ಬೆಂಗಳೂರಿನ ಗಾಳಿಯ ಗುಣಮಟ್ಟ ತೀವ್ರವಾಗಿ ಕುಸಿಯುತ್ತಿದ್ದು, ನಗರದ ವಾತಾವರಣವು “ವಿಷಗಾಳಿ”ಯಾಗಿ ಮಾರ್ಪಡುತ್ತಿದೆ. ಇತ್ತೀಚಿನ ಪ್ರಮುಖ ಅಧ್ಯಯನಗಳು ಮತ್ತು ಸಂಶೋಧನಾ ಸಂಸ್ಥೆಗಳ (CSE, NIAS, ಮತ್ತು ಬೆಂಗಳೂರು ವಿಶ್ವವಿದ್ಯಾಲಯ) ವರದಿಗಳ ಪ್ರಕಾರ ಬೆಂಗಳೂರಿನ ಜನ ದಿನದ 24 ಗಂಟೆಯಲ್ಲಿ 16 ಗಂಟೆ ವಿಷಗಾಳಿಯನ್ನೇ ಉಸಿರಾಡುತ್ತಿದ್ದಾರೆ. ಬೆಂಗಳೂರಿಗರು ಎಚ್ಚೆತ್ತುಕೊಳ್ಳಲೇಬೇಕಾದ ವಿಷಯ ಇದು.
ಸೆಂಟರ್ ಫಾರ್ ಸೈನ್ಸ್ ಅಂಡ್ ಎನ್ವಿರಾನ್ಮೆಂಟ್ (CSE) ಇತ್ತೀಚೆಗೆ ನಡೆಸಿದ ವಿಶ್ಲೇಷಣೆಯ ಪ್ರಕಾರ, ಬೆಂಗಳೂರಿನಲ್ಲಿ ಅಪಾಯಕಾರಿ ಮಟ್ಟದ ನೆಲಮಟ್ಟದ ಓಜೋನ್ (Ground-level Ozone) ಪತ್ತೆಯಾಗಿದೆ. ಕೇವಲ 71 ದಿನಗಳ ಅವಧಿಯಲ್ಲಿ ಬೆಂಗಳೂರು ಬರೋಬ್ಬರಿ 55 ದಿನಗಳ ಕಾಲ ಅಪಾಯಕಾರಿ ಮಟ್ಟವನ್ನು ದಾಖಲಿಸಿದೆ. ದಿನಕ್ಕೆ ಸುಮಾರು 16 ಗಂಟೆಗಳ ಕಾಲ ವಿಷಗಾಳಿಯನ್ನೇ ಕುಡಿಯುತ್ತಿದ್ದಾರೆ. ಅಂದ್ರೆ ದಿನದ ಮೂರನೇ ಎರಡರಷ್ಟು ಭಾಗ ಜನರು ಕಲುಷಿತ ಗಾಳಿಗೆ ಒಡ್ಡಿಕೊಳ್ಳುತ್ತಿದ್ದಾರೆ.
ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡೀಸ್ (NIAS), ಬೆಂಗಳೂರು ವಿಶ್ವವಿದ್ಯಾಲಯ ಮತ್ತು IITM ಜಂಟಿಯಾಗಿ ನಡೆಸಿದ 4 ವರ್ಷಗಳ ಸುದೀರ್ಘ ಅಧ್ಯಯನದ ಪ್ರಕಾರ ವಾರ್ಷಿಕವಾಗಿ ವಾಹನಗಳ ಸಂಖ್ಯೆ ಶೇ. 10.6 ರಷ್ಟು ಹೆಚ್ಚುತ್ತಿರುವುದೇ ಸಮಸ್ಯೆಗೆ ಕಾರಣ. ಟ್ರಾಫಿಕ್‌ನಿಂದಾಗಿ ಗಾಳಿಯಲ್ಲಿ ಕಾರ್ಬನ್ ಮಾನಾಕ್ಸೈಡ್ (CO) ಮತ್ತು ಬ್ಲ್ಯಾಕ್ ಕಾರ್ಬನ್ (ಖನಿಜ ಇದ್ದಿಲು) ಹೆಚ್ಚು ಹೆಚ್ಚು ಸೇರುತ್ತಿದೆ. ಸಂಜೆಯಾಗುತ್ತಿದ್ದಂತೆ ವಾತಾವರಣದ ಕೆಳಸ್ತರದ ಪದರವು ಕುಗ್ಗುತ್ತದೆ. ಆಗ ವಿಷಗಾಳಿ ನೇರವಾಗಿ ಉಸಿರಾಡುವ ಮಟ್ಟದಲ್ಲೇ ಬಂದು ನೇರವಾಗಿ ಶ್ವಾಸಕೋಶಕ್ಕೆ ನುಗ್ಗುತ್ತದೆ.
ಸುಮಾರು 20 ಲಕ್ಷ ಶಾಲಾ ಮಕ್ಕಳು ಪ್ರತಿದಿನ ಅಪಾಯಕಾರಿ ವಾಯು ಮಾಲಿನ್ಯಕ್ಕೆ ತುತ್ತಾಗುತ್ತಿದ್ದಾರೆ. ಬೆಂಗಳೂರಿನ ಮಕ್ಕಳಲ್ಲಿ ಶೇ. 35 ರಷ್ಟು ಮಕ್ಕಳು ಅಸ್ತಮಾ ಮತ್ತು 5 ವರ್ಷದೊಳಗಿನ ಶೇ. 80 ರಷ್ಟು ಮಕ್ಕಳು ಪದೇ ಪದೇ ಉಸಿರಾಟದ ತೊಂದರೆಗೆ (Wheezing) ತುತ್ತಾಗುತ್ತಿದ್ಧಾರೆ. ವಿಶೇಷವಾಗಿ ಶಾಲೆ ಮುಗಿಯುವ ಸಂದರ್ಭದಲ್ಲೇ ಗಾಳಿಯ ಗುಣಮಟ್ಟ ಅಪಾಯಕಾರಿ ಸ್ಥಿತಿಯಲ್ಲಿದೆ.
‘ಚೋಕಿಂಗ್ ಇನ್ ದಿ ಗಾರ್ಡನ್ ಸಿಟಿ’ (Choking in the Garden City) ವರದಿಯ ಪ್ರಕಾರ, ಬೆಂಗಳೂರಿನ PM2.5 ಕಣಗಳಲ್ಲಿ ವಿಷಕಾರಿ ಭಾರ ಲೋಹಗಳಿವೆ. ಕೋರಮಂಗಲ, ಹೆಚ್‌ಎಸ್‌ಆರ್ ಲೇಔಟ್ ಮತ್ತು ಹರಳೂರು ಭಾಗಗಳಲ್ಲಿ ಗಾಳಿಯಲ್ಲಿ ಮ್ಯಾಂಗನೀಸ್ (Manganese), ನಿಕಲ್ (Nickel) ಮತ್ತು ಸೀಸ (Lead) ಅಂಶಗಳು ವಿಶ್ವ ಆರೋಗ್ಯ ಸಂಸ್ಥೆ (WHO) ನಿಯಮಾವಳಿಗಳಿಗಿಂತ ಹೆಚ್ಚಿವೆ. ಇದು ನರಮಂಡಲ ವ್ಯವಸ್ಥೆಗೇ ಅಪಾಯಕಾರಿ.
ಯಾವ ಪ್ರದೇಶದ ಗುಣಮಟ್ಟ ಡೇಂಜರ್..?
ಸುರಕ್ಷಿತ ಅಥವಾ ಆರೋಗ್ಯಕ್ಕೆ ಸೂಕ್ತವಾದ ಪ್ರದೇಶ ಎಂಬುದೇ ಬೆಂಗಳೂರಿನಲ್ಲಿ ಇಲ್ಲ. ಬೆಂಗಳೂರಿನಲ್ಲಿ ಅತ್ಯಂತ ಹೆಚ್ಚು ವಿಷಗಾಳಿ ಅಥವಾ ವಾಯು ಮಾಲಿನ್ಯವಿರುವ ಪ್ರಮುಖ ಪ್ರದೇಶವೆಂದರೆ ಮೆಜೆಸ್ಟಿಕ್ ಹತ್ತಿರದ ಸಿಟಿ ರೈಲ್ವೆ ಸ್ಟೇಷನ್ (City Railway Station).
ಸಿಟಿ ರೈಲ್ವೆ ಸ್ಟೇಷನ್ (ಮೆಜೆಸ್ಟಿಕ್)
ಬೆಂಗಳೂರಿನಲ್ಲೇ ಅತಿ ಹೆಚ್ಚು ಮಾಲಿನ್ಯವಿರುವ ಮೊದಲ ಹಾಟ್‌ಸ್ಪಾಟ್.
2ನೇ ಸ್ಥಾನ ಕೆಆರ್ ಪುರಂನಲ್ಲಿರುವ ಟಿನ್ ಫ್ಯಾಕ್ಟರಿ. ಪ್ರಸ್ತುತ (ವರ್ಷಗಳಿಂದ) ಫ್ಲೈಓವರ್ ಕಾಮಗಾರಿ ಮತ್ತು ಹೆದ್ದಾರಿ ದಟ್ಟಣೆಯಿಂದಾಗಿ ಇಲ್ಲಿ ಧೂಳು ಮತ್ತು ಕಾರ್ಬನ್ ಪ್ರಮಾಣ ಹೆಚ್ಚು.
ಬಿಟಿಎಂ ಲೇಔಟ್, ಹೆಬ್ಬಾಳ, ಪ್ರಮುಖ ಜಂಕ್ಷನ್‌ಗಳಲ್ಲಿ PM2.5 ಕಣಗಳು ನಿಗದಿತ ಮಿತಿಗಿಂತ ಹೆಚ್ಚಾಗಿರುತ್ತವೆ.
ಕೈಗಾರಿಕಾ ವಲಯಗಳಾದ ಪೀಣ್ಯ ಕೈಗಾರಿಕಾ ಪ್ರದೇಶ (Peenya), ಬೊಮ್ಮಸಂದ್ರ ಮತ್ತು ಜಿಗಣಿ (Bommasandra & Jigani), ವೀರಸಂದ್ರ (Veerasandra), ಹರಳೂರು ಮತ್ತು ಹೆಚ್‌ಎಸ್‌ಆರ್ ಲೇಔಟ್ ಸುತ್ತಮುತ್ತಲಿನ ತ್ಯಾಜ್ಯ ಸಂಸ್ಕರಣಾ ಘಟಕಗಳ ಪ್ರದೇಶ, ಕಸದ ಡಂಪಿಂಗ್ ಯಾರ್ಡ್‌ಗಳ ಕಾರಣದಿಂದ ಬಾಗನಿಪುರ, ಬೆಂಗಳೂರು-ಮೈಸೂರು ರಸ್ತೆ, ನೈಸ್ ರಸ್ತೆ (NICE Road), ಕನಕಪುರ ರಸ್ತೆ, ಮಾಗಡಿ ಮುಖ್ಯ ರಸ್ತೆ ಮತ್ತು ತುಮಕೂರು ರಸ್ತೆಗಳಲ್ಲಿ ಹಗಲಿನ ಅವಧಿಯಲ್ಲಿ PM2.5 ಕಣಗಳ ಸಾಂದ್ರತೆಯು ಅತ್ಯಂತ ಅಪಾಯಕಾರಿ ಮಟ್ಟವನ್ನು ದಾಟುತ್ತದೆ.
ಈಗ ಯಾವ ಪ್ರದೇಶ ಸುರಕ್ಷಿತ ಎಂದು ನೀವೇ ನೋಡಿಕೊಳ್ಳಿ. ರೆಸಿಡೆನ್ಷಿಯಲ್ ಏರಿಯಾಗಳಲ್ಲೂ ಸುರಕ್ಷಿತ ಆರೋಗ್ಯಕರ ವಾತಾವರಣ ಇಲ್ಲ.



