ಜಿರಲೆ ಜನತಾ ಪಕ್ಷ ಅಂದರೆ ಕಾಕ್ರೋಚ್ ಜನತಾ ಪಾರ್ಟಿ ಎಂಬ ಹೊಸ ಪೊಲಿಟಿಕಲ್ ಪಾರ್ಟಿ ಕಾಮಿಡಿ ಪೀಸ್ ಆಗಿ ಹೋಯ್ತಾ..? ಹೌದು ಎನ್ನಿಸುತ್ತಿರುವುದಕ್ಕೆ ಕಾರಣಗಳಿವೆ. ಸಿಎಂ ಸಿದ್ದರಾಮಯ್ಯ, ಸಂತೋಷ್ ಲಾಡ್ ಅವರಂತಹವರು ಟೀ-ಶರ್ಟ್ ರಿಲೀಸ್ ಮಾಡಿ ಪಬ್ಲಿಸಿಟಿ ಕೊಟ್ಟರೂ, ಜಿರಲೆ ಪಕ್ಷ ಕಾಮಿಡಿಯೇ ಆಗುತ್ತಿದೆ. ಅದಕ್ಕೆ ಕಾರಣಗಳೂ ಇವೆ. ಬೆಂಗಳೂರಿನಲ್ಲಿ ಟೌನ್ ಹಾಲ್ ಪ್ರತಿಭಟನೆ ರದ್ದಾಗಿರುವುದಕ್ಕಿಂತ ವಿಶೇಷ ಉದಾಹರಣೆ ಬೇಕಿಲ್ಲ. ಸಿಎಂ ಸಿದ್ದರಾಮಯ್ಯ ಅವರೇ ಕಾಕ್ರೋಚ್ ಪಕ್ಷಕ್ಕೆ ಸಪೋರ್ಟ್ ನೀಡಿದ್ದರೂ, ಈ ಪ್ರತಿಭಟನೆ ರದ್ಧಾಗಿದ್ದು ಏಕೆ.. ಕಾರಣಗಳೂ ವಿಚಿತ್ರವೇ..
ಘೋಷಣೆ ಮಾಡಿದವರು..ಅನುಮತಿಯನ್ನೇ ಪಡೆದಿಲ್ಲ :
ಜನರಿಗೆ ನಿರುದ್ಯೋಗ , ಬೆಲೆ ಏರಿಕೆ ಭಾರ ಹೊರೆಸುತ್ತಿರುವ ಆಡಳಿತದ ವಿರುದ್ಧ, ಪ್ರಧಾನಿಯವರ ವಿದೇಶ ಪ್ರವಾಸದ ವಿರುದ್ಧ ಸಾಮಾಜಿಕ ಮಾಧ್ಯಗಳಲ್ಲಿ ಜನಜಾಗೃತಿ ಮೂಡಿಸುತ್ತಿರುವ ಜಿರಳೆ ಪಾರ್ಟಿ, ಬೆಂಗಳೂರಲ್ಲಿ ಬಹಿರಂಗವಾಗಿ ಮಾನವ ಸರಪಳಿ ನಡೆಸಲು ಕರೆ ನೀಡಲಾಗಿತ್ತು. ಮೇ 24 ಭಾನುವಾರದಂದು ಟೌನ್ ಹಾಲ್ ಬಳಿ ಕರೆಯಲಾಗಿರುವ ಪ್ರತಿಭಟನೆಗೆ ಅನುಮತಿಯನ್ನೆ ಪಡೆದಿಲ್ಲ. ಕೇವಲ ಸೋಷಿಯಲ್ ಮೀಡಿಯಾದಲ್ಲಿ ಘೋಷಣೆ ಮಾಡಲಾಗಿದೆ.
ಅನುಮತಿಯಿಲ್ಲದೆ ಟೌನ್ ಹಾಲ್ ಮುಂಭಾಗ ಯಾರೂ ಜನ ಸೇರಿಸುವಂತಿಲ್ಲ. ಪ್ರತಿಭಟನೆ, ಅಥವಾ ರ್ಯಾಲಿಗಳಿಗೆ ಫ್ರೀಡಂ ಪಾರ್ಕ್ ನಲ್ಲಿ ಮಾತ್ರ ಉದ್ದೇಶ.ಜನ ಯಾರೂ ಸೇರಬಾರದು, ಸೇರಿದರೂ ಹೈಕೋರ್ಟ್ ಆದೇಶದ ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ನೋಟಿಸ್ ಹೊರಡಿಸಿದ್ದಾರೆ.
ಭಾನುವಾರ ಬೆಳಗ್ಗೆ 11 ಕ್ಕೆ ಟೌನ್ ಹಾಲ್ ಮುಂಭಾಗ ಶಾಂತಿಯುತ ಮಾನವ ಸರಪಳಿ ನಿರ್ಮಾಣಕ್ಕೆ ಎಲ್ಲರೂ ಬನ್ನಿ ಎಂದು ಆನ್ ಲೈನ್ ಮೂಲಕ ಆಹ್ವಾನ ನೀಡಿರುವ ಜಿರಲೆ ಪಕ್ಷ ಇಲ್ಲಿ ನಾಯಕರು ಇಲ್ಲ. ನಮಗೆ ನಾವೇ ನಾಯಕರು. ಇಲ್ಲಿ ಸಂಘಟನೆಯೂ ಇಲ್ಲ. ಪ್ರಜೆಗಳು ಕೈಜೋಡಿಸುವುದೇ ಸಂಘಟನೆ ಎಂದು ಹೇಳಿತ್ತು. ಆದರೆ ಪೊಲೀಸ್ ಇಲಾಖೆಗೆ ಯಾರಾದರೊಬ್ಬರು ಅರ್ಜಿ ಹಾಕಬೇಕಲ್ಲವಾ.. ಹಾಕಿಲ್ಲ. ʻನಾನೂ ಕಾಕ್ರೋಚ್ʼ ಎಂದು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿದವರು ಅಧಿಕೃತವಾಗಿ ಪೊಲೀಸರಿಗೆ ಮನವಿ ಸಲ್ಲಿಸಬೇಕಲ್ಲವೇ.. ಅದೇ ಆಗಿಲ್ಲ. ಹೀಗಾಗಿ ಪೊಲೀಸರು ಕೂಡಾ ಪರ್ಮಿಷನ್ ಕೊಟ್ಟಿಲ್ಲ. ಅನುಮತಿ ಇಲ್ಲದೆಯೇ ಜನ ಸೇರಿದರೆ ಪೊಲೀಸರು ಕ್ರಮ ಕೈಗೊಳ್ಳಬಹುದು. ಅಥವಾ ಸಿದ್ದರಾಮಯ್ಯ ಅವರು ಸಾಫ್ಟ್ ಕಾರ್ನರ್ ಇರುವ ಕಾರಣಕ್ಕೆ ಬಿಡಲೂ ಬಹುದು. ಆದರೆ ಸದ್ಯಕ್ಕಂತೂ ಪೊಲೀಸರ ಪರ್ಮಿಷನ್ ಇಲ್ಲ.
ಈಗ ಕಾಕ್ರೋಚ್ ಜನತಾ ಪಾರ್ಟಿಯ ಫಾಲೋವರ್ಸ್ ಸಂಖ್ಯೆ ಹತ್ತಿರತ್ತಿರ 2 ಕೋಟಿಗೆ ತಲುಪಿದೆ. ಬೆನ್ನಲ್ಲೇ ಭಾರತದಲ್ಲಿ ಇದರ ಅಧಿಕೃತ ಸಾಮಾಜಿಕ ಜಾಲತಾಣದ ಖಾತೆಯನ್ನು ನಿಷೇಧಿಸಲಾಯಿತು. ಸರ್ಕಾರದ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ ಎಂಬ ಆರೋಪಗಳೂ ಇವೆ. ಕಾಕ್ರೋಚ್ ಜನತಾ ಪಾರ್ಟಿ (Cockroach Janata Party – CJP) ಅಥವಾ ಜಿರಳೆ ಜನತಾ ಪಕ್ಷ ಎಂಬುದು ಭಾರತದ ಚುನಾವಣಾ ಆಯೋಗದಲ್ಲಿ ಅಧಿಕೃತವಾಗಿ ನೋಂದಾಯಿತವಾಗಿರುವ ರಾಜಕೀಯ ಪಕ್ಷವಲ್ಲ. ಇದು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ದಿಢೀರ್ ಶರವೇಗದಲ್ಲಿ ಹರಡಿದ ಒಂದು ವಿಡಂಬನಾತ್ಮಕ (Satirical) ಡಿಜಿಟಲ್ ಚಳವಳಿ ಮತ್ತು ಆನ್‌ಲೈನ್ ಗುಂಪಾಗಿದೆ.



