ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ಇ20 (E20) ಪೆಟ್ರೋಲ್ ಬಳಕೆಯಿಂದ ವಾಹನಗಳ ಎಂಜಿನ್ ಹಾಳಾಗುತ್ತಿದೆ ಎಂಬ ಆರೋಪಗಳನ್ನು ತಳ್ಳಿಹಾಕಿದ್ದಾರೆ. “ಇ20 ಪೆಟ್ರೋಲ್‌ನಿಂದ ಹಾನಿಗೊಳಗಾದ ದೇಶದ ಯಾವುದಾದರೂ ಒಂದೇ ಒಂದು ಕಾರನ್ನು ತೋರಿಸಿ” ಎಂದು ಟೀಕಾಕಾರರಿಗೆ ಬಹಿರಂಗ ಸವಾಲು ಹಾಕಿದ್ದಾರೆ. ಆದರೆ ಸವಾಲು – ಪ್ರತಿಸವಾಲಿನಲ್ಲಿಯೇ ಗೊಂದಲಗಳಿವೆ. ಏಕೆಂದರೆ ಡ್ಯಾಮೇಜ್ ಆದ ಕಾರುಗಳಿಗಿಂತ ದೊಡ್ಡ ಸಮಸ್ಯೆ ಮೈಲೇಜ್ ಕುರಿತಂತೆ ಇರುವುದು. ಇದಕ್ಕೆ ಮಾತ್ರ ಗಡ್ಕರಿ ಉತ್ತರ ಕೊಟ್ಟಿಲ್ಲ. ಇ-20 ಪೆಟ್ರೋಲ್‌ನಿಂದ ಸಮಸ್ಯೆ ಆಗುತ್ತಿರುವುದು ನಿಜ. ಆದರೆ ಸವಾಲು ಹಾಕೋದ್ರಿಂದ ಪರಿಹಾರ ಸಿಗುವುದಿಲ್ಲ. ಸಮಸ್ಯೆಗಳನ್ನು ಮೊದಲು ಒಪ್ಪಿಕೊಳ್ಳಬೇಕು. ಏಕೆಂದರೆ ಸಮಸ್ಯೆ ಒಂದೆರಡಲ್ಲ..
ಇ20 ಪೆಟ್ರೋಲ್ (ಶೇಕಡಾ 20 ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್) ಬಳಕೆಯಿಂದ ವಾಹನಗಳಿಗೆ ಹಾನಿಯಾಗಿದೆ ಅಥವಾ ತಾಂತ್ರಿಕ ಸಮಸ್ಯೆ ಎದುರಾಗಿದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಸಮಸ್ಯೆ ಎದುರಿಸುತ್ತಿರುವ ವಾಹನವಿದ್ದರೆ ನೇರವಾಗಿ ಡೀಲರ್ ಬಳಿ ದೂರು ನೀಡಿ, ಅದರ ಪ್ರತಿಯನ್ನು ತಮಗೂ ಕಳುಹಿಸಿಕೊಡುವಂತೆ ಅವರು ತಿಳಿಸಿದ್ದಾರೆ. ಎಥೆನಾಲ್ ಇಂಧನದ ವಿರುದ್ಧ ಹರಡುತ್ತಿರುವುದೆಲ್ಲವೂ ಕೇವಲ ಸುಳ್ಳು ಹಾಗೂ ಪಾವತಿಸಿದ ಅಭಿಯಾನಗಳಾಗಿದ್ದು (Paid Campaigns), ಕೆಲವರು ರಾಜಕೀಯವಾಗಿ ತಮ್ಮನ್ನು ಗುರಿಯಾಗಿಸಲು ಈ ರೀತಿ ಮಾಡುತ್ತಿದ್ದಾರೆ ಎಂದು ಗಡ್ಕರಿ ಆರೋಪಿಸಿದ್ದಾರೆ ಎನ್ನುವುದು ಗಡ್ಕರಿ ಆರೋಪ.
ಅಮೆರಿಕ, ಬ್ರೆಜಿಲ್ ಹಾಗೂ ಥೈಲ್ಯಾಂಡ್‌ನಂತಹ ದೇಶಗಳಲ್ಲಿ ಈಗಾಗಲೇ ಯಾವುದೇ ಸಮಸ್ಯೆ ಇಲ್ಲದೆ ದೀರ್ಘಕಾಲದಿಂದ ಎಥೆನಾಲ್ ಮಿಶ್ರಿತ ಇಂಧನವನ್ನು ಬಳಸಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಮಾರುತಿ ಸುಜುಕಿ, ಟೊಯೋಟಾ, ಹೊಂಡಾ, ಬಜಾಜ್, ಟಿವಿಎಸ್ ಮತ್ತು ಹಿರೋ ನಂತಹ ದೊಡ್ಡ ಆಟೋಮೊಬೈಲ್ ತಯಾರಕರು ಇ20 ಇಂಧನದಿಂದ ಇಂಜಿನ್ ಹಾನಿಯಾದ ಯಾವುದೇ ದೂರುಗಳನ್ನು ಪಡೆದಿಲ್ಲ ಎಂದು ಗಡ್ಕರಿ ತಿಳಿಸಿದ್ದಾರೆ. ಜೋಳ ಹಾಗೂ ಕಬ್ಬಿನಿಂದ ಎಥೆನಾಲ್ ಉತ್ಪಾದನೆಯನ್ನು ಉತ್ತೇಜಿಸಿರುವುದರಿಂದ ಉತ್ತರ ಪ್ರದೇಶ ಮತ್ತು ಬಿಹಾರದ ರೈತರಿಗೆ ಹೆಚ್ಚುವರಿಯಾಗಿ 45,000 ಕೋಟಿ ರೂಪಾಯಿ ಆದಾಯ ಬಂದಿದೆ ಎಂದು ಅವರು ವಿವರಿಸಿದ್ದಾರೆ.
ಗಡ್ಕರಿ ಉತ್ತರಿಸಬೇಕಾದ ಪ್ರಶ್ನೆಗಳು :
ಮೈಲೇಜ್ ಕಡಿಮೆಯಾಗಿದೆ ಎಂಬ ಆರೋಪಗಳಿಗೆ ಯಾವ ಮೋಟಾರ್ ಕಂಪೆನಿಗಳು ಸೂಕ್ತ ಉತ್ತರ ಕೊಟ್ಟಿಲ್ಲ. ಯಾವ ರೀತಿಯ ಬೈಕ್ ಅಥವಾ ಕಾರ್ ಮೈಲೇಜ್ ಎಷ್ಟು ಕಡಿಮೆಯಾಗಿದೆ ಎಂದು ಉತ್ತರ ಕೊಡಬೇಕಲ್ಲವೇ..?
ಬೇರೆ ದೇಶಗಳ ಉದಾಹರಣೆ ಕೊಡುವ ಮೊದಲು, ಎಂಜಿನ್ ಬದಲಾವಣೆ ಮಾಡಬೇಕಿತ್ತು. ಬ್ರೆಜಿಲ್, ಅಮೆರಿಕ, ಥೈಲ್ಯಾಂಡ್ ದೇಶಗಳಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಬಳಸುತ್ತಾರೆ, ಓಕೆ. ಆದರೆ ಅಲ್ಲಿನ ವಾಹನಗಳ ಎಂಜಿನ್ ಎಥೆನಾಲ್-ಪೆಟ್ರೋಲ್‌ಗೆ ತಕ್ಕಂತೆ ವಿನ್ಯಾಸವಾಗಿದೆ. ಆದರೆ ಭಾರತದಲ್ಲಿ ಆಗಲ್ಲ. 2023ಕ್ಕಿಂತ ಮೊದಲು ತಯಾರಾಗಿದ್ದ ವಾಹನಗಳ ಎಂಜಿನ್ ʻಎಥೆನಾಲ್ ಪೆಟ್ರೋಲ್ ಇಂಧನʼಕ್ಕೆ ಸೂಕ್ತ ಅಲ್ಲ. ಅದಕ್ಕೆ ಸ್ಪಷ್ಟನೆ ಇಲ್ಲ.
ರೈತರಿಗೆ ಲಾಭ ಎನ್ನುವ ಮಾತು ಬರೀ ಬೊಗಳೆ. ಎಥೆನಾಲ್ ಮೂಲಕ ಸಕ್ಕರೆ ಕಂಪೆನಿಗಳು ಲಾಭ ಮಾಡಿವೆಯೇ ಹೊರತು, ರೈತರಿಗೆ ಪರಿಹಾರ ಬಂದಿಲ್ಲ. ಹಾಗೆ ಪರಿಹಾರ ಬಂದಿದ್ದರೆ ಕಳೆದ ವರ್ಷ ಕರ್ನಾಟಕದಲ್ಲಿಯೇ ಸಾವಿರಾರು ರೈತರು ಹೋರಾಟ ಮಾಡಿ, ಲಾಠಿ ಏಟು ತಿನ್ನುವ ಪರಿಸ್ಥಿತಿ ಬರುತ್ತಿರಲಿಲ್ಲ.
ಎಥೆನಾಲ್ ಮಿಶ್ರಣದಿಂದ ಲಾಭವಾಗುತ್ತಿರುವುದು ತೈಲ ಕಂಪೆನಿಗಳಿಗೇ ಹೊರತು ಗ್ರಾಹಕರಿಗೆ ಅಲ್ಲ. ಇಷ್ಟಕ್ಕೂ ಇ-20 ಪೆಟ್ರೋಲಿನಿಂದ ಯಾವ ರೀತಿಯ ಸಮಸ್ಯೆ ಎದುರಾಗಬಹುದು ಎಂಬುದನ್ನೇ ಸರ್ಕಾರ ಒಪ್ಪದೇ ಹೋದರೆ ಪರಿಹಾರ ಸಿಗುವುದಾದರೂ ಹೇಗೆ..?



