ನಟಿ ರಮ್ಯಾ ಅವರಿಗೂ ಕಾಂಟ್ರವರ್ಸಿಗೂ ಅವಿನಾಭಾವ ಸಂಬಂಧ. ಅವರು ಯಾರನ್ನೂ ಬಿಟ್ಟಿಲ್ಲ. ವಿವಾದವಾಗುತ್ತದೆ ಎಂದು ಹೆದರಿ ಕೂರುವವರಲ್ಲ. ಈಗ ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಕಥೆಯೂ ಅಷ್ಟೇ. ಡೋಂಟ್ ಕೇರ್. ಅವರಿಗೆ ಇಷ್ಟವಾಗಲಿಲ್ಲ ಎಂದರೆ ಮುಗೀತು. ನಟಿ ರಮ್ಯಾ ಜನವರಿ 07ನೇ ತಾರೀಕು ಕೋರ್ಟಿಗೆ ಬಂದಿದ್ದರು. ಬೆಂಗಳೂರು ನಗರದ ವಾಣಿಜ್ಯ ಸಂಕಿರ್ಣ ನ್ಯಾಯಾಲಯಕ್ಕೆ ಹಾಜರಾಗಿದ್ದರು. ಕೋರ್ಟಿಗೆ ಬಂದಿದ್ದು ಹಾಸ್ಟೆಲ್ ಹುಡುಗರು ಚಿತ್ರದ ಕೇಸಿಗೆ. 2023 ರಲ್ಲಿ ಬಿಡುಗಡೆ ಆಗಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದ ರಮ್ಯಾ, ಚಿತ್ರತಂಡದ ವಿರುದ್ಧ ಕೇಸ್ ಹಾಕಿದ್ದರು. ತಮ್ಮ ಅನುಮತಿಯನ್ನು ಮೀರಿ ತಮ್ಮ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಸಿನಿಮಾದ ನಿರ್ಮಾಪಕರು, ನಿರ್ದೇಶಕರ ವಿರುದ್ಧ ರಮ್ಯಾ ದೂರು ನೀಡಿದ್ದರು. 2023 ರಲ್ಲಿಯೇ ರಮ್ಯಾ ಕೇಸು ದಾಖಲಿಸಿದ್ದರು. ಸಿನಿಮಾ ಬಿಡುಗಡೆಗೆ ತಡೆ ನೀಡಬೇಕು ಎಂದು ಕೂಡಾ ಕೋರಿದ್ದರು. ಆದರೆ ನ್ಯಾಯಾಲಯ ಸಿನಿಮಾ ಬಿಡುಗಡೆಗೆ ತಡೆ ಕೊಟ್ಟಿರಲಿಲ್ಲ. ಆ ಪ್ರಕರಣದ ವಿಚಾರಣೆ ಮುಂದುವರೆದಿದ್ದು, ನ್ಯಾಯಾಲಯದ ಮುಂದೆ ಹಾಜರಾದ ರಮ್ಯಾ ಕೆಲವು ದಾಖಲೆಗಳನ್ನು ನ್ಯಾಯಾಲಯಕ್ಕೆ ನೀಡಿದ್ದಾರೆ. ಡಿಸೆಂಬರ್ 30 ರಂದು ನ್ಯಾಯಾಲಯ ಸೂಚಿಸಿದ್ದಂತೆ ಕೋರ್ಟಿಗೆ ರಮ್ಯಾ ದಾಖಲೆಗಳನ್ನು ನೀಡಿದ್ದಾರೆ.
ಆದರೆ ರಮ್ಯಾ ವಿಚಾರಣೆ ನಂತರ ಮಾಧ್ಯಮಗಳಿಗೆ ಎದುರಾಗಿ ʻಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಪ್ರಕರಣದ ಬಗ್ಗೆ ಒಂದೇ ಒಂದು ಮಾತನ್ನೂ ಹೇಳಲಿಲ್ಲ. ವಿಷಯ ಕೋರ್ಟಿನಲ್ಲಿದೆ. ಹಾಗಾಗಿ ಮಾತನಾಡುವುದು ಸರಿ ಇಲ್ಲ ಎಂದಷ್ಟೇ ಹೇಳಿದ್ದಾರೆ.
ಏಕೆಂದರೆ ರಮ್ಯಾ ಇರೋದೇ ಹಾಗೆ. ಅವರು ಯಾವುದನ್ನು ಎಲ್ಲಿ.. ಎಷ್ಟು ಬೇಕೋ.. ಅಷ್ಟಟನ್ನೇ ಮಾತನಾಡ್ತಾರೆ. ಕನ್ನಡದ ನಟಿಯರಿಗೆ ಸರಿಯಾಗಿ ಸಂಭಾವನೆ ಕೊಡ್ತಿಲ್ಲ ಎಂದು ಬಹಿರಂಗವಾಗಿ ಧ್ವನಿ ಎತ್ತಿದ್ದ ರಮ್ಯಾ, ಅದೇ ಕಾರಣಕ್ಕಾಗಿ ಪುನೀತ್ ಚಿತ್ರವನ್ನೂ ನಿರಾಕರಿಸಿದ್ದರು. ಊಹ್ಞೂಂ.. ಮಾತನಾಡಲಿಲ್ಲ. ಪುನೀತ್ ಅವರ ಮೇಲಿನ ಗೌರವವೇ ಬೇರೆ. ಪುನೀತ್ ಅವರ ಬ್ಯಾನರ್ ಮೇಲಿನ ಪ್ರೀತಿಯೇ ಬೇರೆ. ಪುನೀತ್ ಅವರ ಈ ಚಿತ್ರಕ್ಕೆ ಬೇರೆಯವರು ಪ್ರೊಡ್ಯೂಸರ್. ಕೇಳೋದ್ರಲ್ಲಿ ತಪ್ಪೇನಿದೆ ಅನ್ನೋ ಹಾಗಿತ್ತು ರಮ್ಯಾ ರಿಯಾಕ್ಷನ್.
ಅಷ್ಟೇ ಅಲ್ಲ, ನೀರ್ ದೋಸೆ ಚಿತ್ರದ ಚಿತ್ರೀಕರಣದಲ್ಲಿ ತಮ್ಮ ಅನುಮತಿಯಿಲ್ಲದೆ ಫೋಟೋ ತೆಗೆದರು ಎನ್ನುವ ಕಾರಣಕ್ಕೆ ಛಾಯಾಗ್ರಹಕರೊಬ್ಬರ ವಿರುದ್ಧ ಕೇಸು ಜಡಿದಿದ್ದ ರಮ್ಯಾ, ಸುದೀಪ್ ಅವರನ್ನೂ ಬಿಟ್ಟಿಲ್ಲ. ಸುದೀಪ್ ಜೊತೆ ನಟಿಸಿರುವ ರಮ್ಯಾ ಅವರ ಬಗ್ಗೆ ಇತ್ತೀಚೆಗೆ ಸುದೀಪ್ ತಮಾಷೆಯಾಗಿ ಹೇಳಿಕೊಂಡಿದ್ದರು. ಸುದೀಪ್ ಆದರೂ ಅಷ್ಟೆ, ಇಷ್ಟವಿಲ್ಲ ಎಂದಾಗ ಮುಲಾಜು ನೋಡಿದವರಲ್ಲ. ಇನ್ನು ಜಗ್ಗೇಶ್-ರಮ್ಯಾ ಪುರಾಣ ಇಂದು ನಿನ್ನೆಯದ್ದಲ್ಲ. ಅವರು ಇವರಿಗೆ ಟಾಂಟ್ ಕೊಡೋಕೆ ಹೋಗೋದು, ರಮ್ಯಾ ಹಿಗ್ಗಾಮುಗ್ಗಾ ಜಾಡಿಸೋದು ನಡೆಯುತ್ತಲೇ ಇದೆ. ಜಗ್ಗೇಶ್ ಚಟ ಬಿಟ್ಟಿಲ್ಲ.
ರಾಜಕೀಯದಲ್ಲೂ ಅಷ್ಟೇ, ಅಷ್ಟೊಂದು ನೇರವಂತಿಕೆ ಸೂಟ್ ಆಗದ ಜಾಗ ಅದು. ಆ ಲೆಕ್ಕದಲ್ಲಿ ನೋಡಿದರೆ ʻರಮ್ಯಾ ರಾಜಕೀಯಕ್ಕೆ ಅನ್ ಫಿಟ್ʼ ಎನ್ನಬಹುದು.
ಈಗ ಅಂತದ್ದೇ ಆಗಿರೋದು. ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಪ್ರಕರಣದ ಬಗ್ಗೆ ರಮ್ಯಾ ಅವರಿಗೆ ಅಗ್ರಿಮೆಂಟ್ʻನ ಒರಿಜಿನಲ್ ಕಾಪಿ ಕೊಡುವಂತೆ ನ್ಯಾಯಾಲಯ ಸೂಚಿಸಿದ್ದು, ಜನವರಿ 15ಕ್ಕೆ ರಮ್ಯಾ ಮತ್ತೊಮ್ಮೆ ಕೋರ್ಟಿಗೆ ಬರಬೇಕಿದೆ.ನಿತಿನ್ ಕೃಷ್ಣಮೂರ್ತಿ ನಿರ್ದೇಶಿಸಿ, ವರುಣ್ ಹಾಗೂ ಪ್ರಜ್ವಲ್ ಬಿ ಪಿ ನಿರ್ಮಾಣ ಮಾಡಿದ್ದ ‘ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ’ ಸಿನಿಮಾದಲ್ಲಿ ರಮ್ಯಾ ನಟಿಸಿದ್ದರು. ಸಿನಿಮಾದ ಪ್ರೋಮೋನಲ್ಲಿ ರಮ್ಯಾ ಕಾಣಿಸಿಕೊಂಡಿದ್ದರು. ಆದರೆ ಸಿನಿಮಾ ಬಿಡುಗಡೆಗೆ ಇನ್ನು ಕೆಲವೇ ದಿನ ಇದೆ ಎನ್ನುವಾಗ ರಮ್ಯಾ ಸಿನಿಮಾದ ಮೇಲೆ ಪ್ರಕರಣ ದಾಖಲಿಸಿ, ನನ್ನ ಅನುಮತಿ ಇಲ್ಲದೆ ಸಿನಿಮಾದಲ್ಲಿ ನನ್ನ ದೃಶ್ಯಗಳನ್ನು ಬಳಸಿಕೊಳ್ಳಲಾಗಿದೆ ಎಂದು ಆರೋಪ ಮಾಡಿದ್ದರು. ಆ ಪ್ರಕರಣದ ವಿಚಾರಣೆ ಇನ್ನೂ ನಡೆಯುತ್ತಲೇ ಇದೆ.
ಇದೇ ವೇಳೆ ಪತ್ರಕರ್ತರ ಜೊತೆ ಮಾತನಾಡಿರುವ ರಮ್ಯಾ, ಒಳ್ಳೆಯ ಕತೆ ಸಿಕ್ಕಿಲ್ಲ. ಸಿಕ್ಕರೆ ಖಂಡಿತ ನಟಿಸುತ್ತೇನೆ. ಎಂದಿದ್ದಾರೆ. ಇತ್ತೀಚೆಗೆ ಗೆದ್ದಿರುವ ‘ಯುಐ’ ಮತ್ತು ‘ಮ್ಯಾಕ್ಸ್’ ಸಿನಿಮಾಗಳ ಬಗ್ಗೆ ಸಂತಸ ಹಂಚಿಕೊಂಡಿದ್ದಾರೆ. ರಾಜಕೀಯಕ್ಕೆ ಮರು ಎಂಟ್ರಿ ಕೊಡುತ್ತೀರ ಎಂಬ ಪ್ರಶ್ನೆಗೆ ಉತ್ತರಿಸಿದ ನಟಿ ರಮ್ಯಾ, ‘ಸದ್ಯಕ್ಕಂತೂ ಇಲ್ಲ’ ಎಂದಿದ್ದಾರೆ.



