ಆತ ಮಾಜಿ ಸೈನಿಕ. ಸೈನ್ಯದಿಂದ ನಿವೃತ್ತಿ ಪಡೆದು ವಾಪಸ್ ಬಂದು 3 ವರ್ಷವಾಗಿತ್ತು. ಆತನ ಪತ್ನಿಗೆ ಎಗ್ ರೈಸ್ ಮಾರುವವನ ಜೊತೆ ಅನೈತಿಕ ಸಂಪರ್ಕ ಬೆಳೆದಿತ್ತು. ಅದಕ್ಕೆ ಕಾರಣನಾದವನೂ ಪತಿಯೇ ಎಂಬುದು ವಿಚಿತ್ರವಾದರೂ ಸತ್ಯ. ಹೀಗೆ ಇದ್ದ ಸಂಬಂಧ ಪತಿಗೆ ಗೊತ್ತೇ ಇರಲಿಲ್ಲ. ಆತನ ಪತ್ನಿ ಗಂಡನಿಗೆ ವಿಷ ಹಾಕಿದ್ದು ಆಸ್ಪತ್ರೆಯಲ್ಲಿ. ಸತ್ತಿದ್ದೂ ಕೂಡಾ ಆಸ್ಪತ್ರೆಯಲ್ಲೇ. ಎಫ್‌ಎಸ್‌ಎಲ್ ರಿಪೋರ್ಟ್‌ನಲ್ಲಿ ಹಾರ್ಟ್ ಅಟ್ಯಾಕ್ ಎಂದೇ ಬಂದಿತ್ತು. ಹೀಗಿದ್ದರೂ ಕೊಲೆ ಕೇಸ್ ಬೆಳಕಿಗೆ ಬಂದಿದ್ದೇ ರೋಚಕ ಕಥೆ. ಯಾವ ಡಿಟೆಕ್ಟಿವ್ ಥ್ರಿಲ್ಲರ್ ಸ್ಟೋರಿಗಿಂತ ಕಡಿಮೆ ಇಲ್ಲ. ಅಂದಹಾಗೆ ಪೊಲೀಸರೂ ಸಹಜ ಸಾವು ಎಂದು ನಂಬಿದ್ದ ಕೇಸ್‌ಗೆ ಟ್ವಿಸ್ಟ್ ಕೊಟ್ಟಿದ್ದು ಕೊಲೆ ಆರೋಪಿ ಹಾಕಿದ್ದ ಒಂದು ವಾಟ್ಸಪ್ ಸ್ಟೇಟಸ್.
ಇದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿಯಲ್ಲಿ ನಡೆದಿರುವ ಕಥೆ. ಕೊಲೆಯಾದವನ ಹೆಸರು ಸಂದೀಪ ಮಂಜರಗಿ. ಈತನಿಗೆ ಸುಮಾ ಎಂಬುವವಳ ಜೊತೆ ಮದುವೆಯಾಗಿತ್ತು. ಇವರಿಗೆ ಮದುವೆಯಾಗಿ 20 ವರ್ಷವಾಗಿತ್ತು. ಚೆಂದದ ಸಂಸಾರ. ಸೈನ್ಯದಲ್ಲಿ ಕೆಲಸ ಮಾಡ್ತಿದ್ದ ಸಂದೀಪ್, ಸರ್ವಿಸ್ ಮುಗಿಸಿ ವಾಪಸ್ ಆಗಿ 3 ವರ್ಷವಾಗಿತ್ತು. ದಿನವೂ ಕುಡಿಯೋದು, ಜಾಲಿಯಾಗಿ ಓಡಾಡೋದು ಮಾಡ್ಕೊಂಡು ಇದ್ದ ಸಂದೀಪ್, ರೆಗ್ಯುಲರ್ ಆಗಿ ಘೋಡಗೇರಿಯಲ್ಲಿ ಒಂದು ಎಗ್ ರೈಸ್ ಹೋಟೆಲ್ಲಿಗೆ ಹೋಗ್ತಾ ಇದ್ದ. ಆ ಎಗ್ ರೈಸ್ ಮಾಲೀಕನೇ ಪುಂಡಲೀಕ. ಪುಂಡಲೀಕ ಮಾಡ್ತಿದ್ದ ಎಗ್ ರೈಸ್ ಇಷ್ಟವಾಗಿತ್ತು. ಹೀಗಾಗಿ ಸಂದೀಪನೇ ಇಬ್ಬರೂ ಪಾರ್ಟನರ್ ಆಗಿ ಹೋಟೆಲ್ ಮಾಡಿದರೆ ಹೇಗೆ ಎನ್ನುವ ಐಡಿಯಾ ಕೊಟ್ಟ. ಆ ಮೂಲಕ ತನ್ನದೇ ಸಾವನ್ನು ತಾನೇ ವೆಲ್ ಕಂ ಮಾಡಿಕೊಂಡಿದ್ದ.
ಇಬ್ಬರೂ ಸೇರಿ ಹಿಡಕಲ್ ಡ್ಯಾಂ ಬಳಿ ಹೋಟೆಲ್ ಸ್ಟಾರ್ಟ್ ಮಾಡ್ತಾರೆ. ಹೋಟೆಲ್ ಬಿಸಿನೆಸ್ ಕೈ ಹಿಡಿಯುತ್ತೆ. ಚೆನ್ನಾಗಿ ಕುದುರಿಕೊಳ್ಳುತ್ತೆ. ಹೀಗಿರುವಾಗಲೇ ಸಂದೀಪನ ಪತ್ನಿ ಸುಮಾ ಮತ್ತು ಪುಂಡಲೀಕ ಮಧ್ಯೆ ಒಂದು ಅಫೇರ್ ಸ್ಟಾರ್ಟ್ ಆಗುತ್ತೆ. ಸ್ನೇಹ ಕೆಲದಿನಗಳಲ್ಲಿಯೇ ಅನೈತಿಕ ಸಂಬಂಧವಾಗಿ ಮಾರ್ಪಾಡಾಗುತ್ತೆ. ಪುಂಡಲೀಕನ ಸಾವಿಗೆ ದಿನಗಳ ಕೌಂಟಿಂಗ್ ಸ್ಟಾರ್ಟ್ ಆಗುತ್ತೆ. ಸುಮಾ-ಪುಂಡಲೀಕ ಇಬ್ಬರೂ ತಮ್ಮ ಸುಖಕ್ಕೆ ಅಡ್ಡಿಯಾಗಿರುವ ಸಂದೀಪನನ್ನೇ ಮುಗಿಸೋ ಪ್ಲಾನ್ ಮಾಡ್ತಾರೆ. ಈ ಮಧ್ಯೆಯೇ ಇಬ್ಬರಿಗೂ ಒಂದ ವಿಷಯ ಗೊತ್ತಾಗುತ್ತೆ. ಅದು ಸಂದೀಪ ಮಾಡಿಸಿದ್ದ ಟರ್ಮ್ ಇನ್ಷೂರೆನ್ಸ್ ಸ್ಟೋರಿ.
ಸಂದೀಪ ಸತ್ತರೆ ಟರ್ಮ್ ಇನ್ಷೂರೆನ್ಸ್ 2 ಕೋಟಿ ಬರುತ್ತೆ ಎನ್ನುವುದು ಗೊತ್ತಾಗುತ್ತೆ. ಅದೇ ಸಮಯದಲ್ಲಿ ಮಾರ್ಚ್ 13ರಂದು ಯಮಕನಮರಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂದೀಪ್ ಮಂಜರಗಿಗೆ ರಸ್ತೆ ಅಪಘಾತವಾಗುತ್ತದೆ. ಅಪಘಾತವಾದ ಬಳಿಕ ಸ್ಥಳೀಯರು ಹುಕ್ಕೇರಿಯಲ್ಲಿರುವ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಸ್ಥಳಕ್ಕೆ ಹೋದ ಪತ್ನಿ ಸುಮಾ ತನ್ನ ಗಂಡನಿಗೆ ಹೆಚ್ಚಿನ ಚಿಕಿತ್ಸೆ ಬೇಕು ಅಂತಾ ಹುಕ್ಕೇರಿ ಅಲ್ಲಿಂದ ಘಟಪ್ರಭಾ ಜೆಜೆ ಕೋ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಿಸುತ್ತಾಳೆ. ಗಂಡನ ಸಾವಿಗೆ ಸ್ಕೆಚ್ ಹಾಕುವುದು ಆವಾಗ.
ಪುಂಡಲೀಕನ ಸಂಬಂಧಿ ರಾಹುಲ್ ಜೋಗಿ ಎಂಬಾತ ಪುಂಡಲೀಕನ ಸಂಬಂಧಿ. ಅದೇ ಅಸ್ಪತ್ರೆಯಲ್ಲಿ ಕೆಲಸ ಮಾಡ್ತಿರ್ತಾನೆ. ರಾಹುಲ್ ಜೋಗಿ, ಸುಮಾ-ಪುಂಡಲೀಕನಿಗೆ ಸಲೈನ್‌ನಲ್ಲಿ ಪಾಯ್ಸನ್ ಹಾಕೋ ಐಡಿಯಾ ಕೊಡ್ತಾನೆ. ಸಲೈನ್ ಎಂದರೆ ಗ್ಲೂಕೋಸ್ ಬಾಟಲ್ ಮೂಲಕ ಕೊಡುವ ಎನರ್ಜಿ. ಅದರಂತೆ ಮಾರ್ಚ್ 14ರಂದು ಒಂದು ಬಾರಿ ತಿಗಣೆ ಎಣ್ಣೆ ಹಾಗೂ ಇಲಿ ಪಾಷಾಣ ಹಾಕುತ್ತಾರೆ ಆದರೆ ಅದು ವರ್ಕೌಟ್ ಆಗಲ್ಲ.
ಮಾರನೇ ದಿನ ಹೊರಗಿಂದ ಸಲೈನ್ ಬಾಟಲ್ ತಂದು ಅದರಲ್ಲಿ ಈ ಬಾರಿ ಬರೀ ತಿಗಣೆ ಔಷಧ ಹಾಕ್ತಾರೆ. ಅದು ವರ್ಕೌಟ್ ಆಗುತ್ತೆ. ಸಾವನ್ನಪ್ಪಿದ ಬಳಿಕ ಹಾರ್ಟ್ ಅಟ್ಯಾಕ್ ಆಗಿ ಸಾವನ್ನಪ್ಪಿರುವಂತೆ ಬಿಂಬಿಸುತ್ತಾರೆ. ಸುಮಾ, ಪತಿಯ ಹೆಣದ ಮೇಲೆ ಬಿದ್ದು ಕಣ್ಣೀರು ಹಾಕಿ ಒದ್ದಾಡುತ್ತಾಳೆ. ಯಮಕನಮರಡಿ ಪೊಲೀಸರಿಗೆ ಅನುಮಾನವೇ ಬರೋದಿಲ್ಲ. ಏಕೆಂದರೆ ಆಕ್ಸಿಡೆಂಟ್ ಪ್ಲಾನ್ ಆಗಿ ಆಗಿದ್ದಲ್ಲ. ಆಕಸ್ಮಿಕವಾಗಿಯೇ ಆಗಿದ್ದು ಎನ್ನುವುದು ಗೊತ್ತಿದ್ದ ಪೊಲೀಸರು, ಆಸ್ಪತ್ರೆಯಲ್ಲಿ ಹಾರ್ಟ್ ಅಟ್ಯಾಕ್ ಆಗಿರೋದು ಸಹಜ ಎಂದೇ ನಂಬ್ತಾರೆ. ಆದರೆ.. ರೊಟೀನ್ ಪ್ರೊಸೀಜರ್ ಪ್ರಕಾರ ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್ಎಸ್ಎಲ್ ರಿಪೋರ್ಟ್ ಬರಬೇಕಲ್ಲ. ಅದಕ್ಕಾಗಿ ಶವವನ್ನ ಮರಣೋತ್ತರ ಪರೀಕ್ಷೆ ಮಾಡುತ್ತಾರೆ.
ಆಗ ಪುಂಡಲೀಕ ಮತ್ತು ಸುಮಾಗೆ ಭಯ ಶುರುವಾಗುತ್ತೆ. ಕೊಲೆ ಮಾಡಿರುವ ಬಗ್ಗೆ ತಾಯಿ ಬಳಿ ಹೇಳಿಕೊಳ್ತಾರೆ. ಆ ತಾಯಿಗೆ ಆರ್ಎಂಪಿ ವೈದ್ಯ ಬಸವರಾಜ್ ಭಸ್ಮೆ ಎಂಬ ವ್ಯಕ್ತಿ ಹಾಗೂ ಬೆಳಗಾವಿ ನಗರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಎಫ್ಡಿಎ ಅಶೋಕ್ ಗುಜನಾಳ್ ಕಾಂಟ್ಯಾಕ್ಟ್ ಇರುತ್ತೆ. ಅವರ ಮೂಲಕ ಎಫ್ಎಸ್ಎಲ್ ಕಚೇರಿಯ ಸಿಫಾಯಿ ಅಪ್ಪಸಾಬ್ ನಾಯಿಕೋಡಿ ಪರಿಚಯ ಮಾಡಿಕೊಳ್ತಾರೆ. ಆತನಿಂದ ಲ್ಯಾಬ್ ಸಹಾಯಕ ಚನಯ್ಯ, ಬಳಿಕ ಸೀನಿಯರ್ ಆಫೀಸರ್ ನಾಗರಾಜ್ ನೆಟ್‌ವರ್ಕ್‌ಗೆ ಜಾಯಿನ್ ಆಗುತ್ತಾರೆ. ಎಲ್ಲವೂ 3 ಲಕ್ಷಕ್ಕೆ ಡೀಲ್ ಆಗುತ್ತೆ. ಹಣದ ಆಸೆಗೆ ಬಿದ್ದ ಎಫ್ಎಸ್ಎಲ್ ಅಧಿಕಾರಿಗಳು ಕೊಲೆಯನ್ನ ಹಾರ್ಟ್ ಅಟ್ಯಾಕ್ ಎಂದು ವರದಿ ನೀಡುತ್ತಾರೆ. ಆಗ ಪೊಲೀಸರು ಕೂಡ ಸರಿ ಇದೆ ಎಂದುಕೊಂಡು ಶವವನ್ನ ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದು, ಬಳಿಕ ಅಂತ್ಯಸಂಸ್ಕಾರ ಮಾಡುತ್ತಾರೆ.
2 ಕೋಟಿ ಸಂಚು ಬಿಚ್ಚಿಟ್ಟ ವಾಟ್ಸಪ್ ಸ್ಟೇಟಸ್
ಕೊಲೆ ಕೇಸ್ ಮುಚ್ಚಿ ಹೋದ ಬಳಿಕ 2 ಕೋಟಿ ರೂ ವಿಮೆ ಹಣ ಹಂಚಿಕೆ ಸಂಬಂಧ ಸುಮಾ ಹಾಗೂ ಪುಂಡಲೀಕ ನಡುವೆ ಗಲಾಟೆ ಶುರುವಾಗಿದೆ. ಇಬ್ಬರ ನಡುವೆ ಪರಸ್ಪರ ವೈಮನಸ್ಸು ಉಂಟಾಗಿದೆ. ಈ ವೇಳೆ ಸಂದೀಪ್ ಸಾವನ್ನಪ್ಪಿದ್ದು, ಹಾರ್ಟ್ ಅಟ್ಯಾಕ್ನಿಂದ ಅಲ್ಲಾ, ಕೊಲೆ ಅಂತಾ ಹೇಳಿ ಸ್ಟೇಟಸ್ ಹಾಕುತ್ತಾನೆ. ಇದನ್ನ ನೋಡಿದ ಪೊಲೀಸರು ಕೂಡಲೇ ಆತನನ್ನ ಕರೆದು ವಿಚಾರಣೆ ಮಾಡುತ್ತಾರೆ. ಈ ವೇಳೆ ಕೊಲೆ ರಹಸ್ಯ ಬಾಯಿ ಬಿಟ್ಟಿದ್ದಾನೆ. ಎಫ್ಎಸ್ಎಲ್ ವರದಿ ಪಡೆದು ಬೆಂಗಳೂರಿನ ಲ್ಯಾಬ್ಗೆ ಪೊಲೀಸರು ಕಳುಹಿಸಿದ್ದಾರೆ. ಅಲ್ಲಿ ವಿಷದಿಂದ ಆತ ಸಾವನ್ನಪ್ಪಿರುವುದಾಗಿ ವರದಿ ಬರುತ್ತೆ. ಇದರ ಆಧಾರದ ಮೇಲೆ ತನಿಖೆ ಶುರು ಮಾಡಿದ ಪೊಲೀಸರು ಪತ್ನಿ ಸುಮಾ, ಪ್ರಿಯಕರ ಪುಂಡಲೀಕ, ವರದಿ ತಿರುಚಿದ ಎಫ್ಎಸ್ಎಲ್ ಸೈಂಟಿಫಿಕ್ ಆಫೀಸರ್ ನಾಗರಾಜ್ ಸೇರಿ 9 ಜನರನ್ನ ಬಂಧಿಸಿ ಜೈಲಿಗಟ್ಟಿದ್ದಾರೆ. ಒಟ್ಟಿನಲ್ಲಿ ಕೇಸ್ನಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ಇದ್ದು ತನಿಖೆ ನಡೆಯುತ್ತಿದೆ.
ಕೊಲೆಯಾದ ವ್ಯಕ್ತಿಯ ಪತ್ನಿ ಸೇರಿದಂತೆ ಒಟ್ಟು 9 ಆರೋಪಿಗಳನ್ನು ಬಂಧಿಸಿ, ಜೈಲಿಗಟ್ಟಿದ್ದಾರೆ. ಹಣ ಪಡೆದು, ಎಫ್ಎಸ್ಎಲ್ ಪ್ರಯೋಗಾಲಯದ ಸಿಬ್ಬಂದಿ ಸಹಾಯದಿಂದ ಆರೋಪಿಗಳು ವರದಿಯನ್ನೇ ಬದಲಿಸಿರುವುದು ರಾಜ್ಯದಲ್ಲೇ ಮೊದಲ ಪ್ರಕರಣ .



