“ದರ್ಶನ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಗಳು ಸತ್ಯಕ್ಕೆ ದೂರವಾಗಿವೆ. ಅವರು ಜೈಲಿನಲ್ಲಿ ಆರಾಮವಾಗಿದ್ದಾರೆ (He is doing fine). ಇಂತಹ ಸುಳ್ಳು ವದಂತಿಗಳನ್ನು ನಂಬಿ ಯಾರೂ ಜೈಲಿನ ಹತ್ತಿರ ಬರಬಾರದು” ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್ ಅವರೇ ನೀಡಿದ ಸ್ಪಷ್ಟನೆ ಇದು. ಇಂತಹ ಗಾಳಿ ಸುದ್ದಿಗಳು ಹಬ್ಬೋದಾದರೂ ಏಕೆ.. ಹಬ್ಬಿಸೋದಾದರೂ ಯಾರು.. ಇದು ಗೊತ್ತಾಗಬೇಕಿದೆ. ನಟ ದರ್ಶನ್ ಅಭಿಮಾನಿಗಳು ಕೇಳುತ್ತಿರೋ ಪ್ರಶ್ನೆಗಳೇ ಇವು. ಏಕೆಂದರೆ ದರ್ಶನ್ ಕುರಿತು ಗಾಳಿ ಸುದ್ದಿಗಳು ಹರಡುವುದು ಹೊಸದಲ್ಲ. ಈ ಹಿಂದೆಯೂ ಇಂತಹ ವದಂತಿಗಳು ಹರಡಿವೆ.
ಪತ್ನಿ ವಿಜಯಲಕ್ಷ್ಮಿ ಹಾರ್ಟ್ ಬ್ರೇಕ್ ಪೋಸ್ಟಿಗೂ.. ವದಂತಿಗೂ ಲಿಂಕ್ :
ಇತ್ತೀಚೆಗೆ ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದಾದ ಬೆನ್ನಲ್ಲೇ ಅವರ ಪತ್ನಿ ವಿಜಯಲಕ್ಷ್ಮಿ ಅವರು ತೀವ್ರ ಭಾವುಕರಾಗಿ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಂಚಿಕೊಂಡಿದ್ದರು. ಈ ಎಲ್ಲಾ ಬೆಳವಣಿಗೆಗಳ ಬೆನ್ನಲ್ಲೇ ಭಾನುವಾರ ರಾತ್ರಿಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಯಾರೋ ಕಿಡಿಗೇಡಿಗಳು ಈ ಆತ್ಮಹತ್ಯೆಯ ಸುಳ್ಳು ಸುದ್ದಿಯನ್ನು ಹಬ್ಬಿಸಿದ್ದರು.
ವದಂತಿ ಹರಡುತ್ತಿದ್ದಂತೆ ದರ್ಶನ್ ಅಭಿಮಾನಿಗಳಲ್ಲಿ ಆತಂಕ ಮೂಡಿ, ಪರಪ್ಪನ ಅಗ್ರಹಾರ ಜೈಲಿನ ಸುತ್ತಮುತ್ತ ಕೆಲಕಾಲ ಬಿಗುವಿನ ವಾತಾವರಣ ಸೃಷ್ಟಿಯಾಗಿತ್ತು. ತಕ್ಷಣ ಎಚ್ಚೆತ್ತ ಜೈಲು ಸಿಬ್ಬಂದಿ ಮತ್ತು ಪೊಲೀಸರು ಜಂಟಿಯಾಗಿ ಪರಿಶೀಲನೆ ನಡೆಸಿ ಸುದ್ದಿ ಸುಳ್ಳೆಂದು ಧೃಡಪಡಿಸಿದರು. ನಟ ದರ್ಶನ್ ತೂಗುದೀಪ ಅವರು ಜೈಲಿನಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯು ಸಂಪೂರ್ಣ ಸುಳ್ಳು ಮತ್ತು ಆಧಾರರಹಿತ ವದಂತಿಯಾಗಿದೆ.
ಆದರೆ ಈ ಸುದ್ದಿ ಹಬ್ಬಿಸಿದ ಮೂಲಪುರುಷ ಯಾರು ಎನ್ನುವುದರ ಬಗ್ಗೆ ಪೊಲೀಸರೇನೂ ತನಿಖೆ ನಡೆಸುತ್ತಿಲ್ಲ. ಹಾಗಾಗಿ ವದಂತಿ ಹಬ್ಬಿಸಿದವನು ಸದ್ಯಕ್ಕೆ ಸೇಫ್.
ದರ್ಶನ್ ಕುರಿತ ವದಂತಿಗಳು ಹಾಗೂ ಸತ್ಯ ಏನೆಂದು ನೋಡಿದರೆ.. ಇದು ಹೊಸದೇನಲ್ಲ.
ಡಿವೋರ್ಸ್ ವದಂತಿಗಳು : ಕೊಲೆ ಪ್ರಕರಣದ ಹಿನ್ನೆಲೆ: ಚಿತ್ರನಟ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನಟ ದರ್ಶನ್ ಜೈಲು ಸೇರಿದ ಮೇಲೆ ಜಯಲಕ್ಷ್ಮಿ ಅವರು ಪತಿಯಿಂದ ದೂರವಾಗಲಿದ್ದಾರೆ ಮತ್ತು ಶೀಘ್ರದಲ್ಲೇ ವಿಚ್ಛೇದನ ನೀಡಲಿದ್ದಾರೆ ಎಂಬ ಊಹಾಪೋಹಗಳು ಹರಡಿದ್ದವು. ಆದರೆ ಕಾನೂನು ಹೋರಾಟದಲ್ಲಿ ವಿಜಯಲಕ್ಷ್ಮಿ ಪತಿಯ ಪರವಾಗಿ ನಿಂತಿದ್ದು, ದರ್ಶನ್ ಆತ್ಮಸ್ಥೈರ್ಯವಾದರು. ಇತ್ತೀಚೆಗೆ ಸುಪ್ರೀಂ ಕೋರ್ಟ್ ದರ್ಶನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿದಾಗ ಅವರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಬೇಸರ ಮತ್ತು ಭಾವುಕತೆಯನ್ನು ಹಂಚಿಕೊಂಡಿದ್ದರು.
ನಟಿ ಪವಿತ್ರಾ ಗೌಡ ಹಾಗೂ ದರ್ಶನ್ ನಡುವಿನ ಸಂಬಂಧದ ಕುರಿತು ವದಂತಿಗಳು ಎದ್ದಾಗ, ವಿಜಯಲಕ್ಷ್ಮಿ ಅವರು ತಾವೇ ದರ್ಶನ್ ಅವರ ಏಕೈಕ ಕಾನೂನುಬದ್ಧ ಪತ್ನಿ ಎಂಬುದನ್ನು ಸ್ಪಷ್ಟಪಡಿಸಿದ್ದರು.
ಕೌಟುಂಬಿಕ ಕಲಹದ ವದಂತಿ: ಈ ಹಿಂದೆ ದರ್ಶನ್ ಮತ್ತು ವಿಜಯಲಕ್ಷ್ಮಿ ಮಧ್ಯೆ ಮತ್ತೆ ಗಲಾಟೆಯಾಗಿದೆ, ವಿಜಯಲಕ್ಷ್ಮಿ ಅವರು ಮಹಿಳಾ ಆಯೋಗಕ್ಕೆ ದೂರು ನೀಡಿದ್ದಾರೆ ಹಾಗೂ ಪತ್ನಿ-ಅತ್ತೆಯ ಮೇಲೆ ದರ್ಶನ್ ಹಲ್ಲೆ ಮಾಡಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ತೀವ್ರವಾಗಿ ಹರಡಿದ್ದವು. ಕೊನೆಗೆ ಅಂಥದ್ದೇನೂ ಆಗಿಲ್ಲ ಎಂದು : ಈ ವದಂತಿಗಳಿಗೆ ಸ್ವತಃ ವಿಜಯಲಕ್ಷ್ಮಿ ಅವರೇ ಟ್ವಿಟರ್ X ಮೂಲಕ ಬ್ರೇಕ್ ಹಾಕಿದ್ದರು. “ಹರಿದಾಡುತ್ತಿರುವ ಗಾಳಿಸುದ್ದಿಗಳಿಗೆ ಯಾವುದೇ ಆಧಾರವಿಲ್ಲ” (All the rumours doing rounds are baseless) ಎಂದು ಹೇಳುವ ಮೂಲಕ ಸಂಸಾರದ ಜಗಳದ ಸುದ್ದಿಯನ್ನು ಸಂಪೂರ್ಣವಾಗಿ ಅಲ್ಲಗಳೆದಿದ್ದರು.
ಕೋವಿಡ್ ಪಾಸಿಟಿವ್ ವದಂತಿ: ದೇಶದಲ್ಲಿ ಕೊರೊನಾ ವೈರಸ್ ತೀವ್ರವಾಗಿದ್ದ ಸಮಯದಲ್ಲಿ, ದರ್ಶನ್ ಪತ್ನಿ ವಿಜಯಲಕ್ಷ್ಮಿ ಅವರಿಗೆ ಕೊರೊನಾ ಪಾಸಿಟಿವ್ ಬಂದಿದೆ ಎಂಬ ಸುಳ್ಳು ಸುದ್ದಿ ಹಬ್ಬಿತ್ತು. ವಾಸ್ತವವಾಗಿ ವಿಜಯಲಕ್ಷ್ಮಿ ಅವರಿದ್ದ ಅಪಾರ್ಟ್‌ಮೆಂಟ್‌ನಲ್ಲಿ ಒಬ್ಬರಿಗೆ ಕೊರೊನಾ ಬಂದಿತ್ತು. ವಿಜಯಲಕ್ಷ್ಮಿ ಅವರಿಗೆ ಅಲ್ಲ. ಇಂತಹ ವದಂತಿಗಳು ನೂರಾರಿವೆ.



