ಸುಧಾರಾಣಿಯವರು ತಮ್ಮ ಜೀವನದಲ್ಲಿ ಕಷ್ಟಗಳನ್ನೇ ನೋಡಲಿಲ್ಲ ಎಂಬಂತೆ ಬೆಳೆದವರು. ತಂದೆ ತಾಯಿಗಿಂತ ಹೆಚ್ಚಾಗಿ ಪ್ರೀತಿಸುವ ಅಣ್ಣ, ಅಣ್ಣನಿಗೆ ತಕ್ಕ ಅತ್ತಿಗೆ, ಹೈಸ್ಕೂಲು ದಾಟುವ ಮೊದಲೇ ಸ್ಟಾರ್ ನಟಿ.. ಜನಪ್ರಿಯತೆ, ಹಣ ಮತ್ತು ಕುಟುಂಬದಲ್ಲಿ ಶಾಂತಿ. ಎಲ್ಲವೂ ಇತ್ತು. ಸಿಕ್ಕಿತ್ತು.
ನಟಿ ಸುಧಾರಾಣಿ ನಾಯಕಿಯಾಗಿದ್ದು ಆನಂದ್ ಚಿತ್ರದಿಂದ. ಆಗ ಸುಧಾರಾಣಿಯವರಿಗೆ ಜಸ್ಟ್ 12 ವರ್ಷವಷ್ಟೇ. ಮುಂದಿನ 10 ವರ್ಷ ಚಿತ್ರರಂಗವನ್ನು ಅಕ್ಷರಶಃ ಆಳಿದ ಸುಧಾರಾಣಿ, ಶಿವ ರಾಜ್ ಕುಮಾರ್, ರಮೇಶ್, ರವಿಚಂದ್ರನ್, ಅಂಬರೀಷ್, ವಿಷ್ಣುವರ್ಧನ್, ಅನಂತನಾಗ್, ರಾಮ್ ಕುಮಾರ್.. ಹೀಗೆ ಎಲ್ಲ ನಟರ ಜೊತೆ ನಟಿಸಿದರು. ಡಾ. ರಾಜ್ ಅವರಿಗೆ ಮಗಳ ಪಾತ್ರದಲ್ಲಿ ನಟಿಸುತ್ತ, ಮಗಳಂತೆಯೇ ಬದುಕಿದ್ದ ನಟಿ ಸುಧಾರಾಣಿ.
22 ವರ್ಷಕ್ಕೇ ಮದುವೆಯಾದರು. ಸಂಜಯ್ ಎಂಬುವವರ ಜೊತೆ ಮದುವೆಯಾಗಿ ಅಮೆರಿಕಕ್ಕೆ ಶಿಫ್ಟ್ ಆದರು. ಆ ಮದುವೆ ಎರಡೇ ವರ್ಷಕ್ಕೆ ಮುಗಿಯಿತು.
ನಾನು ಕಷ್ಟದಲ್ಲಿದ್ದಾಗ ನನ್ನನ್ನು ತಾಯಿಯಂತೆ ನೋಡಿಕೊಂಡಿದ್ದ ಅಣ್ಣ, ಅತ್ತಿಗೆ ನನ್ನನ್ನು ಬದುಕಿಸಿಕೊಂಡರು ಎಂದಷ್ಟೇ ಹೇಳಿದ್ದ ಸುಧಾರಾಣಿ ಇದೇ ಮೊದಲ ಬಾರಿ ತಮ್ಮ ಮೊದಲ ಪತಿ ನೀಡಿದ್ದ ಸಂಕಷ್ಟಗಳನ್ನು ಸಣ್ಣದಾಗಿ ಹೇಳಿಕೊಂಡಿದ್ದಾರೆ.
ಆ ವ್ಯಕ್ತಿಗೆ ನನ್ನ ಮೇಲೆ ಏನು ದ್ವೇಷ ಇತ್ತೋ ಗೊತ್ತಿಲ್ಲ. ಆದರೆ ಅವರಿಗೆ ಮಾನಸಿಕ ಸಮಸ್ಯೆ ಸೇರಿ, ಕೆಲವೊಂದು ಸಮಸ್ಯೆಗಳಿದ್ದವು. ಅದನ್ನ ಯಾರು ಒಪ್ಪೋಕೆ ರೆಡಿ ಇರ್ಲಿಲ್ಲ. ಸಮಸ್ಯೆಯನ್ನು ಅರ್ಥ ಮಾಡಿಕೊಂಡು ಚಿಕಿತ್ಸೆ ಕೊಡಿಸಬೇಕು ಅನ್ನೋದು ಯಾರಿಗೂ ತಿಳಿಯಲಿಲ್ಲ. ಮೊದಲಿಗೆ ನಾನು ಇವತ್ತು ಸರಿ ಹೋಗಬಹುದು, ನಾಳೆ ಸರಿ ಹೋಗಬಹುದು ಎಂದು ಎಲ್ಲವನ್ನೂ ಸಹಿಸಿಕೊಂಡೆ, ಆಗೋದೇ ಇಲ್ಲ ಎನಿಸಿದಾಗ ಆ ಸಂಬಂಧದಿಂದಲೇ ಹೊರಬರಲು ನಿರ್ಧರಿಸಿದೆ ಎಂದಿದ್ದಾರೆ ಸುಧಾರಾಣಿ.
ಸುಧಾರಾಣಿಯವರ ಮೊದಲ ಗಂಡ ಡಾಕ್ಟರ್ ಆಗಿದ್ದ. ಅನಸೇಷಿಯಾ ಸ್ಪೆಷಲಿಸ್ಟ್ ಆಗಿದ್ದ. ಸುಧಾರಾಣಿಯವರಿಗೆ ಔಷಧ ಕೊಡುವ ನೆಪದಲ್ಲಿ ಮತ್ತೇನೋ ಔಷಧ ಕೊಟ್ಟಿದ್ದ. ಸುಧಾರಾಣಿ ಸಾವಿನ ಕದ ತಟ್ಟಿ ವಾಪಸ್ ಬಂದಿದ್ದರು.
ಆಗ ಸುಧಾರಾಣಿಯವರ ನೆರವಿಗೆ ನಿಂತಿದ್ದು ಎಂದಿನಂತೆ ಅವರ ಅಣ್ಣ, ಪಾರ್ವತಮ್ಮ ಮತ್ತು ಅಂಬರೀಷ್. ತಮ್ಮ ಎಲ್ಲ ಕಾಂಟ್ಯಾಕ್ಟ್ ಬಳಸಿ ಸುಧಾರಾಣಿಯವರನ್ನು ಪಾಪಿಯ ಬಂಧನದಿಂದ ಹೊರ ತಂದಿದ್ದರು.
ಸಂಸಾರ ಶುರುವಾದ ಆರಂಭದಲ್ಲೇ ಸಮಸ್ಯೆ ಗೊತ್ತಾಗಿತ್ತು, ಆದರೆ ಗೊತ್ತಾದ ಕೂಡಲೇ ಬಿಟ್ಟು ಬರೋಕೆ ಸಾಧ್ಯ ಇಲ್ಲ. ಒಂದಷ್ಟು ದಿನ ಕಾಯಬೇಕು. ಸರಿ ಮಾಡೋಕೆ ಆದ್ರೆ ಪ್ರಯತ್ನಿಸಬೇಕು. ಸಮಸ್ಯೆ ಇದೆ ಎಂದ ಕೂಡ್ಲೆ ಬಿಟ್ಟು ಬರೋ ನಿರ್ಧಾರ ಹೇಗೆ ತೆಗೊಳೋದು, ಹಾಗಾಗಿ ಒಂದಷ್ಟು ದಿನ ಸಹಿಸಿಕೊಳ್ಳುವ ಪ್ರಯತ್ನ ಮಾಡಿದೆ. ಸಾಧ್ಯವಾಗದೇ ಇದ್ದಾಗ ಬಿಟ್ಟು ಬಂದೆʼʼ ಎಂದಿದ್ದಾರೆ ಸುಧಾರಾಣಿ.
ಸುಧಾರಾಣಿಯವರನ್ನು ಕೊಲ್ಲುವಷ್ಟು ಮಾನಸಿಕ ಸಮಸ್ಯೆ ಇದ್ದ ವ್ಯಕ್ತಿ, ಸಂಸಾರದಲ್ಲಿ ಏನೇನೆಲ್ಲ ನರಕ ಸೃಷ್ಟಿಸಿರಬಹುದು ಎಂಬುದು ಒಂದು ಅಂದಾಜು ಮಾತ್ರವೇ.
ಡಿವೋರ್ಸ್ ಅಂದಾಗ ಭಯ, ಆತಂಕ ಇತ್ತು. ಸಿನಿಮಾ ಇಂಡಸ್ಟ್ರಿ ಬಿಟ್ಟಿದ್ದೆ, ವಿದ್ಯಾಭ್ಯಾಸವೂ ಅರ್ಧಕ್ಕೆ ನಿಂತಿತ್ತು, ಮುಂದೆ ಏನು ಮಾಡಬೇಕು ಎನ್ನುವುದು ಗೊತ್ತಾಗಲಿಲ್ಲ. ಆಮೇಲೆ ಎಲ್ಲವನ್ನೂ ಎದುರಿಸೋದನ್ನ ಕಲಿತೆ. ಸಮಾಜಕ್ಕೆ ಅನಿಸಿದ್ದು ಅವರು ಹೇಳ್ತಾರೆ, ಆದರೆ ನನ್ನ ಜೀವನದಲ್ಲಿ ಏನು ಆಗ್ತಿದೆ ಅನ್ನೋದು ಅವರಿಗೆ ಗೊತ್ತಿಲ್ಲ ಅಲ್ವಾ? ಹಾಗಾಗಿ ಯಾಕೆ ಹೆದರಬೇಕು. ಸಿನಿಮಾ ಕೆಲವರಿಗೆ ಇಷ್ಟವಾದರೆ, ಕೆಲವರಿಗೆ ಇಷ್ಟವಾಗಲ್ಲ ಅದನ್ನು ಹೇಗೆ ಸ್ವೀಕರಿಸುತ್ತೀವೋ ಇದನ್ನೂ ಹಾಗೆ ಸ್ವೀಕರಿಸಬೇಕು ಎಂದು ನನ್ನ ಜೀವನದ ನಿರ್ಧಾರ ತಾನೆ ತೆಗೆದುಕೊಳ್ಳಲು ತೀರ್ಮಾನಿಸಿದ್ದಾಗಿ ಎಂದು ಹೇಳಿಕೊಂಡಿದ್ದಾರೆ ಸುಧಾರಾಣಿ.
ಡಿವೋರ್ಸ್ ಆದ ಮೇಲೆ ಸುಧಾರಾಣಿ ಗೋವರ್ಧನ್ ಅವರ ಜೊತೆ ಮದುವೆಯಾದರು. ಗೋವರ್ಧನ್ ಕುಟುಂಬಕ್ಕೆ ಗೊತ್ತಿದ್ದವರೇ. ಅವರಿಗೆ ಒಬ್ಬ ಮಗಳಿದ್ದಾರೆ. ಸಂಸಾರ ಸುಖವಾಗಿದೆ.



