ಸರ್ಕಾರದ ಆಸ್ತಿ ಸರ್ಕಾರದ ಹೆಸರಲ್ಲೇ ಇರಬೇಕು. ಅದನ್ನು ಒತ್ತುವರಿ ಮಾಡಿಕೊಳ್ಳುವುದು ಅಪರಾಧ. ಆದರೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯೂ ಆಗಿರುವ ಶಾಲಿನಿ ರಜನೀಶ್ ಅವರು ರಸ್ತೆಯನ್ನೂ ಒತ್ತುವರಿ ಮಾಡಿಕೊಂಡಿದಷ್ಟೇ ಅಲ್ಲ, ಅದನ್ನು ತಮ್ಮ ಹೆಸರಿಗೆ ಖಾತೆಯನ್ನೂ ಮಾಡಿಸಿಕೊಂಡಿದ್ದಾರಂತೆ. ರಾಜ್ಯದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಹಾಗೂ ಅವರ ಪತಿ, ಮಾಜಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯಲ್ ಅವರ ಮನೆ ಬೆಂಗಳೂರಿನ HSR ಲೇಔಟ್‌ನಲ್ಲಿದೆ. ಅಲ್ಲಿನ ಅವರ ಮನೆ ಮುಂದಿನ ಫುಟ್ ಪಾತ್ ಅವರ ಹೆಸರಿನಲ್ಲೇ ಖಾತೆ ಆಗಿದೆ ಎನ್ನುವುದು ಆರೋಪ. ಇದನ್ನು ದಾಖಲೆ ಸಮೇತ ನೀಡಲಾಗಿದೆ. ಬಹುತೇಕ ಮುಖ್ಯ ವಾಹಿನಿ ಮಾಧ್ಯಮಗಳು ಈ ಬಗ್ಗೆ ವರದಿ ಮಾಡಿಲ್ಲ ಎನ್ನುವುದೇ ವಿಶೇಷ ಮತ್ತು ವಿಚಿತ್ರ ರಹಸ್ಯ.
ಎಚ್‌ಎಸ್‌ಆರ್ ಲೇಔಟ್‌ನ ಸೆಕ್ಟರ್-6ರ ಎಂಸಿಎಚ್‌ಎಸ್ ಲೇಔಟ್‌ನ 1ನೇ ಬಿ ಮೇನ್ ರಸ್ತೆಯಲ್ಲಿರುವ 14ಸಿ ಸಂಖ್ಯೆಯ ಆಸ್ತಿಯ ಜಂಟಿ ಖಾತೆದಾರರಾಗಿರುವುದು ಶಾಲಿನಿ ರಜನೀಶ್ ಮತ್ತು ರಜನೀಶ್ ಗೋಯಲ್. ಇವರ ಮನೆ ಎದುರು ಇರುವ ಫುಟ್ ಪಾತ್‌ನಲ್ಲಿ ಒಂದು ಭಾಗದಲ್ಲಿ ಸ್ಟೀಲ್ ಫ್ರೇಮ್ ಹಾಕಿ, ಒತ್ತುವರಿ ಮಾಡಲಾಗಿದೆ. ಇದು ಬಿಡಿಎ ಇಂದ ಮಂಜೂರಾಗಿರುವ ನಿವೇಶನ. ಇದನ್ನು ಕಾನೂನು ಪ್ರಕಾರ ಕಮರ್ಷಿಯಲ್ ಉದ್ದೇಶಕ್ಕೆ ಬಳಸುವಂತಿಲ್ಲ. ಆದರೆ ಅದನ್ನೂ ಮಾಡಲಾಗಿದೆ. . ಈ ನಿಯಮವನ್ನು ಉಲ್ಲಂಘಿಸಿ, ಅವರು ಮನೆಯಿಂದ ಮಾಸಿಕ ಬಾಡಿಗೆ ಪಡೆಯುತ್ತಿದ್ದಾರೆ ಎಂಬ ಆರೋಪವೂ ಇದೆ. ಮಂಜೂರಾದ ಖಾತಾ ಗಡಿಯನ್ನೂ ಮೀರಿ ಅತಿಕ್ರಮಣ ಮಾಡಲಾಗಿದ್ದು, ಒತ್ತುವರಿ ಜಾಗದಲ್ಲಿ ಶಾಶ್ವತವಾದ ಸ್ಟೀಲ್-ಫ್ರೇಮ್ ಹಾಕಲಾಗಿದೆ. ವಿಶೇಷ ಎಂದರೆ ಅದಕ್ಕೂ ಖಾತೆ ಮಾಡಿಕೊಟ್ಟಿದ್ದಾರಂತೆ.
ಶಾಲಿನಿ ರಜನೀಶ್ ಅವರು 2024 ಜುಲೈ 31ರಿಂದಲೂ ರಾಜ್ಯ ಮುಖ್ಯ ಕಾರ್ಯದರ್ಶಿಯಾಗಿದ್ದಾರೆ. ಅದಕ್ಕೆ ಮೊದಲು ಅವರ ಪತಿ ರಜನೀಶ್ ಗೋಯಲ್ ಅದೇ ಹುದ್ದೆಯಲ್ಲಿದ್ದರು. ಗೋಯಲ್ ನಿವೃತ್ತರಾದ ಮೇಲೆ ಶಾಲಿನಿ ರಜನೀಶ್ ಅವರಿಗೆ ಆ ಹುದ್ದೆ ಸಿಕ್ಕಿತ್ತು. ಶಾಲಿನಿ ರಜನೀಶ್ ಅವರು 1989ರ ಬ್ಯಾಚ್‌ನ ಐಎಎಸ್ ಅಧಿಕಾರಿಯಾಗಿದ್ದು ಪ್ರಸ್ತುತ ಅಭಿವೃದ್ಧಿ ಆಯುಕ್ತೆ ಹಾಗೂ ಸರ್ಕಾರದ ಹೆಚ್ಚುವರಿ ಮುಖ್ಯಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಈ ಪ್ರಕರಣದಲ್ಲಿ ಗ್ರೇಟರ್ ಬೆಂಗಳೂರು ಗವರ್ನನ್ಸ್ ಕಾಯ್ದೆ-2024ರ ಅಡಿಯಲ್ಲಿ ಸಾರ್ವಜನಿಕ ರಸ್ತೆ ಮತ್ತು ಪಾದಚಾರಿ ಮಾರ್ಗದಲ್ಲಿ ಅನಧಿಕೃತ ನಿರ್ಮಾಣ, ನಗರ ಪಾಲಿಕೆ ಆಸ್ತಿಯ ಅತಿಕ್ರಮಣ ಹಾಗೂ ಅನಧಿಕೃತ ಬಳಕೆಯ ಆರೋಪಗಳನ್ನು ಉಲ್ಲೇಖಿಸಲಾಗಿದೆ. ಜೊತೆಗೆ ಭಾರತೀಯ ನ್ಯಾಯ ಸಂಹಿತೆ (BNS)-2023ರ ಅಡಿಯಲ್ಲಿ ಅತಿಕ್ರಮಣ ಮತ್ತು ಸಾರ್ವಜನಿಕ ಆಸ್ತಿಗೆ ಹಾನಿ ಸಂಬಂಧಿತ ವಿಧಿಗಳನ್ನು ಅನ್ವಯಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.
ʻʻ ಇದು ಸಾಮಾನ್ಯ ನಾಗರಿಕರು ಮಾಡಿದ ಅತಿಕ್ರಮಣವಲ್ಲ. ರಾಜ್ಯದ ಹಾಲಿ ಮತ್ತು ಮಾಜಿ ಮುಖ್ಯ ಕಾರ್ಯದರ್ಶಿಗಳ ವಿರುದ್ಧ ಕೇಳಿಬಂದಿರುವ ಗಂಭೀರ ಆರೋಪವಾಗಿದೆ. ಕಾನೂನು ಪಾಲನೆ ಹಾಗೂ ಸಾರ್ವಜನಿಕ ಆಸ್ತಿಯ ರಕ್ಷಣೆಯಲ್ಲಿ ಮಾದರಿಯಾಗಬೇಕಾದವರೇ ಇಂತಹ ಆರೋಪ ಎದುರಿಸುತ್ತಿರುವುದು ಗಂಭೀರ ವಿಷಯ. ಈ ಸಂಬಂಧ ತಕ್ಷಣ ಎಫ್‌ಐಆರ್ ದಾಖಲಿಸಿ ಸ್ಥಳ ಪರಿಶೀಲನೆ, ಸರ್ವೇ ಹಾಗೂ ಸಮಗ್ರ ತನಿಖೆ ನಡೆಸಬೇಕುʼʼ ಎಂದು ಆರ್‌ಟಿಐ ಕಾರ್ಯಕರ್ತ ನರಸಿಂಹ ಮೂರ್ತಿ ಮನವಿ ಮಾಡಿದ್ದಾರೆ. ಆದಾಗ್ಯೂ, ಈ ಆರೋಪಗಳಿಗೆ ಸಂಬಂಧಿಸಿದಂತೆ ಶಾಲಿನಿ ರಜನೀಶ್ ಅಥವಾ ರಜನೀಶ್ ಗೋಯಲ್ ಅವರಿಂದ ಇನ್ನೂ ಯಾವುದೇ ಅಧಿಕೃತ ಪ್ರತಿಕ್ರಿಯೆ ಬಂದಿಲ್ಲ.



