ವಿನಯ್ ರಾಜ್ ಕುಮಾರ್ ಸಿನಿಮಾಗಳು ಅದೇಕೋ ಏನೋ.. ಘೋಷಣೆಯಾಗುವಷ್ಟೇ ತೀವ್ರತೆಯಿಂದ ಬಿಡುಗಡೆ ಆಗುವುದಿಲ್ಲ. ಈಗ ಗ್ರಾಮಾಯಣ ಚಿತ್ರವೂ ಅಷ್ಟೇ. 2018ರಲ್ಲಿ ಘೋಷಣೆಯಾಗಿದ್ದ ಸಿನಿಮಾ, ಬರೋಬ್ಬರಿ 8 ವರ್ಷಗಳ ನಂತರ ರಿಲೀಸ್ ಆಗುತ್ತಿದೆ. ಜುಲೈ 3ಕ್ಕೆ ಬಿಡುಗಡೆಯಾಗುತ್ತಿರುವ ಚಿತ್ರಕ್ಕೆ ವಿನಯ್ ರಾಜ್ ಕುಮಾರ್ ಹೀರೋ. ಪಾತ್ರದ ಹೆಸರು ಸೀನ. ಹೀರೋಯಿನ್ ಮೇಘಾಶೆಟ್ಟಿ. ಪಾತ್ರದ ಹೆಸರು ಕುಸುಮ. ಇನ್ನೂ ವಿಶೇಷ ಎಂದರೆ ಈ ಚಿತ್ರದಲ್ಲಿ ‘ಲೂಸ್ ಮಾದ’ ಯೋಗಿ ಅವರು ಒಂದು ಪ್ರಮುಖ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಗ್ರಾಮಾಯಣ ಸಿನಿಮಾ ಮೊದಲ ಬಾರಿಗೆ ಸೆಟ್ಟೇರಿದ್ದು 2018 ರಲ್ಲಿ. ಚಿತ್ರದ ಮುಹೂರ್ತ ನೆರವೇರಿ, ಸುಮಾರು 25 ದಿನಗಳ ಕಾಲ ಚಿತ್ರೀಕರಣ ಕೂಡ ನಡೆದಿತ್ತು. ಆದರೆ ಕೆಲವು ಅನಿವಾರ್ಯ ಮತ್ತು ಅನಿರೀಕ್ಷಿತ ಕಾರಣಗಳಿಂದಾಗಿ ಚಿತ್ರದ ಶೂಟಿಂಗ್ ಅರ್ಧಕ್ಕೆ ನಿಂತುಹೋಗಿತ್ತು. ಚಿತ್ರಕ್ಕೆ ಮತ್ತೆ ಪುನರ್ಜನ್ಮ ಸಿಕ್ಕಿದ್ದು 2023ರಲ್ಲಿ. ಜೂನ್ 8, 2023 ರಂದು ಬೆಂಗಳೂರಿನ ಗವಿಪುರಂ ಗುಟ್ಟಹಳ್ಳಿಯ ಶ್ರೀ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ಚಿತ್ರದ ರೀ-ಲಾಂಚ್ ಮುಹೂರ್ತ ಬಹಳ ಅದ್ದೂರಿಯಾಗಿ ನೆರವೇರಿತ್ತು. ಚಿತ್ರಕ್ಕೆ ಲಹರಿ ಫಿಲಂಸ್‌ನ ಜಿ. ಮನೋಹರನ್ ಮತ್ತು ವೀನಸ್ ಎಂಟರ್‌ಟೈನರ್ಸ್‌ನ ಕೆ.ಪಿ. ಶ್ರೀಕಾಂತ್ ಎಂಟ್ರಿ ಕೊಟ್ಟಿದ್ದರು. ನಿರ್ಮಾಪಕರ ಹೆಸರು ಮತ್ತು ಹಿಸ್ಟರಿ ನೋಡಿದವರಿಗೆ ಸಿನಿಮಾ ಇನ್ನೇನು ರಿಲೀಸ್ ಆಗೋದು ಗ್ಯಾರಂಟಿ ಎಂದುಕೊಂಡಿದ್ದರು. ಏಕೆಂದರೆ ರೀ-ಲಾಂಚ್ ಪ್ರೋಗ್ರಾಂನಲ್ಲಿ ಅಶ್ವಿನಿ ಪುನೀತ್ ರಾಜ್‌ಕುಮಾರ್, ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದುನಿಯಾ ವಿಜಯ್ ಸೇರಿದಂತೆ ಕನ್ನಡ ಚಿತ್ರರಂಗದ ಪ್ರಮುಖ ತಾರೆಯರು ಬಂದಿದ್ದರು. ಆದರೆ.. ಅದಾದ ನಂತರವೂ ಅಷ್ಟೇ.. ಬರೋಬ್ಬರಿ 3 ವರ್ಷದ ನಂತರ ಸಿನಿಮಾ ರಿಲೀಸ್ ಆಗ್ತಿದೆ.
ಚಿತ್ರದ ಹಾಡುಗಳು ಈಗಾಗಲೇ ಬಿಡುಗಡೆಯಾಗಿ ಸಿನಿಪ್ರಿಯರ ಗಮನ ಸೆಳೆದಿವೆ. ಸೋಲ್ ಆಫ್ ಗ್ರಾಮಾಯಣ’ (Soul of Graamaayana): ಹಳ್ಳಿಯ ಸೊಗಡನ್ನು ಪರಿಚಯಿಸುವ ಅದ್ಭುತ ಸಾಹಿತ್ಯವಿರುವ ಹಾಡು. ಇನ್ನೊಂದು ‘ಏನೇ ಹೇಳು ಕುಸುಮ’ ಹಾಡು. ವಿನಯ್ ಮತ್ತು ಮೇಘಾ ಶೆಟ್ಟಿ ಅವರ ಕೆಮಿಸ್ಟ್ರಿ ಹಾಗೂ ಪ್ರೀತಿಯನ್ನು ಬಿಂಬಿಸುವ ಈ ಇತ್ತೀಚಿನ ಹಾಡು ಲಹರಿ ಮ್ಯೂಸಿಕ್ ಮೂಲಕ ಬಿಡುಗಡೆಯಾಗಿ ಟ್ರೆಂಡಿಂಗ್‌ನಲ್ಲಿದೆ. ಇದಕ್ಕೆ ಮುಂಚೆ ತಡ್ಕಾ ತಡ್ಕಾ.. ಹಾಡು ಬಂದಿತ್ತು. ಸಖತ್ ಹಿಟ್ ಆಗಿದ್ದಷ್ಟೇ ಅಲ್ಲ, ಸಿಕ್ಕಾಪಟ್ಟೆ ವ್ಯೂವ್ಸ್ ಪಡೆದಿತ್ತು.
ಇದರ ಮಧ್ಯೆ ಮೇಘಾ ಶೆಟ್ಟಿ ಮತ್ತು ವಿನಯ್ ರಾಜ್‌ಕುಮಾರ್ ಅವರ “ಜಿಂಗಿ ಚಕ್ಕ ಜಿಂಗಿ ಚಕ್ಕ” ಎಂಬ ವಿಶಿಷ್ಟ ಹಳ್ಳಿ ಶೈಲಿಯ ಸ್ಟೆಪ್ಸ್ ಹಾಗೂ ನೃತ್ಯ ಭಾರಿ ವೈರಲ್ ಆಗಿತ್ತು. ಮೂಲ ಚಿತ್ರದಲ್ಲಿ ಶಿವರಾಜ್‌ಕುಮಾರ್-ಸುಧಾರಾಣಿ ಮೂಡಿಸಿದ್ದ ಮ್ಯಾಜಿಕ್ ಅನ್ನು, ವಿನಯ್-ಮೇಘಾ ರಿಪೀಟ್ ಮಾಡಿದ್ದರು. ಇಷ್ಟೆಲ್ಲ ಆಗಿ ಸಿನಿಮಾ ರಿಲೀಸ್ ಆಗ್ತಿದೆ. ಅಚ್ಯುತ್ ಕುಮಾರ್, ಗೋಪಾಲ್ ದೇಶಪಾಂಡೆ, ಅರುಣ್ ಸಾಗರ್, ಅಪರ್ಣಾ ವಸ್ತಾರೆ ಮುಂತಾದ ಹಿರಿಯ ಕಲಾವಿದರು ನಟಿಸಿರುವ ಚಿತ್ರಕ್ಕೆ ದೇವನೂರು ಚಂದ್ರು ಅವರು ಈ ಚಿತ್ರಕ್ಕೆ ಕಥೆ ಬರೆದು ನಿರ್ದೇಶನ ಮಾಡಿದ್ದಾರೆ.
ಹಳ್ಳಿಯ ಹಿನ್ನೆಲೆಯಲ್ಲಿ ನಡೆಯುವ ಈ ಕಥೆಯಲ್ಲಿ, ನಾಯಕ ‘ಸೀನಾ’ ತನ್ನ ಸಿಕ್ಸ್ತ್ ಸೆನ್ಸ್ ಮೂಲಕ ಹೆಸರು ಮಾಡಿರುತ್ತಾನೆ. “ಸಿಕ್ಸ್ತ್ ಸೆನ್ಸ್” (Sixth Sense) ಎನ್ನುವುದು ಸೀನನ ಅಡ್ಡ ಹೆಸರು. ಸೀನಾ ಮತ್ತು ಹಳ್ಳಿಯ ಹುಡುಗಿ ಕುಸುಮ (ಮೇಘಾ ಶೆಟ್ಟಿ) ನಡುವಿನ ಮುದ್ದಾದ ಪ್ರೇಮಕಥೆ ಚಿತ್ರದಲ್ಲಿದೆ. ಇವರಿಬ್ಬರ ಪ್ರೀತಿ, ಹಳ್ಳಿಯ ಮುಗ್ಧತೆ ಹಾಗೂ ಅವರ ಜೀವನಕ್ಕೆ ಎದುರಾಗುವ ಸವಾಲುಗಳು ಚಿತ್ರದಲ್ಲಿವೆ. ಕಥೆಯು ಕೇವಲ ಪ್ರೇಮಕ್ಕೆ ಸೀಮಿತವಾಗಿರದೆ, ಒಂದು ಗ್ರಾಮೀಣ ಭಾಗದಲ್ಲಿ ನಡೆಯುವ ಆಂತರಿಕ ರಾಜಕೀಯ, ಸಣ್ಣಪುಟ್ಟ ಜಗಳಗಳು, ಸಮುದಾಯಗಳ ನಡುವಿನ ಸಂಘರ್ಷಗಳು ಮತ್ತು ಕೌಟುಂಬಿಕ ಬಾಂಧವ್ಯಗಳ ಕಥೆ ಹೇಳುತ್ತದೆ.



