ದೇಶಾದ್ಯಂತ ತೀವ್ರ ಸಂಚಲನ ಸೃಷ್ಟಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಧರ್ಮಸ್ಥಳದ ಸಾಮೂಹಿಕ ಸಮಾಧಿ ತಲೆ ಬುರುಡೆ ಪ್ರಕರಣದ ತನಿಖೆ ವಾಸ್ತವವಾಗಿ ಮುಗಿದಿಲ್ಲ. ನಡೆಯುತ್ತಲೇ ಇದೆ. ಕಳೆದ ವರ್ಷ ಸೆನ್ಸೇಷನ್ ಸೃಷ್ಟಿಸಿದ್ದ ಈ ಪ್ರಕರಣದ ತನಿಖೆಗೆ ರಾಜ್ಯ ಸರ್ಕಾರ ತರಾತುರಿಯಲ್ಲಿ ಎಸ್‌ಐಟಿ ರಚನೆ ಮಾಡಿತ್ತು. ಆದರೆ ಮಧ್ಯಂತರ ವರದಿ ಆರೋಪಗಳಿಗೆ ಉಲ್ಟಾ ಬಂತು. ಈಗ ತನಿಖೆಯ ಅವಧಿಯೇ ಮುಗಿಯುತ್ತಾ ಬಂದರೂ, ಹಣ ಬಂದಿಲ್ಲ. ತಲೆಬುರುಡೆ ಕೇಸಿನಲ್ಲಿ ಕೆಲಸ ಮಾಡಿದವರಿಗೆ, ಮಾಡಿಸಿದವರಿಗೆ ಬಾಡಿಗೆಯೂ ಬಂದಿಲ್ಲ.
ತಲೆಬುರುಡೆ ಕೇಸಿನಲ್ಲಿ ಬೆವರು ಹರಿಸಿದ ಬಡ ಕಾರ್ಮಿಕರ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿಯಾಗಿದೆ. ಪ್ರಕರಣದ ಸತ್ಯಾಸತ್ಯತೆ ಹೊರತರಲು ವಿಶೇಷ ತನಿಖಾ ತಂಡ (SIT) ನಡೆಸಿದ ಉತ್ಖನನ ಕಾರ್ಯದಲ್ಲಿ ಪಾಲ್ಗೊಂಡಿದ್ದ ದಿನಗೂಲಿ ಕಾರ್ಮಿಕರಿಗೆ ಮತ್ತು ಜೆಸಿಬಿ ಯಂತ್ರಗಳ ಮಾಲೀಕರಿಗೆ 10 ತಿಂಗಳು ಕಳೆದರೂ ಬಿಡಿಗಾಸು ಹಣ ಪಾವತಿಯಾಗಿಲ್ಲ.
₹2 ಲಕ್ಷಕ್ಕೂ ಅಧಿಕ ಮೊತ್ತ ಬಾಕಿ:
ಉತ್ಖನನ ಕಾರ್ಯಾಚರಣೆಗಾಗಿ ಸ್ಥಳೀಯ ಧರ್ಮಸ್ಥಳ ಗ್ರಾಮ ಪಂಚಾಯತ್ ಮೂಲಕ ಕಾರ್ಮಿಕರನ್ನು ನಿಯೋಜಿಸಲಾಗಿತ್ತು. ಸದ್ಯ ಲಭ್ಯವಿರುವ ಮಾಹಿತಿಯಂತೆ, ಹಗಲಿರುಳು ಮಣ್ಣು ಅಗೆದ 20ಕ್ಕೂ ಹೆಚ್ಚು ಕಾರ್ಮಿಕರ ಸುಮಾರು ₹80,000 ದಿಂದ ₹1 ಲಕ್ಷದವರೆಗಿನ ಕೂಲಿ ಹಣ ಬಾಕಿ ಉಳಿದಿದೆ. ಇದರೊಂದಿಗೆ ಮಣ್ಣು ಸರಿಸಲು ಬಳಸಲಾದ ಜೆಸಿಬಿ ಹಾಗೂ ಹಿಟಾಚಿ ಯಂತ್ರಗಳ ಬಾಡಿಗೆ ಮೊತ್ತ ₹71,500 ಮತ್ತು ಶಾಮಿಯಾನ, ಕುಡಿಯುವ ನೀರು, ಹಾರೆ-ಪಿಕಾಸು ಸೇರಿದಂತೆ ಇತರೆ ಪರಿಕರಗಳ ವೆಚ್ಚ ₹24,000 ಸೇರಿದಂತೆ ಒಟ್ಟು ₹2 ಲಕ್ಷಕ್ಕೂ ಅಧಿಕ ಹಣ ಬಿಡುಗಡೆಯಾಗಬೇಕಿದೆ.
ಅಧಿಕಾರಿಗಳ ಹಗ್ಗಜಗ್ಗಾಟದಲ್ಲಿ ನಲುಗಿದ್ದು ಯಾರು..?
ದುಡಿದ ಹಣಕ್ಕಾಗಿ ಕಾರ್ಮಿಕರು ಪಂಚಾಯತ್ ಕಚೇರಿಗೆ ಅಲೆಯುತ್ತಿದ್ದರೆ, ಅಧಿಕಾರಿಗಳು ಜವಾಬ್ದಾರಿಯಿಂದ ನುಣುಚಿಕೊಳ್ಳುತ್ತಿದ್ದಾರೆ. ಅಪರಾಧ ತನಿಖೆಯ ವೆಚ್ಚವನ್ನು ಪಂಚಾಯತ್‌ನ ಸಾಮಾನ್ಯ ನಿಧಿಯಿಂದ ಭರಿಸಲು ಕಾನೂನಿನಲ್ಲಿ ಅವಕಾಶವಿಲ್ಲ ಎಂದು ಜಿಲ್ಲಾ ಪಂಚಾಯತ್ ಕೈತೊಳೆದುಕೊಂಡಿದೆ. ಇತ್ತ ಗ್ರಾಮ ಪಂಚಾಯತ್ ಅಧಿಕಾರಿಗಳು SIT ಕಡೆಗೆ ಬೆರಳು ತೋರಿಸುತ್ತಿದ್ದರೆ, SIT ಮುಖ್ಯಸ್ಥರು ಈ ವೆಚ್ಚದ ಜವಾಬ್ದಾರಿ ತಮಗಿಲ್ಲ ಎಂದಿದ್ದಾರೆ. ಈ ನಡುವೆ ಕಾರ್ಯಾಚರಣೆ ಅವಧಿಯಲ್ಲಿದ್ದ ಪಿಡಿಒ ನಿವೃತ್ತರಾಗಿರುವುದು ಬಿಲ್ ಪ್ರಕ್ರಿಯೆಯನ್ನು ಮತ್ತಷ್ಟು ನನೆಗುದಿಗೆ ತಳ್ಳಿದೆ.
ಕಾನೂನು, ತನಿಖೆ ಮತ್ತು ಇಲಾಖೆಗಳ ನಡುವಿನ ಸಮನ್ವಯದ ಕೊರತೆಯಿಂದಾಗಿ ಹಸಿದ ಹೊಟ್ಟೆಯಲ್ಲಿ ದುಡಿದ ಬಡ ಕಾರ್ಮಿಕರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ಮತ್ತು ಜಿಲ್ಲಾಡಳಿತ ತಕ್ಷಣವೇ ಮಧ್ಯಪ್ರವೇಶಿಸಿ, ಈ ಮಾನವೀಯ ಬಿಕ್ಕಟ್ಟನ್ನು ಬಗೆಹರಿಸಿ ಕಾರ್ಮಿಕರ ಹಕ್ಕಿನ ಹಣವನ್ನು ತಕ್ಷಣವೇ ಪಾವತಿಸಬೇಕಾಗಿದೆ.
ಬಾಕಿ ಇರುವ ಹಣದ ವಿವರಗಳು
ಒಟ್ಟು ಬಾಕಿ ಮೊತ್ತ: ಸುಮಾರು ₹2 ಲಕ್ಷಕ್ಕೂ ಅಧಿಕ ಹಣ ಬಿಡುಗಡೆಯಾಗಬೇಕಿದೆ.
ಜೆಸಿಬಿ/ಹಿಟಾಚಿ ಬಾಡಿಗೆ: ಯಂತ್ರಗಳ ಬಳಕೆಗೆ ಸಂಬಂಧಿಸಿದಂತೆ ₹71,500 ಬಾಕಿ ಇದೆ.
ಕಾರ್ಮಿಕರ ಕೂಲಿ: ಮಳೆ-ಬಿಸಿಲು ಲೆಕ್ಕಿಸದೆ ಹಗಲಿರುಳು ದುಡಿದ 20ಕ್ಕೂ ಹೆಚ್ಚು ಕಾರ್ಮಿಕರ ₹80,000 ರಿಂದ ₹1 ಲಕ್ಷದವರೆಗಿನ ಕೂಲಿ ಹಣ ಪಾವತಿಯಾಗಿಲ್ಲ.
ಇತರ ಸಾಮಗ್ರಿಗಳು: ಶಾಮಿಯಾನ, ಹಾರೆ, ಪಿಕಾಸು, ಕುಡಿಯುವ ನೀರು ಮತ್ತು ವಾಹನಗಳ ಬಾಡಿಗೆಗೆ ಸಂಬಂಧಿಸಿದ ₹24,000 ಹಣವೂ ಬಾಕಿ ಉಳಿದಿದೆ.



