ಆದಿಪುರುಷ್ ಸಿನಿಮಾವನ್ನು ಹಿಂದೂ ಧರ್ಮ, ರಾಮಾಯಣವನ್ನು ಅವಮಾನ ಮಾಡಲೆಂದೇ ಮಾಡಲಾಯಿತಾ? ಧರ್ಮವನ್ನು ಕೆಟ್ಟದಾಗಿ ಬಿಂಬಿಸುವ ಸಲುವಾಗಿಯೇ ಆದಿಪುರುಷ್ ಸಿನಿಮಾ ಮಾಡಿದರಾ..? ಇಂತಹ ಅನುಮಾನಗಳನ್ನು ಎತ್ತಿರುವುದು ಸಣ್ಣ ಪುಟ್ಟ ನಟರಲ್ಲ. ದೊಡ್ಡ ದೊಡ್ಡ ಕಲಾವಿದರೇ.
ಆದಿಪುರುಷ್ ಸಿನಿಮಾ ರಿಲೀಸ್ ಆದ ಮೇಲೆ ವಿವಾದಗಳೇ ಜೋರಾಗಿವೆ. ರಾಮಾಯಣದ ಕಥೆಯನ್ನೇ ತಿರುಚಿರುವುದು, ಸೀತಾ ಮಾತೆ ಪಾತ್ರಧಾರಿಯನ್ನು ಗ್ಲಾಮರಸ್ ಆಗಿ ತೋರಿಸಿರುವುದು, ಹನುಮಂತ, ಇಂದ್ರಜಿತ್ ಪಾತ್ರಗಳ ನಿರ್ವಹಣೆ, ರಾವಣ ಪಾತ್ರಧಾರಿಯ ವೈಖರಿ.. ಹೀಗೆ ಪ್ರತಿಯೊಂದರಲ್ಲೂ ಒಂದೊಂದು ಎಡವಟ್ಟು, ಪ್ರಮಾದಗಳಿವೆ. ಆದರೆ ಇದು ಕೇವಲ ಪ್ರಮಾದಗಳಲ್ಲ. ಎಡವಟ್ಟುಗಳಲ್ಲ. ಇದೊಂದು ವ್ಯವಸ್ಥಿತ ಷಡ್ಯಂತ್ರ ಎನ್ನುವುದು ಗಜೇಂದ್ರ ಚೌಹಾಣ್ ಆರೋಪ. ಈ ಗಜೇಂದ್ರ ಚೌಹಾಣ್ ಮಹಾಭಾರತದ ಶ್ರೀಕೃಷ್ಣ ಪಾತ್ರಧಾರಿ.
ಈಗಾಗಲೇ ರಾಮಾಯಣ ಧಾರಾವಾಹಿಯಲ್ಲಿ ನಟಿಸಿದ್ದವರು, ಆದಿಪುರುಷ್ ಚಿತ್ರದ ವಿರುದ್ಧ ಕಿಡಿ ಕಾರಿದ್ದಾರೆ. ಮಹಾಭಾರತದ ಭೀಷ್ಮ ಪಾತ್ರಧಾರಿ ಮುಕೇಶ್ ಖನ್ನಾ ಕೂಡಾ ಚಿತ್ರದ ಬಗ್ಗೆ ಟೀಕೆ ಮಾಡಿದ್ದರು. ಇದೀಗ ಮಹಾಭಾರತದ ಶ್ರೀಕೃಷ್ಣ ಗಜೇಂದ್ರ ಚೌಹಾಣ್ ಈ ಚಿತ್ರದ ಮೂಲಕ ಹಿಂದೂ ಧರ್ಮದ ಸ್ವರೂಪ ಬದಲಿಸಿ ಮುಂದಿನ ಪೀಳಿಗೆಯ ತಲೆಯಲ್ಲಿ ತುರುಕವ ಕೆಲಸ ಎಂದು ಹೇಳಿದ್ದಾರೆ.
ಮುಂದಿನ ಜನಾಂಗ ಸನಾತನ ಧರ್ಮದವನ್ನು ಕೀಳು ಮಟ್ಟದಲ್ಲಿ ನೋಡುವ ರೀತಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ. ಕಾಲ್ಪನಿಕ ಕತೆಗಳ ಚಿತ್ರಿಸಲಾಗಿದೆ. ಈ ಚಿತ್ರದ ಹಿಂದೆ ಬಹುದೊಡ್ಡ ಷಡ್ಯಂತ್ರವಿದೆ. ಈ ರೀತಿಯ ಚಿತ್ರ ಹಿಂದೂ ಧರ್ಮದ ಭಕ್ತಿ, ನಂಬಿಕೆಯನ್ನೇ ಘಾಸಿಗೊಳಿಸುತ್ತದೆ. ಹೀಗಾಗಿ ಆದಿಪುರುಷ್ ಚಿತ್ರವನ್ನು ನಿಷೇಧಿಸಬೇಕು ಎಂದು ಚವ್ಹಾಣ್ ಆಗ್ರಹಿಸಿದ್ದಾರೆ.
ಚಿತ್ರದ ವಿವಾದಾತ್ಮಕ ಸಂಭಾಷಣೆಗಳನ್ನು ಕೂಡಾ ಬದಲಿಸಿದೆ ಚಿತ್ರತಂಡ. ಸಿನಿಮಾ ರಿಲೀಸ್ ಆದ ಕೆಲವೇ ದಿನಗಳಿಗೆ ಬದಲಾವಣೆ ಆಗಿರುವುದೂ ಕೂಡಾ ಅನುಮಾನಕ್ಕೆ ಕಾರಣವಾಗಿದೆ. ಇದರರ್ಥ ಚಿತ್ರತಂಡ ವಿವಾದವನ್ನು ಮೊದಲೇ ಗುರುತಿಸಿತ್ತು. ಬದಲಿಸಿದ ಸಂಭಾಷಣೆಯ ಪ್ರತಿಯೂ ಸಿದ್ಧವಾಗಿ, ಸೆನ್ಸಾರ್ ಆಗಿತ್ತೇ ಎಂಬ ಅನುಮಾನ ಮೂಡಿದ್ದರೆ ಆಶ್ಚರ್ಯ ಇಲ್ಲ. ಏಕೆಂದರೆ ಚಿತ್ರದಲ್ಲಿ ಏನೇ ಸಣ್ಣ ಬದಲಾವಣೆಗಳಾದರೂ ಮತ್ತೆ ಸೆನ್ಸಾರ್ ಆಗಲೇಬೇಕು. ಹೀಗೆ ಅನುಮಾನಗಳ ಮೇಲೆ ಅನುಮಾನಗಳಿವೆ.
ಸಂಭಾಷಣೆ ಬದಲಿಸಿದ ಮಾತ್ರಕ್ಕೆ ಗಾಯ ಸರಿ ಹೋಗುತ್ತದೆಯೇ.. ರಾಮ-ಸೀತೆ ಕಥೆ ವಿಡಿಯೋ ಗೇಮ್ ಕಥೆ ಅಲ್ಲ. ಈ ಚಿತ್ರ ಹಿಂದೂಗಳ ಭಕ್ತಿಯನ್ನೇ ಪ್ರಶ್ನಿಸುವಂತಿದೆ. ಈ ಚಿತ್ರ ನಿರ್ಮಿಸಿದವರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕು. ದೇಶಾದ್ಯಂತ ಚಿತ್ರ ನಿಷೇಧಿಸಬೇಕು.ಈ ಚಿತ್ರದ ಮೂಲಕ ಭಾರತದ ಪುರಾಣ, ಹಿಂದೂಗಳ ನಂಬಿಕೆಯನ್ನೇ ಬಡಮೇಲು ಮಾಡುವ ಕೆಲಸ ನಡೆಯುತ್ತಿದೆ ಎಂದು ಗಜೇಂದ್ರ ಚೌವ್ಹಾಣ್ ಹೇಳಿದ್ದಾರೆ.



