ಕರ್ನಾಟಕದ ಮುಖ್ಯಮಂತ್ರಿಯಾಗಿ ಸಿದ್ದರಾಮಯ್ಯ ಅವರು ರಾಜ್ಯದ ರಾಜಕೀಯ ಇತಿಹಾಸದಲ್ಲಿ ಹಲವು ಪ್ರಮುಖ ಹಾಗೂ ಅಪರೂಪದ ದಾಖಲೆಗಳನ್ನು ಸೃಷ್ಟಿಸಿದ್ದಾರೆ. ಇದೀಗ ಸಿದ್ದು ಸರ್ಕಾರಕ್ಕೆ ನಾಳೆ 3 ವರ್ಷ ಕಂಪ್ಲೀಟ್ ಆಗುತ್ತಿದೆ. ಈ ವೇಳೆ ಸಿದ್ದರಾಮಯ್ಯ ಇನ್ನೂ ಒಂದು ಹೊಸ ದಾಖಲೆ ಬರೆದಿದ್ದಾರೆ. ನಿಜಲಿಂಗಪ್ಪ ಅವರ ದಾಖಲೆಯೂ ಇತಿಹಾಸದ ಪುಟ ಸೇರಲಿದೆ. ಇನ್ನೂ ಅವಕಾಶ ಸಿಕ್ಕರೆ ಗುಜರಾತ್ ಸಿಎಂ ಆಗಿದ್ದ ಕರ್ನಾಟಕದ ರಾಜ್ಯಪಾಲರೂ ಆಗಿದ್ದ ವಜುಭಾಯಿ ವಾಲಾ ಅವರ ದಾಖಲೆಯನ್ನೂ ಸೈಡಿಗೆ ಹಾಕಲಿದ್ಧಾರೆ.
ನಿಜಲಿಂಗಪ್ಪ ದಾಖಲೆ ಇತಿಹಾಸದ ಪುಟಕ್ಕೆ
ಕರ್ನಾಟಕ ರಾಜ್ಯ ಘೋಷಣೆಗೂ ಮೊದಲು ಎಸ್.ನಿಜಲಿಂಗಪ್ಪ ಅವರೂ ಎರಡು ಬಾರಿ ಸುದೀರ್ಘ ಅವಧಿಗೆ ಸಿಎಂ ಆಗಿದ್ದರು. ಮೊದಲನೇ ಬಾರಿಗೆ 1956ರಲ್ಲಿ 1 ವರ್ಷ 197 ದಿನ ಹಾಗೂ ಎರಡನೇ ಬಾರಿಗೆ 1962ರಲ್ಲಿ 5 ವರ್ಷ 343 ದಿನಗಳ ಅವಧಿಗೆ ರಾಜ್ಯವನ್ನಾಳಿದ್ದರು. ತದ ನಂತರ ದೇವರಾಜ ಅರಸು ಅವರು ಮೈಸೂರು ರಾಜ್ಯದಲ್ಲಿ 1972ರಲ್ಲಿ 1 ವರ್ಷ 225 ದಿನಗಳಿಗೆ, ನಂತರ ಕರ್ನಾಟಕ ರಾಜ್ಯ ಘೋಷಣೆ ನಂತರ 1973 ರಿಂದ 4 ವರ್ಷ 60 ದಿನಗಳಿಗೆ ಹಾಗೂ ಮೂರನೇ ಬಾರಿಗೆ 1978ರಲ್ಲಿ 1 ವರ್ಷ 318 ದಿನಗಳಿಗೆ ಸಿಎಂ ಆಗಿ ಒಟ್ಟಾರೆ 7 ವರ್ಷ 239 ದಿನಗಳ ಕಾಲ ಸಿಎಂ ಆಗಿದ್ದರು.
ಸಿದ್ದರಾಮಯ್ಯ ಅವರು 2013ರಿಂದ 5 ವರ್ಷ 4 ದಿನಗಳ ಕಾಲ ಮತ್ತು 2023ರಿಂದ ಇಂದಿನ ತನಕ 2 ವರ್ಷ 362 ದಿನಗಳವರೆಗೆ 8 ವರ್ಷ ಪೂರೈಸಿದ್ದಾರೆ. ಇದೇ ಮೇ 20ಕ್ಕೆ ಎರಡನೇ ಬಾರಿಗೆ ಸಿಎಂ ಆಗಿ 3 ವರ್ಷ ಪೂರೈಸಲಿದ್ದಾರೆ. ಕರ್ನಾಟಕದಲ್ಲಿ ಅಧಿಕಾರ ಹಸ್ತಾಂತರದ ಚರ್ಚೆಯ ನಡುವೆಯೇ ಸಿದ್ದರಾಮಯ್ಯ ಈ ರಾಷ್ಟ್ರೀಯ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ ಕರ್ನಾಟಕದ ರಾಜಕಾರಣದ ಇತಿಹಾಸದಲ್ಲಿ 8 ವರ್ಷ ಮುಖ್ಯಮಂತ್ರಿಯಾಗಿರುವ ಮೊದಲ ವ್ಯಕ್ತಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
40 ವರ್ಷಗಳ ಬಳಿಕ 5 ವರ್ಷ ಅವಧಿ ಸಿಎಂ
ಇದೇನು ಹೊಸ ದಾಖಲೆ ಅಲ್ಲ. 2018ರಲ್ಲಿಯೇ ಈ ದಾಖಲೆ ಬರೆದಿದ್ದರು. 2013 ರಿಂದ 2018 ರವರೆಗಿನ ತಮ್ಮ ಮೊದಲ ಅವಧಿಯಲ್ಲಿ ಸಿದ್ದರಾಮಯ್ಯ ಅವರು ಪೂರ್ಣ 5 ವರ್ಷಗಳ ಅಧಿಕಾರಾವಧಿಯನ್ನು ಯಶಸ್ವಿಯಾಗಿ ಪೂರೈಸಿದ್ದರು. ಕರ್ನಾಟಕದ ರಾಜಕೀಯ ಇತಿಹಾಸದಲ್ಲಿ ದೇವರಾಜ ಅರಸು ಅವರ ನಂತರ (ಸುಮಾರು 40 ವರ್ಷಗಳ ಅವಧಿಯಲ್ಲಿ) ಐದು ವರ್ಷದ ಪೂರ್ಣಾವಧಿ ಮುಗಿಸಿದ ಮೊದಲ ಮುಖ್ಯಮಂತ್ರಿಯಾಗಿದ್ದರು. ಇದೀಗ 3 ವರ್ಷ ಪೂರೈಸಿದ್ದು, ಈ ಅವಧಿಯನ್ನೂ ಪೂರೈಸಿದರೆ ಅದು ಹೊಸ ಇತಿಹಾಸವಾಗಲಿದೆ. ಈಗಾಗಲೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕರ್ನಾಟಕದ ರಾಜಕೀಯ ಇತಿಹಾಸದಲ್ಲೇ ಅತಿ ಹೆಚ್ಚು ದಿನಗಳ ಕಾಲ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ನಾಯಕ ಎಂಬ ಐತಿಹಾಸಿಕ ದಾಖಲೆಯನ್ನು ಬರೆದಿದ್ದಾರೆ. ಈ ಹಿಂದೆ ದಿವಂಗತ ಡಿ. ದೇವರಾಜ ಅರಸು ಅವರು ಒಟ್ಟು 7 ವರ್ಷ 239 ದಿನಗಳ ಕಾಲ (ಎರಡು ಅವಧಿಗಳಲ್ಲಿ) ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿ ಸೃಷ್ಟಿಸಿದ್ದ ಸುದೀರ್ಘ ಅವಧಿಯ ದಾಖಲೆಯನ್ನು ಸಿದ್ದರಾಮಯ್ಯ ಅವರು ಜನವರಿ 6, 2026 ರಂದು ಅಧಿಕೃತವಾಗಿ ಮುರಿದಿದ್ದರು. ಸದ್ಯಕ್ಕೆ ಅವರ ಒಟ್ಟು ಅಧಿಕಾರಾವಧಿ ಈ ಹಿಂದಿನ ಎಲ್ಲ ಮುಖ್ಯಮಂತ್ರಿಗಳಿಗಿಂತ ಹೆಚ್ಚಾಗಿದ್ದು, ರಾಜ್ಯದ ನಂಬರ್ 1 ದೀರ್ಘಾವಧಿ ಸಿಎಂ ಎನಿಸಿಕೊಂಡಿದ್ದಾರೆ.
ಅತೀ ಹೆಚ್ಚು ಬಜೆಟ್ ಮಂಡನೆ ದಾಖಲೆ
ರಾಜ್ಯದ ಹಣಕಾಸು ಸಚಿವರೂ ಆಗಿ ಕಾರ್ಯನಿರ್ವಹಿಸಿರುವ ಸಿದ್ದರಾಮಯ್ಯ ಅವರು ಕರ್ನಾಟಕ ವಿಧಾನಸಭೆಯಲ್ಲಿ ಅತಿ ಹೆಚ್ಚು ಬಾರಿ ರಾಜ್ಯ ಮುಂಗಡ ಪತ್ರ (ಬಜೆಟ್) ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರು ಇದುವರೆಗೆ ಒಟ್ಟು 16 ಬಜೆಟ್‌ಗಳನ್ನು ಮಂಡಿಸಿ ಸಾರ್ವಕಾಲಿಕ ದಾಖಲೆ ಬರೆದಿದ್ದಾರೆ. ಆದರೆ ರಾಷ್ಟ್ರೀಯ ದಾಖಲೆ ಗುಜರಾತ್ ಸಿಎಂ ಆಗಿದ್ದ ಕರ್ನಾಟಕದ ರಾಜ್ಯಪಾಲರೂ ಆಗಿದ್ದ ವಜುಭಾಯಿ ವಾಲಾ ಅವರ ಹೆಸರಿನಲ್ಲಿದೆ. ಅವಕಾಶ ಸಿಕ್ಕರೆ ಆ ದಾಖಲೆಯನ್ನೂ ಸಿದ್ದು ಬ್ರೇಕ್ ಮಾಡಲಿದ್ದಾರೆ.



