ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಚಟುವಟಿಕೆಗಳು ಗರಿಗೆದರುತ್ತಿವೆ. ಒಂದು ಕಡೆ ಅಸೆಂಬ್ಲಿಯಲಿ ಭರ್ಜರಿಯಾಗಿ ಗೆದ್ದು, ಅದನ್ನೇ ಲೋಕಸಭೆಗೂ ಮುಂದುವರೆಸುವ ಉಮೇದಿ ಕಾಂಗ್ರೆಸ್ಸಿನಲ್ಲಿದೆ. ಏಕೆಂದರೆ ಕಳೆದ ಬಾರಿ ಕಾಂಗ್ರೆಸ್ ಗೆದ್ದಿದ್ದ ಕ್ಷೇತ್ರ ಒಂದೇ ಒಂದು. ಅದೂ ಬೆಂಗಳುರು ಗ್ರಾಮಾಂತರ. ಡಿಕೆ ಸುರೇಶ್. ಮಿಕ್ಕವರೆಲ್ಲ ಲೆಕ್ಕಕ್ಕೂ ಸಿಗದಂತೆ ದೂಳೀಪಟವಾಗಿದ್ದರು. ಆದರೆ ಈ ಬಾರಿಯ ಪರಿಸ್ಥಿತಿಯೇ ಬೇರೆ.
ಲೋಕಸಭೆ ಚುನಾವಣೆಯ ಹಿನ್ನಲೆಯಲ್ಲಿ ಕಾಂಗ್ರೆಸ್ ನಾಲ್ಕು ತಂಡಗಳು ಎರಡು ಹಂತದ ಸಮೀಕ್ಷೆಯನ್ನು ಈಗಾಗಲೇ ಪೂರ್ಣಗೊಳಿಸಿದೆ. ಪಕ್ಷದ ಮೂಲಗಳ ಪ್ರಕಾರ ಎಐಸಿಸಿ, ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಕೇರಳ ಮೂಲದ ಸಂಸ್ಥೆಯೊಂದು ಪ್ರತ್ಯೇಕವಾಗಿ ಸಮೀಕ್ಷೆಯನ್ನು ನಡೆಸಿದೆ. ಆ ಸಮೀಕ್ಷಾ ವರದಿಗಳನ್ನು ನೋಡಿದ ನಂತರ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ರಾಜ್ಯದ 16 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ವಿಶ್ವಾಸ ಕಾಂಗ್ರೆಸ್ ಪಾಳಯದಲ್ಲಿದೆ.
ಅಭ್ಯರ್ಥಿ ಆಯ್ಕೆ ಹಾಗೂ ರಾಜ್ಯದಲ್ಲಿ ಜನರ ಒಲವು ಯಾವ ಕಡೆ ಇದೆ ಎಂಬ ನಿಟ್ಟಿನಲ್ಲಿ ಈ ಪ್ರತ್ಯೇಕ ಸಮೀಕ್ಷೆಗಳನ್ನು ನಡೆಸಲಾಗಿದ್ದು, ಎಐಸಿಸಿಯ ತಂಡ, ಸಿಎಂ ಸಿದ್ದರಾಮಯ್ಯ ಅವರ ತಂಡ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ತಂಡ ಪ್ರತ್ಯೇಕವಾಗಿ ಸಮೀಕ್ಷೆಯನ್ನು ನಡೆಸಿ ವರದಿ ತರಿಸಿಕೊಂಡಿದ್ದಾರೆ.
ಕೇರಳ ಮೂಲದ ಸಂಸ್ಥೆ ಈಗಾಗಲೇ ಎರಡು ಹಂತದ ಸಮೀಕ್ಷೆ ನಡೆಸಿದೆ. ಸಮೀಕ್ಷೆಗಳಲ್ಲಿ ಅಭ್ಯರ್ಥಿ ಆಯ್ಕೆ ವಿಚಾರವಾಗಿ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಗೆಲುವು ಮೊದಲ ಆದ್ಯತೆ. ಗೆಲ್ಲುತ್ತಾರೆ ಎಂಬಬಲ್ಲವರಿಗೆ ಮುಲಾಜಿಲ್ಲದೆ ಟಿಕೆಟ್ ನೀಡುವುದು ಸಮೀಕ್ಷೆಯ ಮುಖ್ಯ ಅಜೆಂಡಾ.
ಮೊದಲ ಹಂತದ ಸಮೀಕ್ಷೆಯಲ್ಲಿ ರಾಜ್ಯದಲ್ಲಿ 6 ರಿಂದ 7 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆಗಳ ಬಗ್ಗೆ ಉಲ್ಲೇಖ ಮಾಡಲಾಗಿತ್ತು. ಎರಡನೇ ಹಂತದ ಸಮೀಕ್ಷೆಯಲ್ಲಿ 12 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಗೆ ಸಾಧ್ಯತೆ ಇದೆ ಎಂಬ ವರದಿ ನೀಡಿದೆ. ಆದರೆ ಮುಂದಿನ ದಿನಗಳಲ್ಲಿ 16 ಕ್ಷೇತ್ರಗಳಲ್ಲಿ ಗೆಲ್ಲುವ ಸಾಧ್ಯತೆ ಇದೆ ಎಂಬ ನಿರೀಕ್ಷೆಯನ್ನು ಕಾಂಗ್ರೆಸ್ ಹೊಂದಿದೆ.
ಸಮೀಕ್ಷೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯ ಪರಿಣಾಮಗಳು, ರಾಮಮಂದಿರದ ವಿಚಾರವಾಗಿ ಜನರ ಒಲವು ಮುಂತಾದ ವಿಚಾರಗಳ ಬಗ್ಗೆ ಮಾಹಿತಿ ಸಂಗ್ರಹ ಮಾಡಲಾಗಿದೆ. ಇದರ ಆಧಾರದಲ್ಲಿ ತಂತ್ರಗಾರಿಕೆ ರೂಪಿಸಲು ಕಾಂಗ್ರೆಸ್ ಮುಂದಾಗಿದೆ.
ಇವುಗಳ ಆಧಾರದಲ್ಲಿ ಬೆಂಗಳೂರಿನ ನಾಲ್ಕರಲ್ಲಿ 2 ಕ್ಷೇತ್ರ, ಮಧ್ಯ ಕರ್ನಾಟಕದಲ್ಲಿ ನಾಲ್ಕು ಕ್ಷೇತ್ರ, ಮಲೆನಾಡು ಹಾಗೂ ಹಳೆ ಮೈಸೂರು ಭಾಗದಲ್ಲಿ 4 ಕ್ಷೇತ್ರ, ಮುಂಬೈ ಮತ್ತು ಕಲ್ಯಾಣ ಕರ್ನಾಟಕದಲ್ಲಿ ತಲಾ ಒಂದು ಕ್ಷೇತ್ರದಲ್ಲಿ ಗೆಲ್ಲುವ ಸಾಧ್ಯತೆಗಳಿವೆ. ಪ್ರಯತ್ನ ಪಟ್ಟರೆ ಇನ್ನೂ 4 ಕ್ಷೇತ್ರಗಳನ್ನು ಗೆಲ್ಲಬಹುದು ಎಂದು ಸಮೀಕ್ಷೆಯ ಮಾಹಿತಿ ಹೊರಬಿದ್ದಿದೆ. ಆದರೆ ಇದು ಆಂತರಿಕ ಸಮೀಕ್ಷೆ. ಪಕ್ಷದ ನಾಯಕರಿಗೆ ಮಾತ್ರ ಯಾವ ಕ್ಷೇತ್ರ, ಯಾರು ನಿಂತರೆ ಗೆಲ್ತಾರೆ ಅನ್ನೋ ಮಾಹಿತಿ ಇದೆ. ಸದ್ಯಕ್ಕೆ ಸಿಕ್ಕಿರುವ ಮಾಹಿತಿ ಇಷ್ಟೆ.



