ಇದು ಹೊಸದೇನಲ್ಲ. ಒಂದೆರಡು ವರ್ಷಗಳ ಹಿಂದೆ ಇಡೀ ಭಾರತ ಬೆರಗಾಗಿ ನೋಡುವಂತೆ ಮೆರೆದಿದ್ದ ಕನ್ನಡ ಚಿತ್ರರಂಗ ಮತ್ತೆ ಡಲ್ಲು ಹೊಡೆಯುತ್ತಿದೆ. ಕೆಜಿಎಫ್, ಕಾಂತಾರ, 777 ಚಾರ್ಲಿ, ಗರುಡ ಗಮನ ವೃಷಭ ವಾಹನ ಸಿನಿಮಾಗಳು.. ವ್ಹಾವ್ ಎನಿಸಿದ್ದವು. ಆದರೆ.. ಜಸ್ಟ್ ಎರಡೇ ವರ್ಷಗಳಲ್ಲಿ ಕನ್ನಡ ಚಿತ್ರರಂಗ ಅಯ್ಯೋ ಅಯ್ಯಯ್ಯೋ.. ಎಂದು ಕಣ್ಣೀರಿಡುತ್ತಿದೆ. ಹಾಗಂತ ಕನ್ನಡದಲ್ಲಿ ಸಿನಿಮಾಗಳಿಲ್ಲದೆ ಪರದಾಡುವಂತಾಗಿದೆ ಎಂದೇನಲ್ಲ. ಈಗಾಗಲೇ ನೂರಾರು ಚಿತ್ರಗಳು ತೆರೆಗೆ ಬಂದಿವೆ. ಕೆಲವು ಚಿತ್ರಗಳು ವಿಮರ್ಶಕರ ಮೆಚ್ಚುಗೆ ಗಳಿಸಿದ್ದರೆ.. ಕೆಲವು ಚಿತ್ರಗಳು ಬಂದಿದ್ದು ಗೊತ್ತೇ ಆಗದೆ ಹೊರಟು ಹೋಗಿವೆ. ಇದ್ದುದರಲ್ಲಿ ಒಂದಿಷ್ಟು ಜನರನ್ನು ಥಿಯೇಟರಿಗೆ ಎಳೆದು ತಂದಿದ್ದು ಶಿವಣ್ಣ-ಪ್ರಭುದೇವ-ಯೋಗರಾಜ್ ಭಟ್ ಜೋಡಿಯ ಕರಟಕ ದಮನಕ ಮಾತ್ರ.
ಅತ್ತ ಒಟಿಟಿಯಲ್ಲೂ ಕನ್ನಡ ಚಿತ್ರಗಳಿಗೆ ಬೇಡಿಕೆ ಕಮ್ಮಿಯಾಗಿದೆ. ಈ ನಡುವೆ ದಕ್ಷಿಣ ಭಾರತದಲ್ಲಿಯೇ ಅತೀ ಹೆಚ್ಚು ಲಾಭ ಮಾಡಿದ್ದು ಮಲಯಾಳಂ ಚಿತ್ರರಂಗ. ಈ ವರ್ಷದ ಮೊದಲ 4 ತಿಂಗಳಲ್ಲಿ ಮಲಯಾಳಂ ಚಿತ್ರರಂಗದ ಬಿಸಿನೆಸ್ 1000 ಕೋಟಿ ದಾಟಿದೆ. ಮಲಯಾಳಂನವರು ಎಂದಿನಂತೆ ಅದ್ಧೂರಿ ಚಿತ್ರಗಳನ್ನು ಮಾಡುತ್ತಿಲ್ಲ. ಎಂದಿನಂತೆ.. ಕಥೆ ಮತ್ತು ನಿರೂಪಣೆಯನ್ನೇ ನೆಚ್ಚಿಕೊಂಡು ಸಿನಿಮಾ ಮಾಡುತ್ತಿದ್ದಾರೆ. ಕನ್ನಡದಲ್ಲಿ ಸ್ಟಾರ್ ನಟರ ಚಿತ್ರಗಳಂತೂ ಇಲ್ಲವೇ ಇಲ್ಲ.
ಮಂಜುಮ್ಮೇಲ್ ಬಾಯ್ಸ್ ಅನ್ನೋ ಸಿನಿಮಾ ಸತ್ಯ ಕಥೆ ಆಧರಿಸಿ ಮಾಡಿದ್ದ ಚಿತ್ರ. ಪ್ರವಾಸಕ್ಕೆ ಹೋಗಿದ್ದ ಗುಹೆಯೊಂದಕ್ಕೆ ಗೆಳೆಯರ ತಂಡದಲ್ಲೊಬ್ಬ ಗುಹೆಯೊಳಗೆ ಬಿದ್ದು ಬಿಡ್ತಾನೆ. ಎಷ್ಟೋ ವರ್ಷಗಳಿಂದ ಆ ಗುಹೆಯಲ್ಲಿ ಬಿದ್ದ ಯಾರೊಬ್ಬರೂ ಬದುಕಿ ಬಂದಿಲ್ಲ. ಆತನನ್ನು ಅದೇ ಗೆಳೆಯರ ತಂಡ ಬದುಕಿಸಿ ಕರೆದುಕೊಂಡು ಬರುತ್ತದೆ. ಇದು ಸತ್ಯಕಥೆ. ಸಿನಿಮಾದಲ್ಲಿ ಸ್ಟಾರ್ ನಟರಿಲ್ಲ. ನಾಯಕಿ ಎಂಬ ಪಾತ್ರವೂ ಇಲ್ಲ. ಆದರೆ.. ಮಂಜುಮ್ಮೇಲ್ ಬಾಯ್ಸ್ ಚಿತ್ರ ಗಳಿಸಿದ್ದು 250 ಕೋಟಿಗೂ ಹೆಚ್ಚು.
ಇನ್ನು ಆಡು ಜೀವಿತಂ ಕೂಡಾ ನೈಜ ಕಥೆ. ಪೃಥ್ವಿರಾಜ್ ಸುಕುಮಾರ್ ಅವರು ನಟಿಸಿದ್ದ ಸಿನಿಮಾಗೆ 82 ಕೋಟಿ ಖರ್ಚಾಗಿತ್ತು. ಆ ಸಿನಿಮಾ 150 ಕೋಟಿಗೂ ಹೆಚ್ಚು ಬಿಸಿನೆಸ್ ಮಾಡಿದೆ.
ಪ್ರೇಮುಲು ಎಂಬ ಹೊಸಬರ ಸಿನಿಮಾ 136 ಕೋಟಿ, ಭ್ರಮಯುಗಂ ಅನ್ನೋ ಭ್ರಮೆ ಹುಟ್ಟಿಸುವ ಸಿನಿಮಾ 58 ಕೋಟಿ, ವರ್ಶಂಗುಳುಕ್ಕು ಶೇಷಂ 81 ಕೋಟಿ, ಅನ್ವೇಶಿಪ್ಪಿನ್ ಕಂಡೆದುಮ್ 40 ಕೋಟಿ, ಅಬ್ರಾಮ್ ಓಜ್ಲರ್ 40 ಕೋಟಿ ಬಿಸಿನೆಸ್ ಮಾಡಿದೆ. ಇಷ್ಟೂ ಚಿತ್ರಗಳಲ್ಲಿ ಮಮ್ಮೂಟಿ 2 ಚಿತ್ರಗಳಲ್ಲಿ ನಟಿಸಿದ್ದಾರೆ. ಇನ್ನೊಂದು ಸಿನಿಮಾ ರಾಜ್ ಬಿ ಶೆಟ್ಟಿ ಜೊತೆ ನಟಿಸಿರುವ ಟರ್ಬೋ ಇದೇ ತಿಂಗಳು ರಿಲೀಸ್ ಆಗುತ್ತಿದೆ. ಅಂದರೆ.. ವರ್ಷದ ಮೊದಲ 5 ತಿಂಗಳಲ್ಲಿ ಸ್ಟಾರ್ ನಟರೊಬ್ಬರ 3 ಚಿತ್ರಗಳು ರಿಲೀಸ್ ಆದಂತೆ. ಮತ್ತೊಬ್ಬ ಸ್ಟಾರ್ ನಟ ಪೃಥ್ವಿರಾಜ್, ನೊವಿನೋ ಥಾಮಸ್ ಸಿನಿಮಾ ಕೂಡಾ ಬಂದಿವೆ. ಮೋಹನ್ ಲಾಲ್ ಮಗ ಪ್ರಣವ್ ಕೂಡಾ ಗೆದ್ಧಾಗಿದೆ. ಒಟ್ಟಾರೆ ಬಿಸಿನೆಸ್ 1000 ಕೋಟಿಯ ಗಡಿ ದಾಟಿದೆ.
ಕನ್ನಡದಲ್ಲಿ ಹಳೆಯ ಚಿತ್ರಗಳನ್ನೇ ರೀ-ರಿಲೀಸ್ ಮಾಡಲಾಗುತ್ತಿದೆ. ಆರಂಭದ 5 ತಿಂಗಳಲ್ಲಿ ಕರಟಕ ದಮನಕ ಹೊರತು ಪಡಿಸಿ ಒಂದೇ ಒಂದು ಸ್ಟಾರ್ ನಟರ ಸಿನಿಮಾ ಕೂಡಾ ರಿಲೀಸ್ ಆಗಿಲ್ಲ. ಧ್ರುವ ಸರ್ಜಾ ಅವರ 2 ಚಿತ್ರಗಳು ಈಗ ಬಹುತೇಕ ರೆಡಿ ಇವೆ. ಯಾವುದು ಫಸ್ಟ್ ಅನ್ನೋ ಫೈಟ್ ಶುರು ಆಗಿದೆ. ದುನಿಯಾ ವಿಜಯ್ʻರ ಭೀಮ, ಉಪೇಂದ್ರರ ಯುಐ ಚಿತ್ರಗಳು ಆಲ್ಮೋಸ್ಟ್ ಮುಗಿದಿವೆ. ಇನ್ನು ದರ್ಶನ್, ಗಣೇಶ್ ಚಿತ್ರಗಳು ಸದ್ಯಕ್ಕಿಲ್ಲ. ಯಶ್, ರಿಷಬ್ ಶೆಟ್ಟಿ ಚಿತ್ರಗಳು ಈ ವರ್ಷಕ್ಕೇ ಇಲ್ಲ. ಕನ್ನಡ ಚಿತ್ರರಂಗ ಡಲ್ಲು ಹೊಡೆಯುತ್ತಿದೆ ಎನ್ನುವುದಂತೂ ಸತ್ಯ.



