ದೇಶದಲ್ಲಿ 17 ರಾಜ್ಯಗಳಲ್ಲಿ ಏಕಾಂಗಿಯಾಗಿ, ಇನ್ನೈದು ರಾಜ್ಯಗಳಲ್ಲಿ ಮಿತ್ರ ಪಕ್ಷಗಳೊಂದಿಗೆ ಅಧಿಕಾರದಲ್ಲಿರುವ ಬಿಜೆಪಿಯ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕುವವರೇ ಇಲ್ಲ. 2014ರಲ್ಲಿ ದೇಶಾದ್ಯಂತ ಶುರುವಾದ ಬಿಜೆಪಿಯ ರಾಜಕೀಯ ಪ್ರಾಬಲ್ಯ ತಗ್ಗಿಯೇ ಇಲ್ಲ. ಉತ್ತರ ಪ್ರದೇಶ, ಮಹಾರಾಷ್ಟ್ರ, ಮಧ್ಯಪ್ರದೇಶ, ರಾಜಸ್ತಾನ, ಬಿಹಾರ, ಪ.ಬಂಗಾಳದಂತಹ ದೊಡ್ಡ ದೊಡ್ಡ ರಾಜ್ಯಗಳಲ್ಲಿರುವುದು ಬಿಜೆಪಿ ಆಡಳಿತ. ಕೇಂದ್ರದ ವಿಷಯವಂತೂ ಕೇಳೋದೇ ಬೇಡ. ಈ ಬಾರಿ ಏಕಾಂಗಿ ಬಹುಮತ ಇಲ್ಲದಿದ್ದರೂ, ಮಿತ್ರಪಕ್ಷಗಳ ಜೊತೆ ಸರಳ ಬಹುಮತದ ಸರ್ಕಾರ ಆಗಿದೆ. ಇದು ಇನ್ನೂ ಎಷ್ಟು ದಿನ ಎಂದರೆ.. ದಿನ ಅಲ್ಲ.. ಇನ್ನೂ 10 ವರ್ಷ ಎಂಬ ಉತ್ತರ ಬಂದಿದೆ. ಉತ್ತರ ನೀಡಿರುವ ವ್ಯಕ್ತಿ ಪ್ರದೀಪ್ ಗುಪ್ತಾ. ಚುನಾವಣಾ ಸರ್ವೆಗೆ ಹೆಸರುವಾಸಿಯಾಗಿರುವ ಆ್ಯಕ್ಸಿಸ್ ಮೈ ಇಂಡಿಯಾ ಸಂಸ್ಥೆ ಮುಖ್ಯಸ್ಥ. ಇತ್ತೀಚೆಗೆ ತಮಿಳುನಾಡು ಎಲೆಕ್ಷನ್‌ನಲ್ಲಿ ವಿಜಯ್ ಅವರ ಪಕ್ಷಕ್ಕೆ ಬಹುಮತ ಘೋಷಿಸಿ ಸಂಚಲನ ಮೂಡಿಸಿದ್ದ ಸಂಸ್ಥೆಗೆ ಇವರೇ ಬಾಸ್. ಇವರು ಕೇವಲ ಭವಿಷ್ಯ ಹೇಳಿಲ್ಲ.. ಕಾರಣ ಕೊಟ್ಟಿದ್ಧಾರೆ.
ಹಿಂದೂ ಮತಗಳ ಧ್ರುವೀಕರಣ ಒಂದೇ ಕಾರಣ ಅಲ್ಲ..!
ಎಲ್ಲರೂ ಅಂದುಕೊಳ್ಳುವುದು ಹಿಂದೂಗಳ ಮತಗಳ ಧ್ರುವೀಕರಣ. ಹಿಂದೂಗಳು ಸಾಲಿಡ್ ಆಗಿ ವೋಟ್ ಹಾಕಿ, ಬಿಜೆಪಿಯನ್ನು ಗೆಲ್ಲಿಸುತ್ತಿದ್ದಾರೆ ಎಂದು. ಆದರೆ ಪ್ರದೀಪ್ ಗುಪ್ತಾ ಅವರ ಪ್ರಕಾರ ಬಿಜೆಪಿ ಗೆಲ್ಲೋಕೆ ಅದೊಂದೇ ಮಾನದಂಡ ಕಾರಣ ಅಲ್ಲ. ಪಶ್ಚಿಮ ಬಂಗಾಳದಲ್ಲಿ 15 ವರ್ಷಗಳ ತೃಣಮೂಲ ಕಾಂಗ್ರೆಸ್ (TMC) ಆಡಳಿತವನ್ನು ಮಣಿಸಲು ಕೇವಲ ಹಿಂದೂ ಮತಗಳ ಧ್ರುವೀಕರಣ ಅಥವಾ ಕ್ರೋಢೀಕರಣದಿಂದ ಮಾತ್ರ ಬಿಜೆಪಿಗೆ ಸಾಧ್ಯವಿಲ್ಲ. ಚುನಾವಣಾ ಗೆಲುವಿಗೆ ಕೇವಲ ಧರ್ಮ ಆಧರಿತ ಮತಗಳಷ್ಟೇ ಸಾಲದು, ಅಲ್ಲಿಯೂ ಆಡಳಿತ ವಿರೋಧಿ ಅಲೆ ಮತ್ತು ಪರ್ಯಾಯ ನಾಯಕತ್ವ ಮುಖ್ಯವಾಗುತ್ತದೆ ಎಂದಿದ್ದಾರೆ.
ಕೇಂದ್ರ ಸರ್ಕಾರದ ಕಾರ್ಯಕ್ಷಮತೆ ಎಲ್ಲಿಯವರೆಗೆ ಬಲಿಷ್ಠವಾಗಿರುತ್ತದೆಯೋ, ಅಲ್ಲಿಯವರೆಗೆ ಅವರು ಗೆಲ್ಲುತ್ತಲೇ ಇರುತ್ತಾರೆ ಮತ್ತು ವಿರೋಧ ಪಕ್ಷಗಳು ಸೋಲುತ್ತಲೇ ಇರುತ್ತವೆ ಎಂದಿರುವ ಪ್ರದೀಪ್ ಗುಪ್ತಾ ಪ್ರಕಾರ ಮೋದಿಯೇ ಬಿಜೆಪಿಯ ಟ್ರಂಪ್ ಕಾರ್ಡ್. ಜನ ಮೋದಿ ಅವರ ಕುರಿತು ಯಾವ ಪರಿ ವಿಶ್ವಾಸ ಇಟ್ಟಿದ್ದಾರೆ ಎಂದರೆ.. ಮೋದಿ ವಿರುದ್ಧ ಸ್ವಯಂಪ್ರೇರಣೆಯಿಂದ ಸಮರ್ಥನೆಗಿಳಿಯುತ್ತಾರೆ ಎಂದಿದ್ದಾರೆ.
ಕಾಂಗ್ರೆಸ್‌ಗೆ ಅವಕಾಶವೇ ಇಲ್ಲವೇ..?
ಈ ಕುರಿತೂ ಹೇಳಿರುವ ಪ್ರದೀಪ್ ಗುಪ್ತಾ
ಸತತ ಚುನಾವಣಾ ಗೆಲುವುಗಳ ನಂತರ ಜನರ ನಿರೀಕ್ಷೆಗಳು ಬಿಜೆಪಿ ಮೇಲೆ ಭಾರೀ ಪ್ರಮಾಣದಲ್ಲಿ ಹೆಚ್ಚಿವೆ. ಆ ನಿರೀಕ್ಷೆಗಳನ್ನು ತಲುಪಲು ಪಕ್ಷವು ಮತ್ತಷ್ಟು ಅತ್ಯುತ್ತಮವಾಗಿ ಕೆಲಸ ಮಾಡಬೇಕಾಗುತ್ತದೆ. ಆ ನಿರೀಕ್ಷೆಗಳನ್ನು ಮುಟ್ಟುವುದಕ್ಕೆ ಯಾರಿಂದಲೂ 100% ಸಾಧ್ಯ ಇಲ್ಲ. ಆ ಅಸಮಾಧಾವನ್ನು ಕಾಂಗ್ರೆಸ್ ಬಳಸಿಕೊಳ್ಳಬಹುದು. ಆದರೆ.. : ಕಾಂಗ್ರೆಸ್ ಪಕ್ಷವು ತನ್ನ ಹಳೆಯ ಆಡಳಿತಾವಧಿಯ ತಪ್ಪುಗಳು ಮತ್ತು ಭ್ರಷ್ಟಾಚಾರದ ಇಮೇಜ್ ಇತ್ಯಾದಿಗಳಿಂದ ಏನೇ ಹೇಳಿದರೂ ಜನರಲ್ಲಿ ವಿಶ್ವಾಸ ಮೂಡುತ್ತಿಲ್ಲ. ಕಾಂಗ್ರೆಸ್ ಪಕ್ಷವು ದೇಶದಾದ್ಯಂತ ಜನರನ್ನು ಮತ್ತೆ ತನ್ನತ್ತ ಸೆಳೆದು ವಿಶ್ವಾಸ ಮೂಡಿಸಬೇಕಾದರೆ ಕನಿಷ್ಠ ಇನ್ನೂ 5 ವರ್ಷಗಳ ಕಾಲ ಕಠಿಣ ಶ್ರಮ ಪಡಬೇಕಾಗುತ್ತದೆ. 2029ರ ವೇಳೆಗೆ ಕಾಂಗ್ರೆಸ್ ಅಧಿಕಾರ ಕಳೆದುಕೊಂಡು 15 ವರ್ಷಗಳಾಗಲಿದ್ದು, ಅಲ್ಲಿಯೂ ಪಕ್ಷಕ್ಕೆ ಚೇತರಿಕೆ ಅಷ್ಟು ಸುಲಭವಲ್ಲ ಎಂದು ಅವರು ಹೇಳಿದ್ದಾರೆ.



