ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡು ತಿಂಗಳಷ್ಟೆ ಕಳೆದಿದೆ. ಆಗಲೇ ಬಿಕೆ ಹರಿಪ್ರಸಾದ್ (BK Hariprasad) , ಬಂಡಾಯದ ಬಾವುಟ ಹಾರಿಸಿದ್ದಾರೆ. ಅತೃಪ್ತ ಶಾಸಕರು ಸಚಿವರ ಕಾರ್ಯವೈಖರಿಗೆ ಬಗ್ಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಮಾಧ್ಯಮಗಳಿಗೆ (Media) ಸಿಗುವಂತೆ ಮಾಡುವ ಮೂಲಕ ದೊಡ್ಡ ಹಲ್ ಚಲ್ ಎಬ್ಬಿಸಿದ್ದಾರೆ. ಆದರೆ ಇದೆಲ್ಲವನ್ನೂ ಯಶಸ್ವಿಯಾಗಿ ನಿಭಾಯಿಸಿದ್ದರಲ್ಲೇ ಸಿದ್ದರಾಮಯ್ಯ (CM Siddaramaiah) ಜಾಣ್ಮೆ ಇದೆ. ನಾಯಕತ್ವದ ಗುಟ್ಟೂ ಇದೆ. ತಂತ್ರಗಾರಿಕೆಯೂ ಇದೆ.
ಗ್ಯಾರಂಟಿ ಯೋಜನೆಗಳನ್ನ (Gurarantee Scheme) ಜಾರಿ ಮಾಡಿ ಬೀಗುತ್ತಿದ್ದ ಸಿದ್ದರಾಮಯ್ಯ ಸರ್ಕಾರಕ್ಕೆ, ಶಾಸಕರ ಸಭೆ ನಡೆಸಬೇಕಾದ ಅನಿವಾರ್ಯತೆ, ಸಚಿವರ ವಿರುದ್ಧ ಸಿಡಿದೆದ್ದ ಶಾಸಕರಿಗೆ ಸಿಎಂ ಸಾಂತ್ವನ ಹೇಳಬೇಕಾದ ಸನ್ನಿವೇಶ ಸೃಷ್ಟಿಯಾಗಿದೆ. ಇಷ್ಟಕ್ಕೂ ಶಾಸಕರ ಅಸಮಾಧಾನದ ಮೂಲ ಕೆಲವು ಸಚಿವರ ವರ್ತನೆಯೇ ಆಗಿತ್ತು ಎನ್ನುವುದು ಗುಟ್ಟೇನಲ್ಲ.
ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ತಮ್ಮ ಮಾತು ನಡೆಯದೇ ಇರೋದು ಶಾಸಕರ ಅತೃಪ್ತಿಯ ಮೂಲ ಕಾರಣ. ಸ್ಥಳೀಯ ಅಧಿಕಾರಿಗಳ ವರ್ಗಾವಣೆ ವಿಚಾರದಲ್ಲಿ ಸಚಿವರು ನಮ್ಮ ಮನವಿ ಆಲಿಸುತ್ತಿಲ್ಲ. ಜಿಲ್ಲಾ ಮಟ್ಟದ ಅಧಿಕಾರಿಗಳನ್ನು ಸಚಿವರೇ ನೇರವಾಗಿ ವರ್ಗಾವಣೆ ಮಾಡ್ತಿದ್ದಾರೆ. ಎಲ್ಲಕ್ಕಿಂತಾ ಹೆಚ್ಚಾಗಿ ಚುನಾವಣೆ ಸಂದರ್ಭದಲ್ಲಿ ನಮ್ಮ ವಿರುದ್ಧ ಕೆಲಸ ಮಾಡಿದ ಅಧಿಕಾರಿಗಳನ್ನ ಈಗಲೂ ನಮ್ಮ ಕ್ಷೇತ್ರದಲ್ಲೇ ಉಳಿಸಿದ್ದಾರೆ. ನಮಗೆ ಬೇಡವಾದ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಅಂತಾ ಮನವಿ ಮಾಡಿದರೂ ಸಚಿವರು ಸಹಕಾರ ಕೊಡ್ತಿಲ್ಲ ಅನ್ನೋದು ಮೊದಲ ದೂರಾಗಿತ್ತು.
ಈ ಕುರಿತು ಮಾತನಾಡಿದ ಸಿದ್ದರಾಮಯ್ಯ (CM Siddaramaiah) ಎಲ್ಲ ಸಚಿವರಿಗೂ ಶಾಸಕರ ಮಾತು ಕೇಳಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಶಾಸಕರ ಎಲ್ಲ ಸಮಸ್ಯೆಗಳನ್ನೂ ಬಗೆಹರಿಸುವ ವಾಗ್ದಾನ ಮಾಡಿದ್ಧಾರೆ. ಇನ್ಮುಂದೆ ಪ್ರತಿ ತಿಂಗಳಿಗೊಮ್ಮೆ ಜಿಲ್ಲಾವಾರು ಕಾಂಗ್ರೆಸ್ ಶಾಸಕರ ಸಭೆ ಕರೆದು ಶಾಸಕರ ಪ್ರತಿಯೊಂದು ಸಮಸ್ಯೆಗಳನ್ನೂ ಖುದ್ದಾಗಿ ಆಲಿಸುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ. ಶಾಸಕರ ಶಿಫಾರಸ್ಸಿಗೆ ಮನ್ನಣೆ ನೀಡುವಂತೆ ಸಚಿವರಿಗೆ ತಾಕೀತು ಮಾಡ್ತೇನೆ ಎಂದೂ ಸಿದ್ದರಾಮಯ್ಯ (CM Siddaramaiah) ಹೇಳಿದ್ದಾರೆ. ಶಾಸಕರು ಯಾವುದೇ ಸಮಸ್ಯೆ ಇದ್ದರೂ ನೇರವಾಗಿ ನನ್ನನ್ನು ಸಂಪರ್ಕಿಸಿ, ನಿಮ್ಮ ಸಮಸ್ಯೆ ಬಗೆಹರಿಸಿಕೊಳ್ಳಿ ಎಂದು ಮನವಿ ಮಾಡಿದ್ದಾರೆ.
ಸಿದ್ದರಾಮಯ್ಯ ಗೆದ್ದಿದ್ದೆಲ್ಲಿ ಎಂದು ನೋಡಿದರೆ ಶಾಸಕರ ಪತ್ರದ ಮೂಲಕ ತಮ್ಮದೇ ಸಂಪುಟದಲ್ಲಿ ಹಿಡಿತಕ್ಕೆ ಸಿಗದೆ ಹೋಗುತ್ತಿದ್ದ ಕೆಲವು ಸಚಿವರನ್ನು ಕಂಟ್ರೋಲಿಗೆ ತೆಗೆದುಕೊಂಡಿದ್ದು. ಕ್ಷೇತ್ರದ ಸ್ಥಳೀಯ ವರ್ಗಾವಣೆ ವಿಷಯದಲ್ಲಿ ಶಾಸಕರು ಹೇಳಿದಂತೆ ಕೇಳಬೇಕು ಎಂದು ಸಚಿವರಿಗೆ ಸೂಚನೆ ಕೊಟ್ಟು, ಶಾಸಕರನ್ನೂ ಗೆದ್ದರು. ಜಿಲ್ಲಾ ಮಟ್ಟದ ತೀರ್ಮಾನ ಸಚಿವರಿಗೆ ಎಂದ ಸಿದ್ದರಾಮಯ್ಯ, ಆ ರೀತಿ ಆಗದೇ ಇದ್ದರೆ ತಮ್ಮ ಗಮನಕ್ಕೆ ತರತಕ್ಕದ್ದು ಎಂದು ಠರಾವು ಹೊರಡಿಸಿ ಮತ್ತೊಮ್ಮೆ ಅಧಿಕಾರವನ್ನು ತಮ್ಮ ಸುತ್ತಲೇ ಇರುವಂತೆ ನೋಡಿಕೊಂಡರು. ಇದೆಲ್ಲದರ ಜೊತೆಗೆ ಸಮಸ್ಯೆಗಳನ್ನು ತಮ್ಮ ಗಮನಕ್ಕೆ ತನ್ನಿ, ನಾನು ಬಗೆಹರಿಸುತ್ತೇನೆ. ಪತ್ರ ಬರೆಯುವುದಕ್ಕೆ, ಸುದ್ದಿ ಮಾಡುವುದಕ್ಕೆ ಹೋಗಬೇಡಿ ಎಂಬ ಸಂದೇಶ ಕೊಟ್ಟರು. ಆ ಮೂಲಕ ಹೈಕಮಾಂಡ್ ಹಂತದಲ್ಲೂ ಸಿದ್ದರಾಮಯ್ಯ ಗೆದ್ದರು. ಜೊತೆಗೆ ನೂರಾರು ತಹಸೀಲ್ದಾರ್`ಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿದ, ಪಿಡಿಓಗಳನ್ನು ಇಲಾಖೆಯಲ್ಲೇ ತಡೆಯಲು ಹೊರಟಿದ್ದವರನ್ನು ಮೊಟಕಿದರು.
ಇದೆಲ್ಲವೂ ಮುಗಿದ ಮೇಲೆ ಮಲ್ಲಿಕಾಜುನ ಖರ್ಗೆ (Mallikarjuna Kharge) ಮತ್ತು ರಾಹುಲ್ ಗಾಂಧಿ (Rahul Gandhi) ಪ್ರತ್ಯೇಕ ಸಭೆ ನಡೆಸಲಿದ್ದಾರೆ. ಅವರ ಸಭೆಯ ಹೊತ್ತಿಗೆ ವಿವಾದಗಳು ಒಂದು ಹಂತಕ್ಕೆ ಬಂದಿರುತ್ತವೆ. ಸಿದ್ದರಾಮಯ್ಯ (CM Siddaramaiah) ಮತ್ತೊಮ್ಮೆ ಗೆಲ್ಲುತ್ತಾರೆ.



