ಕರ್ನಾಟಕ ರಾಜ್ಯದಲ್ಲಿ ಲಿಂಗಾಯತರೇ ಅತ್ಯಧಿಕ ಸಂಖ್ಯೆಯಲ್ಲಿದ್ಧಾರೆ ಎನ್ನುವುದು ಹಿಂದಿನ ನಂಬಿಕೆ. ದಶಕಗಳಿಂದಲೂ ಲಿಂಗಾಯತರೇ ರಾಜ್ಯದ ನಂ.1 ಜಾತಿ ಎಂದು ಹೇಳಿಕೊಂಡು ಬರಲಾಗುತ್ತಿತ್ತು. ಲಿಂಗಾಯತರ ನಂತರ ಒಕ್ಕಲಿಗರು, ಕುರುಬರು ಇದ್ಧಾರೆ. ದಲಿತ ಸಮುದಾಯದ ಸಂಖ್ಯೆಗಿಂತ ಮುಸ್ಲಿಮರು ಹೆಚ್ಚಿದ್ದಾರಂತೆ. ಇದು ಸಿಎಂ ಸಿದ್ದರಾಮಯ್ಯ ಅವರಿಗೆ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಜಾತಿ ಗಣತಿಯ ಅಂತಿಮ ವರದಿಯ ಫಲಿತಾಂಶ.
ರಾಜ್ಯ ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರ್ಕಾರಕ್ಕೆ ಬುಧವಾರ ಸಲ್ಲಿಸಿದ ಜಾತಿ ಗಣತಿ(Caste Census)ಯ ಅಂತಿಮ ವರದಿಯಲ್ಲಿ13 ಅಧ್ಯಾಯಗಳಿವೆ. ವರದಿಯ ಪ್ರಕಾರ, ಮುಸ್ಲಿಂ ಸಮುದಾಯ ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ ಶೇ. 14ರಷ್ಟಿದ್ದು, ನಂತರದ ಸ್ಥಾನದಲ್ಲಿ ವೀರಶೈವರು- ಲಿಂಗಾಯತರು ಹಾಗೂ ಕುರುಬ ಸಮುದಾಯ ಇದೆ.
ಮುಸ್ಲಿಂ ಸಮುದಾಯ(Muslim community) ರಾಜ್ಯದಲ್ಲಿ ಅತಿ ಹೆಚ್ಚು ಅಂದರೆ, 80.14 ಲಕ್ಷ ಜನಸಂಖ್ಯೆ ಹೊಂದಿದ್ದರೆ, ವೀರಶೈವ/ಲಿಂಗಾಯತ ಸಮುದಾಯದ ಜನಸಂಖ್ಯೆ 65 ಲಕ್ಷ ಇದೆ. ಶೇಕಡಾವಾರು ಲೆಕ್ಕ ಶೇ.11ರಷ್ಟು. ಮುಸ್ಲಿಮರಿಗಿಂತ 2% ಕಡಿಮೆ ಇದ್ದಾರೆ.
ಒಕ್ಕಲಿಗರು 60 ಲಕ್ಷ ಇದ್ದು, ಒಟ್ಟು ಜನಸಂಖ್ಯೆಯಲ್ಲಿ ಶೇ. 10ರಷ್ಟಿದ್ದಾರೆ. ಲಿಂಗಾಯತರಿಗಿಂತ 1% ಕಡಿಮೆ. ಆದರೆ ಮುಸ್ಲಿಮರಿಗಿಂತ ಶೇ.3% ಕಡಿಮೆ. ಕುರುಬರು 45 ಲಕ್ಷ ಅಂದರೆ ಒಟ್ಟು ಶೇ.8ರಷ್ಟು ಇದ್ದಾರೆ. ರಾಜ್ಯದ 6.14 ಕೋಟಿ ಜನರ ಪೈಕಿ 5.86 ಕೋಟಿ ಜನರು ಸಮೀಕ್ಷೆಯಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದರು. ಈ ಪೈಕಿ ಮುಸ್ಲಿಂ ಸಮುದಾಯದ ಸಂಖ್ಯೆ ಅತಿ ಹೆಚ್ಚುಇರುವುದು ಗಮನಾರ್ಹ. ದಲಿತ ಸಮುದಾಯದ ಪ್ರಮಾಣ ಎಷ್ಟು ಎಂಬ ಬಗ್ಗೆ ಇನ್ನೂ ಮಾಹಿತಿ ಬರಬೇಕಿದೆ.
2017ರ ವರದಿಯಲ್ಲಿ ಏನಿತ್ತು..?
2017ರಲ್ಲಿ ನಡೆದಿದ್ದ ಸಮೀಕ್ಷೆಯ ಪ್ರಕಾರ ರಾಜ್ಯದಲ್ಲಿ ಸುಮಾರು 1.09 ಕೋಟಿ ಇದ್ದ ದಲಿತರು SCಗೆ ಸೇರಿದ್ದವರು 18.2% ಪಾಲುದಾರಿಕೆ ಹೊಂದಿದ್ದರು. ಆಗಿನ ವರದಿಯಲ್ಲಿಯೂ ಮುಸ್ಲಿಮರು: ~12.6–12.9% (ಸುಮಾರು 75–77 ಲಕ್ಷ) ದಲಿತರನ್ನು ಬಿಟ್ಟರೆ ನಂ.1 ಸ್ಥಾನದಲ್ಲಿದ್ದರು. ನಂತರದ ಸ್ಥಾನಗಳಲ್ಲಿ ಲಿಂಗಾಯತರು (ವೀರಶೈವ-ಲಿಂಗಾಯತ)11% (ಸುಮಾರು 66 ಲಕ್ಷ), ಒಕ್ಕಲಿಗರು 10.3% (ಸುಮಾರು 61–62 ಲಕ್ಷ) ಇದ್ದರು. ಕುರುಬರು 7% ಇದ್ದರು. STಗೆ ಸೇರಿದವರು 7% ಇದ್ದರು.
ಎಲ್ಲ ಲೆಕ್ಕಾಚಾರಗಳೂ ಉಲ್ಟಾಪಲ್ಟಾ
ಲಿಂಗಾಯತ ಮತ್ತು ವೊಕ್ಕಲಿಗ ಸಮುದಾಯಗಳು ತಮ್ಮ ಜನಸಂಖ್ಯೆಯನ್ನು ಹಿಂದೆ 15–20% ಎಂದು ಹೇಳಿಕೊಳ್ಳುತ್ತಿದ್ದವು, 2017ರ ಸಮೀಕ್ಷೆಯಲ್ಲಿ ಕಡಿಮೆ ಬಂದಿತ್ತು. ಈಗ ವರದಿಯಲ್ಲಿಯೂ ಕಡಿಮೆ ಬಂದಿದೆ. ಇದು ರಾಜಕೀಯ ವಿವಾದಕ್ಕೆ ಕಾರಣವಾಗುವ ಎಲ್ಲ ಸೂಚನೆಗಳೂ ಇವೆ.
ಇಷ್ಟು ವರ್ಷಗಳ ನಂಬಿಕೆಯ ಪ್ರಕಾರ..
ಉತ್ತರ ಕರ್ನಾಟಕದ ದಾವಣಗೆರೆ, ಹಾವೇರಿ, ಬೀದರ್, ಗುಲ್ಬರ್ಗ, ಬೀಜಾಪುರ, ರಾಯಚೂರು, ಬಳ್ಳಾರಿ, ವಿಜಯಪುರ, ಬಾಗಲಕೋಟೆ, ಧಾರವಾಡ, ಬೆಳಗಾವಿ ಇತ್ಯಾದಿ ಭಾಗಗಳಲ್ಲಿ ಲಿಂಗಾಯತರು ಹೆಚ್ಚು. ಮಧ್ಯ ಕರ್ನಾಟಕ ಚಿತ್ರದುರ್ಗ, ತುಮಕೂರು ಭಾಗಗಳಲ್ಲಿಯೂ ಲಿಂಗಾಯತರು ಇದ್ದಾರೆ. ಒಕ್ಕಲಿಗರೂ ಪ್ರಬಲರಾಗಿದ್ಧಾರೆ. ದಕ್ಷಿಣ ಕರ್ನಾಟಕ / ಹಳೆ ಮೈಸೂರು ಪ್ರದೇಶ ಮೈಸೂರು, ಮಂಡ್ಯ, ಹಾಸನ, ಚಾಮರಾಜನಗರ, ರಾಮನಗರ, ಬೆಂಗಳೂರು ಗ್ರಾಮೀಣ, ಕೋಲಾರಗಳಲ್ಲಿ ಒಕ್ಕಲಿಗರ ಪ್ರಾಬಲ್ಯ ಹೆಚ್ಚು. ಲಿಂಗಾಯತ ಮತ್ತು ವೊಕ್ಕಲಿಗರು ಜನಸಂಖ್ಯೆಗೆ ಅನುಗುಣವಾಗಿ ಅಧಿಕ ಪ್ರಾತಿನಿಧ್ಯ ಹೊಂದಿದ್ದು.. ಈ ಕಾರಣಕ್ಕಾಗಿಯೇ ರಾಜ್ಯದಲ್ಲಿ ಇದುವರೆಗೆ ಆಗಿರುವ ಸಿಎಂಗಳಲ್ಲಿ ಹೆಚ್ಚಿನವರು ಲಿಂಗಾಯತರು ಇಲ್ಲವೇ ಒಕ್ಕಲಿಗರು. ಇನ್ನು ಮುಂದೆ ಆ ಲೆಕ್ಕಾಚಾರಗಳೆಲ್ಲ ತಿರುಗಾಮುರುಗಾ ಆಗಲಿವೆ.



