ್ಜಾ ಅವರು ಚಿತ್ರರಂಗಕ್ಕೆ ಬಂದು ದಶಕಗಳೇ ಕಳೆದಿದ್ದರೂ.. ನಟಿಸಿರುವುದು ಕೇವಲ 4 ಚಿತ್ರಗಳಲ್ಲಿ. ಸ್ಟಾರ್ ಪಟ್ಟವನ್ನು ಸೂಕ್ತವಾಗಿ ಬಳಸಿಕೊಂಡಿಲ್ಲ ಅನ್ನೋದಂತೂ ವಾಸ್ತವ. ಆದರೆ. ಅಭಿನಯದ ವಿಚಾರಕ್ಕೆ ಬಂದರೆ.. ಕಟ್ಟುಮಸ್ತಾದ ದೇಹದ ವಿಷಯಕ್ಕೆ ಬಂದರೆ.. ಧ್ರುವ ಸರ್ಜಾ ಅವರಿಗೆ ಸರಿಸಾಟಿ ಯಾರೂ ಇಲ್ಲ.
ತೆಲುಗಿನ ಎನ್ʻಟಿಆರ್ ಹಾಗೂ ಹಿಂದಿಯ ಹೃತಿಕ್ ರೋಷನ್ ಜೊತೆ ಕನ್ನಡದ ಧ್ರುವ ಸರ್ಜಾ ಕೂಡಾ ನಟಿಸುತ್ತಿದ್ಧಾರೆ ಎನ್ನುವುದೇ ಥ್ರಿಲ್ಲಿಂಗ್ ಸುದ್ದಿ. ಖಚಿತವಾಗುವುದಕ್ಕೆ ಕೆಲವೇ ದಿನ. ಮೂಲಗಳ ಪ್ರಕಾರ ಬುಧವಾರ ವಾರ್ ಚಿತ್ರದ ನಿರ್ದೇಶಕರು ಧ್ರುವ ಸರ್ಜಾ ಅವರನ್ನು ಕಾಂಟ್ಯಾಕ್ಟ್ ಮಾಡುವ ಸಾಧ್ಯತೆ ಇದೆ.



