ಮುಂಬೈ ಇಂಡಿಯನ್ಸ್ ತಂಡಕ್ಕೆ ಹಾರ್ದಿಕ್ ಪಾಂಡ್ಯ ಮತ್ತೆ ವಾಪಸ್ ಆಗುವ ಸಾಧ್ಯತೆ ದಟ್ಟವಾಗಿದೆ. ಐಪಿಎಲ್ ತಂಡಗಳ ನಡುವೆ ಆಟಗಾರರ ವರ್ಗಾವಣೆ ಮಾತುಕತೆ ನಡೆಯುತ್ತಿದ್ದು, ಹಾರ್ದಿಕ್ ಪಾಂಡ್ಯ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ಕ್ಯಾಪ್ಟನ್ ಆಗುವ ಸೂಚನೆ ಇದೆ. ಈ ಬಗ್ಗೆ ಈಗಾಗಲೇ ಮಾತುಕತೆ ನಡೆದಿದ್ದು, ೧೫ ಕೋಟಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಮರು ಖರೀದಿಗೆ ಮುಂಬೈ ಇಂಡಿಯನ್ಸ್ ಒಪ್ಪಿಗೆ ಎನ್ನಲಾಗಿದೆ.
ಹಾರ್ದಿಕ್ ಪಾಂಡ್ಯ ಕ್ರಿಕೆಟ್ʻನಲ್ಲಿ ದೊಡ್ಡ ಮಟ್ಟಕ್ಕೆ ತಲುಪಿದ್ದೇ ಮುಂಬೈ ಇಂಡಿಯನ್ಸ್ ಸೇರಿದ ನಂತರ. ಹಾರ್ದಿಕ್ ಪಾಂಡ್ಯ ಅವರ ಪ್ರತಿಭೆಯನ್ನು ಗುರುತಿಸಿದ್ದು ಮುಂಬೈ ಇಂಡಿಯನ್ಸ್ ಮತ್ತು ರೋಹಿತ್ ಶರ್ಮಾ. ಆದರೆ ಎರಡು ಹೊಸ ಐಪಿಲ್ ತಂಡಗಳು ಸೇರ್ಪಡೆಯಾದ ಹಿನ್ನೆಲೆ ಹಾರ್ದಿಕ್ ಪಾಂಡ್ಯ ಮುಂಬೈ ತಂಡವನ್ನು ತೊರೆದಿದ್ದರು. ಗುಜರಾತ್ ಟೈಟನ್ಸ್ ತಂಡದ ನಾಯಕರಾಗಿದ್ದರು. ಗುಜರಾತ್ ಟೈಟನ್ಸ್ ಮೊದಲ ಆವೃತ್ತಿಯಲ್ಲಿ ಚಾಂಪಿಯನ್ಸ್ ಆಗಿತ್ತು. ಎರಡನೇ ಆವೃತ್ತಿಯಲ್ಲಿ ರನ್ನರ್ ಅಪ್ ಆಗಿತ್ತು.
ಇತ್ತ ಮುಂಬೈ ಇಂಡಿಯನ್ಸ್ ತಂಡದಿಂದ ನಿರೀಕ್ಷಿತ ಮಟ್ಟದ ಪ್ರದರ್ಶನ ಬಂದಿರಲಿಲ್ಲ. ಅತೀ ಹೆಚ್ಚು ಬಾರಿ ಟ್ರೋಫಿ ಗೆದ್ದಿರುವ ಮುಂಬೈ ಇಂಡಿಯನ್ಸ್ ಕಳೆದ ಎರಡು ಅವೃತ್ತಿಗಳಲ್ಲಿ ನೀರಸ ಪ್ರದರ್ಶನ ನೀಡಿತ್ತು. ಈ ಮಧ್ಯೆ ವಿಶ್ವಕಪ್ ಟ್ರೋಫಿ ಗೆಲ್ಲಲು ಆಗದೇ ಇದ್ದರೂ ಅದ್ಭುತ ಪ್ರದರ್ಶನ ತೋರಿರುವ ರೋಹಿತ್ ಶರ್ಮಾ, ತಾವೊಬ್ಬ ಬೆಸ್ಟ್ ಕ್ಯಾಪ್ಟನ್ ಎಂದೇನೋ ಸಾಬೀತು ಮಾಡಿದ್ಧಾರೆ. ಆದರೆ ಅವರಿಗೆ ವಯಸ್ಸು ೩೬.
ಈಗಾಗಲೇ ಅಂತಾರಾಷ್ಟ್ರೀಯ ೨೦-೨೦ ಕ್ರಿಕೆಟ್ಟಿನಿಂದ ದೂರ ಉಳಿಯುವ ಚಿಂತನೆ ತೋರಿಸಿರುವ ರೋಹಿತ್ ಶರ್ಮಾ, ಕಿರಿಯರಿಗೆ ಅವಕಾಶ ಬಿಟ್ಟುಕೊಡುವ ಸೂಚನೆಯನ್ನೂ ಕೊಟ್ಟಿದ್ದಾರೆ. ಐಪಿಎಲ್ʻನ್ನು ಇನ್ನೂ ಕೆಲವು ವರ್ಷ ಆಡಬಹುದು. ಆದರೆ ನಾಯಕತ್ವ ಮತ್ತು ಸಂಪೂರ್ಣ ಹೊಣೆಗಾರಿಕೆಯಿಂದ ಹೊರಬರುವ ಆಸಕ್ತಿ ತೋರಿಸಿದ್ಧಾರೆ. ಹೀಗಾಗಿಯೇ ಗುಜರಾತ್ ಟೈಟನ್ಸ್ ಮತ್ತು ಮುಂಬೈ ಇಂಡಿಯನ್ಸ್ ಮಧ್ಯೆ ಮಾತುಕತೆ ಶುರುವಾಗಿದ್ದು ಫೈನಲ್ ಹಂತದಲ್ಲಿದೆ.
ಹಾರ್ದಿಕ್ ಪಾಂಡ್ಯ ಅವರಿಗೂ ಮುಂಬೈ ಇಂಡಿಯನ್ಸ್ ಮೇಲೆ ಒಲವು ಹೆಚ್ಚು. ಕಾರಣ ಹಾರ್ದಿಕ್ ಅವರನ್ನ ಗುರುತಿಸಿ ಬೆಳೆಸಿದ್ದು ಮುಂಬೈ ಇಂಡಿಯನ್ಸ್. ಹೀಗಾಗಿಯೇ ಕರೆಯುತ್ತಿದ್ದಂತೆಯೇ ಎಸ್ ಎಂದಿದ್ದಾರೆ ಎನ್ನಲಾಗಿದೆ. ಇನ್ನು ಗುಜರಾತ್ ಟೈಟನ್ಸ್ ಶುಭ್ʻಮನ್ ಗಿಲ್ ಅವರನ್ನು ಹೊಸ ನಾಯಕನನ್ನಾಗಿ ಗುರುತಿಸಿ ಬೆಳೆಸುವ ಯೋಜನೆಯಲ್ಲಿದೆ. ಶುಭ್ʻಮನ್ ಗಿಲ್ ಅವರೀಗ ಐಸಿಸಿ ನಂ.೧ ರ್ಯಾಂಕ್ ಬ್ಯಾಟ್ಸ್‌ಮನ್ ಆಗಿದ್ದು, ವಿರಾಟ್ ಮತ್ತು ರೋಹಿತ್ ಶರ್ಮಾ ರಿಟೈರ್ ಆಗುವಷ್ಟರ ಹೊತ್ತಿಗೆ ಸ್ಟಾರ್ ಆಟಗಾರರಾಗುವ ನಿರೀಕ್ಷೆ ಮೂಡಿಸಿದ್ಧಾರೆ.
ಸಚಿನ್ ನಿವೃತ್ತಿಯ ಹೊತ್ತಿಗೆ ಧೋನಿ, ಧೋನಿ ರಿಟೈರ್ ಹೊತ್ತಿಗೆ ಕೊಹ್ಲಿ, ಕೊಹ್ಲಿ ರಿಟೈರ್ ಆಗುವ ಹೊತ್ತಿಗೆ ಗಿಲ್ ಸ್ಥಾನ ತುಂಬುವ ಸಾಧ್ಯತೆಗಳಂತೂ ಇವೆ.