ಪಬ್ಲಿಕ್ ಟಿವಿ (Public TV) ಎಚ್.ಆರ್. ರಂಗನಾಥ್ ಅವರ ನೇತೃತ್ವದ ರೈಟ್ ಮೆನ್ ಮೀಡಿಯಾ ಪ್ರೈವೇಟ್ ಲಿಮಿಟೆಡ್ ಒಡೆತನದ ನ್ಯೂಸ್ ಚಾನೆಲ್. ಅರುಣ್ ಬಡಿಗೇರ್ ಈ ಚಾನೆಲ್ಲಿನಲ್ಲಿ ಕೆಲಸ ಮಾಡುತ್ತಿರುವ ನಿರೂಪಕ. ಇದೀಗ ಅರುಣ್ ಬಡಿಗೇರ್ ಅವರ ವಿರುದ್ಧ ರಾಜ್ಯದ ಹಲವು ಕಡೆ ದೂರುಗಳು ದಾಖಲಾಗಿವೆ. ರಂಗನಾಥ್ ಅವರು ನಡೆಸಿಕೊಡುವ ಬಿಗ್ ಬುಲೆಟಿನ್ ಶೋನಲ್ಲಿ ಅರುಣ್ ಬಡಿಗೇರ್ ಅವರು ಮೀಸಲಾತಿ ಕುರಿತು ಆಡಿರುವ ಮಾತುಗಳೇ ಇದಕ್ಕೆಲ್ಲ ಕಾರಣ. ಅಂದಹಾಗೆ ರಾಜ್ಯದ ಹಲವು ಕಡೆ, ಹಲವು ಠಾಣೆಗಳಲ್ಲಿ ಕೇಸ್ ರಿಜಿಸ್ಟರ್ ಆಗಿವೆ. ಆಗುತ್ತಿವೆ.
ಅರುಣ್ ಬಡಿಗೇರ್ ಅವರ ವಿರುದ್ಧ ಮೈಸೂರು, ಕಲಬುರಗಿ, ನೆಲಮಂಗಲ ಗ್ರಾಮಾಂತರ, ಶಹಾಪುರದ ಗೋಗಿ.. ಹೀಗೆ ರಾಜ್ಯದ ಹಲವಾರು ಕಡೆ ದೂರುಗಳು ದಾಖಲಾಗಿವೆ.
ವಿದ್ಯಾರ್ಥಿಗಳ ಪರಿಸ್ಥಿತಿ ಏನಾಗ್ತಾ ಇದೆ? ಬಡವನಿಗೆ ಯಾವ ರೀತಿ ಶಿಕ್ಷಣ ಸಿಗ್ತಾ ಇದೆ? ಮೀಸಲಾತಿಯಲ್ಲಿ ಶಿಕ್ಷಣವನ್ನ ಪಡ್ಕೊಂಡು 50-60 ಪರ್ಸೆಂಟೇಜ್ ಮಾಡಿದವನೆಲ್ಲಾ ಮೀಸಲಾತಿ ಅಡಿಯಲ್ಲಿ ಮೀಸಲಾತಿ ಅಡಿಯಲ್ಲಿ ಹೋಗಿಬಿಟ್ಟು ಶಿಕ್ಷಕರಾಗಿ ಪಾಠ ಮಾಡಿದರೆ ವಿದ್ಯಾರ್ಥಿಗಳು ಏನು ಕಲಿತಾವೆ?” “ನಾಳೆ ಶಿಕ್ಷಣದಲ್ಲಿ ಅದೇ ವಿಚಾರದಲ್ಲಿ ಅವನು 50-60% ಮಾಡಿದವನೆಲ್ಲ ಮೇಲ್ಗಡೆಗೆ ಹೋಗಿ ಮೀಸಲಾತಿ ಅಡಿಯಲ್ಲಿ ಅವನು ಬೇರೆ ಬೇರೆ ಪ್ರಮೋಷನ್ ತಗೊಳ್ತಾ ಹೋದ್ರೆ ಕೆಲಸಗಳು ಹೇಗಾಗ್ತವೆ? ಡಾಕ್ಟರ್ ಹೇಗಾಗ್ತಾನೆ? ಅವನು ಇಂಜಿನಿಯರ್ ಹೇಗಾಗ್ತಾನೆ?. ಎಲ್ಲಾ ಕಡೆಯೂ ಮೀಸಲಾತಿ… ಮೀಸಲಾತಿ ವಿಚಾರದಲ್ಲಿ ಕ್ವಾಲಿಟಿ ಅನ್ನೋದೇ ಇಲ್ಲ. ಮೌಲ್ಯಗಳೇ ಇಲ್ಲದೆ ಇರುವಂತವರು ಪಾಠ ಮಾಡುವ ಪರಿಸ್ಥಿತಿಗೆ ಬರ್ತಾ ಇದೆ. ವೇಟೇಜ್ ಇಲ್ಲ” ಇದು ಅರುಣ್ ಬಡಿಗೇರ್ ಅವರು ಆಡಿರುವ ಮಾತುಗಳು.
ಅರುಣ್ ಬಡಿಗೇರ್ ವಿರುದ್ಧ ದಾಖಲಾಗಿರುವ ದೂರು ಮತ್ತು ಸೆಕ್ಷನ್‌ಗಳ ವಿವರ
BNS ಸೆಕ್ಷನ್ 196 (ಹಳೆಯ IPC 153A ನ ತತ್ಸಮಾನ): ಧರ್ಮ, ಜಾತಿ ಅಥವಾ ಸಮುದಾಯಗಳ ನಡುವೆ ಸೌಹಾರ್ದತೆಗೆ ಧಕ್ಕೆ ತರುವುದು ಮತ್ತು ದ್ವೇಷವನ್ನು ಪ್ರಚೋದಿಸಿದ ಆರೋಪ. BNS ಸೆಕ್ಷನ್ 353 (ಹಳೆಯ IPC 505 ನ ತತ್ಸಮಾನ): ಸಾರ್ವಜನಿಕರಲ್ಲಿ ತಪ್ಪು ಕಲ್ಪನೆ, ಪೂರ್ವಾಗ್ರಹ ಅಥವಾ ಶಾಂತಿ ಕದಡುವ ಉದ್ದೇಶದಿಂದ ವದಂತಿ ಹರಡಿದ ಆರೋಪ ಹಾಗೂ ಅತ್ಯಂತ ಪ್ರಮುಖವಾಗಿ SC/ST ದೌರ್ಜನ್ಯ ತಡೆ ಕಾಯ್ದೆ (Atrocities Act). ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಸಮುದಾಯದವರ ಘನತೆ ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಸಾರ್ವಜನಿಕ ಮಾಧ್ಯಮದ ಮೂಲಕ ಅವಮಾನಿಸಿದ ಆರೋಪ.
ಪಬ್ಲಿಕ್ ಟಿವಿಯ ಮೇಲೂ ದೂರು : ಮೀಸಲಾತಿ ಕುರಿತಾದ ಅವಹೇಳನಕಾರಿ ಹೇಳಿಕೆಯ ವಿವಾದದಲ್ಲಿ ಪಬ್ಲಿಕ್ ಟಿವಿ ಮ್ಯಾನೇಜ್‌ಮೆಂಟ್, ಮಾಲೀಕರು ಹಾಗೂ ಮುಖ್ಯ ಸಂಪಾದಕರಾದ ಹೆಚ್ ಆರ್ ರಂಗನಾಥ್, ಇದಕ್ಕೆ ಅವಕಾಶ ನೀಡಿದ ಹೆಡ್ಸ್‌ಗಳ ವಿರುದ್ಧವೂ ದೂರು ದಾಖಲಾಗಿದೆ. ಕಾರ್ಯಕ್ರಮ ಮುಗಿದ ನಂತರವೂ ಸದರಿ ವಿವಾದಾತ್ಮಕ ಭಾಗವನ್ನು ವಾಹಿನಿಯ ಅಧಿಕೃತ ಯೂಟ್ಯೂಬ್ (YouTube) ಚಾನೆಲ್ಲಿನಲ್ಲಿ ಸುದ್ದಿ ಮಾಡಲಾಗಿದೆ. ಇದೂ ಕೂಡಾ ಅಪರಾಧ ಎನ್ನುವುದು ದೂರುದಾರರ ವಾದ.
ಅಂದಹಾಗೆ ಅರುಣ್ ಬಡಿಗೇರ್ ಅವರ ವಿರುದ್ಧ ಈ ಹಿಂದೆಯೂ ದೂರು ದಾಖಲಾಗಿದ್ದವು. 2022 ರ ಫೆಬ್ರವರಿಯಲ್ಲಿ ಪಬ್ಲಿಕ್ ಟಿವಿಯ ‘ಬಿಗ್ ಬುಲೆಟಿನ್’ನಲ್ಲಿ “ಇದು ಭಾರತ, ಭಾರತ ಸೃಷ್ಟಿಯಾಗಿದ್ದೇ ಹಿಂದೂ ರಾಷ್ಟ್ರದ ಆಧಾರದಲ್ಲಿ” ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಕೇಸ್ ಎದುರಿಸಿದ್ದರು. ಇದೀಗ ಅಟ್ರಾಸಿಟಿ ಕೇಸ್ ದಾಖಲಾಗಿದೆ.


