ಕುಮಾರಸ್ವಾಮಿ ಮತ್ತು ಡಿಕೆ ಶಿವಕುಮಾರ್ ನಡುವಿನ ಹೋರಾಟ ಮುಗಿಯುವಂತದ್ದಲ್ಲ. ಕುಮಾರಸ್ವಾಮಿಯವರು ಕಾಂಗ್ರೆಸ್ ಬೆಂಬಲದೊಂದಿಗೆ ಸಿಎಂ ಆಗಿದ್ದ ಒಂದು ವರ್ಷ ಬಿಟ್ಟರೆ, ಉಳಿದ ಅವಧಿಯಲ್ಲಿ ಆಜನ್ಮ ಶತ್ರುಗಳಂತೆ ಹೊಡೆದಾಡುತ್ತಲೇ ಇದ್ಧಾರೆ. ಅದು ಈಗ ರಾಮನಗರ ಜಿಲ್ಲೆಗೂ ಕಂಟಕ ತಂದಿಟ್ಟಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರುನಾಮಕರಣ ಮಾಡುವಂತೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಸ್ತಾವನೆ ಸಲ್ಲಿಸುವ ಮೂಲಕ ಮಾಜಿ ಸಿಎಂ. ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಮಾಸ್ಟರ್ ಸ್ಟೋಕ್ ನೀಡಿದ್ದಾರೆ.
ಕಳೆದ ಎರಡು ವರ್ಷಗಳಿಂದ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯನ್ನಾಗಿ ಮರು ನಾಮಕರಣ ಮಾಡುವ ಕುರಿತು ಪರ ವಿರೋಧದ ಚರ್ಚೆಗಳು ನಡೆಯುತ್ತಲೇ ಇತ್ತು. ಇದೀಗ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನಿಯೋಗ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಸ್ತಾವನೆ ಸಲ್ಲಿಸುವ ಮೂಲಕ ರಾಮನಗರ ಜಿಲ್ಲೆಯನ್ನು ಬೆಂಗಳೂರು ದಕ್ಷಿಣ ಜಿಲ್ಲೆಯಾಗಿ ಮರು ನಾಮಕರಣ ಮಾಡುವ ಕಾರ್ಯಕ್ಕೆ ಮುನ್ನುಡಿ ಬರೆದಿದೆ.
ರಾಮನಗರ ಜಿಲ್ಲೆಯ ಹೆಸರು ಬದಲಾವಣೆ ಮಾಡುವ ನಿಟ್ಟಿನಲ್ಲಿ ಡಿ.ಕೆ.ಶಿವಕುಮಾರ್ ನೇತೃತ್ವದ ನಿಯೋಗ ಸಲ್ಲಿಸಿದ ಮನವಿಗೆ ಸಿಎಂ ಸಿದ್ದರಾಮಯ್ಯ ಸಕಾರಾತ್ಮಕವಾಗಿಸ್ಪಂದಿಸಿದ್ದಾರೆ. ಎಲ್ಲಾ ಆಂದುಕೊಂಡಂತೆ ನಡೆದರೆ ಶೀಘ್ರದಲ್ಲೇ ರಾಮನಗರ ಜಿಲ್ಲೆಯ ಹೆಸರು ಬೆಂಗಳೂರು ದಕ್ಷಿಣ ಜಿಲ್ಲೆ ಆಗಲಿದೆ. ಈ ಮಧ್ಯೆ ಡಿ.ಕೆ. ಶಿವಕುಮಾರ್‌ಕೇಂದ್ರ ಸಚಿವ ಕುಮಾರಸ್ವಾಮಿ ಅವರನ್ನು ಗುರಿಯಾಗಿಟ್ಟುಕೊಂಡೇ ಮರು ನಾಮಕರಣದ ಕಾರ್ಯಕ್ಕೆ ಮುಂದೂಗಿದ್ದಾರೆಯೇ. ಇದರಿಂದಾಗುವ ರಾಜಕೀಯ ಲಾಭ ನಷ್ಟದ ಲೆಕ್ಕಾಚಾರಗಳ ಬಗ್ಗೆಯೂ ಚರ್ಚೆಗಳು ಆರಂಭಗೊಂಡಿದೆ.
ರಾಮನಗರ ಜಿಲ್ಲೆಯ ಇತಿಹಾಸ : ರಾಮನಗರ ಜಿಲ್ಲೆ ಈ ಹಿಂದೆ ಬೆಂಗಳೂರು ಗ್ರಾಮಾಂತರಕ್ಕೆ ಸೇರಿತ್ತು. 2007ರಲ್ಲಿ ಕುಮಾರಸ್ವಾಮಿ ಮುಖ್ಯ ಮಂತ್ರಿ ಆಗಿದ್ದಾಗ ರಾಮನಗರ ವನ್ನು ಪ್ರತ್ಯೇಕ ಜಿಲ್ಲೆಯಾಗಿ ರಚನೆ ಮಾಡಿದ್ದರು. ಮಾಗಡಿ, ಕನಕಪುರ, ಚನ್ನಪಟ್ಟಣ ಹಾಗೂ ರಾಮನಗರ ತಾಲೂಕುಗಳನ್ನು ಸೇರಿಸಿಕೊಂಡು ಹೊಸದಾಗಿ ರಾಮನಗರ ಜಿಲ್ಲೆಯನ್ನಾಗಿ ಘೋಷಿಸಿ, ರಾಮನಗರವನ್ನು ಜಿಲ್ಲಾ ಕೇಂದ್ರವನ್ನಾಗಿ ಘೋಷಿಸಲಾಗಿತ್ತು. ಅದಾದ ಮೇಲೆ ಹಾರೋಹಳ್ಳಿ ತಾಲೂಕನ್ನೂ ರಾಮನಗರಕ್ಕೆ ಸೇರಿಸಲಾಯ್ತು. ಆದರೆ ಇದೀಗ ರಾಮನಗರ ಜಿಲ್ಲೆ ಎಂಬ ಹೆಸರನ್ನು ತೆಗೆದು ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ಹೊಸದಾಗಿ ಘೋಷಿಸುವ ಪ್ರಯತ್ನವಂತೂ ನಡೆಯುತ್ತಿದೆ.
ರಾಜಕೀಯ ಮತ್ತು ಆರ್ಥಿಕ ಲೆಕ್ಕಾಚಾರ : ರಾಮನಗರಕ್ಕೆ ಬೆಂಗಳೂರು ದಕ್ಷಿಣ ಎಂದು ಹೆಸರು ನಾಮಕರಣ ಮಾಡುವುದರಿಂದ ಜನರ ಒಲವನ್ನು ಗಳಿಸಬಹುದು. ಇದು ಮುಂದಿನ ಚನ್ನಪಟ್ಟಣ ಉಪಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಲಾಭದಾಯಕವಾಗಿ ಪರಿಣಮಿಸ ಲಿದೆ ಎಂಬುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರವಾಗಿದೆ. ಜೊತೆಗೆ ರಾಮನಗರ ಜಿಲ್ಲೆ ಎಂಬ ಹೆಸರು ಇರುವವರೆಗೆ, ಅದನ್ನು ಸೃಷ್ಟಿಸಿದ್ದು ಕುಮಾರಸ್ವಾಮಿ ಎಂಬ ಹೆಸರಿದ್ದೇ ಇರುತ್ತದೆ. ಅದನ್ನು ತಪ್ಪಿಸಬೇಕೆಂದರೆ ಜಿಲ್ಲೆಯನ್ನೇ ಬದಲಿಸಬೇಕು ಎಂಬ ಹುನ್ನಾರವೂ ಇದೆ ಎಂಬುದು ಜೆಡಿಎಸ್ ನಾಯಕರ ವಾದ.
ಅಲ್ಲದೆ ಬೆಂಗಳೂರು ಎಂಬ ಹೆಸರಿದ್ದರೆ ಅಲ್ಲಿನ ಭೂಮಿಗೆ ದೊಡ್ಡ ಮೊತ್ತ ಸಿಗುತ್ತದೆ ಎಂಬ ಆರ್ಥಿಕ ಲೆಕ್ಕಾಚಾರವೂ ಇದೆ. ರಾಮನಗರ ಜಿಲ್ಲೆ ಮರು ನಾಮಕರಣದ ವಿವಾದವೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಡಿ.ಕೆ.ಸುರೇಶ್ ರವರ ಸೋಲಿಗೆ ಒಂದು ಕಾರಣ ಎಂಬುದು ಸುಳ್ಳಲ್ಲ. ಇದೀಗ ಮತ್ತೆ ಅದೇ ಅಸ್ತ್ರವನ್ನು ಹೂಡಲು ಕೈ ಪಾಳೆಯ ಮುಂದಾಗಿದೆ. ಈ ಹಿಂದೆ ಬಿಜೆಪಿ ಸರ್ಕಾರ ರಾಮನಗರ ಜಿಲ್ಲೆಯನ್ನು ನವ ಬೆಂಗಳೂರು ಜಿಲ್ಲೆಯನ್ನಾಗಿ ನಾಮಕರಣಕ್ಕೆ ಮುಂದಾಗಿತ್ತು. ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ಹೆಸರು ಬದಲಾವಣೆ ಪ್ರಸ್ತಾವನೆ ಕೈಬಿಟ್ಟಿತ್ತು. ಇದೀಗ ರಾಮನಗರ ಜಿಲ್ಲೆ ಮರುನಾಮಕರಣಕ್ಕೆ ಪ್ರತಿರೋಧ ವ್ಯಕ್ತಪಡಿಸುತ್ತಿರುವ ಮೈತ್ರಿ ಪಕ್ಷಗಳಾದ ಬಿಜೆಪಿ ಮರು ಸಂಘರ್ಷಕ್ಕೆ ಮುಂದಾಗಿದ್ದಾರೆ. ಜೆಡಿಎಸ್ ನಾಯಕರು ರಾಜಕೀಯ ಮುಂದಾಗಿದ್ದಾರೆ.
ನಾನು ಮತ್ತೆ ರಾಮನಗರ ಜಿಲ್ಲೆ ಸ್ಥಾಪಿಸುತ್ತೇನೆ : ಈಗ ಕಾಂಗ್ರೆಸ್ ಅಧಿಕಾರದಲ್ಲಿರಬಹುದು, ಅವರು ಹೊಸ ಜಿಲ್ಲೆಯನ್ನು ಸೃಷ್ಟಿಸಬಹುದು, ಆದರೆ ಮುಂದೆ ನಾನು ಅಧಿಕಾರಕ್ಕೆ ಬಂದರೆ ಆ ಹೆಸರನ್ನು ಕಿತ್ತೊಗೆದು ಮತ್ತೆ ರಾಮನಗರ ಜಿಲ್ಲೆಯನ್ನು ಅಸ್ಥಿತ್ವಕ್ಕೆ ತರುತ್ತೇನೆ ಎಂದು ಪಣ ತೊಟ್ಟಿದ್ದಾರೆ ಕುಮಾರಸ್ವಾಮಿ.



