ಹಾಸನ ಭಿನ್ನಮತ, ಹೋರಾಟ, ತಿಕ್ಕಾಟ, ಗುದ್ದಾಟ.. ಎಲ್ಲವೂ ಈಗ ಮುಗಿದ ಅಧ್ಯಾಯ. ಕುಮಾರಸ್ವಾಮಿ ಪ್ರತಿಷ್ಠೆಗೆ ಬಿದ್ದರೋ, ಭವಾನಿ ರೇವಣ್ಣ ಹಠಕ್ಕೆ ಬಿದ್ದರೋ.. ಇಡೀ ರಾಜ್ಯದಾದ್ಯಂತ ಎರಡೂ..ಎರಡೂವರೆ ತಿಂಗಳು ಹಂಗಾಮ ಸೃಷ್ಟಿಸಿದ್ದ ಹಾಸನ ಟಿಕೆಟ್ ವಿವಾದ ಮುಗಿದಿದೆ. ವಿಶೇಷವೆಂದರೆ ಸ್ವರೂಪ್ ರೇವಣ್ಣ ಪರ ದೇವೇಗೌಡರ ಇಡೀ ಕುಟುಂಬವೇ ಒಟ್ಟಿಗೇ ಬಂದಿರುವುದು.
ಹಾಸನ ಕ್ಷೇತ್ರದಲ್ಲಿ ರೇವಣ್ಣ ಕುಟುಂಬದ ವಿರುದ್ದ ಹೋರಾಡಿ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದ ಸ್ವರೂಪ್ ಪರವಾಗಿ ರೇವಣ್ಣ ಕುಟುಂಬ ನಿಲ್ಲುತ್ತಾ, ಟಿಕೆಟ್ ಸಿಗದ ನಿರಾಸೆಯಲ್ಲಿರುವ ಭವಾನಿ ರೇವಣ್ಣ ಪ್ರಚಾರಕ್ಕೆ ಬರುತ್ತಾರಾ, ಪ್ರಜ್ವಲ್, ಸೂರಜ್ ಅಖಾಡಕ್ಕೆ ಇಳಿಯುತ್ತಾರಾ ಹೀಗೆಲ್ಲಾ ಚರ್ಚೆ ನಡೆಯುತ್ತಿತ್ತು. ರೇವಣ್ಣ ಕುಟುಂಬ ಪ್ರಚಾರಕ್ಕೆ ಬಾರದಿದ್ದರೆ ಪ್ರೀತಂಗೌಡ ವಿರುದ್ದ ಸ್ವರೂಪ್ ಹೋರಾಟ ಸಾಧ್ಯವೇ ಎನ್ನುವ ಪ್ರಶ್ನೆ ಕೂಡ ಮೂಡಿತ್ತು. ಈ ಎಲ್ಲಾ ಪ್ರಶ್ನೆಗಳಿಗೆ ಒಂದೇ ಸಭೆ ಮೂಲಕ ಉತ್ತರ ಕೊಟ್ಟಿರುವ ದೊಡ್ಡಗೌಡರ ಸೊಸೆ ಭವಾನಿ ರೇವಣ್ಣ.


ನಾನು ಟಿಕೆಟ್ ಕೇಳಿದ್ದು ನಿಜ. ಆದ್ರೆ, ದೇವೇಗೌಡರ ಪಕ್ಷಕ್ಕಿಂತ ನಾನು ದೊಡ್ಡವಳಲ್ಲ ಅವರ ತೀರ್ಮಾನಕ್ಕೆ ತಲೆಬಾಗಿದ್ದೇನೆ, ಸ್ವರೂಪ್ ಕೂಡ ನನ್ನ ಮಗನಿದ್ದಂತೆ, ಈ ಕ್ಷೇತ್ರದಲ್ಲಿ ಬಿಜೆಪಿ ಸೋಲಬೇಕು, ಜೆಡಿಎಎಸ್ ಗೆಲ್ಲಬೇಕು ಎನ್ನುವುದಷ್ಟೆ ನಮ್ಮ ಗುರಿ ಎನ್ನುವುದು ಭವಾನಿ ರೇವಣ್ಣ ಮಾತು.
ಭವಾನಿ ರೇವಣ್ಣ & ಫ್ಯಾಮಿಲಿ ಈ ವಿಚಾರದಲ್ಲಿ ನೇರವಾಗಿ ಸ್ವರೂಪ್ ಬೆನ್ನಿಗೆ ನಿಲ್ಲುವುದಕ್ಕೂ ಕಾರಣಗಳಿವೆ. ವೈಯಕ್ತಿಕ ಹಠಕ್ಕೆ ಪ್ರತಿಷ್ಠೆಗೆ ಬಿದ್ದರೆ, ನಷ್ಟ ನಮಗೇ. ಆಮೇಲೆ 5 ವರ್ಷ ಪ್ರೀತಂ ಗೌಡ ಮೆರೆಯುವುದನ್ನು ಸಹಿಸುವುದಕ್ಕಿಂತ ನಮ್ಮ ಹುಡುಗ ಸ್ವರೂಪ್`ನನ್ನೇ ಗೆಲ್ಲಿಸೋಣ ಎನ್ನುವುದು ರೇವಣ್ಣ ಕುಟುಂಬ ನಿರ್ಧಾರಕ್ಕೆ ಕಾರಣ. ಅಲ್ಲದೆ ಲೋಕಸಭೆ ಚುನಾವಣೆಗೆ ಹೆಚ್ಚಿನ ದಿನಗಳೆನೂ ಇಲ್ಲ. ಇನ್ನೊಂದೇ ಒಂದು ವರ್ಷಕ್ಕೆ ಲೋಕಸಭೆ ಎಲೆಕ್ಷನ್ ಕೂಡಾ ಬರಲಿದೆ.



